ದಕ್ಷಿಣ ಕನ್ನಡ: ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿ, ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಸ್ಕೂಟರ್ ನಲ್ಲಿ ಸಂತೆ ಕಟ್ಟೆ ಬಸ್ ಹತ್ತಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಕಾರನ್ನು ಸ್ಕೂಟರ್ ಗೆ ಅಡ್ಡಗಟ್ಟಿ, ವಿದ್ಯಾರ್ಥಿನಿಯನ್ನು ಕಾರಿನೊಳಗೆ ಎಳೆಯಲು ಯತ್ನಿಸಿದಾಗ ವಿದ್ಯಾರ್ಥಿನಿ ಜೋರಾಗಿ ಕೂಗಿಕೊಂಡು ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಅದೇ ಸಮಯಕ್ಕೆ ಇತರೆ ವಾಹನಗಳು ಬರುತ್ತಿದ್ದುದನ್ನು ಕಂಡ ಅಪಹರಣಕಾರರು ಬಾಲಕಿಯ ಕೈಗೆ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಇತ್ತೀಚೆಗೆ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಸಾರ್ವಜನಿಕರು ಆತಂಕಗೊಂಡಿದ್ದಾರೆ.


