ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಕೋಲಾರ ಕೇತ್ರವನ್ನು ಬಿಟ್ಟುಕೊಟ್ಟಿದ್ದೆವು. ಅದೇ ರೀತಿ ಜೆಡಿಎಸ್ ಮುಖಂಡರು ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಆಗ್ರಹಪಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಕೋಲಾರ ಕ್ಷೇತ್ರ ಬಿಜೆಪಿ ವಶದಲ್ಲಿತ್ತು. ಅಲ್ಲಿ ಮುನಿಸ್ವಾಮಿ ಸಂಸದರಾಗಿದ್ದರು. ಆದರೂ ನಾವು ಜೆಡಿಸ್ ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆವು ಮತ್ತು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಗೆಲುವಿಗೆ ಶ್ರಮ ಹಾಕಿದ್ದೆವು ಎನ್ನುವುದನ್ನು ಅವರು ನೆನಪಿಸಿದರು. ಇದೀಗ ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬೇಕಿದ್ದರೆ ಅವರಿಗೆ ಜೆಡಿಎಸ್ ತನ್ನ ಪಕ್ಷದಿಂದಲೇ ಟಿಕೆಟ್ ನೀಡಲಿ. ನಾವು ಪಕ್ಷ ಯಾವುದೆಂದು ನೋಡದೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಈ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಅವರ ಗೆಲುವು ಗೋಡೆ ಬರಹದಷ್ಟೇ ಸತ್ಯ. ಈ ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರುವುದು ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಅವರಿಗೆ ಮಾತ್ರ. ಬೇರೆ ಯಾರೇ ಅಭ್ಯರ್ಥಿಯಾದರೂ ಸೋಲು ಖಚಿತ ಎಂದು ಹೇಳಿದರು.
ಈಗಲೂ ಟಿಕೆಟ್ ಗಾಗಿ ಯೋಗೇಶ್ವರ್ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಸ್ವತಂತ್ರ ಅಭ್ಯರ್ಥಿಯಾಗುವುದಿಲ್ಲ. ಅವರು ನುರಿತ ರಾಜಕಾರಣಿಯಾಗಿದ್ದು, ಪಕ್ಷೇತರರಾಗಿ ಗೆದ್ದು ರಾಜಕೀಯ ಆರಂಭಿಸಿದ್ದಾರೆ. ಕಾಂಗ್ರೆಸ್ ಬಿಜೆಪಿ ಟಿಕೆಟ್ ನಿಂದಲೂ ಗೆಲುವು ಸಾಧಿಸಿದ್ದಾರೆ. ಚುನಾವಣೆ ನಡೆಸುವುದು ಅವರಿಗೆ ಕರಗತವಾಗಿದ್ದು, ಟಿಕೆಟ್ ಸಿಕ್ಕರೆ ಅವರ ಗೆಲುವು ಖಚಿತ ಎಂದು ಅಶ್ವತ್ಥನಾರಾಯಣ ತಿಳಿಸಿದರು.