ನವದೆಹಲಿ: ಬಾಂಗ್ಲಾದೇಶದಲ್ಲಿ ಧರ್ಮನಿಂದನೆ ಆರೋಪದ ಹೆಸರಿನಲ್ಲಿ ಹಿಂದೂ ಧರ್ಮದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ತೀವ್ರವಾಗಿ ಖಂಡಿಸಿದ್ದಾರೆ. ಇದು ಕ್ರೌರ್ಯದ ಪರಮಾವಧಿಯಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಪಡಿಸಿದ್ದಾರೆ.
ಭಾರತದಲ್ಲೂ ಅಲ್ಪಸಂಖ್ಯಾತ ಮುಸಲ್ಮಾನರ ಮೇಲೆ ಹಲ್ಲೆ ಕೊಲೆ ನಡೆಯುತ್ತಿದ್ದರೂ ಇಲ್ಲಿನ ಸರ್ಕಾರ ಮತ್ತು ಮಾಧ್ಯಮಗಳು ಮೌನವಹಿಸಿವೆ. ಆದರೆ ಬಾಂಗ್ಲಾದೇಶದ ಮೇಲೆ ನಡೆಯುತ್ತಿರುವ ಹತ್ಯೆಗಳನ್ನು ಮಾತ್ರ ವೈಭವೀಕರಿಸುತ್ತಿವೆ ಎಂದು ಟೀಕಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆದಿರುವ ಹತ್ಯೆ ಖಂಡನೀಯ ಮತ್ತು ಇಸ್ಲಾಂ ಧರ್ಮ ಇಂತಹ ಕೃತ್ಯಗಳನ್ನು ಅನುಮೋದಿಸುವುದಿಲ್ಲ. ಆದ್ದರಿಂದ ಈ ಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಿಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ರಾಜಕೀಯ ಲಾಭ ಮತ್ತು ಅಧಿಕಾರಕ್ಕಾಗಿ ಕೆಲವು ವ್ಯಕ್ತಿಗಳು ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಎಲ್ಲೆಡೆ ಅಲ್ಪಸಂಖ್ಯಾತರು ತಾವು ಅಸುರಕ್ಷಿತ ಎಂದು ಭಾವಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ಯಾವುದೇ ವ್ಯಕ್ತಿಯನ್ನು ಕ್ರೂರವಾಗಿ ಹತ್ಯೆ ಮಾಡುವುದು ಕೇವಲ ಕೊಲೆ ಅಲ್ಲ; ಬದಲಾಗಿ ಅದು ಕ್ರೌರ್ಯದ ಪರಮಾವಧಿಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಧರ್ಮ ಮತ್ತು ಅದರ ಬೋಧನೆಗಳನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬಾಂಗ್ಲಾ, ಭಾರತ ಸೇರಿದಂತೆ ಎಲ್ಲಿಯೇ ಇಂತಹ ಕೃತ್ಯಗಳು ಸಂಭವಿಸಿದರೂ ಧಾರ್ಮಿಕ ಮೂಲಭೂತವಾದಿಗಳು ಇದರ ಹಿಂದೆ ಇರುವುದು ಸ್ಪಷ್ಟವಾಗಿದೆ. ಇದಕ್ಕೆ ಧರ್ಮ ಕಾರಣ ಅಲ್ಲವೇ ಅಲ್ಲ. ಮೂಲಭೂತವಾದ ಧರ್ಮವನ್ನು ಪ್ರವೇಶಿಸಿದಾಗ ಜನರು ಇತರ ಧರ್ಮಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲು ಆರಂಭಿಸುತ್ತಾರೆ ಎಂದು ಮದನಿ ಕಳವಳ ವ್ಯಕ್ತಪಡಿಸಿದ್ದಾರೆ.

