ಬಿಜೆಪಿ ಶ್ರೀರಾಮನನ್ನು ಆಚೆ ನೂಕಿ ನಮ್ಮ ಪೂರ್ವಜರ ಸೀತಾರಾಮನನ್ನು ಅಪ್ಪಿಕೊಳ್ಳಬೇಕಿದೆ. ಗಾಂಧಿ, ಸಂತ ಕಬೀರ, ಎ.ಕೆ.ರಾಮಾನುಜನ್, ಕುವೆಂಪುರಂತಹ ಮಹನೀಯರು ಕಂಡಂತಹ ಸ್ನೇಹ, ಪ್ರೇಮ, ತ್ಯಾಗ, ಸಮಾನತೆ, ಜವಾಬ್ದಾರಿಯ ರಾಮನನ್ನು “ ನಮ್ಮ ಕಾಲ ಕಂಬ ಮಾಡಿ, ದೇಹವ ದೇಗುಲ ಮಾಡಿ, ಶಿರವನ್ನೇ ಕಳಸ ಮಾಡಿ” ಅದರೊಳಗೆ ಪ್ರಾಣ ಪತ್ರಿಷ್ಠಾಪನೆ ಮಾಡಿಕೊಂಡು ಆರಾಧಿಸಬೇಕಿದೆ – ಆಕಾಶ್ ಆರ್ ಎಸ್, ಉಪನ್ಯಾಸಕ
ಅಯೋಧ್ಯೆಯಲ್ಲಿ ಉದ್ಘಾಟನೆಯಾದ ರಾಮಮಂದಿರ ದೇಶದಲ್ಲಿನ ಜನರಲ್ಲಿ ಹರ್ಷೋದ್ಘಾರ ಮೂಡಿಸುತ್ತಿದೆ. ಆ ಮೂಲಕ ದೇಶದಾದ್ಯಂತ ಭಕ್ತರು ಅನ್ನಸಂತರ್ಪಣೆ, ಪೂಜೆ, ಭಜನೆ, ನೈವೇದ್ಯದಂತಹ ಧಾರ್ಮಿಕ ಕಾರ್ಯಗಳಲ್ಲಿ ಮುಳುಗಿದ್ದು, ರಾಮನು ಜನರ ಧಾರ್ಮಿಕ ಭಾವನೆಗಳ ಜತೆಗೆ ಕೆಲಸ ಮಾಡುತ್ತಿದ್ದಾನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಂದುಕೊಂಡಂತೆ ಫಾರ್ಮುಲ ವರ್ಕ್‌ಔಟ್ ಆಗಿದ್ದು, ಈ ಮೂಲಕವೂ ಬಿಜೆಪಿಯು ತನ್ನ ರಾಜಕೀಯ ನೆಲದಲ್ಲಿ ಫಲವತ್ತಾದ ಮತ ಬೆಳೆಯುವ ನಿರೀಕ್ಷೆಯಲ್ಲೂ ಇದೆ. ಇದಷ್ಟೆಯೆಲ್ಲದೆ ರಾಮಲಲ್ಲಾನನ್ನು ಮತ್ತಷ್ಟು ಗಟ್ಟಿಯಾಗಿ ಪಕ್ಷದ ಐಕಾನ್ ಆಗಿ ಮಾಡಲು ಕೂಡ ಸಜ್ಜಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನಿಂದ ಕಾನೂನಿನಡಿಯಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗಿದೆ. ಈ ನೆಲದ ಕಾನೂನನ್ನು ಅರ್ಜಿದಾರರು ಹಾಗೂ ದೇಶದ ಜನರು ಗೌರವಿಸಿದ್ದಾರೆ. ಆದರೆ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್ ಮಾತ್ರ ತನ್ನಿಂದಲೆ ರಾಮಮಂದಿರ ನಿರ್ಮಾಣವಾಗಿದೆ ಎಂದು ವೈಭವೀಕರೀಸಿಕೊಳ್ಳುತ್ತಿದೆ. ಅದಕ್ಕೆ ಮಾಧ್ಯಮಗಳು ಕೂಡ ಸಹಕರಿಸುತ್ತಿದ್ದು, ದೇಶದ ಗಮನವನ್ನು ತಮ್ಮತ್ತ ಸೆಳೆಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಆ ನಿಟ್ಟಿನಲ್ಲೇ ರಾಮಮಂದಿರ ಧಾರ್ಮಿಕ ಕಾರ್ಯಕ್ರಮವನ್ನು ಬಿಜೆಪಿಯೂ ಪಕ್ಷದ ಕಾರ್ಯಕ್ರಮದಂತೆ ರೂಪಿಸಿದ್ದು, ತಮ್ಮ ರಾಮನನ್ನು ಜನರ ಮನಸ್ಸೊಳಗೆ ಬಲವಾಗಿ ಬಿತ್ತುವ ಕಾರ್ಯ ನಡೆಸಿದೆ.
ಬಿಜೆಪಿಯು ಧರ್ಮ, ಹಿಂದೂತ್ವ, ಸಾವರ್ಕರ್ ನಂತಹ ಅಜೆಂಡಾಗಳನ್ನು ಇಟ್ಟುಕೊಂಡ ಜನರನ್ನು ತನ್ನೆಡೆಗೆ ಸೆಳೆಯುತ್ತಾ ಬಂದಿತ್ತು. ಆದರೆ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಹೊಡೆತದಿಂದ ಅದು ಜರ್ಜರಿತಗೊಂಡಿದ್ದು ಅದರಿಂದ ಮೇಲೇಳಲು ಅಯೋಧ್ಯೆಯ ರಾಮನನ್ನು ಕರೆ ತಂದಿದೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ರಾಮಮಂದಿರವೇ ಟೂಲ್ಕಿಟ್. ಈಗ ಆ ದಿಸೆಯಲ್ಲೇ ನ್ಯಾಯಾಲಯದ ತೀರ್ಪನ್ನು ಕೂಡ ಬಿಜೆಪಿ ಹೈಜಾಕ್ ಮಾಡಿ ಜನರ ಮನಸ್ಸಲ್ಲಿ ರಾಮಮಂದಿರ ವಿಶ್ವಗುರುವಿನಿಂದಲೇ ಸಾಧ್ಯವಾಗುತ್ತಿದೆ ಎನ್ನುವ ಸುದ್ದಿ ಹಬ್ಬಿಸಿದ್ದಾರೆ. ಅದಕ್ಕಾಗಿ ಬಿಜೆಪಿಯ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಫ್ಲೆಕ್ಸ್, ಬಂಟಿಂಗ್ಸ್ ಕಟ್ಟಿದ್ದಾರೆ. ವಾಟ್ಸಾಪ್, ಫೇಸ್‌ಬುಕ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬೀದಿಯಲ್ಲಿ ಜೈಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ಇದರಿಂದಾಗಿ ಶ್ರೀರಾಮನನ್ನು ನಾವು ಮಾತ್ರ ಆರಾಧಿಸುತ್ತೇವೆ, ಪ್ರತಿಪಾದಿಸುತ್ತೇವೆ ಎನ್ನುವ ಸಂದೇಶವನ್ನು ಸಾರುತ್ತಾ ಚುನಾವಣಾ ಪ್ರಚಾರವನ್ನು ನಿಧಾನವಾಗಿ ಆರಂಭಿಸಿದ್ದಾರೆ. ಹಾಗಾದರೆ ಬಿಜೆಪಿ ಅಥವಾ ಅಯೋಧ್ಯೆ ನಿರ್ಮಾಣವಾಗುವ ಮುಂಚೆ ಈ ಸಮಾಜದಲ್ಲಿ ಶ್ರೀರಾಮ ಇರಲಿಲ್ವಾ?. ದೇಶದ ಜನರು ರಾಮನನ್ನು ಪೂಜಿಸುತ್ತಿರಲಿಲ್ವಾ? ಬಿಜೆಪಿ ಬಂದ ಮೇಲೆಯೇ ಶ್ರೀರಾಮ ಹುಟ್ಟಿಕೊಂಡಿದ್ದ? ಅಥವಾ ರಾಮ ಬಿಜೆಪಿಗೆ ಮಾತ್ರ ಸಿಮೀತನಾ?.
ಹಾಗೇ ನೋಡುವುದಾರೆ ಶ್ರೀರಾಮನನ್ನು ನಮ್ಮ ಪೂರ್ವಜರು ಪೂಜಿಸುತ್ತಲೇ ಬಂದಿದ್ದಾರೆ. ಜಾನಪದ, ಯಕ್ಷಗಾನ, ಹರಿಕಥೆ, ಪುರಾಣಗಳಿಂದ ಎಲ್ಲರ ಮನೆ ಮನವನ್ನು ತಲಪುತ್ತಲೆ ಬಂದಿದ್ದಾನೆ. ಆತನನ್ನು ಮರ್ಯಾದೆ ಪುರುಷನಾಗಿ, ವಚನ ಪಾಲಕನಾಗಿ, ಅವಿಭಕ್ತ ಕುಟುಂಬದ ಪ್ರತೀಕವಾಗಿ, ಕಳೆದುಕೊಂಡ ಸೀತೆಗಾಗಿ ಕಡಲ ತಡಿಯಲ್ಲಿ ಕಣ್ಣೀರು ಹಾಕಿದ ಪತಿಯಾಗಿ ಹೀಗೆ ಹಲವೂ ಒಳ್ಳೆ ಗುಣಗಳನ್ನು ಅಳವಡಿಸಿಕೊಂಡ ವ್ಯಕ್ತಿತ್ವವಾಗಿ ತಮ್ಮೊಳಗೆ ಪ್ರತಿಷ್ಠಾಪಿಸಿ ಕೊಂಡಿದ್ದಾರೆ. ಇದಲ್ಲದೇ ಸೀತೆ, ಲಕ್ಷ್ಮಣ, ಹನುಮಂತನಿಲ್ಲದೇ ರಾಮನಿಲ್ಲಾ, ಜತೆಗೆ “ಜೈ ಜೈ ರಾಮ ಸೀತಾರಾಮ” ಜಪ ಮಾಡುತ್ತಾ ಸಮಾನತೆಯ ಸಾರ ತಿಳಿಸುತ್ತಿದ್ದಾರೆ. ಹಳ್ಳಿ, ನಗರದಲ್ಲಿ ಇರುವ ರಾಮ ಮಂದಿರದಲ್ಲಿ ರಾಮ ಸಕುಟುಂಬದ ಮೂರ್ತಿ ಇಟ್ಟು ಪೂಜಿಸುತ್ತಿದ್ದಾರೆ. ಕ್ಯಾಲೆಂಡರ್, ದೇವರ ಕೋಣೆಯಲ್ಲಿ ಸೀತಾರಾಮನ ಕುಟುಂಬ ಇಲ್ಲದೆ ಭಕ್ತಿ ಮೂಡುತ್ತಿರಲಿಲ್ಲ. ಹೀಗೆ ರಾಮ ಸಾಮರಸ್ಯ, ಸಮಾನತೆ, ಪ್ರೇಮ, ಸಕುಟುಂಬ ಮಾರ್ಗದರ್ಶಕನಾಗಿ ಹುಟ್ಟಿಕೊಂಡಿದ್ದ.
ಆದರೆ ಇತ್ತೀಚೆಗೆ ಹುಟ್ಟಿಕೊಂಡಿರುವ ರಾಮ ಮಾತ್ರ ಇದರ ತದ್ವಿರುದ್ಧವಾಗಿದ್ದಾನೆ. ಧರ್ಮ ರಕ್ಷಣೆ, ರಾವಣನ ಸಂಹಾರ ಎಂದುಕೊಂಡು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಾಲಕನಾಗಿದ್ದಾನೆ. ಈಗ ಅಯೋಧ್ಯೆಯಲ್ಲೂ ಅಂತಹದ್ದೆ ರಾಮ ಜನ್ಮತಾಳಿದ್ದಾನೆ ಎಂದರೆ ತಪ್ಪಿಲ್ಲ. ಯಾಕೆಂದರೆ ಬಿಜೆಪಿಯೂ ಆತನನ್ನು ವೈದಿಕ, ವೈಷ್ಣವ ಪಂಥಗಳಿಗೆ ದತ್ತು ನೀಡಿದೆ. ಇವರೆಲ್ಲರೂ ರಾಮನನ್ನು ಸೀತೆ, ಲಕ್ಷ್ಮಣ, ಹನುಮಂತನಿಂದ ದೂರ ಮಾಡಿ ಆತನನ್ನು ಏಕಾಂಗಿಯಾಗಿ ನಿಲ್ಲಿಸಿದ್ದಾರೆ. ಅವಿಭಕ್ತ ಕುಟುಂಬದ ಪ್ರತೀಕವನ್ನು ಅಳಿಸಿ ಹಾಕುವಲ್ಲಿ ಮುಂದಾಗಿದ್ದಾರೆ. ಇನ್ನೂ ಸೀತಾರಾಮನನ್ನು ಜೈ ಶ್ರೀರಾಮನೆಂದು ಮಾಡಿ ಚಾತುರ್ವಣದ ಪುರುಷ ಪ್ರಧಾನತೆಯನ್ನು ಮುನ್ನೆಲೆಗೆ ತಂದಿದ್ದಾರೆ. ರಮಾನಂದ, ಶೈವ, ದಲಿತ ಇವರುಗಳಿಂದ ದೂರ ಇರುವಂತಹ ರಾಮನಿಗೆ ತಾಕೀತು ಮಾಡಿ ಆತನ ಮರ್ಯಾದೆ ಪುರುಷ ನಾಮವನ್ನು ಕಳಚುತ್ತಿದ್ದಾರೆ. ಇಂತಹ ರಾಮನನ್ನು ನಮ್ಮ ಎದೆಯಾಳದಲ್ಲಿ ಇಳಿಸುವ ಎಲ್ಲ ಪ್ರಯತ್ನವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾಡುತ್ತಲೆ ಬರುತ್ತಿದೆ. ಅದರ ಮುಂದುವರೆದ ಭಾಗವಾಗಿ ಈಗ ಅಯೋಧ್ಯೆ ನಿರ್ಮಾಣವಾಗಿದೆ.
ಧಾರ್ಮಿಕ ಭಾವನೆಗಳು ಮನುಷ್ಯನ ಸೂಕ್ಷ್ಮಸಂವೇದನೆಗಳಲ್ಲೆ ಒಂದಾದದ್ದು ಎಂದು ಅರಿತ ಬಿಜೆಪಿಯೂ ಶ್ರೀರಾಮನನ್ನು ಬಂಡವಾಳವಾಗಿ ಇಟ್ಟುಕೊಂಡು ರಾಜಕೀಯ ಲಾಭ ಪಡೆಯುತ್ತಿದ್ದು, ಸಮಾಜದ ಸ್ವಾಸ್ಥ್ಯ ಕದಡುವಂತ ಕೆಲಸ ಮಾಡುವಲ್ಲಿ ಚಿಂತನೆ ನಡೆಸಿದೆ. ಈ ಹಿಂದೆ ಎಲ್.ಕೆ.ಅಡ್ವಾನಿ, ಮುರುಳಿ ಮನೋಹರ್ ಜೋಶಿ ಕೂಡ ರಾಮನ ಹಿಂದೆ ಬಿದ್ದು ಧರ್ಮ ಧರ್ಮಗಳ ನಡುವೆ ಕಂದಕ ತಂದು ಅದನ್ನು ಮೆಟ್ಟಿಲು ಮಾಡಿಕೊಂಡು ರಾಜಕೀಯ ಲಾಭ ಪಡೆದು ತಮ್ಮ ಪಕ್ಷವನ್ನು ಉತ್ತುಂಗಕ್ಕೆ ತಂದು ನಿಲ್ಲಿಸಿದರು. ಈಗಲೂ ಅದೇ ಹಾದಿಯಲ್ಲಿ ಇದೆ. ಇದರಿಂದ ರಾಮನ ಸಚ್ಛಾರಿತ್ರ್ಯವನ್ನು ಹಾಳುಗೆಡುವುತ್ತಿದ್ದಾರೆ. ಆತನ ಆದರ್ಶವನ್ನೆಲ್ಲಾ ಬಿಜೆಪಿ ಮಣ್ಣುಪಾಲು ಮಾಡಿ ತಮ್ಮ ಆದರ್ಶಗಳನ್ನೆಲ್ಲಾ ತುಂಬುವ ಮೂಲಕ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಇದರಿಂದ ಈ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಬಿಜೆಪಿ ಶ್ರೀರಾಮನನ್ನು ಆಚೆ ನೂಕಿ ನಮ್ಮ ಪೂರ್ವಜರ ಸೀತಾರಾಮನನ್ನು ಅಪ್ಪಿಕೊಳ್ಳಬೇಕಿದೆ. ಗಾಂಧಿ, ಸಂತ ಕಬೀರ, ಎ.ಕೆ.ರಾಮಾನುಜನ್, ಕುವೆಂಪುರಂತಹ ಮಹನೀಯರು ಕಂಡಂತಹ ಸ್ನೇಹ, ಪ್ರೇಮ, ತ್ಯಾಗ, ಸಮಾನತೆ, ಜವಾಬ್ದಾರಿಯ ರಾಮನನ್ನು “ ನಮ್ಮ ಕಾಲ ಕಂಬ ಮಾಡಿ, ದೇಹವ ದೇಗುಲ ಮಾಡಿ, ಶಿರವನ್ನೇ ಕಳಸ ಮಾಡಿ” ಅದರೊಳಗೆ ಪ್ರಾಣ ಪತ್ರಿಷ್ಠಾಪನೆ ಮಾಡಿಕೊಂಡು ಆರಾಧಿಸಬೇಕಿದೆ.
ಆಕಾಶ್.ಆರ್.ಎಸ್.
ಪತ್ರಕರ್ತ/ ಉಪನ್ಯಾಸಕ