ಇಟಾನಗರ: 06.04.2026 : ಅರುಣಾಚಾಲ ಪ್ರದೇಶದ ತಿರಪ್ ಜಿಲ್ಲೆಯ ಮಾಜಿ ಶಾಸಕರೂ, ಲೋಹಿತ್ ಜಿಲ್ಲೆಯ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹತ್ತಾರು ಜನರ ಪ್ರಾಣ ತೆಗೆದು ಅಲ್ಲಿನ ಜನರಿಗೆ ದು:ಸ್ವಪ್ನವಾಗಿ ಕಾಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಎರಡು ಗಂಡು ಮದ್ದಾನೆ (ಮಕಣ) ಗಳನ್ನು ‘ಅರುಣಾಚಾಲ ಆಪರೇಷನ್ ಗಜ’ ಹೆಸರಿನಲ್ಲಿ, ಕರ್ನಾಟಕ ಅರಣ್ಯ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಮ್ಮ ರಾಜ್ಯದ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ನುರಿತ ಅರಣ್ಯಧಿಕಾರಿಗಳ, ಪಶು ವೈದ್ಯಾಧಿಕಾರಿಗಳ ಮತ್ತು ಮಾವುತರ (ದಸರ ಆನೆ ಪಳಗಿಸುವ) ತಂಡದ ನೆರವಿನಿಂದ ಅಪ್ರತಿಮ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ರಕ್ಷಣೆ ಮಾಡುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಾಕ್ರಮ ಮೆರೆದು ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ.
ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗೆ, ಅರುಣಾಚಾಲ ಪ್ರದೇಶದ ತಿರಪ್ ಜಿಲ್ಲೆಯ ದೇವಮಾಲಿ ಅರಣ್ಯ ವಿಭಾಗ ಮತ್ತು ಲೋಹಿತ್ ಜಿಲ್ಲೆಯ ಲೋಹಿತ್ ಅರಣ್ಯ ವಿಭಾಗದ ಸುನ್‌ಪುರ ಅರಣ್ಯ ವ್ಯಾಪ್ತಿಯಲ್ಲಿ ಅರುಣಾಚಾಲ ಪ್ರದೇಶ ಸರ್ಕಾರದ ಮುಖ್ಯ ಅರಣ್ಯಾಧಿಕಾರಿ ಹಾಗೂ ಹುಲಿ ಮತ್ತು ಆನೆ ಯೋಜನೆಯ ರಾಜ್ಯ ಪ್ರಧಾನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಕನ್ನಡಿಗ IFS ಅಧಿಕಾರಿ ಡಾ. ದಾಮೋದರ ಎ. ಟಿ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಪಶುವೈದ್ಯಾಧಿಕಾರಿ ಮತ್ತು ಆನೆಗಳ ಪ್ರಭಾರಿ ಡಾ. ರಮೇಶ ಎಚ್. (ನಾಗರಹೊಳೆ ರಾಷ್ಟೀಯ ಉಧ್ಯಾನವನ) ಇವರುಗಳ ನೇತೃತ್ವದಲ್ಲಿ, ನವದೆಹಲಿಯ ರಾಷ್ಟ್ರೀಯ ಹುಲಿ ಪ್ರಾಧಿಕಾರ (NTCA), ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಮತ್ತು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಗಳ ಮಾರ್ಗದರ್ಶನದಲ್ಲಿ ನಡೆದ ಉನ್ನತ ಮಟ್ಟದ ಬೃಹತ್ ಜಂಟಿ ಕಾರ್ಯಾಚರಣೆಯಲ್ಲಿ ಎರಡೂ ಆನೆಗಳನ್ನು ಯಶಸ್ವಿಯಾಗಿ ಸೆರೆ ಹಿಡಿದು ರಕ್ಷಿಸಿ ಅಲ್ಲಿನ ಜನರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಅತೀವ ಸಂಕಷ್ಟದ ಸಮಯದಲ್ಲಿ ನೆರವು ನೀಡಿದ ಕರ್ನಾಟಕ ಸರ್ಕಾರದ ಈ ಸಹಾಯವನ್ನು ಅಲ್ಲಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಪೆಮಾ ಖಂಡು ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಮಾನ್ಯ ಶ್ರೀಯುತ ಸಿದ್ದರಾಮಯ್ಯ ನವರಿಗೆ ದೂರವಾಣಿ ಕರೆ ಮಾಡುವ ಮೂಲಕ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಸುಮಾರು 15 ಸದಸ್ಯರ ತಜ್ಞರ ತಂಡವನ್ನು, ಹೈಟೆಕ್ AI ಸಕ್ರಿಯಗೊಳಿಸಿದ ಬಹು-ಕ್ರಿಯಾತ್ಮಕ ಥರ್ಮಲ್ ಡ್ರೋನ್‌ಗಳು ಮತ್ತು ಇತರ ವಿಶೇಷ ಉಪಕರಣಗಳು ಸೇರಿದಂತೆ ವಿಶ್ವ ದರ್ಜೆಯ ಆನೆ ಟ್ರ್ಯಾಕಿಂಗ್/ಸೆರೆಹಿಡಿಯುವ ಉಪಕರಣಗಳನ್ನು ಕಳುಹಿಸುವ ಮೂಲಕ ಇಂತಹ ಪ್ರಮುಖ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದೆ.
ಅರುಣಾಚಲ ಪ್ರದೇಶದ ಜನರು ಈ ಎರಡು ಪ್ರಮುಖ ಸಮಸ್ಯಾತ್ಮಕ ರಾಕ್ಷಸ ಆನೆಗಳನ್ನು ತೊಡೆದುಹಾಕಲು ಬಹುದಿನಗಳಿಂದ ಕಾಯುತ್ತಿದ್ದರು. ಅಂತಿಮವಾಗಿ ಸ್ಥಳೀಯ ಗ್ರಾಮಸ್ಥರ ಅನೇಕ ಜೀವಗಳನ್ನು ಬಲಿತೆಗೆದುಕೊಂಡ ಈ ಎರಡೂ ಆನೆಗಳನ್ನು ಯಶಸ್ವಿಯಾಗಿ ಶಾಂತಗೊಳಿಸಲು ಮತ್ತು ಸೆರೆಹಿಡಿಯಲು ಸಾಧ್ಯವಾಯಿತು.
ಕರ್ನಾಟಕ ಅರಣ್ಯ ಇಲಾಖೆಯ ಡಾ. ರಮೇಶ ಎಚ್. ಮತ್ತು ಡಾ. ಸನತ್ ಕೆ. ಮುಲಿಯಾ (ಆಫ್ರಿಕಾದಿoದ ಭಾರತಕ್ಕೆ ಚಿರತೆ ತರುವ ಕಿರುಚಾರಣದಲ್ಲಿ ಭಾಗವಹಿಸಿದ) ಅವರುಗಳ ಪಶುವೈದ್ಯಕೀಯ ತಂಡದ ಮುಖ್ಯಸ್ಥರಾಗಿ ಒಟ್ಟಾರೆ ಆಜ್ಞೆ ಮತ್ತು ನಿಯಂತ್ರಣದಲ್ಲಿ ಕರ್ನಾಟಕದ ತಾಂತ್ರಿಕ/ಉಷ್ಣ ಡ್ರೋನ್ಸ್ ತಂಡದ ನೇತೃತ್ವ ವಹಿಸಿರುವ ಶ್ರೀ ರಾಜೀವ್ ಪಿ. ಮತ್ತು ಕರ್ನಾಟಕದ ಉಪ ಆರ್‌ಎಫ್‌ಒ ಶ್ರೀ ರಂಜನ್ ಕೆ.ಪಿ., ಶಾರ್ಪ್ ಶೂಟಿಂಗ್ ತಜ್ಞರ ತಂಡದ ನೇತೃತ್ವ ವಹಿಸಿ ಅರುಣಾಚಲದ ನೂರಾರು ಅಧಿಕಾರಿಗಳು, ಸಿಬ್ಬಂದಿ ಮತ್ತು ತಾಂತ್ರಿಕ ತಜ್ಞರ ಸಂಪೂರ್ಣ ತಂಡದವರು ತಮ್ಮ ಜೀವವನ್ನು ಪಣಕ್ಕಿಟ್ಟು ಈ ರೋಚಕ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.


