ಸಾಮಾಜಿಕ ನ್ಯಾಯದ ಪರವಾದ ಗಟ್ಟಿ ಧ್ವನಿ, ಹಿರಿಯ ರಾಜಕಾರಣಿ, ಹಿಂದುಳಿದ ಸಮುದಾಯಗಳ ಪ್ರಬಲ ನಾಯಕ ಬಿ ಕೆ ಹರಿಪ್ರಸಾದ್ ಅವರನ್ನು ಅಮಾನವೀಯವಾಗಿ ಟೀಕಿಸಿರುವ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಕ್ಷಮೆ ಯಾಚಿಸಬೇಕು ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಚಿಂತಕರು, ಸಮಾನತೆಯ ಪರ ಇರುವ ಹೋರಾಟಗಾರರು ಮತ್ತು ಹಿರಿಯ ನಾಗರೀಕರು ಆಗ್ರಹಪಡಿಸಿದ್ದಾರೆ.
ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾ ಹಮ್ಮಿಕೊಂಡಿದ್ದ ಗಾಯತ್ರಿ ಮಂತ್ರದ ಸಮಾರೋಪ ಸಮಾರಂಭದಲ್ಲಿ ಬಿ ಕೆ ಹರಿಪ್ರಸಾದ್ ರ ವಿರುದ್ಧ ಅಕ್ಷೇಪಾರ್ಹ ಪದಗಳನ್ನು ಬಳಸಿ ಖಂಡನಾ ನಿರ್ಣಯ ಅಂಗೀಕರಿಸಿ ಪೇಜಾವರ ಮಠದ ಸ್ವಾಮಿಗಳಲ್ಲಿ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಪಡಿಸಿದ್ದಾರೆ. ಅವರನ್ನು ಇಡೀ ಹಿಂದು ಸಮಾಜದ ವಿರೋಧಿ ಎಂಬಂತೆ ಚಿತ್ರಿಸುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಬಿಜೆಪಿ ಶಾಸಕ ಹರೀಶ್ ಪೂಂಜಾ, ಅಸಭ್ಯ ಭಾಷೆಯನ್ನು ಬಳಸಿ, ಹರಿಪ್ರಸಾದ್ ಅವರ ಡಿಎನ್ಎ ಕುರಿತು ನೀಡಿರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಾತಿ ಗಣತಿ ಕುರಿತು ಪೇಜಾವರ ಶ್ರೀ ಗಳ ಹೇಳಿಕೆಗೆ ಹರಿಪ್ರಸಾದ್ ಅವರು ನೀಡಿದ ಪ್ರತಿಕ್ರಿಯೆಯಲ್ಲಿ ಯಾವ ತಪ್ಪೂ ಇರಲಿಲ್ಲ. ಬದಲಾಗಿ ಪೇಜಾವರ ಶ್ರೀಗಳಿಗೆ ದಲಿತ, ಹಿಂದುಳಿದ ಜಾತಿಗಳ ಕುರಿತಾಗಿ ಇರುವ ಪೂರ್ವಾಗ್ರಹ, ಅಸಹನೆ ಅವರ ಹೇಳಿಕೆಯಲ್ಲಿ ಸ್ಫಟಿಕದಷ್ಟೇ ಸ್ಪಷ್ಟವಾಗಿತ್ತು. ಶತ ಶತಮಾನಗಳಿಂದ ಅಸಮಾನತೆಗೆ ಗುರಿಯಾದ ಸಮುದಾಯಗಳಿಗೆ ಕನಿಷ್ಟ ನ್ಯಾಯ ದೊರಕಲು ಜಾತಿ ಗಣತಿಯ ಅಗತ್ಯ ಇದೆ. “ಹಿಂದುಗಳು ಎಲ್ಲಾ ಒಂದು, ದಲಿತರ ಕೇರಿಗೆ ಹೋಗಿ ಹಿಂದು ಧರ್ಮದ ಪರ ಪ್ರಚಾರ ಮಾಡುತ್ತೇನೆ” ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪೇಜಾವರ ಶ್ರೀಗಳು ಹಿಂದು ಧರ್ಮದಲ್ಲಿರುವ ಕೆಳ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದ ಜಾತಿ ಗಣತಿಯನ್ನು ವಿರೋಧಿಸುವುದು ಏಕೆ ಎಂದು ಅವರೇ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಇದೇ ಸಭೆಯಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು ಹರಿಪ್ರಸಾದ್ ಅವರ ಘನತೆಯನ್ನು ಕುಗ್ಗಿಸುವ ರೀತಿಯಲ್ಲಿ ಸುಳ್ಳುಗಳನ್ನು ಪೋಣಿಸಿ ಮಾತನಾಡಿದ್ದಾರೆ. ರಾಜಕಾರಣಿಗಳಿಗೆ ಇರುವಂತೆ ತಮಗೂ ವಾಕ್ ಸ್ವಾತಂತ್ರ್ಯ ಇದೆ ಎಂದು ಸ್ವಾಮಿಗಳು ಹೇಳಿದ್ದಾರೆ. ವಾಕ್ ಸ್ವಾತಂತ್ರ್ಯ ಕುರಿತು ಮಾತನಾಡುವ ಸ್ವಾಮಿಗಳು ತನ್ನ ಮಠದೊಳಗೆ ವಾಕ್ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಹಕ್ಕನ್ನು ನೀಡಿದ್ದಾರೆಯೇ ಎಂದು ಸ್ಪಷ್ಟಪಡಿಸಲಿ ಎಂದೂ ಚಿಂತಕರು ಆಗ್ರಹಪಡಿಸಿದ್ದಾರೆ.
ಶ್ರೀ ಗಳು ಹಾಗೂ ಅವರ ಬೆಂಬಲಿಗರ ನಡೆ ಹೀಗೆಯೆ ಮುಂದುವರಿದರೆ ಪೇಜಾವರ ಶ್ರೀಗಳು ಹಾಗೂ ಪೇಜಾವರ ಮಠದ ಸಂವಿಧಾನ ವಿರೋಧಿ, ಜಾತಿ ತಾರತಮ್ಯ, ಕೆಳ ಜಾತಿಗಳ ಕುರಿತಾದ ಅಸಹನೆಯ ಎದುರಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಿದ್ದೇವೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಪ್ರಗತಿಪರ ಚಿಂತಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನಪದ ತಜ್ಞ ಡಾ. ಗಣನಾಥ ಶೆಟ್ಟಿ ಎಕ್ಕಾರು, ಚಿಂತಕ ಬರಹಗಾರರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಶಿವರಾಮ ಶೆಟ್ಟಿ, ಡಾ. ಉದಯ ಇರ್ವತ್ತೂರು, ಡಾ. ಕೃಷ್ಣಪ್ಪ ಕೊಂಚಾಡಿ, ಡಾ. ವಸಂತ ಕುಮಾರ್, ಎಂ. ದೇವದಾಸ್, ದಿನೇಶ್ ಕುಕ್ಕಜಡ್ಕ, ಜಯನ್ ಮಲ್ಪೆ, ನವೀನ್ ಸೂರಿಂಜೆ, ಪ್ರಭಾಕರ ಕಾಪಿಕಾಡ್, ಸುನಿಲ್ ಕುಮಾರ್ ಬಜಾಲ್, ವಾಸುದೇವ ಉಚ್ಚಿಲ, ಸಂತೋಷ್ ಬಜಾಲ್, ಗುಲಾಬಿ ಬಿಳಿಮಲೆ, ಭಾರತಿ ಬೋಳಾರ ಶ್ರೀನಿವಾಸ ಕಾರ್ಕಳ ಮತ್ತು ಮನೋಜ್ ವಾಮಂಜೂರು ಈ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.