ಪಿತೃಪ್ರಭುತ್ವ ಮತ್ತು ಮನುಸ್ಮೃತಿಗಳೇ ಬಿಜೆಪಿಯ ರಾಜಕೀಯದ ತಿರುಳಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರಗಳ ಬಗ್ಗೆ ಬಿಜೆಪಿಗರು ಗಂಭೀರವಾಗಿರುತ್ತಿದ್ದಲ್ಲಿ ಮಣಿಪುರದ ಬೆತ್ತಲೆ ಮೆರವಣಿಗೆ, ಮರ್ಯಾದಾ ಹತ್ಯೆ, ಹೆಂಗೂಸುಗಳ ಮೇಲಾಗುವ ಅತ್ಯಾಚಾರಗಳಂತಹ ವಿಷಯಗಳನ್ನು ಕೈಗೆತ್ತಿಕೊಂಡು ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದರು– ರೇಣುಕಾ ನಿಡಗುಂದಿ, ದೆಹಲಿ
ಚುನಾವಣಾ ಪ್ರಚಾರ ಭಾಷಣಕ್ಕೆ ಮೋದಿ ಹೆಸರಾದವರಷ್ಟೇ ಅಲ್ಲ ಅದೇ ಅವರ ಮಹತ್ಸಾಧನೆ. ಸುಳ್ಳನ್ನು ಸತ್ಯದಷ್ಟೇ ಸಲೀಸಾಗಿ, ಯಾವ ಲಜ್ಜೆ, ಎಗ್ಗೂ ಇಲ್ಲದೇ ಹರಿಬಿಡಬಲ್ಲ ಮೋದಿ ಮಾಡಿದ ಇತ್ತೀಚಿನ ಭಾಷಣಗಳಲ್ಲಿಯೇ ಅತ್ಯಂತ ಕೆಟ್ಟ ಭಾಷಣವೆಂದರೆ ವಿನಾಕಾರಣ –“ ಮಹಿಳೆಯರ ಮಂಗಳಸೂತ್ರವನ್ನು’ ಎಳೆದು ತಂದದ್ದು.
ಎಷ್ಟು ಅಸಹ್ಯದ ಭಾಷಣ ! ಖಾಲಿ ಡಬ್ಬದಷ್ಟೇ ಸದ್ದುಮಾಡುತ್ತಾರೆ ಮೋದಿ. ಭಾಷಣವನ್ನು ಕೇಳುತ್ತಿದ್ದ ಯಾರಿಗೂ ಸಿಟ್ಟೇ ಬರಲಿಲ್ಲವೇ ಆ ನೆರೆದ ಜನರಲ್ಲಿ? ಅವರ ಪ್ರಚಂಡ ಭಕ್ತೆಯರಿಗೂ ಸಿಟ್ಟು ಬಾರದೇ ಇದ್ದುದ್ದನ್ನು ನೋಡಿದರೆ ಧ್ರುವ್ ರಾಠಿಯ ಇತ್ತೀಚಿಗಿನ “ಬ್ರೇನ್ ವಾಶ್” ವಿಡಿಯೋದ ಕೆಲವು ದೃಶ್ಯಗಳು, ಮಹಿಳೆಯರ ಮಾತುಗಳು ನೆನಪಾಗುತ್ತವೆ. ಒಬ್ಬಳಿಗೆ ಗ್ಯಾಸ್ ಸಿಲಿಂಡರ್ ಐದು ಸಾವಿರವಾದರೂ ಚಿಂತೆಯಿಲ್ಲವಂತೆ, ಪೆಟ್ರೋಲ್ ಐದುನೂರು ರುಪಾಯಿಯಾದರೂ ಸೈ ! ಅವರಿಗೆ ಮೋದಿಯೇ ಬೇಕಂತೆ. ಇದ್ಯಾವ ಪರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆ ಇವರು ? ಖಾಲಿ ಡಬ್ಬಗಳು !
ಪ್ರಧಾನಿಯಂತಹ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಗೆ, ಆತ ಎಷ್ಟೇ ದೊಡ್ದ ವ್ಯಕ್ತಿಯಾಗಿರಲಿ ಅವನಿಗೆ ಒಂದು ಸಾಮಾಜಿಕ ಲಜ್ಜೆ ಇರಬೇಕು. ದೇಶದ ಪ್ರಧಾನಿಯಾಗಿ ಮೋದಿ ಅನೇಕ ಕಡೆಗಳಲ್ಲಿ ತಮ್ಮ ಅವಿವೇಕ, ವಿಚಾರಹೀನ ನಡೆನುಡಿಗಳಿಂದ, ಪುಂಖಾನುಪುಂಖವಾಗಿ ಉದುರಿಸುವ ಸುಳ್ಳುಗಳಿಂದ ಒಬ್ಬ ಕೆಟ್ಟ ಪ್ರಧಾನಿಯ ಇಮೇಜನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ. “ನ ಭೂತೋ ನ ಭವಿಷ್ಯತಿ” !! ಇಮೇಜು. ಅದಕ್ಕೆ ಹೊಣೆಗಾರ ಅವರೊಬ್ಬರೇ. ಅಳಿದುಳಿದ ಇಮೇಜನ್ನು , ನೆರೆಟಿವ್ ಅನ್ನು ಗೋದಿ ಮೀಡಿಯಾಗಳು ಪೂರೈಸಿವೆ ಎನ್ನಬಹುದು.
ಮಣಿಪುರ ಹೊತ್ತಿ ಉರಿಯುತ್ತಿದ್ದಾಗಲೂ ಮೌನವಾಗಿದ್ದ ಮೋದಿ, ಇಬ್ಬರು ಮಹಿಳೆಯರನ್ನು ಬೆತ್ತಲು ಮೆರವಣಿಗೆ ಮಾಡಿದ ಸುದ್ದಿ ಜಾಗತಿಕ ಮಟ್ಟದಲ್ಲಿ ಸದ್ದುಮಾಡಿ ಯುರೋಪು ಅಮೇರಿಕೆಯಂಥ ಪ್ರಬಲ ರಾಷ್ಟ್ರಗಳಿಂದ ಖಂಡನೀಯ ಪ್ರತಿಕ್ರಿಯೆಗಳು ಬಂದಾಗಲೂ ಮೌನವಾಗಿದ್ದ ಮೋದಿ ತಮ್ಮ ಚುನಾವಣೆಗಾಗಿ ಮಹಿಳೆಯರನ್ನು ಎಳೆದು ತಂದಿದ್ದು ಖಂಡನೀಯವಾಗಿದೆ. ಇದಕ್ಕಾಗಿ ಈ ದೇಶದ ಸಮಸ್ತ ಮಹಿಳೆಯರ ಕ್ಷಮೆ ಯಾಚಿಸಬೇಕು. ಮೋದಿ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ ಮೊಟ್ಟ ಮೊದಲ ಬಾರಿ ಬಿಜೆಪಿಗೆ ನೋಟೀಸ್ ಜಾರಿ ಮಾಡಿದೆ. ನೇರವಾಗಿ ಮೋದಿಯವರಿಗಲ್ಲ.
ಹಿಂದೆ ಮುಸ್ಲಿಂ ಮಹಿಳೆಯರ ತ್ರಿವಳಿ ತಲಾಕನ್ನು ರಾಜಕೀಯಗೊಳಿಸಿ ಲಾಭ ಪಡೆಯಲು ಹವಣಿಸಿದ್ದರು. ಅದೇ ಗೋರಕ್ಷರು ಮುಸ್ಲಿಮ ಪುರುಷರನ್ನು ಗೋ ಸಾಗಾಣಿಕೆಯ ನೆಪದಲ್ಲಿ ಧಳಿಸಿ ಹತ್ಯೆಮಾಡುತ್ತಿದ್ದುದನ್ನು , ಅವರ ಮನೆಗಳಿಗೆ ನುಗ್ಗಿ ಹಲ್ಲೆಮಾಡುತ್ತಿದ್ದುದನ್ನು ವಿರೋಧಿಸಿರಲಿಲ್ಲ. ಬುಲ್ಡೋಜರ್ ಹಾಯಿಸಿ ಮನೆಗಳನ್ನು ನೆಲಸಮ ಮಾಡಿದಾಗಲೂ ಬಾಯಿಬಿಡಲಿಲ್ಲ. ಮಹಿಳೆಯರ, ಮಕ್ಕಳ ಮೇಲಿನ ಅತ್ಯಾಚಾರಗಳನ್ನೂ ಒಂದು ರಾಷ್ಟ್ರೀಯ ಪಿಡುಗು ಎಂದು ತಿಳಿಯುವುದಿಲ್ಲ. ಜಂತರ್ ಮಂತರಿನಲ್ಲಿ ಮಹಿಳಾ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಪೋಲಿಸರು ದೇಶದ ಬೇಟಿಯರನ್ನು ಬೀದಿಯಲ್ಲಿ ಎಳೆದಾಡುತ್ತಿದ್ದಾಗ ಪ್ರಧಾನಿ ಸೆಂಗೋಲನ್ನು ಕೈಯಲ್ಲಿ ಹಿಡಿದು ಪ್ರದಕ್ಷಿಣೆ ಹಾಕುತ್ತಿದ್ದ, ಉದ್ದಕ್ಕೂ ಮಲಗಿ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದ ನೂತನ ಸಂಸತ್ತಿನಲ್ಲಿ. ಯಾರೊಬ್ಬರ ಸಾವಿಗೂ ಅವಮಾನಕ್ಕೂ ಕಣ್ಣೀರು ಹಾಕದ ಮೋದಿ ಮಾತೆಯರು ಭಗಿನಿಯರ ಹೆಸರಿನಲ್ಲಿ ವೋಟ್ ಗಳಿಸಿಕೊಳ್ಳಲು ಸೋಗಿನ ಕಣ್ಣೀರು ಹಾಕುತ್ತಾರೆ.
ಮೋದಿ ಸರ್ಕಾರವು ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ಪರಿಚಯಿಸಿದೆ, ಉದಾಹರಣೆಗೆ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ, ಉಜ್ವಲಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ. ಇವುಗಳಲ್ಲಿ ಮೋದಿ ಸರ್ಕಾರವು ತೆಗೆದುಕೊಂಡಿರುವ ಇನ್ನೊಂದು ಗಮನಾರ್ಹ ಹೆಜ್ಜೆ “ನಾರಿ ಶಕ್ತಿ ವಂದನಾ ಅಧಿನಿಯಮ್ 2023.”
ಭಾರತೀಯ ಸಂಸತ್ತು ನಾರಿ ಶಕ್ತಿ ವಂದನಾ ಅಧಿನಿಯಮ 2023 ಅನ್ನು ಅಂಗೀಕರಿಸಿದ ದಿನದಂದು ದೆಹಲಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕರಾದ ಡಾ. ಸೀಮಾ ಸಿಂಗ್ ಅವರು ಬರೆಯುತ್ತಾರೆ – “ಈ ಶಾಸನವು ರಾಜಕೀಯದ ಡಿ ಪೋಲರೈಸೇಶನ್‌ಗೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಮಹಿಳೆಯರ ಮತ ಪಾಲನ್ನು ವಿಸ್ತರಿಸುತ್ತದೆ ಮತ್ತು ಅತ್ಯಂತ ನಿರ್ಣಾಯಕವಾಗಿ, ಪಿತೃಪ್ರಭುತ್ವದ ರೂಢಿಗಳನ್ನು ಛಿದ್ರಗೊಳಿಸುತ್ತದೆ, ರಾಜಕೀಯ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ಪೋಷಿಸುತ್ತದೆ. ಈ ಶಾಸಕಾಂಗ ಉಪಕ್ರಮವು ಸಾಂಪ್ರದಾಯಿಕ ಲಿಂಗ ಪಾತ್ರಗಳಲ್ಲಿ ಪರಿವರ್ತಕ ಬದಲಾವಣೆಯನ್ನು ತರಲು ಮತ್ತು ಮಹಿಳೆಯರ ಸ್ಟೀರಿಯೊಟೈಪಿಕಲ್ ಗ್ರಹಿಕೆಗಳಿಗೆ ಸವಾಲು ಹಾಕಲು ಸಿದ್ಧವಾಗಿದೆ. ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಬದ್ಧತೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ” !
ಇವೇ ಹಳಸಲು ಮಾತುಗಳನ್ನೇ ಕೇಳುತ್ತ ಮಹಿಳೆಯರು ಇನ್ನೆಷ್ಟು ಕಾಲ ಕುಳಿತಿರಬೇಕು ? ಇವರದೇ ಪಕ್ಷದ ಡಬಲ್ ಇಂಜಿನ್ ಸರಕಾರದ ಮಹನೀಯ “ಮಹಿಳೆಯರನ್ನು ಸ್ವತಂತ್ರವಾಗಿ ಬಿಡಬಾರದು, ಸ್ವತಂತ್ರವಾಗಿರಲು ಮಹಿಳೆಯರು ಸಮರ್ಥರಲ್ಲ” ಎಂದು ಹೇಳಿಕೆ ಕೊಟ್ಟಿದ್ದ. ವಾಸ್ತವದಲ್ಲಿ ಇವರಿಬ್ಬರಿಗೂ ಮಹಿಳೆಯರ ಕುರಿತು ಮನುಸ್ಮೃತಿಯೇ ಭಗವದ್ಗೀತೆಯಾಗಿದೆ. ಆ ಮನುಸ್ಮೃತಿಯ ಚೌಕಟ್ಟಿನಿಂದ ಉದಾರವಾಗಿ ಯೋಚಿಸಲು ಅವರಿಗೆ ಎಂದೂ ಸಾಧ್ಯವಿಲ್ಲ. ಅಭಿವೃದ್ಧಿ, ವಿಕಾಸ, ಸಬಲೀಕರಣ ಇವು ಕಾಗದದಲ್ಲಿ ಚೆಂದವೆನಿಸುವ ಪದಗಳಷ್ಟೇ. ತಮ್ಮ ಘನತೆ ಗೌರವಗಳಿಗೆ ವಿಪರೀತವಾಗಿ ಪ್ರಧಾನಿಯವರು ಪಿತೃಸತ್ತಾತ್ಮಕ ರೂಢಿಗಳಿಗೆ ಜೋತುಬಿದ್ದು ಮಂಗಳಸೂತ್ರದಂತಹ ಮಹಿಳೆಯರ ಖಾಸಗಿ ವಿಷಯವನ್ನು ರಾಜಕೀಯಕ್ಕೆ ಎಳೆದು ತಂದದ್ದು ಖಂಡನೀಯವಲ್ಲದೇ ಮತ್ತೇನು ? ಕೆಲವರು ಹಾಸ್ಯಾಸ್ಪದವನ್ನಬಹುದು. ಆದರೆ ಮಹಿಳೆಯರಲ್ಲಿ ಆಕ್ರೋಶ ಹುಟ್ಟಿಸದೇ ಏನನ್ನು ಹುಟ್ಟಿಸಬಲ್ಲದು?
ಇಂಥ ಸಂದರ್ಭದಲ್ಲಿ ಮಹಿಳೆಯರ ಸಮಾನತೆ, ಶಿಕ್ಷಣ, ಸಾಮಾಜಿಕ ನ್ಯಾಯಕ್ಕಾಗಿ ಚಿಂತಿಸಿದ ಡಾ. ರಾಮ್ ಮನೋಹರ್ ಲೋಹಿಯಾ ಮತ್ತು ಮಹಾತ್ಮಾ ಗಾಂಧಿಯವರು ನೆನಪಾಗುತ್ತಾರೆ.
“ನಮ್ಮ ಸಮಾಜದ ಅರ್ಧಭಾಗ ಮಹಿಳೆಯರು. ಭಾರತದಲ್ಲಿ ಅವರ ಸ್ಥಿತಿ ಶೋಚನೀಯ. ಅಡಿಗೆ ಮಾಡಿ, ಮಕ್ಕಳನ್ನು ಹಡೆದು ಗಂಡಸಿನ ಅಡಿಯಾಳಾಗಿರುವುದೇ ಆಕೆಯ ಗತಿ. ಹೆಣ್ಣು ಗಂಡಿಗೆ ಸಮವಲ್ಲ ಇದು ಬೇರು ಬಿಟ್ಟ ಕುರುಡು ನಂಬಿಕೆ. ಮಹಿಳೆಗೆ ಕಾನೂನಿನಲ್ಲಿ ಸಮಾನತೆ ಸಿಕ್ಕಿದರೂ ಕಾರ್ಯತಃ ಅದು ದೊರೆತಿಲ್ಲ. ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸ್ಥಾನ ಕಾದಿರಿಸಬೇಕು. ಮನೆಗೆಲಸದ ಜೀತದಿಂದ ಅವರನ್ನು ಪಾರುಮಾಡಬೇಕು. ಅವರಲ್ಲಿ ಅಡಗಿರುವ ಶಕ್ತಿಯನ್ನೆಲ್ಲ ಬೆಳಕಿಗೆ ತರಬೇಕು. ಹೆಣ್ಣು ಬಂಧಿಯಾಗಿರುವವರೆಗೆ ಸಮಾಜ ಮುಂದುವರಿಯುವುದಿಲ್ಲ. ಸಮಾಜ ಪದ್ಧತಿಯಲ್ಲಿ ಬೇರು ಬಿಟ್ಟಿರುವ ಕಂದಾಚಾರಗಳನ್ನು ತೊಲಗಿಸಬೇಕು. ಹಳ್ಳಿಯ ಹೆಣ್ಣು ಮಕ್ಕಳಿಂದ ಹಿಡಿದು ಎಲ್ಲರಿಗೂ ನ್ಯಾಯ ದೊರೆಯಬೇಕು. ಇದಕ್ಕಾಗಿ ಪ್ರಬಲ ಪಟ್ಟು ಹಿಡಿದಿದ್ದರು ಲೋಹಿಯಾ. ಅವರ ನಂಬಿಕೆಯಂತೆ ಮಹಿಳೆಯರ ವಿಮೋಚನೆ ಸಮಾಜ ಕ್ರಾಂತಿಯ ಅಡಿಗಲ್ಲಾಗಿತ್ತು. ಅದಿಲ್ಲದೆ ಪ್ರಗತಿ ಇಲ್ಲವೆಂಬುದು -ಅವರ ದೃಢವಾದ ಅಭಿಪ್ರಾಯವಾಗಿತ್ತು.
ಇದಕ್ಕೆ ತದ್ವಿರುದ್ಧವಾಗಿ ಪಿತೃಪ್ರಭುತ್ವ ಮತ್ತು ಮನುಸ್ಮೃತಿಗಳೇ ಬಿಜೆಪಿಯ ರಾಜಕೀಯದ ತಿರುಳಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರಗಳ ಬಗ್ಗೆ ಬಿಜೆಪಿಗರು ಗಂಭೀರವಾಗಿರುತ್ತಿದ್ದಲ್ಲಿ ಮಣಿಪುರದ ಬೆತ್ತಲೆ ಮೆರವಣಿಗೆ, ಮರ್ಯಾದಾ ಹತ್ಯೆ, ಹೆಂಗೂಸುಗಳ ಮೇಲಾಗುವ ಅತ್ಯಾಚಾರಗಳಂತಹ ವಿಷಯಗಳನ್ನು ಕೈಗೆತ್ತಿಕೊಂಡು ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದರು.
ಈಗಲಾದರೂ ಈ ಚಾಳಿಯನ್ನು ಬಿಡಿ ಪ್ರಧಾನಿಗಳೇ. ನಾವು ಸಬಲರಾಗಿಯೇ ಇದ್ದೇವೆ. ನೀವು ಗ್ರಹಿಸಿದಷ್ಟು ದುರ್ಬಲರು ನಾವಲ್ಲ. ನೆನಪಿಡಿ, ನಿಮ್ಮ ಯಾವ ಯೋಜನೆಗಳಿಗಾಗಿಯೂ ನಿಮ್ಮ ಯಾವ ಭರವಸೆಗಳಿಗಾಗಿಯೂ ನಾವು ಬದುಕುತ್ತಿಲ್ಲ. ಸಂವಿಧಾನ ನಮಗೆ ಕೊಟ್ಟ ಹಕ್ಕನ್ನು ನಾವು ಬದುಕುತ್ತಿದ್ದೇವೆ. ನಮ್ಗೇನಾದರೂ ಸಿಗುತ್ತಿದ್ದರೆ ಅದು ಸಂವಿಧಾನದತ್ತವಾಗಿ ಪಡೆದುಕೊಂಡ , ಗಳಿಸಿಕೊಂಡ ಆಸ್ತಿ ಮಾತ್ರ.
ರೇಣುಕಾ ನಿಡಗುಂದಿ, ದೆಹಲಿ
ಕವಿಗಳು
ಇದನ್ನೂ ಓದಿ-ಮೋದಿಯವರೇ, ನಾಲಿಗೆ ಬಿಗಿಹಿಡಿದು ಮಾತನಾಡಿ