ಕಾಡಿಗೆ ಜಾನುವಾರು ನಿಷೇಧ! ಇದು ಸಾಧ್ಯವಾ? ಸಾಧುವಾ? ಅರಣ್ಯ ಸಚಿವರೇ?

Most read

ʼರಾಜ್ಯದಲ್ಲಿರುವ ಎಲ್ಲಾ ಅರಣ್ಯ ಪ್ರದೇಶದೊಳಗೆ ಹಸು, ಕರು, ಮೇಕೆ, ಕುರಿ ಮತ್ತಿತರ ಜಾನುವಾರುಗಳನ್ನು ಮೇಯಿಸುವುದಕ್ಕೆ ನಿಷೇಧ !!ʼ

ಇದು ಕರ್ನಾಟಕ ಸರ್ಕಾರದ ಅರಣ್ಯ ಸಚಿವರ ಆದೇಶ! ಇದಕ್ಕೆ ಅವರು ಕಾರಣ ಕೊಟ್ಟಿರುವುದು, ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆಯೊಡೆದ ಚಿಕ್ಕಪುಟ್ಟ ಸಸಿಗಳು ಅವುಗಳಿಗೆ ಆಹಾರವಾಗಿ ಬಿಡುತ್ತವೆ. ಹೊಸ ಗಿಡಗಳು ಬೆಳೆಯದೆ ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತದೆ ಎಂದು ʼಪರಿಸರ ಪ್ರೇಮಿಗಳುʼ ಅಭಿಪ್ರಾಯ ಪಟ್ಟಿದ್ದಾರೆ ಎಂಬುದು.

ಎರಡನೆಯದು, ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ ಅದಕ್ಕೆ ಆಕ್ರೋಶಗೊಂಡು ಕೆಲವರು, ಮೃತ ಜಾನುವಾರುಗಳಿಗೆ ವಿಷ ಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ ಎಂಬುದು. ಇದಕ್ಕೆ ಉದಾಹರಣೆ ಎಂದರೆ ಇತ್ತೀಚೆಗೆ ಹ್ಯೂಗಂ ಅರಣ್ಯ ವಲಯದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಸಾವಿಗೀಡಾಗಿರುವುದನ್ನು ಉಲ್ಲೇಖಿಸಿದ್ದಾರೆ. ಸಾಕುಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಉಂಟಾಗುತ್ತದೆ ಎಂಬುದು ಮತ್ತು ಸಾಕುಪ್ರಾಣಿಗಳ ಸಾಂಕ್ರಾಮಿಕ ರೋಗಗಳು ಕಾಡಿನ ಪ್ರಾಣಿಗಳಿಗೂ ಅಂಟಿಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂಬುದು ಇನ್ನೊಂದು ಕಾರಣ ಎಂದರೆ ನೆರೆಯ ತಮಿಳುನಾಡಿನಲ್ಲಿ ಸಾಕುಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸುವುದರ ವಿರುದ್ಧ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪಿನಿಂದ ಅಲ್ಲಿಯ ಹಳ್ಳಿಗಳ ಜಾನುವಾರುಗಳನ್ನೆಲ್ಲ ದೊಡ್ಡ ಸಂಖ್ಯೆಯಲ್ಲಿ ನಮ್ಮ ರಾಜ್ಯದ ಅರಣ್ಯದೊಳಗೆ ಮೇಯಿಸಲು ಬಿಡುತ್ತಿದ್ದಾರೆ. ಅದಕ್ಕಾಗಿ ಅದನ್ನು ನಿಯಂತ್ರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕೆಂಬುದು ಮಾನ್ಯ ಮಂತ್ರಿಗಳ ಇರಾದೆಯಾಗಿದೆ.

ಸಚಿವ ಈಶ್ವರ ಖಂಡ್ರೆ

ಅರಣ್ಯ ಸಚಿವರ ಕಾನೂನು ಹೇಗಿದೆ ಎಂದರೆ ಮೂಗಲ್ಲಿ ನೆಗಡಿ ಆದರೆ ಇಡೀ ಮೂಗನ್ನೇ ಕತ್ತರಿಸಿ ಬಿಡಬೇಕು ಎಂಬಂತೆ ಇದೆ.

ನೂರಾರು ತಲೆಮಾರುಗಳಿಂದಲೂ ನಾವು ಹಿರಿಯರಿಂದ ತಿಳಿದಿರುವಂತೆ ಮಲೆನಾಡಿನ ಕಾಡುಗಳಲ್ಲಿ ಕಾಡುಪ್ರಾಣಿಗಳು ಇವೆ, ಸಾಕು ಪ್ರಾಣಿಗಳು ಹೋಗಿ ಮೇಯುತ್ತವೆ. ಇದರಿಂದಾಗಿ ಅರಣ್ಯ ನಾಶವಾಗಿದೆ ಎಂಬ ದೂರುಗಳು ಎಂದೂ ಕೂಡ ನಾವು ಕೇಳಿಲ್ಲ. ಹುಲ್ಲು ತಿನ್ನುವ ಪ್ರಾಣಿಗಳು ಇರುವಂತೆಯೇ ಹುಲ್ಲೆ ತಿಂದು ಬದುಕುವ ಪ್ರಾಣಿಗಳೂ ಅದೇ ಪ್ರದೇಶದಲ್ಲಿ ಅಲೆದಾಡುತ್ತಿರುತ್ತವೆ. ಜಾನುವಾರುಗಳು ಮೊಳಕೆಯೊಡೆದ ಆಗಷ್ಟೆ ಚಿಗುರೊಡೆದ ಸಸ್ಯಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದನ್ನು ನಾವಂತೂ ಕಂಡಿಲ್ಲ. ಆದರೆ ಹುಲ್ಲು, ಗಿಡಗಂಟೆಗಳ ಚಿಗುರು ಸೊಪ್ಪುಗಳನ್ನು ಹಾಗೂ ಹುಲ್ಲು ಸದೆಗಳನ್ನು ಜೊತೆಗೆ ಬಾವಲಿಗಳು ಕಾಡು ಬೆಕ್ಕುಗಳು ಅಥವಾ ಮಂಗಗಳು ತಿಂದು ಬೀಳಿಸಿದ ಹಣ್ಣು ಕಾಯಿ ಸಿಪ್ಪೆಗಳನ್ನು ಎಷ್ಟೋ ಸಸ್ಯಹಾರಿ ಪ್ರಾಣಿಗಳು ಕಾಡಿನಲ್ಲಿ ತಿಂದು ಬದುಕಿರುವುದನ್ನು ನೋಡುತ್ತೇವೆ. ಭಾರೀ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಮಾಂಸಾಹಾರಿ ಪ್ರಾಣಿಗಳು ವಿಶೇಷವಾಗಿ ಇರುವುದು. ಹಾಗೆಯೇ ಜಿಂಕೆ, ಕಾನ್ ಕುರಿ, ಬರ್ಕ (ಮೌಸ್ ಡಿಯರ್), ಇತ್ಯಾದಿ ಪ್ರಾಣಿಗಳು ಅವುಗಳ ಪ್ರದೇಶದಲ್ಲಿ ಮಾಂಸಾಹಾರಿ ಪ್ರಾಣಿಗಳ ಆಹಾರವಾಗಿ ಸಿಕ್ಕಿ ಹಾಕಿಕೊಳ್ಳುತ್ತವೆ. ಅಂದರೂ ಕೂಡಾ, ಸಸ್ಯಹಾರಿ ಪ್ರಾಣಿಗಳು ಸುಲಭವಾಗಿ ಬಲಿಯಾಗುವುದು ಅಪರೂಪ.

ಆಹಾರ ಸರಪಳಿ ಎಂಬುದು ಕಾಡಿನ ನ್ಯಾಯದಲ್ಲಿ ನಡೆದು ಬಂದದ್ದೇ ಆಗಿದೆ. ಒಂದಕ್ಕೊಂದು ಎಚ್ಚರಿಕೆಯಿಂದಲೇ ಅವು ಜೀವಿಸುತ್ತಿರುತ್ತವೆ. ಕೆಲವೊಮ್ಮೆ ಒಂದು ಮತ್ತೊಂದಕ್ಕೆ ಆಹಾರವಾಗುತ್ತದೆ. ಪ್ರಕೃತಿ ತನಗೆ ತಾನೇ ಸಮತೋಲನ ಕಾಯ್ದುಕೊಂಡೇ ಬಂದಿದೆ. ಹಳ್ಳಿಯ ರೈತರು ಹೆಚ್ಚಾಗಿ ತಮ್ಮ ಜಾನುವಾರುಗಳನ್ನು ಹುಲಿ ಸಿಂಹ ಗಳಿದ್ದ ಕಾಡಿನಲ್ಲಿ ಮೇಯಲು ಬಿಡುವುದಿಲ್ಲ ಮತ್ತು ಜಾನುವಾರುಗಳು ಅಂತ ಕಾಡಿಗೆ ನುಗ್ಗುವುದು ಅಪರೂಪ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರೇ ತಮ್ಮ ಜಾನುವಾರುಗಳನ್ನು ಮೇಯಿಸಿಕೊಂಡು ಬರುವ ಪದ್ಧತಿ ಎಲ್ಲಾ ಕಡೆಯೂ ಇದ್ದೇ ಇದೆ. ಎಲ್ಲೋ ಯಾರೋ ಕೆಲವರು, ಅವಿವೇಕಿಗಳು ಹುಲಿಗಳಿಗೆ ವಿಷ ಹಾಕಿದರು ಎಂದು ಇಡೀ ರಾಜ್ಯದ ರೈತರನ್ನು, ಪಶು ಪಾಲಕರನ್ನು ಪರೋಕ್ಷವಾಗಿ ದೂಷಿಸಿ ಅವರ ಜಾನುವಾರುಗಳನ್ನು ಸಾಯಲಿ ಎಂಬಂತೆ ಮಾಡುತ್ತಿರುವ ಮಂತ್ರಿಗಳ ನಡೆ ಬುದ್ಧಿಗೇಡಿತನವೇ ಸರಿ.

ಸಾಂದರ್ಭಿಕ ಚಿತ್ರ

ಒಂದು ಕಾಲದಲ್ಲಿ ನೂರಾರು ಜಾನುವಾರುಗಳು ಒಂದು ಊರಿನಲ್ಲಿ ಇರುತ್ತಿದ್ದ ಕಾಲವಿತ್ತು ಈಗಂತೂ ಯಾವುದೇ ಹಳ್ಳಿಗಳಲ್ಲಿ ನೋಡಿದರೂ 40-50 ಜಾನುವಾರುಗಳು ಇರುವುದು ಅಪರೂಪವಾಗಿದೆ. ಇತ್ತೀಚೆಗೆ ದೀಪಾವಳಿ ಸಮಯದಲ್ಲಿ ಆಕಳ ಪೂಜೆ ನಡೆಸಲು ಆಕಳೇ ಇರದಂತ ಮನೆಗಳು ಎಷ್ಟೋ ಇವೆ. ಜಾನುವಾರುಗಳ ಸಂಖ್ಯೆಯಲ್ಲಿ ತೀರಾ ಕುಸಿತವಾಗಿರುವ ಸೂಚನೆ ಇದು. ತಮ್ಮ ಜಾನುವಾರುಗಳನ್ನು ಗುಡ್ಡ ಬೆಟ್ಟಗಳಿಗೆ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಮರಳಿ ಮನೆಗಳಿಗೆ ವಾಪಸ್ ಹೊಡೆದುಕೊಂಡು ಬರುವ ಕಾವಲು ಪದ್ಧತಿ ಅಥವಾ ʼದನದ ಬಾರಿʼ ಎಂದೇ ರೂಢಿಯಲ್ಲಿರುವ ಪದ್ಧತಿ ಹಳ್ಳಿಗಳಲ್ಲಿ ಅನೂಚಾನವಾಗಿ ಇದೆ. ಯಾಕೆಂದರೆ ತಮ್ಮ ಜಾನುವಾರುಗಳು ತಾವೇ ಬಿತ್ತಿ ಬೆಳೆದ ಬೆಳೆಗಳನ್ನ ಬೇಲಿ ಹಾರಿ ಮೇಯ್ದು ತುಳಿದು ಹಾಳು ಮಾಡುವುದನ್ನು ತಡೆಯಲು ಹಳ್ಳಿ ರೈತಾಪಿ ಜನರು ತಾವೇ ಮಾಡಿಕೊಂಡ ಪದ್ಧತಿ ಅದು. ಹಾಗೆಯೇ ರೈತರು ರಾತ್ರಿ ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಅವರ ಹೊಲಗದ್ದೆಗಳಲ್ಲಿ ಕಾವಲು ಅಟ್ಟಣಿಗೆ ಮಾಡಿಕೊಂಡು ಅಲ್ಲಿಯೇ ಬೆಂಕಿ ಹಾಕಿಕೊಂಡು ಕಾಯುವ ಪದ್ಧತಿ ಈಗಲೂ ಇದೆ. ಆದರೂ ಕಾಡುಪ್ರಾಣಿಗಳ ಹಾವಳಿ ಎಷ್ಟಿದೆ ಎಂದರೆ ಹಂದಿಗಳು, ಕಾಡೆಮ್ಮೆಗಳು, ಆನೆಗಳು ರೈತರು ಆರು ತಿಂಗಳು ಶ್ರಮ ಹಾಕಿ ಮಾಡಿದ ಬೆಳೆಯನ್ನು ಒಂದೇ ಏಟಿಗೆ ತುಳಿದು ತಿಂದು ನಾಶ ಮಾಡಿ ಅವರನ್ನು ಗಂಜಿಗೂ ಗತಿಯಿಲ್ಲದಂತೆ ಮಾಡಿಬಿಡುವ ಸಂಗತಿಗಳೇ ಹೆಚ್ಚಾಗಿ ಕೇಳಿ ಬರುತ್ತವೆ. ಇಂತಹ ನಷ್ಟದ ಬಗ್ಗೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿದರೂ ಏನೂ ಪರಿಹಾರ ಸಿಗದೆ ಮಾಡಿದ್ದೆಲ್ಲ ಹೊಳೆಯಲ್ಲಿ ತೊಳೆದು ಹೋದಂತೆ ಆಗುತ್ತಿದೆ. ಈ ಬಗೆಯಲ್ಲಿ ಕಾಡಂಚಿನ ಜನರು ಸಂಕಟ ಪಡುವುದನ್ನು ಪದೇಪದೇ ಕೇಳುತ್ತೇವೆ. ಈಗ ʼರೈತರ ಜಾನುವಾರುಗಳು ಸಾವಿರಾರು ಎಕರೆ ಅರಣ್ಯಗಳಲ್ಲಿ ಹೊಸ ಮೊಳಕೆಗಳನ್ನು, ಸೊಪ್ಪು ಚಿಗುರುಗಳನ್ನು ತಿಂದು ಹಾಕುವುದರಿಂದ ಕಾಡು ನಾಶವಾಗುತ್ತಿದೆʼ ಎಂಬುದು ಒಂದು ಹುಸಿ ಲೆಕ್ಕಾಚಾರ.

ಇನ್ನು ಜಾನುವಾರುಗಳು ಕಾಡಿನ ಪ್ರಾಣಿಗಳಿಗೆ ರೋಗ ಹರಡುತ್ತವೆ ಎಂಬುದು ತಮಾಷೆ. ನೋಡಿ, ಮಲೆನಾಡಿನಲ್ಲಿ ಇಷ್ಟೆಲ್ಲಾ ಮಂಗನ ವೈರಸ್ಸು ಕಾಯಿಲೆ ಬಂದಿದ್ದರೂ, ಕಾಡಿಗೆ ಹೋಗುವ ಯಾವುದೇ ಜಾನುವಾರುಗಳು ಮಂಗನ ಕಾಯಿಲೆಯಿಂದ ಸತ್ತಿವೆ ಎಂಬ ಉದಾಹರಣೆ ಎಲ್ಲಾದರೂ ಕಂಡಿದೆಯೆ?

ಕಾಡು ನಾಶವಾಗಿರುವುದು, ನಾಶವಾಗುತ್ತಿರುವುದು ಮನುಷ್ಯನ ದುರಾಸೆಯ ಆಧುನಿಕ ಬದುಕಿನಿಂದಾಗಿ. ದೊಡ್ಡ ಮತ್ತು ಸಣ್ಣ ಪ್ರಮಾಣದ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳಿಗಾಗಿ ಸಾವಿರಾರು ಲಕ್ಷಾಂತರ ಹೆಕ್ಟೇರ್ ಅರಣ್ಯಗಳನ್ನು ಮುಳುಗಿಸಿದ್ದರಿಂದಾಗಿ ಹಾಗೂ ಲೆಕ್ಕವಿಲ್ಲದಷ್ಟು ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿರಂತರವಾಗಿ ನಡೆಸಲು ಅನುಮತಿ ಕೊಟ್ಟಿರುವ ಅರಣ್ಯ ಇಲಾಖೆಯ ಬೇಜವಾಬ್ದಾರಿ ನೀತಿಗಳಿಂದಾಗಿ. ಕರ್ನಾಟಕದಲ್ಲಿ ಆಂಧ್ರ ಮೂಲಕ ಎಷ್ಟು ಮಿನಿ ಹೈಡ್ರೋ ಪ್ರಾಜೆಕ್ಟ್ ಕಂಪನಿಗಳು ಕೆಲಸ ಮಾಡುತ್ತಿವೆ ಎಂಬ ಲೆಕ್ಕವೇನಾದರೂ ಮಂತ್ರಿಗಳ ಬಳಿ ಇದೆಯೆ? ದೊಡ್ಡ ಶ್ರೀಮಂತರ ದೊಡ್ಡ ಅಧಿಕಾರಿಗಳ ಮನೆಗಳಿಗೆ ಬೆಲೆಬಾಳುವ ಮರಮುಟ್ಟುಗಳ ಮುಚ್ಚಿಗೆ ಮಾಡುವುದಕ್ಕಾಗಿ, ಕುರ್ಚಿ ಬೆಂಕಿಗಳಿಗಾಗಿ ಕಡಿದು ತಾವು ಬಳಸಿ ಹೊರದೇಶಗಳಿಗೂ ಹಣದಾಸೆಗಾಗಿ ಮಾರಾಟ ಮಾಡಿದ್ದಕ್ಕಾಗಿ ಎಂದು ಸಾಮಾನ್ಯ ತಿಳುವಳಿಕೆ ಇದ್ದವರಿಗೂ ತಿಳಿಯುತ್ತದೆ. ಸಾಮಾನ್ಯ ರೈತರ ಮನೆಗಳಲ್ಲಿ ಬೆಲೆಬಾಳುವ ಕುರ್ಚಿ ಬೆಂಚುಗಳು ಇರಲಿ ಸರಿಯಾಗಿ ಕೂರಲು ಮನೆಗಳು ಇರುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು  ಸಿಬ್ಬಂದಿಗಳ ಉಸ್ತುವಾರಿಯಲ್ಲಿಯೇ ಕಾಡಿನ ಮರಗಳ ಸಾಗಾಣಿಕೆ, ಕಳ್ಳ ಸಾಗಾಣಿಕೆ ವನ್ಯಜೀವಿಗಳ ಶಿಕಾರಿ, ದೊಡ್ಡವರ ಬಾಯಿ ಚಪಲಕ್ಕಾಗಿ ನಿರಂತರ ಕಾಡಿನ ಮರಗಳು, ವನ್ಯ ಪ್ರಾಣಿಗಳು ಬಲಿಯಾಗುತ್ತಿರುವುದು ಯಾರಿಗೂ ತಿಳಿಯದ ಸಂಗತಿಯೆ?

ಸಾಂದರ್ಭಿಕ ಚಿತ್ರ

ಕೆಲವು ವರ್ಷಗಳ ಹಿಂದೆ ನಮ್ಮ ಶಿವಮೊಗ್ಗ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯೊಬ್ಬ ಕಚೇರಿಯ ಕಾಂಪೌಂಡಿನೊಳಗೇ ಟನ್ ಗಟ್ಟಲೆ ಬೆಲೆಬಾಳುವ ನಾಟಾವನ್ನು ಬಚ್ಚಿಟ್ಟಿದ್ದ. ಬೆಳಕಿಗೆ ಬರದ ಇಂತಹ ಪ್ರಕರಣಗಳು ನೂರಾರು. ಇದಕ್ಕೆ ಹೊಣೆ ಯಾರು? ತದ್ವಿರುದ್ಧವಾಗಿ ಒಂದು ಹಳ್ಳಿಯ ಜನರಿಗೆ, ರೈತರಿಗೆ, ಪಶುಪಾಲಕ ಬುಡಕಟ್ಟು ಜನರಿಗೆ ಆ ಹಳ್ಳಿಯ ಅಕ್ಕಪಕ್ಕದ ಕಾಡು, ಗುಡ್ಡ ಬೆಟ್ಟಗಳೇ ಪ್ರತಿಯೊಂದಕ್ಕೂ ಆಸರೆ. ಅವಿಲ್ಲದೇ ಅವರ ಬದುಕೇ ಇರುವುದಿಲ್ಲ. ಅವರು ಅದನ್ನು ಅವಲಂಬಿಸುತ್ತಲೇ ಆವರು ಅದನ್ನು ನಾಶವಾಗದಂತೆ ರಕ್ಷಿಸಲು ತಮ್ಮಿಂದಾಗುವ ಎಲ್ಲವನ್ನೂ ಮಾಡುತ್ತಿರುತ್ತಾರೆ. ಆದರೆ ಇದೇ ಮಾತನ್ನು ಕೇವಲ ಎರಡು ಮೂರು ವರ್ಷಗಳ ಮಟ್ಟಿಗೆ ವರ್ಗಾವಣೆಯಾಗಿ ಬರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿಷಯದಲ್ಲಿ ಹೇಳಲು ಬರುವುದಿಲ್ಲ. ಇರುವ ಎರಡು ವರ್ಷದಲ್ಲಿ ಅರಣ್ಯದಿಂದ, ಕಳ್ಳದಾರಿಗಳಿಂದ ಎಷ್ಟು ಲಾಭ ಮಾಡಿಕೊಂಡು ಹೋಗಬೇಕು ಎಂದು ಬರುವ ಅಧಿಕಾರಿಗಳೇ ಬಹಳ ಮಂದಿ. ಎಲ್ಲೋ ಅಪರೂಪಕ್ಕೆ ಕಾಡಿನ ಬಗ್ಗೆ ಕಾಳಜಿ ಇರುವ ಅಧಿಕಾರಿಗಳು ಕಾಣಸಿಗುತ್ತಾರೆ. ಅಂತವರಿಗೆ ಇಲಾಖೆಯಲ್ಲಿ ಎಷ್ಟು ಬೆಲೆ ಎಂಬುದು ಅಲ್ಲಿನವರಿಗೇ ಹೆಚ್ಚು ಅರಿವಿದೆ.

(ಈ ಲೇಖನ ಪ್ರಕಟವಾಗುವಷ್ಟರಲ್ಲಿ  ಅರಣ್ಯಗಳಲ್ಲಿ ಹೊರ ರಾಜ್ಯದವರ ಜಾನುವಾರು ಮೇಯಿಸಲು ಮಾತ್ರ ನಿಷೇಧ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ – ಸಂ. )

ಎನ್. ಶಿವಾನಂದ ಕುಗ್ವೆ, ಸಾಗರ

ರಾಜ್ಯ ಉಪಾಧ್ಯಕ್ಷರು. ಕರ್ನಾಟಕ ರಾಜ್ಯ ರೈತ ಸಂಘ

ಇದನ್ನೂ ಓದಿ- http://ಧರ್ಮಸ್ಥಳದಲ್ಲಿ ಹೂತಿಟ್ಟ ತಲೆಬುರುಡೆಗಳು ಹೇಳುತ್ತಿರುವ ನೋವಿನ ಕಥೆಗಳು….https://kannadaplanet.com/the-skulls-buried-in-dharmasthala-tell-painful-stories/

More articles

Latest article