ರೋಚಕ ಹಣಾಹಣಿಯಲ್ಲಿ ಗೆದ್ದು ಬಾಂಗ್ಲಾ, ಆಸ್ಟ್ರೇಲಿಯ ಹೊರದೂಡಿ ಸೆಮಿಫೈನಲ್ ಗೇರಿದ ಅಫಘಾನಿಸ್ತಾನ

Most read

ಕಿಂಗ್ ಸ್ಟನ್: ಕ್ಷಣಕ್ಷಣಕ್ಕೂ ರೋಮಾಂಚನ ಹುಟ್ಟಿಸಿದ ಪಂದ್ಯದಲ್ಲಿ ಅಫಘಾನಿಸ್ತಾನ ಗೆಲುವಿನ ನಗೆ ಬೀರಿ ಸೆಮಿಫೈನಲ್ ತಲುಪಿತು. ಬಾಂಗ್ಲಾದೇಶ ಗೆಲುವಿಗಾಗಿ ಕಾತರಿಸಿ ಕುಳಿತಿದ್ದ ಆಸ್ಟ್ರೇಲಿಯ ಕೊನೆಗೂ ಟೂರ್ನಿಯಿಂದ ಹೊರ ನಡೆಯಿತು.

T20 ವಿಶ್ವಕಪ್ ನ ಗ್ರೂಪ್ ಹಂತದ ಪಂದ್ಯ ಇದಕ್ಕಿಂತ ರೋಚಕವಾಗಿರಲು ಸಾಧ್ಯವೇ ಇರಲಿಲ್ಲ. ಒಂದು ಪಂದ್ಯದ ಫಲಿತಾಂಶದ ಮೇಲೆ ಮೂರು ತಂಡಗಳು ಸೆಮಿಫೈನಲ್ ತಲುಪುವ ಆಸೆ ಇಟ್ಟುಕೊಂಡಿದ್ದವು. ಕೊನೆಗೆ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ಕನಸು ಭಗ್ನವಾಯಿತು. ನವೀನ್ ಉಲ್ ಹಕ್ ಮಾರಕ ಬೌಲಿಂಗ್ ಗೆ ನಲುಗಿದ ಬಾಂಗ್ಲಾದೇಶ 8 ರನ್ ಅಂತರದ ಸೋಲನ್ನನುಭವಿಸಿತು.

ಅಫಘಾನಿಸ್ತಾನ- ಬಾಂಗ್ಲಾದೇಶ ತಂಡಗಳ ನಡುವೆ ನಡೆದ ಗ್ರೂಪ್ – 1 ರ ಕೊನೆಯ ಪಂದ್ಯ ಅಫಘಾನಿಸ್ತಾನ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಗೆ ದೂಡಿತ್ತು. ಅಫಘಾನಿಸ್ತಾನ‌ ಬಾಂಗ್ಲಾದೇಶದೆದುರು ಹೀನಾಯವಾಗಿ ಸೋತಿದ್ದರೆ ಬಾಂಗ್ಲಾದೇಶ ಸೆಮಿಫೈನಲ್ ಗೆ ಏರುತ್ತಿತ್ತು. ಸಣ್ಣ ಅಂತರದಲ್ಲಿ ಸೋತಿದ್ದರೆ ಆಸ್ಟ್ರೇಲಿಯಾ ಸೆಮಿಫೈನಲ್ ತಲುಪುತ್ತಿತ್ತು. ಈ ಎರಡೂ ಸಾಧ್ಯತೆಗಳನ್ನು ಇಲ್ಲವಾಗಿಸಿದ ಅಫಘಾನಿಸ್ತಾನ ತಾನೇ ಸೆಮಿಫೈನಲ್ ತಲುಪಿತು.

ಆರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫಘಾನಿಸ್ತಾನ ತಂಡದ ಆಟಗಾರರು ಬಾಂಗ್ಲಾ ಬೌಲರ್ ಗಳ ಕರಾರುವಕ್ ದಾಳಿಯ ಸುಳಿಯೊಳಗೆ ಸಿಲುಕಿಕೊಂಡರು. ರೆಹಮತ್ತುಲ್ಲಾ ಗುರ್ಬಾಜ್ 43 (55) ಹೊರತುಪಡಿಸಿ ಉಳಿದ ಬ್ಯಾಟ್ಸ್ ಮನ್ ಗಳ ಬ್ಯಾಟ್ ಗಳು ಮಾತನಾಡಲಿಲ್ಲ. ಅಫಘಾನಿಸ್ತಾನ 20 ಓವರ್ ಗಳಲ್ಲಿ 115 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಮಳೆಯಿಂದ ಕೊಂಚ ಅಡಚಣೆಗೆ ಒಳಗಾದ‌ ಹಿನ್ನೆಲೆಯಲ್ಲಿ ಡಿಎಲ್ ಎಸ್ ಪದ್ಧತಿ ಪ್ರಕಾರ ಬಾಂಗ್ಲಾದೇಶ 19 ಓವರ್ ಗಳಲ್ಲಿ 114 ರನ್ ಗಳಿಸಬೇಕಿತ್ತು. ಒಂದೆಡೆ ಅಪಾಯಕಾರಿ ಆಟಗಾರ ಲಿಟನ್ ಕುಮಾರ್ ದಾಸ್ ಕ್ರೀಸ್ ಗೆ ಕಚ್ಚಿ ನಿಂತು ಆಡುತ್ತಿದ್ದರೆ ಮತ್ತೊಂದೆಡೆ ಬಾಂಗ್ಲಾದೇಶದ ಉಳಿದ ದಾಂಡಿಗರು ತರಗೆಲೆಗಳಂತೆ ಉದುರಿದರು. ವೇಗದ ಬೌಲರ್ ನವೀನ್ ಉಲ್ ಹಕ್ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ತಲಾ ಎರಡು ವಿಕೆಟ್ ಉರುಳಿಸಿದರೆ, ರಶೀದ್ ಖಾನ್ ಮಧ್ಯಮ ಕ್ರಮಾಂಕದ ನಾಲ್ಕು ಆಟಗಾರರನ್ನು ಮನೆಗೆ ಕಳಿಸಿ ಅಫ್ಘನ್ ಜಯಕ್ಕೆ ಕಾರಣರಾದರು.

More articles

Latest article