ಶಿವಮೊಗ್ಗ: ಅರಣ್ಯ ಭೂಮಿಯಲ್ಲಿ ಹೆಂಡದ ಅಂಗಡಿ ಆರಂಭಿಸಲು ತಮ್ಮ ಶಾಸಕ ಸ್ಥಾನವನ್ನುಅಡವಿಟ್ಟಿರುವ ಅರಗ ಜ್ಞಾನೇಂದ್ರ ಅವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಮೂಲಕ ಕ್ಷೇತ್ರದ ಘನತೆಯನ್ನು ಉಳಿಸಬೇಕು ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ ಆಗ್ರಹಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಎದುರು ಅರಗ ಅವರು ಹೆಂಡದ ಅಂಗಡಿ ಆರಂಭಕ್ಕೆ ಪ್ರತಿಭಟನೆ ನಡೆಸಿ ಶಾಸಕ ಸ್ಥಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಶಾಸಕರು ಪ್ರತಿಭಟನೆ ನಡೆಸುವಾಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯಲ್ಲಿ ಮದ್ಯದ ಅಂಗಡಿ ಆರಂಭಕ್ಕೆ ಅವಕಾಶ ನೀಡಬಾರದು. ಮದ್ಯದ ಅಂಗಡಿ ಆರಂಭಕ್ಕೆ ಅವಕಾಶ ನೀಡಬೇಡಿ ಎಂದು ಸಾರ್ವಜನಿಕರು ನನಗೆ ಪತ್ರ ಬರೆದು ಆಗ್ರಹಪಡಿಸಿದ್ದಾರೆ. ನಾನೂ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.
ಕುವೆಂಪು, ಶಾಂತವೇರಿ ಗೋಪಾಲಗೌಡ , ಅನಂತಮೂರ್ತಿ ಅವರಂತಹ ದಿಗ್ಗಜರು ಹುಟ್ಟಿದ ತೀರ್ಥಹಳ್ಳಿಯಲ್ಲಿ ಅರಗ ಜ್ಞಾನೇಂದ್ರ ಶಾಸಕರಾಗಿರುವುದೇ ದುರಂತ. ಮದ್ಯದ ಅಂಗಡಿ ಬೇಕು ಎಂದು ಪ್ರತಿಭಟನೆ ನಡೆಸಿದ ಶಾಸಕಇವರೊಬ್ಬರೇ ಇರಬಹುದು ಎಂದು ವ್ಯಂಗ್ಯವಾಡಿದರು. ಅರಗ ಜ್ಞಾನೇಂದ್ರ ಅವರ ಆಸ್ತಿ ಕುರಿತು ೧೫ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.
ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು ಪ್ರಧಾನಿ ಮೋದಿ ಅವರ ಗುಣಗಾನ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇವರ ಅವಧಿಯಲ್ಲಿ ಅಭವೃದ್ಧಿ ನಡೆದೆ ಇಲ್ಲ ಎಂದು ಟೀಕಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಬಿಜೆಪಿ ಸದಸ್ಯರು ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ತುರ್ತಾಗಿ ರಸ್ತೆ ಕಾಮಗಾರಿ ಮಾಡಲು ಮುಂದಾದರೆ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡುತ್ಥಾರೆ. ಇಂತಹ ಕೆಟ್ಟ ವಾತಾವರಣ ಸೃಷ್ಟಿಸಿದ್ದಾರೆ ಎಂದು ಕಿಮ್ಮನೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಜಿ.ಎಸ್.ನಾರಾಯಣರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯೆ ಸುಶೀಲ ಶೆಟ್ಟಿ ಮತ್ತು ಭೂ ನ್ಯಾಯಮಂಡಲಿ ಸದಸ್ಯ ಡಿ.ಎಸ್. ವಿಶ್ವಾನಾಥ ಶೆಟ್ಟಿ ಹಾಜರಿದ್ದರು.