ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ ಗೆ ಬುಕರ್ ಪ್ರಶಸ್ತಿ
ಬಾನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಇಂದು ರಾತ್ರಿ… ಒಂದು ಪಂಜು ಕೈಯಿಂದ ಕೈಗೆ ದಾಟಿದೆ. ಗೊತ್ತಿರದ ಮೂಲೆಗಳಿಂದ ಕಥೆಗಳು, ಗಡಿಗಳನ್ನು ಮೀರಿದ ಅನುವಾದಗಳು ಮತ್ತು ಪ್ರತೀ ಕಣ್ಣಿನಲ್ಲಿ ವಿಶ್ವವೇ ಅಡಗಿದೆ ಎಂದು ನಮಗೆ ನೆನಪಿಸುವ ಹೆಚ್ಚಿನ ಧ್ವನಿಗಳಿಗೆ ಇದು ದಾರಿ ಮಾಡಿಕೊಡಲಿ,” ಎಂದರು. ಎರಡು ಪೀಳಿಗೆಗಳ ಮಹಿಳೆಯರು ಇಂದು ನಮ್ಮ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಈ ಸಂತತಿ ಹೆಚ್ಚಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗಲಿ ಎಂದು ಆಶಿಸಬೇಕಿದೆ – ಪ್ರೀತಿ ನಾಗರಾಜ್, ಪತ್ರಕರ್ತರು.
ಈವತ್ತು ಹಾಸನದಲ್ಲಿ ಸಂಭ್ರಮ ಮನೆ ಮಾಡಿದೆ. ಒಂದು ಅದ್ಭುತ ಅಂತರರಾಷ್ಟ್ರೀಯ ಮಾನ್ಯತೆ ಹಾಸನದ ನಿರ್ಭೀತ, ನಿರ್ಭಿಡೆಯ ಸಾಹಿತಿ, ಶಿಕ್ಷಕಿ, ಹೋರಾಟಗಾರ್ತಿ ಹಾಗೂ ನಿರ್ಮಮ ಮನಸ್ಸಿನ ಸಹಜ ಸರಳ ವ್ಯಕ್ತಿತ್ವದ ಮಹಿಳೆಯೊಬ್ಬರಿಗೆ ದಕ್ಕಿ ಊರಿನ ಹೆಸರು ಆಗಸದ ಖ್ಯಾತಿಗೆ ಏರಿದೆ. ಸಾಹಿತ್ಯಕ್ಕೆ ಕೊಡಮಾಡುವ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಯ ಘೋಷಣೆ ನಿನ್ನೆ ಬೆಳಜಾವ ಲಂಡನ್ನಿನ ಟೇಟ್ ಮಾಡ್ರನ್ ನಲ್ಲಿ ಮೆಲ್ಲದನಿಯಲ್ಲಿ ಅನುರಣಿಸಿದಾಗ ಜಾಗತಿಕ ಸಾಹಿತ್ಯದ ವೇದಿಕೆಯ ಮೇಲೆ ಕೇಳಿದ್ದು ಕನ್ನಡ ಮತ್ತು ಕನ್ನಡತನದ ಕಸುವು. ಜೊತೆಗೆ ಎದ್ದು ಕಾಣುವಂತೆ ಇದ್ದದ್ದು ಮಹಿಳಾ ಧೀಮಂತಿಕೆ.
ಇದನ್ನು ನಾನು ಪೊಎಟಿಕ್ ಜಸ್ಟಿಸ್ (Poetic Justice) ಎನ್ನುವ ರೀತಿಯಲ್ಲಿ ನೋಡ ಬಯಸುತ್ತೇನೆ. ಏಕೆಂದರೆ ಒಂದು ವರ್ಷದ ಹಿಂದೆ ಹಾಸನದಲ್ಲಿ ಎಷ್ಟೋ ಜನ ಹೆಣ್ಣು ಮಕ್ಕಳು ತೊಂದರೆಗೆ ಅವಮಾನಕ್ಕೆ ಒಳಗಾಗಿ ಊರು ತೊರೆದರು. ಹೇಳ ಹೆಸರಿಲ್ಲದೆ ಹೋದರು. ಪ್ರಬಲ ವ್ಯಕ್ತಿ ಒಬ್ಬ ಅವರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಊರಿಗೆ ಊರೇ ಮೂಕವಾಗಿ ನಿಂತಿತ್ತು. ಆ ಎಲ್ಲಾ ಹೆಣ್ಣುಮಕ್ಕಳ ನೋವಿಗೆ ಇದು ಮದ್ದು ಅಂತ ಹೇಳಿ ಲಘುವಾಗಿಸುವ ಉದ್ದೇಶ ಇಲ್ಲಿಲ್ಲ.
ಆದರೆ ಇವತ್ತು ಅದೇ ಹಾಸನಕ್ಕೆ ಅತ್ಯಂತ ಸೂಕ್ತ ಶ್ರೇಷ್ಠ ಸಂತೋಷ, ಅದೂ ಊರಿನ ಒಬ್ಬ ಮಹಿಳೆಯ ಕಾರಣಕ್ಕೆ, ಮನೆಯ ಹೊಸ್ತಿಲಿಗೆ ಬಂದು ನಿಂತು ಊರು ಮತ್ತೊಮ್ಮೆ ಹಸನ್ಮುಖಿಯಾಗುವಂತೆ ಮಾಡಿದೆ ಎನ್ನುವುದನ್ನ ಮನನ ಮಾಡಿಕೊಳ್ಳದೆ ಇರಲಾಗದು.
ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಲೇಖಕರಾದ ಬಾನು “ಇದು ನನ್ನ ವೈಯಕ್ತಿಕ ಸಾಧನೆಗಿಂತ ಹೆಚ್ಚಿನದು, ನಾವು ವ್ಯಕ್ತಿಗಳಾಗಿ ಮತ್ತು ಜಾಗತಿಕ ಸಮುದಾಯವಾಗಿ ವೈವಿಧ್ಯತೆಯನ್ನು ಅಳವಡಿಸಿಕೊಂಡಾಗ, ನಮ್ಮ ವ್ಯತ್ಯಾಸಗಳನ್ನು ಸಂಭ್ರಮಿಸಿದಾಗ ಮತ್ತು ಪರಸ್ಪರರನ್ನು ಬೆಂಬಲಿಸಿ ಮೇಲಕ್ಕೆ ಎತ್ತಿದಾಗ ಮುಂದಕ್ಕೆ ಹೋಗಬಹುದು ಎನ್ನುವುದು ಸಾಬೀತಾಗಿದೆ. ಒಟ್ಟಾಗಿ ನಿಂತರೆ ನಮಗೆ ಪ್ರತಿಯೊಂದು ಧ್ವನಿಯೂ ಕೇಳಿಸುವ, ಪ್ರತಿಯೊಂದು ಕಥೆಯೂ ಮುಖ್ಯವಾಗುವ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನೂ ಒಳಗೊಂಡಿರುವ ಜಗತ್ತನ್ನು ರಚಿಸುತ್ತೇವೆ” ಎಂದರು.
“ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಜಗತ್ತಿನಲ್ಲಿ, ಸಾಹಿತ್ಯವು ನಾವು ಕೆಲವು ಪುಟಗಳ ಮಟ್ಟಿಗಾದರೂ ಪರಸ್ಪರರ ಮನಸ್ಸಿನೊಳಗೆ ವಾಸಿಸಬಹುದಾದ ಕಟ್ಟ ಕಡೆಯ ಆಪ್ತ ಸ್ಥಳಗಳಲ್ಲಿ ಒಂದಾಗಿದೆ” ಎಂದರು. ಈ ಮಾತುಗಳು ಬಾನು ಅವರು ಪ್ರತಿಧ್ವನಿಸಿದ ಮೌಲ್ಯಗಳ ಒಟ್ಟು ಮೊತ್ತವಾಗಿ ಪ್ರಾಮಾಣಿಕ ಅಭಿವ್ಯಕ್ತಿಯಾಗಿ ಹೊಮ್ಮಿವೆ.
ಅನುವಾದಕರಾದ ದೀಪಾ ಭಾಸ್ತಿ ‘ಜೇನಿನ ಹೊಳೆಯೋ ಹಾಲಿನ ಮಳೆಯೋ’ ಎಂದು ನುಡಿದು ಕನ್ನಡನಾಡಿನಲ್ಲಿ ರೋಮಾಂಚನ ಮೂಡಿಸಿದ್ದಲ್ಲದೆ “ಜಗತ್ತಿನಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ನನ್ನ ನುಡಿಗೆ ಸಂದ ಗೌರವ ಇದು. ಇದರಿಂದ ಇನ್ನೂ ಹೆಚ್ಚು ಕೊಡುಕೊಳ್ಳುವಿಕೆ ಆಗಬಹುದು ಎಂದು ನಾನು ನಂಬಿದ್ದೇನೆ” ಎಂದರು.
ಹಾರ್ಟ್ ಲ್ಯಾಂಪ್‌ನೊಂದಿಗೆ, ಬಾನು ಮುಷ್ತಾಕ್ ಅಪರೂಪದ ಸಾಧನೆ ಮಾಡಿದ್ದಾರೆ: ಆಳವಾಗಿ ವೈಯಕ್ತಿಕವೆನಿಸಿದ ಕಥೆಗಳನ್ನು ಸಾರ್ವತ್ರಿಕ ಸಾಹಿತ್ಯವನ್ನಾಗಿ ಪರಿವರ್ತಿಸಿದ್ದಾರೆ. “ಕಿಚನ್ ಸಾಹಿತ್ಯ’ ಎಂದು ಲೇವಡಿಗೆ ಒಳಗಾಗುತ್ತಿದ್ದ ಕಾಲದಿಂದ ಇಲ್ಲಿಗೆ ಬಂದು ನಿಂತಿರುವ ಮಹಿಳಾ ಸಾಹಿತಿಗಳು ಮತ್ತವರ ಪಾತ್ರಗಳು ಈಗ ವಿಶ್ವದ ಅತ್ಯಂತ ಪ್ರತಿಷ್ಠಿತ ಕೇಂದ್ರಸ್ಥಾನದಲ್ಲಿ ನಿಂತಿವೆ. ಈ ಗೆಲುವು ಬಾನು ಮುಷ್ತಾಕ್ ಮತ್ತು ದೀಪಾ ಅವರಿಗೆ ಸಿಕ್ಕ ಜಯವಲ್ಲ. ಇದು ಸಣ್ಣ ಕಾದಂಬರಿ, ಕನ್ನಡ ಸಾಹಿತ್ಯ ಮತ್ತು ದೀರ್ಘಕಾಲದಿಂದ ಬರೆಯದೆ ಅಥವಾ ಅನುವಾದಕ್ಕೆ ಒಳಗಾಗದೆ ಬದುಕುತ್ತಿರುವ ಅಸಂಖ್ಯಾತ ಮಹಿಳೆಯರಿಗೆ ಸಿಕ್ಕ ಜಯವಾಗಿದೆ.
ಕರ್ನಾಟಕದಾದ್ಯಂತ ತನ್ನ ದಿಟ್ಟ ಧ್ವನಿ ಮತ್ತು ತಮ್ಮ ಹೋರಾಟ, ವಕೀಲಿಕೆಯಿಂದಾಗಿ ಹೆಸರುವಾಸಿಯಾದ ಬಾನು ಮುಷ್ತಾಕ್ 1970 ರ ದಶಕದಲ್ಲಿ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ನಂತರದ ವರ್ಷಗಳಲ್ಲಿ, ಅವರು ಬೆದರಿಕೆಗಳು, ಸಾಮಾಜಿಕ ಬಹಿಷ್ಕಾರ ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಅವರ ಬಹಿರಂಗ ನಿಲುವಿಗಾಗಿ ಚಾಕುವಿನಿಂದ ಆದ ದಾಳಿಯನ್ನು ಎದುರಿಸಿದ್ದಾರೆ, ಇದು ಈ ಅಂತರರಾಷ್ಟ್ರೀಯ ಮನ್ನಣೆಯನ್ನು ಇನ್ನಷ್ಟು ಶಕ್ತಿಯುತವಾಗಿಸಿದೆ.
“ಎರಡು ಜುಟ್ಟು ಸೇರಬಹುದು ಆದರೆ ಎರಡು ಜಡೆ ಸೇರಲ್ಲ” ಎಂದೋ “ಜೆಲಸಿ ದೈ ನೇಮ್ ಈಸ್ ವುಮನ್” ಎಂದೋ ವ್ಯಕ್ತಿತ್ವವನ್ನೇ ಸಂಕುಚಿತಗೊಳಿಸಿಕೊಂಡು ಬದುಕಬೇಕಿದ್ದ ಕಾಲದಿಂದ ಇಲ್ಲಿಗೆ ಬಂದು ನಿಂತಿದ್ದೇವೆ.
ಅದೇ ರೂಪಕದಲ್ಲೇ ಹೇಳುವುದಾದರೆ ಎರಡು ಜಡೆ ಸೇರಿದರೆ ಏನಾಗುತ್ತೆ ಎನ್ನುವ ಸಾಕ್ಷಿ ಇಡೀ ಜಗತ್ತಿನ ಮುಂದೆ ಇದೆ.
ಒಡಕಿಲ್ಲದ ಸಂಭ್ರಮ ಅನುಭವಿಸಿ ಎಷ್ಟೋ ದಿನಗಳಾಗಿದ್ದವು. ಅಂತದೊಂದು ಸಂಭ್ರಮ ತಂದುಕೊಟ್ಟ ಈ ಗಳಿಗೆಗೆ ಕಾರಣೀಭೂತರಾದ ಇಬ್ಬರೂ ಮಹಿಳೆಯರಿಂದಾಗಿ ಕನ್ನಡನಾಡು ಸಕಾರಣವಾದ ಸಂತೋಷ ಅನುಭವಿಸುತ್ತಿದೆ..
ಇಂದಿನ ಕಾಲಘಟ್ಟದ ಬಹುತ್ವದ ನಿರ್ಲಕ್ಷ್ಯ, ಸಬ್‌ಆಲ್ಟರ್ನ್ ನಿರೂಪಣೆಗಳ ಮಿತಿಮೀರಿದ ನಿಗ್ರಹ ಮತ್ತು ಏಕರೂಪೀಕರಣದ ಕಡೆಗೆ ಇರುವ ಧಾವಂತವನ್ನು ನೋಡಿದರೆ ಇಂದಿನ ಈ ಮೆಚ್ಚುಗೆಯ ಒಂದು ಸಂಕೇತ ಇಂದಿನ ಭಾರತಕ್ಕೆ ಅಗತ್ಯವಾಗಿತ್ತು.
ಅಂತರರಾಷ್ಟ್ರೀಯ ಬುಕರ್ ತೀರ್ಪುಗಾರರ ಅಧ್ಯಕ್ಷ ಮ್ಯಾಕ್ಸ್ ಪೋರ್ಟರ್, ಹಾರ್ಟ್ ಲ್ಯಾಂಪ್ ಅನ್ನು “ಬಹುತ್ವದ ವಿವಿಧ ಆಯಾಮಗಳಲ್ಲಿ ಬಳಸಲಾಗುವ ಬಹುರೂಪಿ ಇಂಗ್ಲಿಷ್ ಭಾಷೆಗಳಲ್ಲಿ ಹೊಸ ರಚನೆಗಳನ್ನು ಸೃಷ್ಟಿಸುವ ಆಮೂಲಾಗ್ರ ಅನುವಾದ” ಎಂದು ಹೇಳಿದ್ದಾರೆ. ಇದು ಮಹಿಳೆಯರ ಜೀವನ, ಸಂತಾನೋತ್ಪತ್ತಿ ಹಕ್ಕುಗಳು, ಜಾತಿ, ನಂಬಿಕೆಯ ತಳಹದಿ ಮತ್ತು ಅದರೊಳಗಿನ ದಬ್ಬಾಳಿಕೆಗಳನ್ನು ಅತ್ಯಂತ ಮನೋಜ್ಞವಾಗಿ ಭಾಷೆ ಮತ್ತು ಸಾಂಸ್ಕೃತಿಕ ಪದರಗಳೊಂದಿಗೆ ಹೆಣೆದುಕೊಂಡಿರುವ ಕಥೆಗಳ ಮೂಲಕ ಅನ್ವೇಷಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
ಕಥೆಗಳ ಮೂಲಕ ತನಗೆ ಅನ್ನಿಸಿದ್ದು ಹೇಳಬೇಕು ಎಂಬ ತುರ್ತು ಬಾನು ಅವರಲ್ಲಿ ಮೊದಲಿನಿಂದಲೂ ಇತ್ತು. ಹಾರ್ಟ್ ಲ್ಯಾಂಪ್ ಬುಕರ್ ಶಾರ್ಟ್ ಲಿಸ್ಟ್ ಆದಾಗ ಬಾನು ಅವರ ಪ್ರಕಾಶಕರಾದ ಅಭಿರುಚಿ ಗಣೇಶ ಅವರು ಮೈಸೂರು ಬುಕ್ ಕ್ಲಬ್ಸ್ ಜೊತೆಗೂಡಿ ಇತ್ತೀಚೆಗೆ ಮೈಸೂರಿನಲ್ಲಿ ಒಂದು ಸಂವಾದ ಏರ್ಪಡಿಸಿದ್ದರು. ಆಗ ಬಾನು ಅವರು ಬರೆಯಲು ಶುರು ಮಾಡಿದ ದಿನಗಳ ಬಗ್ಗೆ ಪ್ರಸ್ತಾಪಿಸಿ ಯಾವ ಕಾರಣಕ್ಕಾಗಿ ಬರೆಯಲು ಶುರು ಮಾಡಿದಿರಿ ಅಂತ ಕೇಳಿದರೆ ಬರವಣಿಗೆ ನನಗೆ ಸಹಜ ಮಾಧ್ಯಮವಾಗಿತ್ತು, ಅದನ್ನು ಬಿಟ್ಟು ಬೇರೆ ಯಾವ ರೀತಿಯಲ್ಲೂ ನನಗೆ ಅನಿಸಿದ್ದು ಹೇಳಲಾರೆ ಎನ್ನಿಸುವಷ್ಟು ನನ್ನೊಳಗೆ ಕಥೆಗಳು ಇದ್ದವು ಎಂದಿದ್ದರು.
ಲಂಕೇಶ್ ಪತ್ರಿಕೆಯಿಂದ ಹಾಗೂ ಪ್ರಜಾಮತದಿಂದ ಬರವಣಿಗೆಯನ್ನು ಶುರು ಮಾಡಿದ ಬಾನು ಅವರು ಬರೆಯುತ್ತಾ ಹೋದಂತೆ ಒಮ್ಮೊಮ್ಮೆ ತಮ್ಮೊಳಗೆ ನಡೆಯುತ್ತಿದ್ದ ಸಂಕೀರ್ಣ ಆಲೋಚನೆಗಳನ್ನು ಪಾತ್ರವಾಗಿಸುತ್ತಿದ್ದರು.
“ವೈಯಕ್ತಿಕವಾಗಿ ನನಗೆ ಜೀವನದ ಕೆಲವು ಹಂತಗಳಲ್ಲಿ ಸಂದಿಗ್ಧ ಹಾಗೂ ಕಷ್ಟ ಅನುಭವಿಸಿದ್ದು ಬಿಟ್ಟರೆ ನನಗೆ ಸಾಕಷ್ಟು ಅನುಕೂಲಗಳೇ ಇದ್ದವು. ಕಷ್ಟ ಎನ್ನುವುದು ತೀರಾ ಹೆಚ್ಚೇನು ಇರಲಿಲ್ಲ. ಮನೆಯಲ್ಲಿ ಬೆಂಬಲವಿತ್ತು. ನನಗೆ ಕಥೆಗಳನ್ನು ಬರೆಯುವ ತುಡಿತ ಹೆಚ್ಚಾದಾಗಲೆಲ್ಲ ಬರೆಯುತ್ತಲೇ ಇದ್ದೆ. ಆಗ ಒಮ್ಮೊಮ್ಮೆ ಪ್ರಶ್ನೆಗಳು ಏಳುತ್ತಿದ್ದವು. ನಾನು ಅನುಕೂಲವಾಗಿದ್ದೀನಲ್ಲ ಇವು ಯಾವುವೂ ನನ್ನ ಕಷ್ಟದ ಅನುಭವ ಅಲ್ಲ; ಮತ್ತೇಕೆ ಬರೆಯುತ್ತಿದ್ದೇನೆ ಎನಿಸಿದಾಗಲೆಲ್ಲ ನನ್ನ ಬಂಡಾಯ ದಿನದ ಮಿತ್ರರು ಹಾಗೂ ಗುರುಗಳು ನನಗೆ ಒಂದು ಸ್ಪಷ್ಟತೆಯನ್ನು ಕೊಡುತ್ತಿದ್ದರು. ಸಮುದಾಯದ ಒಳಗಿನ ದನಿಗಳಿಗೆ ನೀನೇ ಸ್ವರೂಪ ಕೊಡಬೇಕು. ಕಥೆಗಳನ್ನು ಬರೆಯುತ್ತೀಯಾ, ಕಥೆ ಬರೆಯಲಾಗದವರ ದನಿಯಾಗಿ ನಿಲ್ಲು ಎಂದು ಹೇಳುತ್ತಿದ್ದರು. ಅಲ್ಲಿಂದ ಮುಂದಕ್ಕೆ ನಾನು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಬರೆಯುತ್ತಲೇ ಹೋದೆ,” ಎಂದು ಹೇಳಿದ್ದರು.
ಸಾಹಿತ್ಯಿಕವಾಗಿ ಈವತ್ತಿಗೂ ಸ್ವಲ್ಪ ಮುಚ್ಚಿದ ಬಾಗಿಲಿನ ಮನೆಯಂತೆ ಮಡಿವಂತಿಕೆಯನ್ನೇ ಪೋಷಿಸಿಕೊಂಡು ಬರುತ್ತಿರುವ ವಲಯದಲ್ಲಿ ಬಾನು ಅವರ ನೇರ ಕಥೆಗಳು ಆಗಾಗ ಚರ್ಚೆಗೆ ಒಳಗಾಗಿದ್ದರೂ ಹೆಚ್ಚಿನ ವಿಮರ್ಶೆಗೆ ಸಿಕ್ಕಿಲ್ಲ. ಇದಕ್ಕೆ ವಿಮರ್ಶಾ ವಲಯ ಕಾರಣವೋ ಅಥವಾ ಅಕಾಡೆಮಿಕ್ ಹಿನ್ನೆಲೆ ಇದ್ದರೆ ಮಾತ್ರ ಗಂಭೀರ ಸಾಹಿತ್ಯ ಎನ್ನಲಾಗುವುದು ಎನ್ನುವ ಧೋರಣೆ ಕಾರಣವೋ ತಿಳಿಯದು. ನಾವು ಬಾಗಿಲಿಗೆ ಅಡ್ಡ ಪಟ್ಟಿ ಇಟ್ಟುಕೊಂಡು ಬದುಕುವಾಗ ಜಗತ್ತು ನಮ್ಮ ಮನೆಯ ಒಳಗಿನ ವೈವಿಧ್ಯತೆಯನ್ನು ಕೊಂಡಾಡುವ ಸಮಯ ಬಂದು ನಾವು ತಬ್ಬಿಬ್ಬಾಗುವುದು, ನಮ್ಮ ಇಬ್ಬಂದಿ ಬಯಲಾಗುವುದು ಬೇಡವಾದರೆ ಸಾಹಿತ್ಯ ಜೀವನದ ಪ್ರತಿಬಿಂಬ ಎನ್ನುವ ಸರಳ ಸತ್ಯ ಅರಿವಾದರೆ ಸಾಕು. ಅದೇ ಕನ್ನಡದ ಶಕ್ತಿ, ಅದನ್ನೇ ಇವತ್ತು ಜಾಗತಿಕ ವೇದಿಕೆಗಳು ಮೆಚ್ಚಿ ಮೆರೆಸುತ್ತಿರುವುದು ಎಂದು ಅರ್ಥವಾಗಬೇಕಿದೆ.
ಹಾರ್ಟ್ ಲ್ಯಾಂಪ್‌ನ ಯಶಸ್ಸು ಬಹಳ ಕಾರಣಗಳಿಗೆ ಮಹತ್ವದ್ದಾಗಿದೆ ಎನ್ನಿಸುತ್ತದೆ. ದಶಕಗಳಿಂದ, ಸಮಕಾಲೀನ ಭಾರತೀಯ ಸಾಹಿತ್ಯವನ್ನು ಪಶ್ಚಿಮದಲ್ಲಿ ಸಲ್ಮಾನ್ ರಶ್ದಿ, ಅರುಂಧತಿ ರಾಯ್, ಅರವಿಂದ್ ಅಡಿಗ, ಅಮಿತಾವ್ ಘೋಷ್ ಮತ್ತು ಅನಿತಾ ದೇಸಾಯಿ ಅವರಂತಹ ಇಂಗ್ಲಿಷ್ ಭಾಷೆಯ ಕಾದಂಬರಿಕಾರರು ಹೆಚ್ಚಾಗಿ ಪ್ರತಿನಿಧಿಸಿದ್ದಾರೆ. ಆದರೆ 2022 ರ ಟೂಂಬ್ ಆಫ್ ಸ್ಯಾಂಡ್‌ಗೆ (ರೇತ್ ಸಮಾಧಿ) ಗೆ ದೊರೆತ ಮನ್ನಣೆ ಇದನ್ನು ಬದಲಾಯಿಸಿತು. ಅಂದಿನಿಂದ, ಹಾರ್ಪರ್‌ಕಾಲಿನ್ಸ್ ಇಂಡಿಯಾದ ಪೆರೆನ್ನಿಯಲ್ ಇಂಪ್ರಿಂಟ್ ವರ್ಷಕ್ಕೆ ಸುಮಾರು ಒಂದು ಡಜನ್ ಇಂಗ್ಲಿಷ್ ಭಾಷೆಯ ಅನುವಾದಗಳನ್ನು ಪ್ರಕಟಿಸಲು ಪ್ರಾರಂಭಿಸಿದೆ. ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ತನ್ನ ಪಟ್ಟಿಯಲ್ಲಿರುವ 22 ಪ್ರಮುಖ ಭಾರತೀಯ ಭಾಷೆಗಳಲ್ಲಿ ಹಿಂದಿ, ಉರ್ದು, ಮಲಯಾಳಂ, ತಮಿಳು ಮತ್ತು ಕನ್ನಡ ಸೇರಿದಂತೆ 16 ಭಾಷೆಗಳ ಅನುವಾದಗಳನ್ನು ಹೊಂದಿದೆ. ಕನ್ನಡದ ಕಡೆ ಹೆಚ್ಚು ಮುಖಮಾಡಲು ಈಗ ಹೆಚ್ಚಿನ ಕಾರಣವೂ ದೊರೆತಿದೆ.
ಬಾನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಇಂದು ರಾತ್ರಿ… ಒಂದು ಪಂಜು ಕೈಯಿಂದ ಕೈಗೆ ದಾಟಿದೆ. ಗೊತ್ತಿರದ ಮೂಲೆಗಳಿಂದ ಕಥೆಗಳು, ಗಡಿಗಳನ್ನು ಮೀರಿದ ಅನುವಾದಗಳು ಮತ್ತು ಪ್ರತೀ ಕಣ್ಣಿನಲ್ಲಿ ವಿಶ್ವವೇ ಅಡಗಿದೆ ಎಂದು ನಮಗೆ ನೆನಪಿಸುವ ಹೆಚ್ಚಿನ ಧ್ವನಿಗಳಿಗೆ ಇದು ದಾರಿ ಮಾಡಿಕೊಡಲಿ,” ಎಂದರು. ಎರಡು ಪೀಳಿಗೆಗಳ ಮಹಿಳೆಯರು ಇಂದು ನಮ್ಮ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಈ ಸಂತತಿ ಹೆಚ್ಚಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗಲಿ ಎಂದು ಆಶಿಸಬೇಕಿದೆ.
ಪ್ರೀತಿ ನಾಗರಾಜ್
ಪತ್ರಕರ್ತರು
ಇದನ್ನೂ ಓದಿ-ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಅನುವಾದಿತ ʼಹಾರ್ಟ್ ಲ್ಯಾಂಪ್ʼ ಗೆ ಪ್ರತಿಷ್ಠಿತ ಬೂಕರ್ ಗರಿಮೆ