Saturday, September 21, 2024

ದಲಿತರು ಮತ ಗಳಿಕೆಗೆ ಮಾತ್ರ ಸೀಮಿತವೇ?

Most read

ಈ ಬಾರಿ ವಿಧಾನಸಭೆಗೆ 36 ಮಂದಿ ದಲಿತ ನಾಯಕರು ಪ್ರವೇಶಿಸಿದ್ದಾರೆ. ಅದರಲ್ಲಿ ಒಬ್ಬರು ಕೂಡ ದಲಿತ ವಿರೋಧಿ  ಪ್ರಕರಣದ ಬಗ್ಗೆ ಪಕ್ಷವನ್ನು ಎದುರಿಸಿ ಅವರ ಸಮುದಾಯದ ಪರವಾಗಿ ನಿಂತ ಉದಾಹರಣೆ ಇಲ್ಲವೇ ಇಲ್ಲ. ಇಂತಹ ರಾಜಕೀಯ ಗುಲಾಮಗಿರಿಯಿಂದ ಇಂದು ದಲಿತ ಸಮುದಾಯವನ್ನು  ಬಹಿರಂಗವಾಗಿ ನಿಂದಿಸುವ ಮತ್ತು ಚಾರಿತ್ರ್ಯವಧೆ ಮಾಡುವ  ಮನಸ್ಥಿತಿಗಳು ಹುಟ್ಟಿಕೊಂಡಿವೆ – ಆಕಾಶ್‌ ಅರ್‌ ಎಸ್‌, ಪತ್ರಕರ್ತರು 

“ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಗ್ರಾಮವೊಂದರ ಪರಿಶಿಷ್ಟ ಜಾತಿಗೆ ಸೇರಿದ 15 ವರ್ಷದ ಬಾಲಕಿಯ ಮೇಲೆ ಬಲಿತ ಸಮುದಾಯಕ್ಕೆ ಸೇರಿದ ಯುವಕ ಅತ್ಯಾಚಾರ ಎಸಗಿದ್ದಾನೆ. ಆಕೆ ಐದು ತಿಂಗಳು ಗರ್ಭಿಣಿಯಾಗಿದ್ದು ಮಾದಿಗ ಜಾತಿಯವಳಾಗಿದ್ದರಿಂದ ನಿನ್ನ ಜೊತೆ ಮದುವೆಯಾಗಲಾರೆ‌, ಗರ್ಭಪಾತ ಮಾಡಿಸಿಕೊಂಡು ಬಿಡು. ಈ ವಿಚಾರ ಬೇರೆ ಯಾರಿಗಾದರು ತಿಳಿಸಿದರೆ ನಿನ್ನ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ, ಅಲ್ಲದೇ ಅಲ್ಲಿನ ಬಲಿತ ಸಮುದಾಯದವರು ಇವರನ್ನು ಬಹಿಷ್ಕಾರ ಹಾಕಿದ್ದಾರೆ”.

“ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಸಲೂನ್ ಗೆ ತೆರಳಿದ್ದ ಯುವಕನನ್ನು ದಲಿತ ಎಂಬ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿದಲ್ಲದೆ ಕತ್ತರಿಯಿಂದ ಇರಿದು ಕೊಂದಿದ್ದಾರೆ”. 

ಈ ತರದ ಜಾತಿ ಕುರಿತ  ಪ್ರಕರಣಗಳು ದಿನದಿಂದ ದಿನ ಸೃಷ್ಟಿಯಾಗುತ್ತಲೇ ಇವೆ. ಮಾಧ್ಯಮಗಳು ಬಿತ್ತರಿಸುತ್ತಲೇ ಇವೆ.. ರಾಜಕೀಯವಾಗಿ ಹೇಳಿಕೆಗಳನ್ನು ಕೇಳುತ್ತಲೇ ಇದ್ದೇವೆ.. ಪ್ರಾಥಮಿಕ ಮಟ್ಟದಲ್ಲಿ ಏನೇನು ಮಾಡಬೇಕೋ ಅದನ್ನು ಮಾಧ್ಯಮ ಮತ್ತು ರಾಜಕೀಯ ರಂಗ ಮಾಡಿದೆ, ಮಾಡುತ್ತಲೂ ಇದೆ. ಆದರೂ ಉತ್ತರ ಪ್ರದೇಶ, ಗುಜರಾತ್, ಬಿಹಾರ್, ಕರ್ನಾಟಕ ದಂತಹ ರಾಜ್ಯಗಳಲ್ಲಿ ಈ ಹತ್ಯೆಗಳು ಸಾಧಾರಣ ಎಂಬಂತಾಗಿವೆ. ಅದರಲ್ಲೂ2018 ರಿಂದ 2022 ರ ಎನ್ ಸಿ ಆರ್ ಬಿ ವರದಿ ಪ್ರಕಾರ ಕರ್ನಾಟಕದಲ್ಲಿ (ಶೇ 1.3) ಶಿಕ್ಷೆಯ ಪ್ರಮಾಣ ಕಡಿಮೆ ಎಂದು ವರದಿ ನೀಡಿದೆ. ಹಾಗೇ ದೇಶದಲ್ಲಿ ದಲಿತ ಜನಾಂಗದ ಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದರೂ ತುಟಿ ಬಿಚ್ಚದ ರಾಜಕಾರಣದ ಸಮೂಹವೂ ಬಹುಸಂಖ್ಯರಾದ ದಲಿತ ಸಮುದಾಯವನ್ನು ರಾಜಕೀಯಕ್ಕಾಗಿ ದಾಳವಾಗಿ ಬಳಸಿಕೊಳ್ಳುತ್ತಿರುವುದು  ಕೂಡ ದುರಂತವಾಗಿದೆ. 

ದಲಿತರು ಮತ್ತು ರಾಜಕೀಯ    

ದಲಿತರು ಮತ್ತು ರಾಜಕೀಯ ರಾಜಕಾರಣದಲ್ಲಿ ಸದಾ ಚಾಲ್ತಿಯಲ್ಲಿರುವ ಅಜೆಂಡಾ ಎಂದರೆ ತಪ್ಪಿಲ್ಲ. ಯಾಕೆಂದರೆ ರಾಜಕಾರಣದಲ್ಲಿ ಪಕ್ಷದ ಸಿದ್ದಾಂತಕ್ಕಿಂತ ಸಮುದಾಯದ ಭಾವನೆಗಳು ಹೆಚ್ಚು ಪ್ರಕಾಶಮಾನವಾದದ್ದು. ಅದರ ಲಾಭ ಶತಮಾನಗಳಿಂದಲೂ ರಾಜಕಾರಣದ ಬೊಕ್ಕಸದಲ್ಲಿ ಮತಗಳಾಗಿ ತುಂಬುತ್ತಿವೆ. ಹಾಗೇ ನೋಡುವುದಾದರೆ ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ದಲಿತ ಸಮುದಾಯದ ಮತಗಳೇ ನಿರ್ಣಯಕ ಮತಗಳಾಗಿವೆ. 2019 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಳ ಮೀಸಲಾತಿ ನೀಡುವುದಾಗಿ ದಲಿತ ಸಮುದಾಯ ಸಂಘಟನೆಗಳ ಮನವೊಲಿಸಿ, ಆಶ್ವಾಸನೆ ಕೊಟ್ಟು ಮತಗಳನ್ನು ಕ್ರೋಢೀಕರಿಸಿಕೊಂಡು ಹೆಚ್ಚಿನ ಸೀಟು ಗಳಿಸಿದ್ದು, ನಂತರ ಮಾತಿಗೆ ತಪ್ಪಿದ ಕಾರಣ 2023 ರ ಚುನಾವಣೆಯಲ್ಲಿ ಶೇ.63ರಷ್ಟು ಮತಗಳನ್ನು ಕಾಂಗ್ರೆಸ್ ಗೆ ನೀಡುವ ಮೂಲಕ ಅದನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದಷ್ಟೇ ಅಲ್ಲದೆ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಮಾಡಿದ ಬಿಜೆಪಿಗೆ ಇದೇ ದಲಿತ ಸಮುದಾಯದ ಉಪಜಾತಿಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರನ್ನು ೨೦೨೩ರ ವಿಧಾನ ಸಭಾ  ಚುನಾವಣೆಯಲ್ಲಿ ಶಿಕಾರಿಪುರದ ಕ್ಷೇತ್ರದಲ್ಲಿನ ತಮ್ಮ ಗ್ರಾಮಗಳಿಂದ ಬಹಿಷ್ಕಾರ ಹಾಕಿದ್ದ ಘಟನೆ ಕೂಡಾ ಇದೆ.

ಇನ್ನು ವಾಸ್ತವದಲ್ಲಿ ದಲಿತರನ್ನು ದಾಳವಾಗಿ ಬಳಸಿಕೊಂಡು ಬಿಜೆಪಿ, ಜೆಡಿಎಸ್, ಸಿದ್ದರಾಮಯ್ಯ ದಲಿತರ ಜಮೀನು ಕಬಳಿಸಿದ್ದಾರೆ, ಒಳಮೀಸಲಾತಿ ಬೇಗ ಜಾರಿ ಮಾಡಬೇಕು, ದಲಿತರ ಹಣ ಗ್ಯಾರಂಟಿ ಯೋಜನೆಗೆ ಖರ್ಚಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತ ರಾಜಕಾರಣಕ್ಕೆ ನಿಂತಿದ್ದಾರೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ದಲಿತ ಹತ್ಯೆ ಮತ್ತು ಶೋಷಣೆಯ ಬಗ್ಗೆ ಚಕಾರು ಎತ್ತುತ್ತಿಲ್ಲ. ಯಾಕೆ?.  ಇದು ಕೇವಲ ಬಿಜೆಪಿ ಮಾತ್ರವಲ್ಲ ಆಡಳಿತ ಸರ್ಕಾರ ಕಾಂಗ್ರೆಸ್ ನಲ್ಲೂ ಈ ಮನಸ್ಥಿತಿಗಳಿವೆ ಅದನ್ನು ಅಲ್ಲಗೆಳೆಯುವಂತಿಲ್ಲ. ದಲಿತ ಸಮುದಾಯಕ್ಕೆ ಸೇರಿದ ಮಂತ್ರಿಗಳೇ ಇಂತಹ ವಿಷಯದಲ್ಲಿ ಪಕ್ಷಪಾತ ನೀತಿಯನ್ನು ಅನುಸರಿಸುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ಹಾಗಾದರೆ ದಲಿತರು ರಾಜಕೀಯ ಮತ್ತು ರಾಜಕಾರಣಕ್ಕೆ ಮಾತ್ರ ಸೀಮಿತವೇ?. ಮತಗಳ ಕ್ರೋಢೀಕರಣಕ್ಕೆ ಮಾತ್ರ ಬಳಕೆಯೇ?. 

ರಾಜಕೀಯ, ಮಾಧ್ಯಮ ಮತ್ತು ಪ್ರಬಲ ಜಾತಿ

ರಾಜಕೀಯ, ಮಾಧ್ಯಮ ಮತ್ತು ಪ್ರಬಲಜಾತಿಗಳು ಒಂದೇ ಮನೆಯ ಕೂಸುಗಳು. ಯಾಕೆಂದರೆ ಇವೆರಡು ಕ್ಷೇತ್ರಗಳಲ್ಲಿ ಪ್ರಬಲ ಜಾತಿಗಳದ್ದೆ ಪ್ರಾಬಲ್ಯವಾಗಿದ್ದರಿಂದ ಇಲ್ಲೂ ಅಸ್ಪೃಶ್ಯ ಆಚರಣೆಗಳಿವೆ. ಮಾಧ್ಯಮಗಳಿಗೆ ಮುಡಾ, ದರ್ಶನ್ ಪ್ರಕರಣ ಭರ್ಜರಿ ಭೋಜನಾವಾಗಿದ್ದು, ತಮ್ಮ ಸಾಮಾಜಿಕ ಜವಾಬ್ದಾರಿ ಮರೆಯುತ್ತಿವೆ. ಇತ್ತ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯದ ನಾಗಮಂಗಲ ಪ್ರಕರಣದ ಬಗ್ಗೆ ಇರುವ ಕಾಳಜಿ ದಲಿತರ ಮೇಲಿಲ್ಲ. ಆರ್ ಎಸ್ ಎಸ್  ಸಮೂಹದಿಂದ ಬಂದ ಪ್ರಧಾನಿ ಮೋದಿ ಸಹ ನಾಗಮಂಗಲ ಪ್ರಕರಣದ ಬಗ್ಗೆ ಮಾತಾಡಿದ್ದು, ಆ ಮೂಲಕ ನಾನು ಪೌರಕಾರ್ಮಿಕರ ಪಾದವನ್ನು ತೊಳೆಯುವುದಕ್ಕೆ ಮಾತ್ರ ಸೀಮಿತ ಆ ಸಮುದಾಯದ ಸಾಮಾಜಿಕ ಸ್ಥಾನಮಾನದ ಬಗ್ಗೆ ಚಿಂತನೆಯಿಲ್ಲ ಎಂಬ ಸಂದೇಶವನ್ನು ಬಹಿರಂಗವಾಗಿ ಬಿತ್ತಿದ್ದಾರೆ.  ನಾವೆಲ್ಲ ಹಿಂದೂ ಎಂದು ಬೊಬ್ಬೆ ಹೊಡೆಯುವ ವಿರೋಧ ಪಕ್ಷದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಸಿ.ಟಿ.ರವಿಯಂತಹ ನಾಯಕರು ಕೂಡ ಸೊಲ್ಲೆತ್ತದೆ ಉಸಿರು ಅದುಮಿಟ್ಟು ಕೊಂಡಿದ್ದಾರೆ. ಯಾಕೆಂದರೆ ಮಾಧ್ಯಮ ಮತ್ತು ಈ ರಾಜಕಾರಣದ ಆಳ್ವಿಕೆಯ ಸೂತ್ರ ಪ್ರಬಲ ಜಾತಿಗಳ ಕೈಯಲ್ಲಿದೆ. ಹಾಗೂ ದಲಿತರ ಶೋಷಣೆ ಪ್ರಕರಣಗಳ ಆರೋಪಿಗಳೆಲ್ಲಾ ಪ್ರಬಲ ಜಾತಿಗೆ ಸೇರದವರಾಗಿರುತ್ತಾರೆ.

ಗೃಹಮಂತ್ರಿ ಡಾ. ಜಿ ಪರಮೇಶ್ವರ್

ಹಾಗೇ ನೋಡುವುದಾರೆ ಪ್ರಬಲ ಜಾತಿಗಳ ಮತ ಬೆಂಬಲ ಬಿಜೆಪಿಗಿದೆ. 2023 ರ ಚುನಾವಣೆಯಲ್ಲಿ ಶೇ.60 ರಷ್ಟು ಮತ ಪ್ರಬಲ ಜಾತಿ( ಬ್ರಾಹ್ಮಣ, ಒಕ್ಕಲಿಗರು), ಶೇ.56 ರಷ್ಟು ಮತ ಲಿಂಗಾಯತ ಸಮುದಾಯದಿಂದ ಅದು ಪಡೆದಿದೆ. ಅವರ ಋಣವನ್ನು ತೀರಿಸುವ ಸಲುವಾಗಿ ಸಾಮಾಜಿಕ ನ್ಯಾಯಕ್ಕೆ ದ್ರೋಹವೆಸಗುತ್ತಿದ್ದಾರೆ. ಇದು ಕೂಡ ಒಂದು ರೀತಿಯ ರಾಜಕೀಯ ಲಾಭದ ಲೆಕ್ಕಚಾರವೇ. ಇನ್ನೂ ರಾಜಕಾರಣದ ಒಳಹೊಕ್ಕರೆ ಅಲ್ಲೂ ಇಂತಹ ತಾರತಮ್ಯದ ಆಚರಣೆ ಬೇಕಾದಷ್ಟು ಸಿಗುತ್ತದೆ. ಈ ಬಾರಿ ವಿಧಾನಸಭೆ ಪ್ರವೇಶಿಸುವಲ್ಲಿ 36 ಮಂದಿ ದಲಿತ ನಾಯಕರಿದ್ದಾರೆ. ಅದರಲ್ಲಿ ಒಬ್ಬರು ಕೂಡ ಇಂತಹ ಪ್ರಕರಣದ ಬಗ್ಗೆ ಪಕ್ಷವನ್ನು ಎದುರಿಸಿ ಅವರ ಸಮುದಾಯದ ಪರವಾಗಿ ನಿಂತ ಉದಾಹರಣೆ ಇಲ್ಲವೇ ಇಲ್ಲ. ಇಂತಹ ರಾಜಕೀಯ ಗುಲಾಮಗಿರಿಯಿಂದ ಇಂದು ದಲಿತ ಸಮುದಾಯವನ್ನು  ಬಹಿರಂಗವಾಗಿ ನಿಂದಿಸುವ ಮತ್ತು ಚಾರಿತ್ರ್ಯವಧೆ ಮಾಡುವ  ಮನಸ್ಥಿತಿಗಳು ಹುಟ್ಟಿಕೊಂಡಿವೆ.   

ಅಂಬೇಡ್ಕರ್ಗೆ ಈ ದೇಶದ  ಸಮಸ್ಯೆ ಮತ್ತು ದಲಿತ ಜನಾಂಗದ ಸಮಸ್ಯೆ ಬೇರೆ ಬೇರೆಯಾಗಿ ಕಾಣಲಿಲ್ಲ. ಹಾಗಾಗಿಯೇ ದಲಿತರಿಗೆ ಸಮಾನತೆ ಸಿಗದೆ ಈ ದೇಶದ ಅಭಿವೃದ್ಧಿಯಾಗದು ಎಂದು ಅವರು ಅಭಿಪ್ರಾಯ ಪಟ್ಟಿದ್ದರು. 

ಆದರೆ ಇಂದಿಗೆ ಅದು ತಟಸ್ಥವಾಗಿ ನಿಂತಿದೆ. ದೇಶದ ಬಹು ದೊಡ್ಡ ಸಮೂಹವೊಂದು ಜಾತಿಯ ತಾರತಮ್ಯ, ಶೋಷಣೆ, ಹತ್ಯೆ ಮುಂತಾದ ಕ್ರೌರ್ಯಗಳಿಂದ ಬಳಲುತ್ತಿದೆ. ಅಧಿಕಾರದಿಂದ ವಂಚಿತವಾಗಿದೆ. ಆ ಸಮುದಾಯದ ಮಂದಿಗಳು ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾರೆ. ಆದರೂ ಈ ಸಮುದಾಯಗಳು ಇಷ್ಟೆಲ್ಲದರ ನಡುವೆಯೂ ಸಾಮಾಜಿಕ ಸ್ಥಾನಮಾನಕ್ಕೆ ಹೋರಾಡುತ್ತಾ ಬಲಿತವರ ಗುಲಾಮಗಿರಿಯಿಂದ ಸಾಧ್ಯವಾದಷ್ಟೂ ಮುಕ್ತಿ ಪಡೆದು ಶೈಕ್ಷಣಿಕವಾಗಿ, ರಾಜಕೀಯವಾಗಿ, ಅರ್ಥಿಕವಾಗಿ ಸ್ವತಂತ್ರವಾಗಿ ಬದುಕುವ ಹಾದಿಯಲ್ಲಿದ್ದಾರೆ. ಆದರೆ ಇತ್ತ ರಾಜಕೀಯ ಮತ್ತು ಮಾಧ್ಯಮ ಇದೇ ಬಲಿತವರು ಸೃಷ್ಟಿಸಿದ ಗುಲಾಮಗಿರಿಯ ಹಾದಿ ತುಳಿಯುತ್ತಿರುವುದು ವಿಪರ್ಯಾಸವಾಗಿದೆ. 

ಆಕಾಶ್.ಆರ್.ಎಸ್

ತ್ರಕರ್ತರು
ಇದನ್ನೂ ಓದಿ- ಒಳಮೀಸಲಾತಿ ಬೇಡ ಎನ್ನುವ ನೈತಿಕತೆ, ಹಕ್ಕು ಯಾರಿಗೂ ಇರುವುದಿಲ್ಲ : ದೇವನೂರ ಮಹಾದೇವ ಸಂದರ್ಶನ

More articles

Latest article