ಬೆಂಗಳೂರು ವಿವಿ ಇನ್ನು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ನಾಮಕರಣ

Most read

ಉನ್ನತ ಶಿಕ್ಷಣ:

  1. ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂ‍ಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ (Centre of Excellence) ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
  2. ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು. ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿ ಮಾದರಿಯನ್ನಾಗಿಸುವ ಉದ್ದೇಶದಿಂದ, ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ಆರ್.ಸಿ. ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.
  3. ಮಹಿಳಾ ಉನ್ನತ ಶಿಕ್ಷಣದ ಬಲವರ್ಧನೆಗಾಗಿ 31 ಮಹಿಳಾ ಕಾಲೇಜುಗಳನ್ನು ಹಿಂದಿನ ವರ್ಷದಲ್ಲಿ ಉನ್ನತೀಕರಿಸಲು ಕ್ರಮ ಕೈಗೊಂಡಿದ್ದು, ಉಳಿದ 26 ಕಾಲೇಜುಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 26 ಕೋಟಿ ರೂ. ಒದಗಿಸಲಾಗುವುದು.
  4. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು.
  5. ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಸಂಸ್ಥೆಗಳು ಹಾಗೂ ಪದವಿ ಕಾಲೇಜುಗಳಿಗೆ ಒಟ್ಟಾರೆ 275 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.
  6. ಹೊಸದಾಗಿ ಪ್ರಾರಂಭಿಸಲಾದ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೆ 10 ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣಗಳು, ಉಪಕರಣಗಳು, ಕಂಪ್ಯೂಟರ್‌ಗಳು ಹಾಗೂ ಪುಸ್ತಕಗಳನ್ನು ಒದಗಿಸಲಾಗುವುದು.
  7. ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಇಂಗ್ಲೆಂಡ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ Chevening Karnataka Masters Fellowship ನೆರವಿನೊಂದಿಗೆ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆಯುವ ಯೋಜನೆ ರೂಪಿಸಲಾಗಿದೆ.
  8. ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದಿಂದ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ವೃತ್ತಿಪರ ವಿಷಯ ತಜ್ಞರನ್ನು ʻProfessor of Practiceʼ ರನ್ನಾಗಿ ನೇಮಿಸಲು ಉದ್ದೇಶಿಸಲಾಗಿದೆ.
  9. ಉನ್ನತ ಶಿಕ್ಷಣ ಸಂಸ್ಥೆಗಳ ಸಮಗ್ರ ನಿರ್ವಹಣೆಗಾಗಿ ಜಾರಿಮಾಡಿರುವ UUCMS ತಂತ್ರಾಂಶವನ್ನು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒಟ್ಟಾರೆ 30 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.
  10. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನು 150 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
  11. ಅಜೀಂ ಪ್ರೇಮ್‌ಜೀ ಫೌಂಡೇಶನ್ರವರ ಸಹಯೋಗದೊಂದಿಗೆ ಕಾಲೇಜು ಶಿಕ್ಷಣ ಇಲಾಖೆಯ ಎಲ್ಲಾ ಬೋಧಕರಿಗೆ ಬೋಧನೆ ಮತ್ತು ಕಲಿಕೆಯನ್ನು ಉತ್ತಮಪಡಿಸಲು ಮುಂದಿನ ಮೂರು ವರ್ಷದೊಳಗೆ ಪುನರ್ ಮನನ ತರಬೇತಿ ನೀಡಲಾಗುವುದು.
  12. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಆಧಾರಿತ ಕೌಶಲ್ಯ ತರಬೇತಿಗಳನ್ನು ಒದಗಿಸಿ ಉದ್ಯೋಗಕ್ಕೆ ಸಜ್ಜುಗೊಳಿಸಲು ಕೈಗಾರಿಕೆಗಳ ಸಹಭಾಗಿತ್ವದಲ್ಲಿ Internship Program ಹಾಗೂ ವಿಶೇಷ ಕಾರ್ಪೋರೇಟ್ ತರಬೇತಿ ಯೋಜನೆಗಳನ್ನು ರೂಪಿಸಲಾಗುವುದು.
  13. KKRDB ವತಿಯಿಂದ 23,000 ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು.
  14. ಪ್ರೊ. ನಂಜುಂಡ ಸ್ವಾಮಿ ಸಂಶೋಧನಾ ಪೀಠವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾಗುವುದು.
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ:
  15. ಆರೋಗ್ಯವಂತ ಜನರಿಂದ ಮಾತ್ರ ಸಮತೋಲಿತ ಸಮಾಜ ನಿರ್ಮಾಣ ಸಾಧ್ಯ ಎಂದು ನಾವು ನಂಬಿದ್ದೇವೆ. ಜನನದಿಂದ ಎಲ್ಲಾ ವಯೋಮಾನದವರಿಗೂ ವರ್ಗಬೇಧವಿಲ್ಲದೇ, ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸಲು ನಾವು ಬದ್ಧರಾಗಿದ್ದೇವೆ. ತಡೆಗಟ್ಟಬಹುದಾದ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ನಮ್ಮ ಸಂಕಲ್ಪವಾಗಿದೆ.
  16. ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಅಭಿಯಾನ ರೂಪದಲ್ಲಿ ಕ್ರಮ ಕೈಗೊಳ್ಳಲು 320 ಕೋಟಿ ರೂ. ಒದಗಿಸಲಾಗಿದೆ:
    i) ಗರ್ಭಿಣಿಯರಲ್ಲಿ ಮತ್ತು ಪ್ರಸೂತಿ ವೇಳೆಯಲ್ಲಿನ ತೀವ್ರತರಹದ ರಕ್ತಸ್ರಾವ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಅವಶ್ಯವಿರುವ ಉಪಕರಣಗಳನ್ನು ನೀಡಲಾಗುವುದು. ನವೀನ ಡಿಜಿಟಲ್ ತಂತ್ರಜ್ಞಾನದ ಮೂಲಕ ಹೆರಿಗೆ ಸೇವೆಗಳನ್ನು ಬಲಪಡಿಸಲಾಗುವುದು.
    ii) ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್‌ಗಳು, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು.
    iii) ಹುದ್ದೆಗಳನ್ನು ಪುನರ್ ಹಂಚಿಕೆ ಮಾಡುವ ಮೂಲಕ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ MCH ತಜ್ಞರನ್ನು ನಿಯೋಜಿಸಲಾಗುವುದು.
    iv) ರಾಜ್ಯದಲ್ಲಿ ಸಂಭವಿಸುವ ತಾಯಿ ಮರಣವನ್ನು ರಾಜ್ಯ ತಾಂತ್ರಿಕ ತಜ್ಞರ ಸಮಿತಿಯಿಂದ ಆಡಿಟ್ ಮಾಡಿಸಿ ಶಿಫಾರಸ್ಸುಗಳನ್ನು ರಾಜ್ಯ ಅಧಿಕಾರಯುಕ್ತ ಸಮಿತಿ ಮುಂದೆ ಮಂಡಿಸಲಾಗುವುದು. ಸಮಿತಿಯ ನಿರ್ದೇಶನದಂತೆ ತಾಯಿ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು.
  17. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ:
    i) ರಾಜ್ಯದಲ್ಲಿ 50 ಹಾಸಿಗೆ ಸಾಮರ್ಥ್ಯದ 14 Critical Care Block ಗಳು ಹಾಗೂ ಬೆಂಗಳೂರು ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಒಂದು Critical Care Block ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
    ii) ಅಥಣಿ, ಹುನಗುಂದ ಮತ್ತು ಮುಧೋಳದಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗಿದೆ.
    iii) ಆಶಾಕಿರಣ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ 1.4 ಕೋಟಿ ಜನರಿಗೆ ಕಣ್ಣಿನ ತಪಾಸಣೆ; 3.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ಮತ್ತು 93,800 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ.
    iv) ನರವೈಜ್ಞಾನಿಕ ಖಾಯಿಲೆಗಳಿಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ (KaBHI) ನಿಮ್ಹಾನ್ಸ್ ಸಹಯೋಗದೊಂದಿಗೆ ಒಟ್ಟು 2.61 ಲಕ್ಷ ತಪಾಸಣೆ ಮಾಡಿ 32,630 ನರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಯೋಜನೆಯನ್ನು ಈ ವರ್ಷ ಎಲ್ಲಾ ಹಂತದ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲು 20 ಕೋಟಿ ರೂ. ಒದಗಿಸಲಾಗಿದೆ. ಅಲ್ಲದೇ, ಮಾನಸಿಕ ಅಸ್ವಸ್ಥರ ಆರೈಕೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  18. 2025-26 ನೇ ಸಾಲಿನಲ್ಲಿ ಈ ಕೆಳಗಿನಂತೆ ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು:
    i) ಬೆಂಗಳೂರು ಉತ್ತರ ತಾಲ್ಲೂಕಿನ ವ್ಯಾಪ್ತಿಯಲ್ಲಿ 200 ಹಾಸಿಗೆಯ ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಯನ್ನು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
    ii) ಹೊಸದಾಗಿ ಘೋಷಣೆಯಾಗಿರುವ ತಾಲ್ಲೂಕುಗಳಾದ ಹನೂರು, ಅಳ್ನಾವರ, ಅಣ್ಣಿಗೇರಿ, ಮಸ್ಕಿ, ಸಿರಿವಾರ, ಕಾಪು, ಬಬಲೇಶ್ವರ, ಕೊಲ್ಹಾರ, ಚೇಳೂರು, ತೇರದಾಳದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ
    ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗುವುದು. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು.
    iii) ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳನ್ನು ಒಟ್ಟು 650 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುವುದು.
    iv) ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುವುದು.
    v) ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.
    vi) ಮೈಸೂರು ಜಿಲ್ಲೆಯ ತಗಡೂರು ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
    vii) ಹೆಚ್ಚಿನ ದುರಸ್ತಿ ಅಗತ್ಯವಿರುವ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು 183 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ದುರಸ್ತಿಗೊಳಿಸಲಾಗುವುದು.
  19. ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೂಚ್ಯಂಕವನ್ನು ವೃದ್ಧಿಸಲು ಒಟ್ಟು 873 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. (ವಿವರಗಳನ್ನು ಅನುಬಂಧ-4ರಲ್ಲಿ ಲಗತ್ತಿಸಿದೆ.)
  20. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೂರು ಲಕ್ಷಕ್ಕೂ ಅಧಿಕ ಸಿಬ್ಬಂದಿ ವರ್ಗ ಹಾಗೂ ಅವಲಂಬಿತರಿಗೆ 5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗಿದೆ. ಸಿಬ್ಬಂದಿಯ ವೈಯಕ್ತಿಕ ಮಾಸಿಕ ವಂತಿಕೆ 100 ರೂ. ಮತ್ತು ಸರ್ಕಾರದ ಮಾಸಿಕ ವಂತಿಕೆ 200 ರೂ. ಗಳೊಂದಿಗೆ ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುವುದು.
  21. ಪ್ರಸವ ಪೂರ್ವ ಮತ್ತು ನವಜಾತ ಶಿಶುಗಳಲ್ಲಿ ಅಪರೂಪದ ಚಯಾಪಚಯ ಖಾಯಿಲೆಗಳನ್ನು (Rare Metabolic Disorder) ಪತ್ತೆ ಹಚ್ಚಲು ಕಾರ್ಯಕ್ರಮವನ್ನು ರೂಪಿಸಲಾಗುವುದು. ಮೊದಲನೆಯ ಹಂತದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಗಣಿಬಾಧಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ 10 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
  22. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸ್‌ರ್ ಅನ್ನು ತಡೆಗಟ್ಟಲು ಪ್ರಥಮ ಹಂತದಲ್ಲಿ ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ 20 ತಾಲ್ಲೂಕುಗಳಲ್ಲಿ 9 ಕೋಟಿ ರೂ. ವೆಚ್ಚದಲ್ಲಿ 14 ವರ್ಷದ ಹೆಣ್ಣುಮಕ್ಕಳಿಗೆ HPV ಲಸಿಕೆಯನ್ನು ನೀಡಲಾಗುವುದು.
  23. ʻಗೃಹ ಆರೋಗ್ಯʼ ಯೋಜನೆಯಡಿ 2024-25 ನೇ ಸಾಲಿನಲ್ಲಿ ಆರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಈ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು.
  24. ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಈ ಸೇವೆಯನ್ನು ನಿಯಂತ್ರಣ ಮಾಡುವ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸುವುದರ ಮೂಲಕ ʻಆರೋಗ್ಯ ಕವಚʼ ಸೇವೆಯನ್ನು ಬಲಪಡಿಸಲಾಗುವುದು.
  25. ಸಾಂಕ್ರಾಮಿಕ ರೋಗಗಳಾದ ಚಿಕೂನ್‌ಗುನ್ಯ, ಡೆಂಗ್ಯೂ ಹಾಗೂ ಮಲೆನಾಡು ಭಾಗದಲ್ಲಿ ಕಾಣಿಸಿಕೊಳ್ಳುವ ಕ್ಯಾಸನೂರು ಕಾಡಿನ ಖಾಯಿಲೆಗಳ (KFD) ಪರಿಣಾಮಕಾರಿ ನಿಯಂತ್ರಣಕ್ಕಾಗಿ 50 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು.
  26. ʻಶ್ರವಣ ಸಂಜೀವಿನಿʼ ಯೋಜನೆಯಡಿ ಮಕ್ಕಳಲ್ಲಿ ಕಂಡುಬರುವ ಶ್ರವಣದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಲಿಯರ್ ಇಂಪ್ಲಾಂಟ್ (Cochlear Implant) ಶಸ್ತ್ರ ಚಿಕಿತ್ಸೆ ಹಾಗೂ ಇಂಪ್ಲಾಂಟ್ಗಳ ಬಿಡಿಭಾಗಗಳ ನಿರ್ವಹಣೆ, ದುರಸ್ತಿ ಮತ್ತು ಬದಲಾವಣೆ ಮಾಡಲು 12 ಕೋಟಿ ರೂ. ಒದಗಿಸಲಾಗುವುದು.
  27. ಹೆಚ್ಚಿನ ಟಿ.ಬಿ ಪ್ರಕರಣಗಳಿರುವ ಆರೋಗ್ಯ ಕೇಂದ್ರಗಳಿಗೆ 2025-26ನೇ ಸಾಲಿನಲ್ಲಿ 100 True-NAT machine ಗಳನ್ನು ಒದಗಿಸಲಾಗುವುದು.
  28. ಆಶಾ ಕಾರ್ಯಕರ್ತೆಯರಿಗೆ ತಂಡ ಆಧಾರಿತ ಪ್ರೋತ್ಸಾಹಧನ ನೀಡುವುದರ ಮೂಲಕ ಗೌರವಧನವನ್ನು 1,000 ರೂ. ಹೆಚ್ಚಿಸಲಾಗುವುದು.
  29. ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ದೃಢಪಡಿಸಲು ಸಂಚಾರಿ ಆಹಾರ ಪ್ರಯೋಗಾಲಯಗಳ ಮೂಲಕ ಆಹಾರ ಮಾದರಿಗಳನ್ನು ವಿಶ್ಲೇಷಿಸಿ, ಅಸುರಕ್ಷಿತ ಮತ್ತು ಕಳಪೆ ಆಹಾರವನ್ನು ಗುರುತಿಸಿ ಕಾನೂನಿನ ಅನುಸಾರ ಕ್ರಮಕೈಗೊಳ್ಳಲಾಗುತ್ತಿದೆ.
  30. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಔಷಧಗಳನ್ನು ವಿತರಿಸಲು KSMSCL ಸಂಸ್ಥೆಯನ್ನು ಬಲಪಡಿಸಲಾಗುವುದು. ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ತಂತ್ರಾಂಶವನ್ನು ಪರಿಚಯಿಸಲಾಗುವುದು.
  31. ಸುಟ್ಟ ಗಾಯಗಳ ತಡೆಗಟ್ಟುವಿಕೆ ಹಾಗೂ ಸಂತ್ರಸ್ತರ ಚಿಕಿತ್ಸೆಗೆ ಸಂಬಂಧಿಸಿದಂತೆ, ಸುಟ್ಟ ಗಾಯಗಳ ಚಿಕಿತ್ಸಾ ನೀತಿಯನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು.
  32. ಆರೋಗ್ಯ ಇಲಾಖೆಯಲ್ಲಿ ಈ ಕೆಳಕಂಡ ಸುಧಾರಣಾ ಕ್ರಮಗಳನ್ನು ಪ್ರಸಕ್ತ ಸಾಲಿನಲ್ಲಿ ತೆಗೆದುಕೊಳ್ಳಲಾಗುವುದು:
    i) ಕೆ.ಪಿ.ಎಂ.ಇ ಕಾಯ್ದೆಯಡಿ ನೀಡಲಾಗುವ ಮಾನ್ಯತೆ ಪ್ರಮಾಣ ಪತ್ರವನ್ನು (Accreditation Certificate) 30 ದಿನದ ಕಾಲಮಿತಿಯೊಳಗೆ ಒದಗಿಸಲಾಗುವುದು.
    ii) ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗದವರಿಗೂ ಪಾರದರ್ಶಕವಾದ ವರ್ಗಾವಣೆ ನೀತಿಯನ್ನು ರೂಪಿಸಲಾಗುವುದು.
    iii) ರಾಜ್ಯದಲ್ಲಿನ ತಾಲ್ಲೂಕು ಆಸ್ಪತ್ರೆಗಳ ಆಡಳಿತವನ್ನು ಜಿಲ್ಲಾ ಶಸ್ತ್ರಚಿಕಿತ್ಸಕರ ವ್ಯಾಪ್ತಿಗೆ ಒಳಪಡಿಸಲಾಗುವುದು.
    iv) ಇಲಾಖೆಯಲ್ಲಿ ಖಾಲಿಯಿರುವ Critical Vacancy ಹುದ್ದೆಗಳನ್ನು ತರ್ಕಬದ್ಧಗೊಳಿಸಿ (Rationalize) ಆದ್ಯತೆಯ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

More articles

Latest article