ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪವು ಮಧ್ಯರಾತ್ರಿ 1 ಗಂಟೆಯವರೆಗೂ ನಡೆದು ದಾಖಲೆ ಸೃಷ್ಟಿಸಿದೆ. ಸೋಮವಾರ ಬೆಳಗ್ಗೆ 10.40 ಕ್ಕೆ ಆರಂಭವಾದ ಕಲಾಪ ಮಧ್ಯರಾತ್ರಿ 1 ಗಂಟೆಯವರೆಗೂ ಅಂದರೆ ಸತತ 15 ಗಂಟೆಗಳ ಕಾಲ ನಡೆದು ದಾಖಲೆ ಸೃಷ್ಟಿಯಾಗಿದೆ.
ಸಭಾಧ್ಯಕ್ಷ ಯು.ಟಿ. ಖಾದರ್ ಇದು ದಾಖಲೆಯ ಕಲಾಪ ಎಂದು ಬಣ್ಣಿಸಿದ್ದಾರೆ. ಈ ಅವಧಿಯಲ್ಲಿ ವಿವಿಧ ವಿಷಯಗಳ ಚರ್ಚೆ ಜೊತೆಗೆ 8 ವಿಧೇಯಕಗಳ ಅಂಗೀಕಾರ ಮಾಡಲಾಗಿದೆ. ರಾತ್ರಿ 11 ಗಂಟೆ ವೇಳೆ ಸಚಿವ ಕೃಷ್ಣೇಭೈರೇಗೌಡ, ಸಭಾಧ್ಯಕ್ಷರೇ ಬೆಳಗ್ಗೆವರೆಗೆ ಕಲಾಪ ನಡೆಸೋಣ ನಿಮ್ಮ ಅವಧಿಯಲ್ಲಿ ದಾಖಲೆ ನಿರ್ಮಾಣವಾಗಲಿ ಎಂದರು. ಆಗ ನಾನು ಸಿದ್ಧನಿದ್ದೇನೆ ಎಂದು ನಗುತ್ತಲೇ ಖಾದರ್ ಅವರು ಕಲಾಪವನ್ನು ಮುಂದುವರಿಸಿದರು.
ಕೆಲ ಸದಸ್ಯರು ಮಾತನಾಡಲು ನಮಗೆ ಅವಕಾಶಕೊಡಿ ಸಮಯವಾಯಿತು ಎಂದು ಒತ್ತಾಯಿಸಿದರು. ಆಗ ಖಾದರ್ ಅವರು, ವಿಶ್ವಕಪ್ ಕ್ರಿಕೆಟ್ ಗಾಗಿ ತಡರಾತ್ರಿ 3 ಗಂಟೆಯವರೆಗೂ ಕಾಯುವುದಿಲ್ಲವೇ, ಅದೇ ರೀತಿ ಎಂದು ಭಾವಿಸಿ ಸಹಕಾರಕೊಡಿ ಎಂದರು. ಸಚಿವ ಸತೀಶ್ ಜಾರಕಿಹೊಳಿ ಕೂಡಾ ಇದೊಂದು ವಿಶೇಷ ಘಳಿಗೆ ಎಂದು ಬಣ್ಣಿಸಿದರು.
ರಾಯಚೂರಿನ ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯ್ಕ್ ಕೂಡಾ ಮಧ್ಯಾರಾತ್ರಿಯಾದರೂ ಕಲಾಪದಲ್ಲಿ ಭಾಗವಹಿಸಿ ಗಮನ ಸೆಳೆದರು. ತಮ್ಮ ಗಮನ ಸೆಳೆಯುವ ಸೂಚನೆಗೆ ಉತ್ತರ ಪಡೆಯಲು ಅವರು ಹಾಜರಿದ್ದರು. ಇಂಡಿ ಶಾಸಕ ಯಶ ಯಶವಂತರಾಯಗೌಡ ತಮ್ಮ ಸರದಿ ಬಂದಾಗ, ಮೊದಲು ಕರೆಮ್ಮ ಅವರು ಬಹಳ ಹೊತ್ತಿನಿಂದ ಕಾಯುತ್ತಿದ್ದಾರೆ, ಅವರಿಗೆ ಮೊದಲು ಉತ್ತರ ಕೊಡಿ ಎಂದು ಮನವಿ ಮಾಡಿದರು. ನಂತರ ಅವರು ತೊಗರಿ ಬೆಳೆಹಾನಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಕೃಷ್ಣನಾಯ್ಕ್, ನಾರಾ ಭರತ್ ರೆಡ್ಡಿ, ಕೋನರೆಡ್ಡಿ, ಸದನದಲ್ಲಿ ಹಾಜರಿದ್ದು ಉತ್ತರ ಪಡೆದರು. ಇನ್ನು ಕಾಂಗ್ರೆಸ್ ಸದಸ್ಯ ಎ ಆರ್ ಕೃಷ್ಣಮೂರ್ತಿ ತಡರಾತ್ರಿ 1 ಗಂಟೆಗೆ ಗಮನ ಸೆಳೆಯುವ ಸೂಚನೆ ಮಂಡಿಸಿ ಉತ್ತರ ಪಡೆದುಕೊಂಡರು. ಕಲಾಪ ಮುಂದೂಡುವ ವೇಳೆಗೆ ಸ್ಪೀಕರ್, ಡೆಪ್ಯುಟಿ ಸ್ಪೀಕರ್ , ಮೂವರು ಸಚಿವರು, 7 ಕಾಂಗ್ರೆಸ್ ಶಾಸಕರು ಹಾಗೂ 4 ಜೆಡಿಎಸ್ ಶಾಸಕರು, ಓರ್ವ ಬಿಜೆಪಿ ಶಾಸಕ ಹಾಗೂ ಒಬ್ಬರು ಪಕ್ಷೇತರ ಶಾಸಕ ಉಪಸ್ಥಿತರಿದ್ದರು.
ಬೆಳಗಾವಿಯ ಅಧಿವೇಶನ ಹತ್ತು ದಿನಗಳಿಗೆ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ 9 ದಿನಕ್ಕೆ ಇಳಿಸಲಾಯಿತು. ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದಿಂದ ಮಂಗಳವಾರ ಸಂತಾಪ ಸೂಚನೆ ಹಾಗೂ ಬುಧವಾರ ಸರ್ಕಾರಿ ರಜೆ ಘೋಷಣೆ ಮಾಡಲಾಯಿತು. ಹೀಗಾಗಿ 7 ದಿನಕ್ಕೆ ಅಧಿವೇಶನದ ಅವಧಿ ಕಡಿಮೆಯಾಗಿದೆ. ಕಲಾಪದ ವಿಷಯಗಳನ್ನು ಮುಗಿಸುವ ದೃಷ್ಟಿಯಿಂದ ಕಲಾಪದ ಅವಧಿಯನ್ನು ಹೆಚ್ಚಿಸಲಾಗಿದೆ. ವಿಧಾನಮಂಡಲ ಅಧಿವೇಶನ ಡಿಸೆಂಬರ್ 19 ರವರೆಗೂ ನಡೆಯಲಿದೆ.