ಬೆಂಗಳೂರು: ಮೂರು ಪ್ರತ್ಯೇಕ ಹೈ ಪ್ರೊಫೈಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಅರ್ಜಿಗಳ ತೀರ್ಪುಗಳನ್ನು ಇಂದು ಕಾಯ್ದಿರಿಸಲಾಗಿದ್ದು, ಯಾರಿಗೆ ಸದ್ಯದ ಮಟ್ಟಿಗೆ ಜೈಲಿನಿಂದ ಮುಕ್ತಿ ದೊರೆಯಲಿದೆ ಎಂಬುದು ತೀರ್ಮಾನವಾಗಲಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮುಗಿದು, ಇಂದು ತೀರ್ಪು ಹೊರಬೀಳಲಿದೆ.
ಪವಿತ್ರಾಗೌಡ, ದರ್ಶನ್, ರವಿಶಂಕರ್, ನಾಗರಾಜ್, ಲಕ್ಷ್ಮಣ್, ದೀಪಕ್ ಜಾಮೀನು ಭವಿಷ್ಯ ಇಂದು ತೀರ್ಮಾನವಾಗಲಿದೆ. ದರ್ಶನ್ ಪರವಾಗಿ ಪ್ರಖ್ಯಾತ ವಕೀಲ ಸಿ.ವಿ.ನಾಗೇಶ್, ಪವಿತ್ರಗೌಡ ಪರವಾಗಿ ಹಿರಿಯ ನ್ಯಾಯವಾದಿ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.
ಶಾಸಕ ಮುನಿರತ್ನ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟಗೊಳ್ಳಲಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿಂದ ಇಂದು ತೀರ್ಪು ಹೊರಬೀಳಲಿದ್ದು, ತೀರ್ಪಿನ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.
ಮತ್ತೊಂದೆಡೆ ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ ಪ್ರಕರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಮಾಜಿ ಸಚಿವ ಬಿ. ನಾಗೇಂದ್ರ ಜಾಮೀನು ತೀರ್ಪು ಕೂಡ ಇಂದು ಪ್ರಕಟಗೊಳ್ಳಲಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿಂದ ಇಂದು ತೀರ್ಪು ಪ್ರಕಟಗೊಳ್ಳಲಿದೆ.