“ಈದ್ ಮಿಲಾದ್ ಅನ್ನು ಮುಸ್ಲಿಂ ಮೂಲಭೂತವಾದಿಗಳೂ ವಿರೋಧ ಮಾಡುತ್ತಾರೆ. ಹಾಗಾಗಿ ನಾವು ಈದ್ ಮಿಲಾದ್ ವಿಷಯವನ್ನು ಕೈಗೆತ್ತಿಕೊಳ್ಳಬಾರದಿತ್ತು” ಎಂದು ಭಜರಂಗದಳದ ಒಳಗಡೆ ಆಂತರಿಕ ಚರ್ಚೆ ನಡೆಯುತ್ತಿದೆ. ‘ಸಂಘಟನೆಗೆ ಹುಮ್ಮಸ್ಸು ಕೊಡುವ ದೃಷ್ಟಿಯಿಂದ ಮುಸ್ಲೀಮರ ಮುಖಾಮುಖಿ ಆಗಬೇಕಿತ್ತು. ಆ ಕಾರಣಕ್ಕಾಗಿ ನಾವು ಈದ್ ಮಿಲಾದ್ ಟಾರ್ಗೆಟ್ ಮಾಡಬೇಕಾಯಿತು’ ಎಂದು ಹಿಂದುತ್ವದ ನಾಯಕರು ಭಜರಂಗದಳದ ಸಾಮಾನ್ಯ ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ – ನವೀನ್ ಸೂರಿಂಜೆ, ಪತ್ರಕರ್ತರು.
ಈವರೆಗೆ ನೂರಾರು ಬಾರಿ ಭಜರಂಗದಳದ ನಾಯಕರಿಗೆ ಹಲವರು ಸವಾಲು ಒಡ್ಡಿದ್ದಾರೆ. ನಿನ್ನೆಯವರೆಗೆ ಬಂಟ್ವಾಳ ಪುರಸಭೆ ವ್ಯಾಪ್ತಿ ಹೊರತುಪಡಿಸಿ ಇನ್ಯಾರಿಗೂ ಪರಿಚಯ ಇಲ್ಲದ ಮಹಮ್ಮದ್ ಷರೀಫ್ ಎಂಬವರ ಹೇಳಿಕೆಯನ್ನೇ ಭಜರಂಗ ದಳ ಯಾಕೆ ಸವಾಲಾಗಿ ಸ್ವೀಕರಿಸಿತು ? ಇದರ ಹಿಂದೆ ಭಜರಂಗದಳ ಸಂಘಟನೆಯ ಆಂತರಿಕ ಚರ್ಚೆಗಳು ಏನೇನಿತ್ತು ಎಂಬುದು ಕುತೂಹಲಕಾರಿಯಾಗಿದೆ.
“ಈದ್ ಮಿಲಾದ್ ಅನ್ನು ಮುಸ್ಲಿಂ ಮೂಲಭೂತವಾದಿಗಳೂ ವಿರೋಧ ಮಾಡುತ್ತಾರೆ. ಹಾಗಾಗಿ ನಾವು ಈದ್ ಮಿಲಾದ್ ವಿಷಯವನ್ನು ಕೈಗೆತ್ತಿಕೊಳ್ಳಬಾರದಿತ್ತು” ಎಂದು ಭಜರಂಗದಳದ ಒಳಗಡೆ ಆಂತರಿಕ ಚರ್ಚೆ ನಡೆಯುತ್ತಿದೆ. ‘ಸಂಘಟನೆಗೆ ಹುಮ್ಮಸ್ಸು ಕೊಡುವ ದೃಷ್ಟಿಯಿಂದ ಮುಸ್ಲೀಮರ ಮುಖಾಮುಖಿ ಆಗಬೇಕಿತ್ತು. ಆ ಕಾರಣಕ್ಕಾಗಿ ನಾವು ಈದ್ ಮಿಲಾದ್ ಟಾರ್ಗೆಟ್ ಮಾಡಬೇಕಾಯಿತು’ ಎಂದು ಹಿಂದುತ್ವದ ನಾಯಕರು ಭಜರಂಗದಳದ ಸಾಮಾನ್ಯ ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ.
ವಾಸ್ತವವಾಗಿ ಇದು ಸತ್ಯ. 2013 ರಿಂದ ಈಚೆಗೆ ಭಜರಂಗದಳ ಸಂಪೂರ್ಣ ಅವನತಿಯಲ್ಲಿದೆ. ಚರ್ಚ್ ಮೇಲೆ ನಡೆದ ದಾಳಿಯೇ ಭಜರಂಗದಳದ ಕೊನೆಯ ದೊಡ್ಡ ದಾಳಿ. ಆ ಬಳಿಕ ಭಜರಂಗದಳವು ಬೇರೆ ಸಂಘಟನೆಗಳು, ವ್ಯಕ್ತಿಗಳು ನಡೆಸಿದ ದಾಳಿ/ಹೋರಾಟದ ಕ್ರೆಡಿಟ್ ಪಡೆಯಲು ನೋಡಿದೆಯೇ ವಿನಹ ದಾಳಿ ಸಂಘಟಿಸುವಂತಹ ಸಂಘಟನೆ ಮಾಡಿಲ್ಲ. ಭಜರಂಗದಳ ಎನ್ನುವುದು ಆರ್ ಎಸ್ ಎಸ್ ನ ಕಾಲಾಳು ಸಂಘಟನೆ. ಆರ್ ಎಸ್ ಎಸ್, ವಿಹಿಂಪದ ಬ್ರಾಹ್ಮಣ ನಾಯಕರು ನೇರ ದಾಳಿ ಮಾಡುವುದಿಲ್ಲ. ಭಜರಂಗದಳದ ಕಾಲಾಳು ಶೂದ್ರ ಹುಡುಗರು ಸಂಘಟಿತರಾಗಿದ್ದರೆ ಮಾತ್ರ ಆರ್ ಎಸ್ ಎಸ್ ಆದೇಶ ಪಾಲನೆಯಾಗುತ್ತದೆ. ಭಜರಂಗದಳ ಇಲ್ಲದೇ ಇದ್ದರೆ ಆರ್ ಎಸ್ ಎಸ್ ಎಂಬುದು ವಿಷದ ಹಲ್ಲಿಲ್ಲದ ಹಾವು ! ಹಾಗಾಗಿ 2013 ರರಿಂದೀಚೆಗೆ ಮಕಾಡೆ ಮಲಗಿರುವ ಭಜರಂಗದಳವನ್ನು ಎದ್ದು ಕೂರಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ.
ಸುದ್ದಿ ಮೂಲಗಳ ಪ್ರಕಾರ, ಭಜರಂಗದಳವನ್ನು ಮತ್ತೆ ಚಾಲ್ತಿಯಲ್ಲಿಟ್ಟು ಅದಕ್ಕೊಂದಿಷ್ಟು ಹುರುಪು ತುಂಬಲು 2017 ರಲ್ಲೂ ಆರ್ ಎಸ್ ಎಸ್ ಯೋಜನೆ ರೂಪಿಸಿತ್ತು. 2017 ಫೆಬ್ರವರಿ 25 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಿಪಿಐಎಂ ‘ಸೌಹಾರ್ದತಾ ರ್ಯಾಲಿ’ ಆಯೋಜಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭಾಷಣ ಮಾಡಲು ಕರೆಸಿತ್ತು. ಆಗ ಆರ್ ಎಸ್ ಎಸ್ ಭಜರಂಗದಳವನ್ನು ಮುಂದೆ ಬಿಟ್ಟು ಹರತಾಳಕ್ಕೆ ಕರೆಕೊಟ್ಟಿತ್ತು. ಸಿಪಿಐಎಂ, ಡಿವೈಎಫ್ಐ ಇದನ್ನು ಬಹಳ ನಾಜೂಕಾಗಿ ಹ್ಯಾಂಡಲ್ ಮಾಡಿತ್ತು. ಕರಾವಳಿಯ ಬಿಲ್ಲವ ಮುಖಂಡರು ಪಿಣರಾಯಿ ವಿಜಯನ್ ಅವರನ್ನು ಸ್ವಾಗತಿಸುವ ಸಭೆಗಳನ್ನು ಆಯೋಜಿಸಿದರು. ಬಿಲ್ಲವ ಸಮುದಾಯಕ್ಕೆ ಸೇರಿದ ಪಿಣರಾಯಿ ವಿಜಯನ್ ಅವರನ್ನು ವಿರೋಧಿಸುವುದೆಂದರೆ ಬಿಲ್ಲವರನ್ನು ವಿರೋಧಿಸಿದಂತೆ ಎಂಬ ರೀತಿಯ ಚಿಂತನೆಯನ್ನು ಸೆಟ್ ಮಾಡಲಾಗಿತ್ತು. ಇದರಿಂದಾಗಿ ಭಜರಂಗದಳ ತೀವ್ರ ಕಸಿವಿಸಿಗೆ ಒಳಗಾಯ್ತು. ಇದನ್ನು ಆರ್ ಎಸ್ ಎಸ್ ಸಭೆಯಲ್ಲೂ ಪ್ರಸ್ತಾಪಿಸಲಾಗಿತ್ತು. “ಹೌದು. ಮಿಸ್ಟೇಕ್ ಆಗಿದೆ. ಪಿಣರಾಯಿ ವಿಜಯನ್ ಅವರನ್ನು ಕೇರಳದ ನಮ್ಮ ಸಂಘಟನೆಯೇ ಎದುರು ಹಾಕಿಕೊಳ್ಳಲು ಹಿಂದೆ ಮುಂದೆ ನೋಡುತ್ತದೆ. ಹಾಗಿರುವಾಗ ಬಿಲ್ಲವರೇ ಬಹುಸಂಖ್ಯಾತರಾಗಿರುವ ಕರಾವಳಿಯಲ್ಲಿ ನಾವು ಎದುರು ಹಾಕಿಕೊಳ್ಳಬಾರದಿತ್ತು. ಆದರೆ, ನಮಗೆ ಭಜರಂಗದಳಕ್ಕೊಂದು ಶಕ್ತಿ ತುಂಬಲು ಕಾರ್ಯಕ್ರಮ ಬೇಕಿತ್ತು. ಅದಕ್ಕಾಗಿ ಇದನ್ನು ಆಯ್ದುಕೊಂಡು ತಪ್ಪು ಮಾಡಿದ್ವಿ” ಎಂದು ಆರ್ ಎಸ್ ಎಸ್ ನಾಯಕರು ಹೇಳಿದ್ದರಂತೆ !
2017 ರ ಬಳಿಕ ನೇತ್ರಾವತಿಯಲ್ಲಿ ಬಹಳಷ್ಟು ನೀರೂ, ರಕ್ತ ಹರಿದು ಹೋಗಿದೆ. ಆದರೆ ಭಜರಂಗದಳಕ್ಕೆ ಹಿಂದೂ ಯುವಕರು ಸೇರ್ಪಡೆಗೊಳ್ಳಲು ಹಿಂಜರಿಯುತ್ತಿದ್ದರು. ಭಜರಂಗದಳಕ್ಕೆ ಸೇರಿದ ಶೂದ್ರ ಯುವಕರು ಒಂದೋ ಜೈಲು ಸೇರಬೇಕು ಅಥವಾ ಸ್ಮಶಾನ ಸೇರಬೇಕು ಎಂಬ ಅರಿವು ಯುವಕರಿಗೆ ಆಗಿತ್ತು. ಹಿಂದೂ ಯುವಕರ ಈ ಅರಿವಿನ ವಿಸ್ತಾರತೆ ಎಲ್ಲಿಯವರೆಗೆ ಇದೆ ಎಂಬುದಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನಿನ್ನೆ-ಮೊನ್ನೆ ಹಾಕಿದ್ದ ಒಂದು ಫೇಸ್ ಬುಕ್ ಪೋಸ್ಟ್ ವಿವರಿಸುತ್ತದೆ. ಬಜರಂಗದಳದ ಸುರಕ್ಷಾ ಪ್ರಮುಖ್ ಆಗಿ ಸಂಘಟನಾ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದ ಸಚಿನ್ ಕೆಯ್ಯೂರು ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಲು ಅವರ ಮನೆಗೆ ನಳಿನ್ ಕುಮಾರ್ ಕಟೀಲು ಭೇಟಿ ನೀಡಿದ್ದರು. ಮೃತ ಸಚಿನ್ ರ ಶಿಥಿಲಾವಸ್ಥೆಯ ಮನೆ ಕಾಣುವಂತೆ ಫೋಟೊಗೆ ಪೋಸ್ ಕೊಟ್ಟು ಫೋಟೊದ ಜೊತೆಗೆ ಪೋಸ್ಟ್ ಮಾಡಿದ್ದರು. ಈ ಪೋಟೋಗೆ ಪ್ರತಿಕ್ರಿಯಿಸಿರುವ ಹಿಂದೂ ಯುವಕರುಗಳು “ಮನೆ ನೋಡಿದರೆ ಆತ ಭಜರಂಗದಳ ಕಾರ್ಯಕರ್ತ ಎಂದು ತಿಳಿಯುತ್ತದೆ. ಸಂಘಟನೆಯ ಕಾರ್ಯಕರ್ತರ ಮನೆ ನೋಡಿ ಸ್ವಾಮಿ” ಎಂಬಿತ್ಯಾದಿಯಾಗಿ ಪ್ರತಿಕ್ರಿಯಿಸಿದ್ದಾರೆ. ಅಂದರೆ ಭಜರಂಗದಳ ಕಾರ್ಯಕರ್ತರಾದರೆ ಮನೆ ಅನಾಥವಾಗುತ್ತದೆ, ಬಡತನ ಮುತ್ತಿಕೊಳ್ಳುತ್ತದೆ ಎಂಬ ಅರಿವು ಯುವಕರಿಗಾಗಿದೆ ಎಂದರ್ಥ. ಇಂತಹ ಸಂದರ್ಭದಲ್ಲಿ ಭಜರಂಗದಳವನ್ನು ಪುನರ್ ಕಟ್ಟುವಿಕೆ ಕಷ್ಟ.
ಇನ್ನೊಂದೆಡೆ ಸಂಘಟನೆಯೊಳಗೂ ಭಜರಂಗದಳ ಟೊಳ್ಳಾಗಿತ್ತು. ಶರಣ್ ಪಂಪ್ ವೆಲ್ ಭಜರಂಗದಳದ ಜಿಲ್ಲಾ ಸಂಚಾಲಕನಾಗಿದ್ದ ದಿನಗಳಲ್ಲಿ ಭಜರಂಗದಳ ಬಹಳ ಗಟ್ಟಿಯಾಗಿತ್ತು. ರಸ್ತೆ ಬದಿಯಲ್ಲಿ, ಬಸ್ಸುಗಳಲ್ಲಿ, ಬಸ್ ನಿಲ್ದಾಣದಲ್ಲಿ, ಅಂಗಡಿ ಕಟ್ಟೆಗಳಲ್ಲಿ ಭಜರಂಗದಳ ಮಾಹಿತಿದಾರರನ್ನು ಹೊಂದಿತ್ತು. ಪೊಲೀಸರಿಗಿಂತಲೂ ಬಲವಾದ ‘ಗುಪ್ತಚರ ವಿಭಾಗ’ವನ್ನು ಭಜರಂಗದಳ ಹೊಂದಿತ್ತು. ಪ್ರೇಮಿಗಳು ಯಾವ ಧರ್ಮದವರು ಯಾವ ಪಾರ್ಕ್, ಬೀಚ್, ಬಸ್ಸಲ್ಲಿದ್ದಾರೆ ಎಂಬುದು ಭಜರಂಗದಳದ ಬಳಿ ಮಾಹಿತಿ ಇರುತ್ತಿತ್ತು. ಯಾವ ಟೆಂಪೋದಲ್ಲಿ ಯಾವ ರಸ್ತೆಯಲ್ಲಿ ಗೋ ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿಯೂ ಭಜರಂಗದಳಕ್ಕೆ ನಿಖರವಾಗಿ ಬರುತ್ತಿತ್ತು. ಶರಣ್ ಪಂಪ್ ವೆಲ್ ವ್ಯಾಪಾರ-ವಹಿವಾಟುಗಳಲ್ಲಿ ನಿರತನಾಗಿ ಉದ್ಯಮಿಯೂ ಆಗಿ ವಿಶ್ವ ಹಿಂದೂ ಪರಿಷತ್ ಗೆ ಪದೋನ್ನತಿ ಹೊಂದಿದರು. ಅಷ್ಟರಲ್ಲಾಗಲೇ ಭಜರಂಗದಳದ ಹುಡುಗರಿಗೆ ಮದುವೆಗೆ ಹುಡುಗಿ ಕೊಡಲು ಹಿಂಜರಿಯುವ ವಾತಾವರಣ ಸೃಷ್ಟಿಯಾಗಿತ್ತು. ಶರಣ್ ಪಂಪ್ ವೆಲ್ ಬಳಿಕ ಭುಜಂಗ ಕುಲಾಲ್ ಎಂಬವರು ಭಜರಂಗದಳದ ಸಂಚಾಲಕರಾದರು. ಅವರು ಕೆಲವೇ ಸಮಯದಲ್ಲಿ ಸಂಚಾಲಕ ಹುದ್ದೆಯನ್ನು ತೊರೆದರು. ಭುಜಂಗ ಕುಲಾಲ್ ಬಳಿಕ ಸಂಚಾಲಕರಾಗಿ ಬಂದವರು ಪುನೀತ್ ಅತ್ತಾವರ. ಭಜರಂಗದಳದ ಪುನೀತ್ ಅತ್ತಾವರರ ನಿಜವಾದ ಹೆಸರು ಪುನೀತ್ ಪಂಪ್ ವೆಲ್. ಇಬ್ಬರು ಹೆಸರಿನ ಮುಂದೆ ಪಂಪ್ ವೆಲ್ ಎಂದು ಇಟ್ಟುಕೊಂಡರೆ ಈಗಾಗಲೇ ರಾಜ್ಯಾದ್ಯಂತ ಪ್ರಖ್ಯಾತಿ ಹೊಂದಿರುವ ಶರಣ್ ಪಂಪ್ ವೆಲ್ ಐಡೆಂಟಿಟಿಗೆ ಅಡ್ಡಿಯಾಗುತ್ತದೆ ಎಂದುಕೊಂಡು ಪುನೀತ್ ಪಂಪ್ ವೆಲ್ ಹೆಸರನ್ನು ಪುನೀತ್ ಅತ್ತಾವರ ಎಂದು ಬದಲಿಸಲಾಯಿತು. ಶರಣ್ ಪಂಪ್ ವೆಲ್ ಶಿಫಾರಸ್ಸಿನಂತೆ ಪುನೀತ್ ಅತ್ತಾವರರನ್ನು ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಗೊಳಿಲಾಯಿತು. ಇದು ಕಾರ್ಯಕರ್ತರೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಮೊದಲೇ ಭಜರಂಗದಳಕ್ಕೆ ಯುವಕರು ಬರುತ್ತಿಲ್ಲ. ಇರುವ ಕಾರ್ಯಕರ್ತರ ಪೈಕಿ ಅರ್ಹರನ್ನು ನಾಯಕನನ್ನಾಗಿ ಬೆಳೆಸದೇ ತನ್ನ ಆಪ್ತನನ್ನೇ ನೇಮಿಸಿರುವುದು ಸಂಘಟನೆಯೊಳಗೆ ಅಸಮಾಧಾನ ಬೆಳೆಯಿತು. ಇಂತಹ ಹಲವು ಕಾರಣಗಳಿಂದ ಕುಸಿದಿರುವ ಭಜರಂಗದಳವನ್ನು ಮೇಲೆತ್ತಲು ಸಂಘಪರಿವಾರ ಸೂಕ್ತ ಸಮಯಕ್ಕಾಗಿ ಕಾಯುತ್ತಿತ್ತು.
ಪ್ರವೀಣ್ ನೆಟ್ಟಾರ್ ಕೊಲೆಯಾದಾಗ ಭಜರಂಗದಳ ಮತ್ತೆ ಚಿಗುರಲು ನೆಲ ಹದವಾಗಿತ್ತು. ಆದರೆ ಮೃತ ಪ್ರವೀಣ್ ನೆಟ್ಟಾರ್ ಪರವಾಗಿ ಇದ್ದ ಜನರೆಲ್ಲರೂ ಆಗಿನ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದರು. ‘ಬಿಜೆಪಿಯ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಿಲ್ಲವರ ಬಲಿ ಬೇಕು?’ ಎಂದು ಬಿಜೆಪಿಯನ್ನು ಹಿಂದುತ್ವ ಪರ ಜನರೇ ಪ್ರಶ್ನಿಸಲಾರಂಭಿಸಿದರು. ಹಾಗಾಗಿ ಭಜರಂಗದಳದ ಕಾರ್ಯಕರ್ತರೇ ನೆಟ್ಟಾರ್ ಕೊಲೆಗೆ ಪ್ರತೀಕಾರವಾಗಿ ಎರಡು ಅಮಾಯಕ ಮುಸ್ಲೀಮರನ್ನು ಕೊಲೆ ಮಾಡಿದರು. ಅಮಾಯಕರಾದ ಫಾಸಿಲ್ ಮತ್ತು ಜಲೀಲ್ ಮೃತರಾದರು. “ಫಾಝಿಲ್ ಕೊಲೆ ಪ್ರತಿಕಾರದ ಕೊಲೆ” ಎಂದು ಖುದ್ದು ಶರಣ್ ಪಂಪ್ ವೆಲ್ ಭಾಷಣ ಮಾಡಿದರು. ಇಷ್ಟಾದರೂ ಇವ್ಯಾವುದೂ ಭಜರಂಗದಳ ಸಂಘಟನೆಗೆ ಲಾಭ ತರಲಿಲ್ಲ.
ಹಾಗಾಗಿಯೇ, ಈವರೆಗೂ ನೂರಾರು ಮುಸ್ಲಿಂ ನೈಜ ನಾಯಕರು ಹಾಕಿರುವ ಸವಾಲುಗಳನ್ನು ಸ್ವೀಕರಿಸದ ಭಜರಂಗದಳವು ಹೇಳಹೆಸರಿಲ್ಲದ ಮಾಜಿ ಪುರಸಭಾ ಅಧ್ಯಕ್ಷ ಮಹಮ್ಮದ್ ಷರೀಫ್ ಸವಾಲನ್ನು ಸ್ವೀಕರಿಸಿ “ಚಲೋ ಬಿ ಸಿ ರೋಡ್” ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೆಚ್ಚಾಗಿ ಮುಂಭಾಗದಲ್ಲಿ ಪುಟ್ಟ ಮಕ್ಕಳೇ ಇರುವ ಈದ್ ಮೆರವಣಿಗೆಗೆ ಎದುರಾಗಿ ನಿಲ್ಲಲು ಭಜರಂಗದಳ ಬಿ ಸಿ ರೋಡ್ ನಲ್ಲಿ ಜಮಾಯಿಸಿತ್ತು. ಇದರದ್ದೇ ಭಾಗವಾಗಿ ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ ನಡೆಸಲಾಯಿತು. ಮತ್ತೆ ಹಿಂದುತ್ವಕ್ಕಾಗಿ ಜೈಲು ಸೇರಿದ ಶೂದ್ರರ ಸಂಖ್ಯೆಯಲ್ಲಿ ಹೆಚ್ಚಳವಾದುದು ಬಿಟ್ಟರೆ ಇನ್ನಾವ ಸಾಧನೆಯೂ ಆಗಲಿಲ್ಲ. ಒಟ್ಟಾರೆ, ಕುಸಿದಿರುವ ತನ್ನ ಕಾಲಾಳು ಭಜರಂಗದಳವನ್ನು ಪುನರ್ ಸಂಘಟಿಸುವ ಹರಸಾಹಸಕ್ಕೆ ಸಾಮಾಜಿಕ ಶಾಂತಿಯನ್ನು ಸಂಘಪರಿವಾರ ಒತ್ತೆ ಇರಿಸಿಕೊಂಡಿದೆ ಅಷ್ಟೆ !
ಪ್ರವಾದಿ ಮಹಮ್ಮದರನ್ನು ಮನುಕುಲದ ಉದ್ಧಾರಕರು ಎಂದು ವ್ಯಾಖ್ಯಾನಿಸಲಾಗುತ್ತದೆ. ವಿಚಿತ್ರವೆಂದರೆ ಮುಸ್ಲಿಂ ವಿರೋಧಿ ಭಜರಂಗದಳವೂ ತನ್ನ ಸಂಘಟನೆಯ ಉದ್ಧಾರಕ್ಕಾಗಿ ಪ್ರವಾದಿ ಜನ್ಮದಿನವನ್ನೇ ಆಯ್ಕೆ ಮಾಡಿಕೊಂಡಿದೆ !
ನವೀನ್ ಸೂರಿಂಜೆ
ಪತ್ರಕರ್ತರು
ಇದನ್ನೂ ಓದಿ- ಕೋಮು ಪ್ರಚೋದನೆ; ಸುಳ್ಳುಗಳೇ ಮೋದಿಯವರ ಮನೆದೇವರು