ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

Most read

ಬೆಂಗಳೂರು: ಗೋವಾ ಕನ್ನಡಿಗರ ರಕ್ಷಣೆಗೆ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ನ್ಯಾಯ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದ ನಿಯೋಗ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ರಾಜ್ಯಪಾಲರಿಗೆ ನೀಡಲಾದ ಮನವಿಯ ಪೂರ್ಣಪಾಠ ಈ ಕೆಳಕಂಡಂತಿದೆ:

ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದ ನೆಲ, ಜಲ, ನುಡಿ, ಸಂಸ್ಕೃತಿ, ಪರಂಪರೆ ರಕ್ಷಣೆಗಾಗಿ ಇರುವ ಸಂಘಟನೆಯಾಗಿದ್ದು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಳವಳಿಯ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಸುಮಾರು 70 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಯಕರ್ತರನ್ನು ಹೊಂದಿರುವ ಸಂಘಟನೆ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮಗಳಲ್ಲೂ ಸಂಘಟನೆಯನ್ನು ಹೊಂದಿದೆ. ಗೋವಾದಲ್ಲಿ ನಡೆಯುತ್ತಿರುವ ಕಳವಳಕಾರಿ ವಿದ್ಯಮಾನಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಭಾರತ ಒಕ್ಕೂಟದ ಭಾಗವಾಗಿರುವ ಗೋವಾದಲ್ಲಿ ಸಾವಿರಾರು ಕನ್ನಡಿಗರು ಹಲವಾರು ದಶಕಗಳಿಂದ ವಾಸವಾಗಿದ್ದು, ಗೋವಾದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ಕೊಡುತ್ತ ಬಂದಿದ್ದಾರೆ. ಆದರೆ ದುರದೃಷ್ಟವಶಾತ್ ಅಲ್ಲಿನ ಕನ್ನಡರಿಗೆ ಗೋವಾ ಸರ್ಕಾರ ಮೊದಲಿನಿಂದಲೂ ಕಿರುಕುಳ ನೀಡುತ್ತ ಅಮಾನವೀಯವಾಗಿ ನಡೆಸಿಕೊಳ್ಳುತ್ತ ಬಂದಿದೆ.

ಕಳೆದ ಏಪ್ರಿಲ್ 14, 15ರಂದು ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಯಾವುದೇ ಮುನ್ಸೂಚನೆಯನ್ನೂ ನೀಡದೇ ಧ್ವಂಸ ಮಾಡಲಾಗಿದೆ. ಈ ಸಂದರ್ಭದಲ್ಲಿ ತಮ್ಮನ್ನು ಒಕ್ಕಲೆಬ್ಬಿಸದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಕೈ ಮುಗಿದು ಬೇಡಿದರೂ ಪ್ರಯೋಜನವಾಗಿಲ್ಲ.

ಪ್ರತಿರೋಧ ಒಡ್ಡಿದವರ ಮೇಲೆ ಪೊಲೀಸರು ಲಾಠಿ ಬೀಸಿ ಮನೆಯಿಂದ ಹೊರಗೆ ಓಡಿಸಲಾಗಿದೆ. ದವಸ-ಧಾನ್ಯ, ಬಟ್ಟೆ-ಹಾಸಿಗೆಗಳೂ ಮನೆಯ ಅವಶೇಷಗಳ ಅಡಿ ನಾಶವಾಗಿವೆ. ಕನ್ನಡ ಸಮುದಾಯ ಅನಾಥವಾಗಿದೆ, ಅಸಹಾಯಕವಾಗಿದೆ.

ಉದ್ಯೋಗ ಅರಸಿ ಕರ್ನಾಟಕದಿಂದ ಇಲ್ಲಿಗೆ ಬಂದಿರುವ ಈ ಕುಟುಂಬಗಳು ಕಳೆದ ನಾಲ್ಕು ದಶಕಗಳಿಂದ ಇಲ್ಲಿ ವಾಸವಾಗಿವೆ. 200ಕ್ಕೂ ಹೆಚ್ಚು ಮಂದಿ ಇಲ್ಲಿ ಬದುಕುತ್ತಿದ್ದಾರೆ. ಬಹಳಷ್ಟು ಮಂದಿ ಇಲ್ಲಿಯೇ ಹುಟ್ಟಿದವರು. ಬಹುತೇಕರು ಕಟ್ಟಡ, ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಯಾಳಾಗಿ ತೊಡಗಿಕೊಂಡಿದ್ದಾರೆ. ಮತ್ತೆ ಕೆಲವರು ದುಡಿಮೆಗಾಗಿ ಬಟ್ಟೆ ವ್ಯಾಪಾರ ಇತ್ಯಾದಿ ಕೆಲಸ ಮಾಡುತ್ತಿದ್ದಾರೆ. ಇವರ ಪುಟ್ಟ ಮನೆಗಳಿಗೆ ಸ್ಥಳೀಯ ಆಡಳಿತ ವಿದ್ಯುತ್, ನಲ್ಲಿ ನೀರು, ವೈಯಕ್ತಿಕ ಶೌಚಾಲಯ, ರಸ್ತೆ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿತ್ತು.

ಈಗ ಈ ಕುಟುಂಬಗಳನ್ನು ನಿರ್ದಾಕ್ಷಿಣ್ಯವಾಗಿ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಕನ್ನಡಿಗರ ಮೇಲೆ ಗೋವಾದಲ್ಲಿ ನಡೆಯುತ್ತಿರುವ ದಬ್ಬಾಳಿಕೆಗಳನ್ನು ಗಮನಿಸಿದರೆ, ಗೋವಾದಲ್ಲಿ ಕನ್ನಡಿಗರು ಯಾರೂ ಇರಲೇಬಾರದು ಎಂಬ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಬಂದಂತಿದೆ. ಭಾಷಾ ಅಲ್ಪಸಂಖ್ಯಾತರ ವಿರುದ್ಧ ಗೋವಾ ಸರ್ಕಾರ ಮೊದಲಿನಿಂದಲೂ ದಮನಕಾರಿ ನೀತಿ ಅನುಸರಿಸುತ್ತಿದೆ.

ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತವಾಗಿ ದೌರ್ಜನ್ಯ ನಡೆಯುತ್ತಿದ್ದು, 2005ರಲ್ಲಿ 1,162 ಕನ್ನಡಿಗರ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. 2014ರಲ್ಲಿ 70 ಕುಟುಂಬಗಳನ್ನು, 2015ರಲ್ಲಿ 157 ಕುಟುಂಬಗಳನ್ನು, 2017ರಲ್ಲಿ 211 ಕುಟುಂಬಗಳನ್ನು, 2019ರಲ್ಲಿ 62 ಕನ್ನಡಿಗ ಕುಟುಂಬಗಳನ್ನು ಗೋವಾ ಸರ್ಕಾರ ಒಕ್ಕಲೆಬ್ಬಿಸಿದೆ. ಈಗ 15 ಮನೆಗಳನ್ನು ಧ್ವಂಸಗೊಳಿಸಿದೆ. ಇಂತಹ ದೌರ್ಜನ್ಯವು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು ಭಾರತ ಒಕ್ಕೂಟ ವ್ಯವಸ್ಥೆ ಮತ್ತು ಭಾರತ ಸಂವಿಧಾನದ ಮೂಲ ಆಶಯಗಳಿಗೆ ಮಾಡಿದ ಅಪಮಾನವಾಗಿದೆ.

ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕೆಂದು ಭಾರತದ ಸಂವಿಧಾನದ 29 ಮತ್ತು 30ನೇ ವಿಧಿಗಳು ಸ್ಪಷ್ಟವಾಗಿ ಹೇಳಿವೆ. ಆದರೆ ಗೋವಾ ಸರ್ಕಾರವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದೆ. ಸನ್ಮಾನ್ಯ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಗೋವಾದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗ ಕುಟುಂಬಗಳ ಮೇಲೆ ಗೋವಾ ಸರ್ಕಾರವು ನಿರಂತವಾಗಿ ದೌರ್ಜನ್ಯ ಎಸಗುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು ಕೂಡಲ ಮಧ್ಯೆ ಪ್ರವೇಶಿಸಿ ಗೋವಾ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸುತ್ತೇನೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

(ಟಿ.ಎ.ನಾರಾಯಣಗೌಡ)
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

More articles

Latest article