ಒನ್ದು ವಿವೇಚನೆ:‌ ಅನುಸ್ವಾರ(ಂ)ಮತ್ತು ಅರ್ ಕಾರ(೯) ಒತ್ತುಗಳು ಕನ್ನಡ ಬರಹಕ್ಕೆ ಅನಿವಾರ್ಯವೆ?

Most read

ದಿ ಪಟ್ಟಾಭಿರಾಮ ಸೋಮಯಾಜಿ ನಾಡು ಕಂಡ ಧೀಮಂತ ಚಿಂತಕರಾಗಿದ್ದರು. ತಮ್ಮ ತೀಕ್ಷ್ಣ ಚಿಂತನೆಗಳಿಂದ ನಮ್ಮನ್ನು ಪ್ರಭಾವಿಸಿದವರು. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ಅವರ ನಿಲುವು ನಡೆಗಳಿಂದಾಗಿ ದೈಹಿಕ ಹಲ್ಲೆಗೂ ಒಳಗಾಗಿದ್ದರು. ನಾಡು, ನುಡಿಗಳ ಕುರಿತು ಅವರು ಅಪಾರ ಕಾಳಜಿ ಹೊಂದಿ ಕೆಲಸ ಮಾಡಿದ್ದನ್ನು ನಾವು ಸ್ಮರಿಸಬಹುದು. ತುಂಗ ಭದ್ರ ನದಿಗಳ ಉಳಿವಿಗಾಗಿ ನಡೆದ ಕುದುರೆಮುಖ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.‌ ಅವರು ನಮ್ಮೊಡನೆ ಇಲ್ಲವಾಗಿ ಜುಲೈ‌1 ಕ್ಕೆ ಎರಡು ವರ್ಷಗಳಾಗಿವೆ. ಅವರು ಕನ್ನಡ ಬರಹದ ಕುರಿತು ಬರೆದಿದ್ದ ಲೇಖನವೊಂದನ್ನು ಕನ್ನಡ ಪ್ಲಾನೆಟ್ ಇಲ್ಲಿ ಪ್ರಕಟಿಸುತ್ತಿದೆ.

ಬಿನ್ದು ಮತ್ತು ಅರ್ ಕಾರಗಳು ಮೂಲತಃ ಕನ್ನಡದಲ್ಲಿದ್ದುವೇ? ಅಥವಾ ಅವು ಎರವಲಾಗಿ ಒಡೆದವುಗಳೇ? ಯಾವಾಗ ಎರವಲು ಪಡೆದರು? ವೈಯಾಕರಣಿ ಅವುಗಳ ಇರವನ್ನು ಹಿನ್ದೆ ಪ್ರತಿಪಾದಿಸಿದ್ದರೆ? ಇನ್ದು ಪ್ರತಿಪಾದಿಸುತ್ತಿರುವರೇ? ಅದು ಎಲ್ಲಿನ್ದ ಬನ್ತು?- ಎಮ್ಬೆಲ್ಲ ವಿಷಯಗಳು ವಿದ್ವಾಮ್ಸರಿನ್ದ ಆಳವಾಗಿ ತರ್ಕಿಸಲ್ಪಡುತ್ತಿವೆಯಾದರೂ ಅದರ ಇರವು ಕನ್ನಡಕ್ಕೆ ಬೇಕಿತ್ತೇ-(ಬೇಕೇ?) ಎಮ್ಬುದಾಗಿ ಚರ್ಚಿಸಿದವರು ಬಹುವಿರಳರಿರಬಹುದು.

ಕನ್ನಡದನ್ಥ ಸುದೀರ್ಘ ವರ್ ಣಮಾಲೆಯನ್ನು ಕಲಿತ ಮೇಲೂ ಇವೆರಡರ ಜ್ಞಾನವಿಲ್ಲದಿದ್ದರೆ ಈಗ ಓದುವುದೇ ಕಷ್ಟವೇನೋ ಎಮ್ಬನ್ತಾಗಿದೆ ಪರಿಸ್ಥಿತಿ. ಅಷ್ಟು ಅಕ್ಷರಗಳ ಸಮ್ಪತ್ತು ನಮಗಿರುವಾಗ ಅವುಗಳಿನ್ದಲೇ ಬಿನ್ದು ಮತ್ತು ಅರ್ ಕಾರಗಳಿನ್ದ ನಾವೀಗ ಉಪಯೋಗಿಸುತ್ತಿರುವ ಶಬ್ದಗಳನ್ನು ಇನ್ನಷ್ಟು ಸ್ಫುಟವಾಗಿ ಅಭಿವ್ಯಕ್ತಿಗೊಳಿಸಲು ಸಾಧ್ಯವಿರುವಾಗ, ಅವನ್ನೇಕೆ ತನ್ದರೋ ತಿಳಿಯಲಾರದು. ‘ಅಂಗಡಿ’ ಎಮ್ಬ ಶಬ್ದವನ್ನು ‘ಅಙ್ಗಡಿ’ ಎಮ್ಬುದಾಗಿ ಸ್ಫುಟವಾಗಿ ಮತ್ತು ಕೂಡಲೇ ಹೊಳೆಯುವನ್ತೆ ಬರೆದರೆ, ‘ಇವನಿಗೇನು ಕನ್ನಡ ಬರೆಯಲು ಬರುವುದಿಲ್ಲವೇ?’ ಎನ್ದು ಪ್ರಶ್ನಿಸುವ ವಾತಾವರಣ ಸೃಷ್ಟಿಯಾಗಿರುವುದು ವಸ್ತುನಿಷ್ಟ ಸತ್ಯ. ವೈಚಾರಿಕವಾಗಿ ವಿಮರ್ ಶಿಸಿದರೇನೇ ತಿಳಿಯುತ್ತೆ: ‘ಸೂರ್ ಯ’ ಎಮ್ಬುದು ‘ಸೂರ್ಯ’ ಎಮ್ಬುದಕ್ಕಿನ್ತ ಉತ್ತಮವಲ್ಲವೇ? -ಕಾರಣ, ಮೊದಲಿನದರಲ್ಲಿ ಸ್ವನ್ತಿಕೆಯಿದೆ. ಈಗಿನ ಪ್ರವೃತ್ತಿ ಸ್ವನ್ತಿಕೆಗೆ ಬೆಲೆ ಕೊಡದೇ ಎಲ್ಲವನ್ನೂ ಕಲಸುಮೇಲೋಗರ ಮಾಡುವ ರೀತಿಯದಾದುದರಿನ್ದ ಮತ್ತು ಈ ಪ್ರವೃತ್ತಿಗೆ ‘ವಿಶಾಲವಾದ ಸಮಾನ ಮನೋಧರ್ ಮ’ ಎಮ್ಬ ಹೆಸರಿರುವುದರಿನ್ದ ಎರಡನೆಯದನ್ನು (ಸೂರ್ಯ) ನಾವು ಒಪ್ಪಬಹುದಾದರೂ ಅದರಿನ್ದ ನಾವು ಯಾರಿಗೂ ‘ಸಮಾನ ಮನೋಧರ್ ಮ’ ತೋರಿಸಿದನ್ತಾಗುವುದಿಲ್ಲವೆನ್ದೂ ನಮ್ಮ ಸ್ವನ್ತಿಕೆ ಕಳೆದುಕೊನ್ಡನ್ತಾಗುತ್ತದೆನ್ದೂ, ಸ್ವಲ್ಪದರಲ್ಲೇ ಹೆಚ್ಚಿನದನ್ನು ಪಡೆಯುವ ಸಾಧ್ಯತೆಯಿರುವಲ್ಲಿ ಈ ‘ದುನ್ದುಗಾರಿಕೆ’ಯಿನ್ದ ಕೇವಲ ಸೀಮಿತವಾದದ್ದಷ್ಟನ್ನೇ ಪಡೆಯಲಾಗುವುದೆನ್ದೂ, ತಿಳಿದಾಗ ಯಾರಿಗೆ ತಾನೆ ನಾಚಿಕೆಯಾಗದಿರದು.

ಕೇವಲ ಕನ್ನಡ ವರ್ ಣಗಳನ್ನಷ್ಟೇ ಕಲಿತು (ಅರ್ ಕಾರ ಮತ್ತು ಬಿನ್ದುಗಳ‌ ಸರಿಯಾದ ಪರಿಚಯವಿರದೇ) ಒಬ್ಬ ‘ಅಂಗಡಿ’ ಎಮ್ಬ ಶಬ್ದವನ್ನು ಓದಬೇಕಾಯಿತು ಎನ್ದು ಇಟ್ಟುಕೊಳ್ಳಿ; ಆತ ಅದನ್ನು ಅಮ್ಗಡಿ ಎನ್ದು ಓದಬೇಕೆ? ಅನ್ಗಡಿ ಎನ್ದು ಓದಬೇಕೆ? ಅಙ್ಗಡಿ ಎನ್ದು ಓದಬೇಕೆ? ‘ಅಂಗಡಿ’ ಎಮ್ಬುದು ‘ಅಙ್ಗಡಿ’ಯಾಗಿ ನಮಗೆಲ್ಲ ಮೊದಲಿನಿನ್ದಲೂ ತಿಳಿದಿರುವುದಾದುದರಿನ್ದ ಅದು ಗೊತ್ತಿಲ್ಲದವನಿಗಾಗುವ ಕಷ್ಟದ ಅರಿವು ನಮಗಾಗದಿರಬಹುದು ಆದರೆ ಹಾಗೆನ್ದು ಅವನಿಗೆ ಕಷ್ಟವೇ ಇಲ್ಲ ಎನ್ನಲಾದೀತೇ? ಎನ್ತೂ ಈ ಬಿನ್ದುವು ಹೆಚ್ಚಿನ ಅನುನಾಸಿಕಗಳ ಬದಲಿಗೆ ಉಪಯೋಗಿಸಲ್ಪಡುತ್ತಿದೆ; ಎಷ್ಟು ವಿಚಿತ್ರವೆನ್ದರೆ ‘ಅಣ್ಣ’ ಎನ್ನಲು ‘ಅಂಣ’ ಎನ್ನುವವರೂ ಇದ್ದಾರೆ ಎನ್ದರೆ ಉತ್ಪ್ರೇಕ್ಷೆಯಲ್ಲ. ಬಿನ್ದು ‘ಙ, ಞ, ನ, ಮ’- ಕಾರಗಳ ಸ್ಥಾನಗಳಲ್ಲೆಲ್ಲ ಚಲಿಸುವ ಮತ್ತು ಹಿಡಿತ ಸಾಧಿಸುವ ವ್ಯಕ್ತಿತ್ವವುಳ್ಳದಾದುದರಿನ್ದ ಸಮಯಕ್ಕೆ ತಕ್ಕನ್ತೆ ಓದಿಕೊಳ್ಳಬೇಕಾದ ಕಷ್ಟ ಬರುವುದು. ಆದರೆ ಅನುನಾಸಿಕಗಳನ್ನೇ ಉಪಯೋಗಿಸಬಾರದೇ? ಅಥವಾ ಆ ಮೂರು ಅನುನಾಸಿಕಗಳನ್ನೇ ಇಲ್ಲವಾಗಿಸಿ, ಸೂತ್ರಗಳನ್ತೆಯೋ, ಸ್ಕೇಲ್ ಗಳನ್ತೆಯೋ ಅನುನಾಸಿಕಗಳ ಬದಲು ಬಿನ್ದುವನ್ನುಪಯೋಗಿಸಿದ್ದರೂ, ನಮಗದು ಉಪಯೋಗದಲ್ಲಿ ‘accuracy’ ಕೊಡದಿದ್ದರೂ, ನಾವು ಬಹಳಷ್ಟು ಸಾಧಿಸಿದ್ದೇವೆ ಎನ್ನಬಹುದಿತ್ತು; ಸ್ಥಿತಿ ಹಾಗೇನೂ ಇಲ್ಲ ಎರಡೂ ಇವೆ. ಆದರೆ ಬಿನ್ದು ಬರೆವಲ್ಲಿ ಅನುನಾಸಿಕವನ್ನೇ ಉಪಯೋಗಿಸಿದರೆ ಹಲವರಿಗೆ ಸಙ್ಕೋಚ, ಹಲವರಿಗೆ ಉಪಯೋಗಿಸಬಾರದೆಮ್ಬ ಬಿಗುಮಾನ, ಹಲವರಿಗೆ ಅದು ಹಳೆಯ ಸಮ್ಪ್ರದಾಯವೆಮ್ಬ ಪೂರ್ ವಾಗ್ರಹ ಪೀಡಿತತನ ಇತ್ಯಾದಿ: ಪ್ಯಾನ್ಟು ಧರಿಸುವವ ಪಙ್ಚೆ ತೊಟ್ಟರೆ ಜನ ನೋಡುವನ್ತೆ, ಎರಡೂ ಬಟ್ಟೆಯೇ ಆದರೂ, ಯಾವುದನ್ನು ಧರಿಸಿದರೂ ನಮ್ಮ ಗೌರವವೇನೂ ಹೆಚ್ಚಾಗದಿದ್ದರೂ (ಆಗುವ ಸಾಧ್ಯತೆಯಿದೆ -ಕೆಲವು ನೋಡುವವರ ದೃಷ್ಟಿಯಲ್ಲಿ), ಪ್ಯಾನ್ಟು ಎನ್ದೊಡನೆ ನಾಗರಿಕತೆಯ ಸಙ್ಕೇತವೆಮ್ಬುದು ನಮ್ಮ ಮನೋಭಾವ. ಪ್ಯಾನ್ಟು ಮುನ್ದುವರಿದವರ ಸಙ್ಕೇತವೆನ್ದಷ್ಟೇ ತಿಳಿದಿದ್ದರೆ ನಮಗೇನೂ ಅಡ್ಡಿಯಿರಲಿಲ್ಲ, ಆದರೆ ಆಭಾಸವಾಗಿರುವುದು ಪಙ್ಚೆ ಹಳೆಯ ಸಮ್ಪ್ರದಾಯವೆಮ್ಬಲ್ಲಿ.

ಪಟ್ಟಾಭಿರಾಮ ಸೋಮಯಾಜಿ

ಆಙ್ಗ್ಲ ಭಾಷೆಯವರು ಕೇವಲ ಇಪ್ಪತ್ತಾರೇ ಅಕ್ಷರಗಳಿನ್ದ (ನಮ್ಮ ವರ್ ಣ ಮಾಲೆಯ ವರ್ ಣಗಳ ಸಙ್ಖ್ಯೆಯ ಅರ್ ಧದಷ್ಟು) ನಮ್ಮ ಭಾಷೆಯ ಅಕ್ಷರಗಳಿನ್ದ ಉಚ್ಚರಿಸಲಾಗುವ, ಉಚ್ಚರಿಸಲಾಗದ ಶಬ್ದಗಳನ್ನೆಲ್ಲ ಉಚ್ಚರಿಸುವುದನ್ನು ನೋಡುವ ನಮಗೆ, ಅನಾಯಾಸವಾಗಿ ಬನ್ದ ಈ ಎರಡನ್ನು ತೆಗೆದೊಗೆದರೇನು ಎಮ್ಬ ಭಾವನೆ ಮೂಡದಿದ್ದುದು ಶೋಚನೀಯವಲ್ಲದಿದ್ದರೂ, ನಮ್ಮ ಸೌಹಾರ್ ದತೆಯಲ್ಲಿರುವ ಹೀನತೆಯ ಸಙ್ಕೇತವದು. ಬಙ್ಗಾಳದಿನ್ದ ನಿರಾಶ್ರಿತರು ಬನ್ದು ಸ್ಥಳ ಕೇಳಿದಾಗ ಅವರಿನ್ದ ನಮಗೇನೂ ಉಪಯೋಗ ಉಪಕಾರಗಳಾಗದಿದ್ದರೂ, ‘ಇರಲಿ’ ಎನ್ದು ನಮ್ಮ ಸೌಹಾರ್ ದ ಭಾವದನ್ತೆ ಇದೂ ಒಂದು Evidence. We are shy of novelties ಎಮ್ಬುದು ನಮ್ಮ ಜನರ ಮಟ್ಟಿಗೆ ಎಷ್ಟು ಸತ್ಯವೋ, ಹಾಗೇ we hesitate to hasten the departing guests ಎಮ್ಬುದೂ. ಹೇಗೋ‌ ಏನೋ, ಗ್ರಹಗಳ ಚಲನೆಯು ವಿಕೃತವಾಗಿದ್ದ ಕಾಲದಲ್ಲಿ, ಬನ್ದು ಸೇರಿದ್ದಿರಬಹುದು; ಆದರೆ ಅವುಗಳು ‘ಉಳುವವನೇ ಹೊಲದೊಡೆಯ’ ಎಮ್ಬ ಸಿದ್ಧಾನ್ತಕ್ಕೆ ಬರುವವರೆವಿಗೂ ನಾವು ಸುಮ್ಮನಿದ್ದೇವೆ. ರಾಜನ ಪ್ರತಿನಿಧಿಯೇ ರಾಜನಾದಾಗ ಎಷ್ಟು ಆಭಾಸವಾದೀತೋ ಅಷ್ಟು: ಬಿನ್ದುವಿನಿನ್ದ ನಮಗಾದ ಲಾಭ. ಸ್ಟಾಮ್ಪ್ ಕಲೆಕ್ಟರ್ ಒನ್ದೇ ತೆರದ ಹಲವು ಸ್ಟಾಮ್ಪುಗಳನ್ನು ಕೂಡಿಸಿಕೊನ್ಡ ಅಪರಿಚಿತ ಅನುಭವದನ್ತೆ ನಮ್ಮ ಸ್ಥಿತಿ. ಅನ್ದರೆ ಬಿನ್ದು ಅರ್ ಥಹೀನ, ಅದಕ್ಕೆ ಯೋಗ್ಯತೆಯಿಲ್ಲವೆನ್ದು ನಾನೆನ್ದೂ ಹೇಳಲಾರೆ. ಗಣಿತದಲ್ಲಿ, ಮನುಷ್ಯನನ್ನು X ಎನ್ದೋ Y ಎನ್ದೋ ಕರೆಯುವುದಕ್ಕೂ ಹಿನ್ದೆ ಮುನ್ದೆ ನೋಡದ ನಾವು ಇದೂ ಅನ್ತೆಯೇ ಸೌಲಭ್ಯಕ್ಕಾಗಿ ಅಳವಡಿಸಿಕೊನ್ಡ ವಸ್ತುವೆನ್ದಾದರೂ, ಅದಕ್ಕೆ ಯೋಗ್ಯತೆಯನ್ನು ಊದಿ ತುಮ್ಬಿಸಬಹುದು (ಇದಕ್ಕೆ ಅದರದೇ ಆದ ಯೋಗ್ಯತೆಯಿದೆಯೇನೋ ವಿದ್ವಾಮ್ಸವರ್ ಯರಿಗೇ ಗೊತ್ತು). ಆದರೆ ನಿಜವಾದ ಮನುಷ್ಯ ಮತ್ತು ಅವನ ಸಙ್ಕೇತ X ಎಲ್ಲವೂ ಏಕೆ? ಒನ್ದೇ ಸಾಲದೇ? ಎರಡರಲ್ಲಿ ಯಾವುದು ಹೆಚ್ಚು ಯೋಗ್ಯವೋ ಅದನ್ನುಳಿಸಿಕೊನ್ಡರಾಗದೇ? ಅರ್ ಥಾತ್, ಬಿನ್ದುವನ್ನು ಹೋಗಲಾಡಿಸಿದರಾಗದೇ? ಸುನ್ದರ ಕನ್ನಡ ಅಕ್ಷರಗಳ ನಡುವೆ ಅರ್ ಕಾರವೇಕೆ ಬೇಕು? -ಅದು, ‘ಹಮ್ಸ ಮಧ್ಯೇ ಬಕೋಯಥಾ’, ಎಮ್ಬ, ಇಲ್ಲವಾದಲ್ಲಿ ‘ಗೂನು ಬೆನ್ನಿನವರ ರಾಜ್ಯದಲ್ಲಿ ನೇರ ಬೆನ್ನಿನವನು ಅಸಹ್ಯವಾಗಿ ಕಾಣುತ್ತಾನೆ’, ಎಮ್ಬ ನುಡಿಗಳನ್ನು ನೆನಪು ಮಾಡುತ್ತದೆ.

ಎಚ್.ಪಟ್ಟಾಭಿರಾಮ ಸೋಮಯಾಜಿ.

ಇದನ್ನೂ ಓದಿ- ‘ಹಿಂಗೊಂದು ಕಥೆ’: ಸೌಹಾರ್ದದ ಕಥನ vs. ರಾಜಕೀಯ ವಿಭಜನೆ

More articles

Latest article