ದಲಿತರ ಉದ್ಯೋಗಗಳು ಅರ್ಹ ಅಭ್ಯರ್ಥಿ ಇಲ್ಲವೆಂದು ಬ್ಯಾಕ್ ಲಾಗ್ ಆಗಿ ಮಾಯವಾಗುವ ಬದಲು, ʼಆದ್ಯತಾ ನೀತಿʼ ಯನ್ನು ಅನುಸರಿಸಬಹುದು. ಆದರೆ ಯಾವುದೇ ಕಾರಣಕ್ಕೂ ಕೆನೆಪದರ ನೀತಿ ಹೇರಿ, ಅರ್ಹ ಅಭ್ಯರ್ಥಿಗಳಿಲ್ಲವೆಂದು, ಸಂಪೂರ್ಣ ಪ್ರಾತಿನಿಧ್ಯ ನೀಡುವುದರಿಂದ ದಲಿತರನ್ನು ವಂಚಿಸುವುದು ಬೇಡವೇ ಬೇಡ. ಕೆನೆಪದರ ನೀತಿ ದಲಿತರಿಗೆ ಮಾರಕ! – ವಿಕಾಸ್ ಆರ್ ಮೌರ್ಯ, ಬರಹಗಾರರು, ಹೋರಾಟಗಾರರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ (ದಲಿತರು) ಮೀಸಲಾತಿ ಸೌಲಭ್ಯ ಜಾರಿಯಾಗಿ ಇನ್ನೂ 100 ವರ್ಷಗಳೂ ಕಳೆದಿಲ್ಲ. ಅದಾಗಲೇ ಅವರ ಮೀಸಲಾತಿ ಕಸಿಯುವ ಮಾತುಗಳಾಗುತ್ತಿವೆ. ಇದೇನು ಹೊಸದಲ್ಲ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶೂದ್ರ (ಹಿಂದುಳಿದ ಜಾತಿಗಳು – ಓಬಿಸಿ) ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದಾಗ ಹಲವು ಅತೃಪ್ತ ಆತ್ಮಗಳು ಮೀಸಲಾತಿಯ ವಿರುದ್ಧ ಕೂಗಿದ್ದವು. ಆಶ್ಚರ್ಯವೆಂದರೆ ಅದೇ ಅತೃಪ್ತ ಆತ್ಮಗಳು 2000 ವರ್ಷಗಳಿಂದಲೂ ಮೀಸಲಾತಿಯನ್ನು ಪಡೆದುಕೊಂಡು ಬಂದಿದ್ದವು. ಅದೆಷ್ಟರ ಮಟ್ಟಿಗೆಂದರೆ, ದೆಹಲಿ ಸುಲ್ತಾನ, ಮೊಗಲರ ಕಾಲದಲ್ಲಿಯೂ ಮೀಸಲಾತಿ ಅನುಭವಿಸಿದ್ದವು. ಆದರೆ ಸಮಾನತೆಗಾಗಿ ದಲಿತರು ಮತ್ತು ಹಿಂದುಳಿದ ಜಾತಿಯವರಿಗೆ ಮೀಸಲಾತಿ ಸೌಲಭ್ಯ ಒದಗಿಸಿದಾಗ ಹೊಟ್ಟೆ ಉರಿದುಕೊಂಡು ಬೆಂಕಿಯಾಗಿದ್ದವು. ಈಗ EWS 10% ಮೀಸಲಾತಿ ಪಡೆಯುತ್ತಿದ್ದರೂ ಒಳಗೊಳಗೇ ದಲಿತರು ಹಾಗೂ ಒಬಿಸಿಗಳಿಗೆ ಸಿಗುತ್ತಿರುವ ಮೀಸಲಾತಿ ಬಗ್ಗೆ ಕರುಬುತ್ತಿವೆ. ಈ ಕರುಬುವಿಕೆಗೆ ಆಗಸ್ಟ್ 1 ರಂದು ಒಳಮೀಸಲಾತಿ ಪರ ಬಂದ ಸುಪ್ರೀಂ ಕೋರ್ಟ್ ತೀರ್ಪು ಮತ್ತಷ್ಟು ಉಪ್ಪು ಸುರಿದಿದೆ. ದಲಿತರಿಗೂ ಕೆನೆಪದರ ಹೇರಬೇಕು ಎಂಬ ಚರ್ಚೆ ಆರಂಭಿಸಿವೆ. ಈ ಚರ್ಚೆಗೆ ಚಾಲನೆ ನೀಡಿರುವುದು ಬೇರಾರೂ ಅಲ್ಲ, ಸುಪ್ರೀಂ ಕೋರ್ಟಿನ ಏಕೈಕ ದಲಿತ ನ್ಯಾಯಾಧೀಶರಾದ ಜಸ್ಟೀಸ್ ಗವಾಯಿಯವರು!
1992 ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ OBC ಗಳ ಮೀಸಲಾತಿಗೆ ʼಕೆನೆಪದರʼ ನಿಯಮ ಮಾಡಿ, SC/ST ಗಳಿಗೆ ಕೆನೆಪದರ ಅನ್ವಯಿಸಲಾಗುವುದಿಲ್ಲ ಎಂಬ ತೀರ್ಪನ್ನು ನೀಡಿದ ನಂತರ ಈಗ ಒಳಮೀಸಲಾತಿ ತೀರ್ಪಿನಲ್ಲಿ ಜಸ್ಟೀಸ್ ಗವಾಯಿಯವರು ತಮ್ಮ ಪೀಠದ ಮುಂದೆ ಕೆನೆಪದರ ಪ್ರಶ್ನೆ ಇಲ್ಲದಿದ್ದರೂ ಸುಖಾಸುಮ್ಮನೆ ಕೆನೆಪದರ ಎಳೆದು ತಂದ ಕಾರಣ ಮತ್ತೆ ಕೆನೆಪದರ ತತ್ವವು ಚರ್ಚೆಗೆ ಬಂದಿದೆ. ಜಸ್ಟೀಸ್ ಗವಾಯಿಯವರಿಂದಾಗಿ ಗೊಂದಲ ಉಂಟಾಗಿ ಈಗ ಹಲವು ವಕೀಲರ ತಂಡ ಒಳಮೀಸಲಾತಿ ತೀರ್ಪಿನಲ್ಲಿ ಕೆನೆಪದರದ ಕುರಿತು ಆದೇಶವಾಗಿಲ್ಲ ಅದೊಂದು ಬೇಕಿರದ ಅಭಿಪ್ರಾಯವಷ್ಟೆ ಎಂದು ಸ್ಪಷ್ಟಗೊಳಿಸಿದ ಕಾರಣ ಕೆನೆಪದರದ ತಲೆನೋವು ಈಗಿಲ್ಲವಾಗಿದೆ. ಆದರೆ ಕೆನೆಪದರ ನೀತಿಯ ಕುರಿತು ದಲಿತರೊಳಗೂ ಗೊಂದಲಗಳಿವೆ. ಹಾಗಾಗಿ ಅದರ ಬಗ್ಗೆ ತಿಳಿಯುವುದು ಸೂಕ್ತ.
ಹಾಗಾದರೆ ದಲಿತರಿಗೆ ʼಕೆನೆಪದರʼ ನೀತಿ ಅನ್ವಯಿಸುವುದು ಎಂದರೇನು? ದಲಿತರಿಗೆ ಆರ್ಥಿಕ ಮಿತಿ ಹೇರಿ, ಆ ʼಮಿತಿʼ ಮೀರಿದ ಕುಟುಂಬವನ್ನು ಸಾಮಾಜಿಕ-ಆರ್ಥಿಕ-ಶೈಕ್ಷಣಿಕವಾಗಿ ಮುಂದುವರೆದಿರುವವರು ಎಂದು ಪರಿಗಣಿಸಿ, ಮೀಸಲಾತಿಯಿಂದ ಹೊರಗಿಡುವ ಪ್ರಕ್ರಿಯೆಯೇ ʼಕೆನೆಪದರ ನೀತಿ.ʼ ಹೌದಲ್ಲವೇ, ದಲಿತರೊಳಗಿನ ಬಡವರಿಗೆ ಮೀಸಲಾತಿ ಸಿಗಬೇಕಲ್ಲವೇ? ಹಾಗಾಗಿ ದಲಿತ ಶ್ರೀಮಂತರನ್ನ ಮೀಸಲಾತಿಯಿಂದ ಹೊರಗಿಟ್ಟರಾಯಿತು ಎಂದು ವಾದಿಸುವವರೇ ಹೆಚ್ಚಿದ್ದಾರೆ. ಏಕೆಂದರೆ ಸ್ವಾತಂತ್ರ್ಯ ಬಂದು 78 ವರ್ಷವಾದರೂ ದಲಿತರೊಳಗಿನ ಬಡವರ ಸಂಖ್ಯೆ ಗಣನೀಯವಾಗಿ ಕಡಿಮೆಯೇ ಆಗಿಲ್ಲ. ಇರಲಿ, ಈಗ ಕೆನೆಪದರದ ಬಗ್ಗೆ ತಿಳಿಯೋಣ ಬನ್ನಿ.
ಕೆನೆಪದರ ಎಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುರೆದಿರುವ ವರ್ಗ ಎಂದರ್ಥ. ನೆನಪಿಡಿ ಜಾತಿಯಲ್ಲ, ವರ್ಗ. ಅಂದರೆ ಮೀಸಲಾತಿ ಪಡೆಯುತ್ತಿರುವ ಜಾತಿಯೊಳಗೆ ಮುಂದುವರೆದಿರುವ ವರ್ಗ. ಈ ವರ್ಗಕ್ಕೆ ಮೀಸಲಾತಿಯನ್ನು ನಿರಾಕರಿಸುವುದೇ ಕೆನೆಪದರ. ಇದನ್ನು ಹೇಗೆ ಜಾರಿಗೊಳಿಸಲಾಗುತ್ತದೆ? ಆರ್ಥಿಕ ಮಿತಿ ಹೇರುವ ಮೂಲಕ ಜಾರಿಗೊಳಿಸಲಾಗುತ್ತದೆ. ಉದಾಹರಣೆಗೆ, SC/ST ಮೀಸಲಾತಿಗೆ ಒಂದು ಕೋಟಿ ಆರ್ಥಿಕ ಮಿತಿ ʼಕೆನೆಪದರ ನಿಯಮʼ ಮಾಡಿದರೆ, ಒಂದು ಕೋಟಿ ಆದಾಯವಿರುವ ಕುಟುಂಬವು ಮೀಸಲಾತಿಯಿಂದ ಹೊರಗುಳಿಯುತ್ತದೆ. ಇದು ಮೇಲ್ನೋಟಕ್ಕೆ ಸರಿ ಎನಿಸುತ್ತದೆಯೇ ಹೊರತು, ಸಾಮಾಜಿಕ ನ್ಯಾಯವನ್ನಾಗಲೀ, ಮೀಸಲಾತಿ ನೀತಿಯ ತತ್ವವನ್ನಾಗಲೀ ಎತ್ತಿಹಿಡಿಯುವುದಿಲ್ಲ. ಕೆನೆಪದರವು ದಲಿತರನ್ನು ಮತ್ತಷ್ಟು ಮೀಸಲಾತಿ ವಂಚಿತರನ್ನಾಗಿ ಮಾಡುತ್ತದೆ. ಏಕೆಂದರೆ ಮೀಸಲಾತಿ ಒದಗಿಸಿರುವುದು ಕೇವಲ ಆರ್ಥಿಕ ಮಾನದಂಡದಲ್ಲಿ ಅಲ್ಲ, ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ. ಹಾಗಾಗಿ ದಲಿತರಿಗೆ ಒಂದು ಕೋಟಿ ಕೆನೆಪದರ ವಿಧಿಸಿ, ಮೇಲ್ಜಾತಿಗಳಿಗೆ 8 ಲಕ್ಷ ವಿಧಿಸಿದರೆ ಅದರ ಅರ್ಥ ಒಂದು ಕೋಟಿ ಆದಾಯವಿರುವ ದಲಿತರು ಎಂಟು ಲಕ್ಷ ಆದಾಯವಿರುವ ಬ್ರಾಹ್ಮಣರಿಗೆ ಸಾಮಾಜಿಕ-ಆರ್ಥಿಕ-ಶೈಕ್ಷಣಿಕವಾಗಿ ಸರಿಸಮಾನ ಎಂದಾಗುತ್ತದೆ! ಇದು ಸತ್ಯವೇ.. ನ್ಯಾಯವೇ? ಅಲ್ಲವೇ ಅಲ್ಲ. ಆರ್ಥಿಕ ಸಮಾನತೆಯು, ಸಾಮಾಜಿಕ ಸಮಾನತೆಯನ್ನು ನಿರ್ಧರಿಸುವುದಿಲ್ಲ.
ಇಲ್ಲಿ ಗಮನಿಸಬೇಕಾದ ವಿಚಾರವಿದೆ. ದಲಿತರಿಗೇನಾದರು ಕೆನೆಪದರ ವಿಧಿಸಿದರೆ ಮತ್ತೊಮ್ಮೆ ಐತಿಹಾಸಿಕ ಅನ್ಯಾಯವಾಗುತ್ತದೆ. ಏಕೆಂದರೆ, ನಮ್ಮ ರಾಜ್ಯ, ದೇಶದಲ್ಲಿ ಈಗಾಗಲೇ ಲಕ್ಷ-ಕೋಟಿಯಷ್ಟು ಬ್ಯಾಕ್ ಲಾಗ್ ಹುದ್ದೆಗಳಿವೆ. ಈ ಬ್ಯಾಕ್ ಲಾಗ್ ಹುದ್ದೆಗಳೆಂದರೆ ಏನು? ಇದನ್ನ ಹೀಗೆ ಅರ್ಥ ಮಾಡಿಕೊಳ್ಳುವ, ಸರ್ಕಾರ 100 ಉದ್ಯೋಗಗಳಿಗೆ ಅರ್ಜಿ ಕರೆದಿದೆ. ಅದರಲ್ಲಿ 18 ದಲಿತರಿಗೆ ಮೀಸಲು. ದಲಿತರ ಈ 18 ಉದ್ಯೋಗಗಳಿಗೆ ಅರ್ಹರಾದ 10 ಅಭ್ಯರ್ಥಿಗಳು ಮಾತ್ರವಿದ್ದು, ಇನ್ನುಳಿದ 8 ಉದ್ಯೋಗಗಳನ್ನು ಮುಂದೆ ಭರ್ತಿ ಮಾಡಿಕೊಳ್ಳಲು ಬ್ಯಾಕ್ ಲಾಗ್ ಮಾಡಿ ಇಡಲಾಗುತ್ತದೆ. ಹೀಗೆ ದಲಿತರಲ್ಲಿ ಉದ್ಯೋಗ ಪಡೆಯಲು ಅರ್ಹರೇ ಇಲ್ಲದಿರುವ ಸಂದರ್ಭದಲ್ಲಿ ಬ್ಯಾಕ್ ಲಾಗ್ ಮಾಡಿ, ಮುಂದೆ ಅದನ್ನೂ ತುಂಬದೆ, ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಆ ಉದ್ಯೋಗವನ್ನೆ ಮಾಯ ಮಾಡಲಾಗುತ್ತದೆ. ಈಗಾಗಿರುವುದೂ ಅದೇ. ಇದು ಅನ್ಯಾಯ ಮಾತ್ರವಲ್ಲ, ಆಘಾತ! ಹಾಗಾಗಿ ದಲಿತರಲ್ಲಿ ಅರ್ಹ ಅಭ್ಯರ್ಥಿಗಳು ಅಂದರೆ ಸಂಪೂರ್ಣ ಪ್ರಾತಿನಿಧ್ಯ ದೊರಕಬೇಕೆಂದರೆ ಒಂದು ಕೋಟಿ ಆದಾಯವಿರುವ ದಲಿತರಿಗೂ ಮೀಸಲಾತಿ ಬೇಕು. ಇದೇ ನ್ಯಾಯ. ಮೀಸಲಾತಿ ನೀತಿಯಲ್ಲಿ ಪ್ರಾತಿನಿಧ್ಯ ನೀತಿ ಮುಖ್ಯ. 18% ಗೆ 18% ಭರ್ತಿ ಆಗಬೇಕಷ್ಟೇ.
ಹಾಗಾದರೆ, ದಲಿತರಲ್ಲಿನ ಬಡವರ ಮೀಸಲಾತಿಯನ್ನು ದಲಿತರೊಳಗಿನ ಶ್ರೀಮಂತರು ಕಬಳಿಸುವುದಿಲ್ಲವೇ? ಈ ಪ್ರಶ್ನೆ ಮೂಡಲು ಮುಖ್ಯ ಕಾರಣ ಮೀಸಲಾತಿ ಜಾರಿ ನೀತಿ ಕುರಿತು ಇರುವ ತಿಳಿವಳಿಕೆಯ ಕೊರತೆ ಆಗಿದೆ. ಅದ್ಯಾವುದೇ ಜಾತಿಗೆ ಆಗಲಿ, ಮೀಸಲಾತಿ ಪಡೆಯಬೇಕೆಂದರೆ ಜಾತಿ ಪ್ರಮಾಣ ಪತ್ರದೊಂದಿಗೆ ಆದಾಯ ಪ್ರಮಾಣ ಪತ್ರ ನೀಡಲೇಬೇಕು. ಶೈಕ್ಷಣಿಕವಾಗಿ ಪಡೆಯಬಹುದಾದ ಸೌಲಭ್ಯಗಳಿಗೆ ಆರ್ಥಿಕ ಮಿತಿಯನ್ನು ಹೇರಲಾಗಿದೆ. ಉದಾಹರಣೆಗೆ, 10 ಲಕ್ಷ ವಾರ್ಷಿಕ ಆದಾಯ ಮೀರಿದ ಕುಟುಂಬದ ದಲಿತ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವುದಿಲ್ಲ. ಇದೇ ಮಾನದಂಡವನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಲವು ಸೌಲಭ್ಯಗಳಿಗೆ ಅನ್ವಯಿಸಲಾಗಿದೆ. ದಲಿತರೊಳಗಿನ ಅತಿ ಬಡವರಿಗೆ ಮಾತ್ರ ಈ ಸೌಲಭ್ಯಗಳ ಫಲಾನುಭವಿಗಳಾಗಲು ಅವಕಾಶವಿದೆ.
ಮತ್ತೊಂದು ಗಂಭೀರ ವಿಚಾರವಿದೆ. ಅದೇನೆಂದರೆ, ದಲಿತರೊಳಗಿನ ಬಡವರು ಹಾಗೂ ಶ್ರೀಮಂತರ ನಡುವಿನ ಸ್ಪರ್ಧೆಯಲ್ಲಿ ತಮಗಿರುವ ಆರ್ಥಿಕ ಅನುಕೂಲದ ಕಾರಣಕ್ಕೆ ಶ್ರೀಮಂತ ದಲಿತರು ಬಡ ದಲಿತರನ್ನು ಹಿಂದಿಕ್ಕಿ ಸೌಲಭ್ಯ ಪಡೆದುಕೊಳ್ಳುವುದು ಸಾಮಾಜಿಕ ನ್ಯಾಯವೇ? ಇಲ್ಲ, ಇದು ನ್ಯಾಯವಲ್ಲ. ಈಗ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಈ ರೀತಿಯ ನಿಯಮವಿದೆ. ಆದರೆ ಇದು ಬದಲಾಗಬೇಕು. ಹೇಗೆ ಬದಲಾಗಬೇಕು? ಅದನ್ನು ಸಹ ಒಂದು ಉದಾಹರಣೆ ಮೂಲಕ ನೋಡೋಣ.
ಒಂದು ಸರ್ಕಾರಿ ಸಂಸ್ಥೆಯಲ್ಲಿ 5 ಉದ್ಯೋಗಗಳು ದಲಿತರಿಗೆ ಮೀಸಲಿವೆ. ಅದಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಜೊತೆಗೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಅದು ಹೇಗೆಂದರೆ, ಐವರಲ್ಲಿ ಅತಿ ಕಡಿಮೆ ವಾರ್ಷಿಕ ಆದಾಯವಿರುವ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಬೇಕು. ಹೀಗೆ ನಂತರದಲ್ಲಿ ವಾರ್ಷಿಕ ಆದಾಯದ ಏರಿಕೆ ಕ್ರಮದ ಆಧಾರದಲ್ಲಿ ಉದ್ಯೋಗ ನೀಡಬೇಕು. ಹೀಗೆ ಪರಿಗಣಿಸುವಾಗ ಗಳಿಸಿದ ಅಂಕ ಮತ್ತು ಕುಟುಂಬದ ಆದಾಯಕ್ಕೆ ಸಮಾನ ಪ್ರಾಶಸ್ತ್ಯ (50:50) ನೀಡಿ ಸೂತ್ರೀಕರಿಸಿ ನ್ಯಾಯ ಕಾಪಾಡಬಹುದು. ಈ ಪದ್ಧತಿಯನ್ನು ʼಆದ್ಯತಾ ನೀತಿʼ ಎಂದು ಕರೆಯಬಹುದು. ಹೀಗಾದಾಗ ದಲಿತರೊಳಗೆ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೊದಲ ಆದ್ಯತೆ ದೊರಕುತ್ತದೆ. ಪ್ರಾತಿನಿಧ್ಯ ಸಂಪೂರ್ಣವಾಗದಿದ್ದಾಗ ಅದನ್ನು ದಲಿತರೊಳಗಿನ ಆರ್ಥಿಕ-ಶೈಕ್ಷಣಿಕವಾಗಿ ಮುಂದುವರೆದಿರುವವರನ್ನು ಪರಿಗಣಿಸಿ ಸರಿದೂಗಿಸಬಹುದಾಗಿದೆ.
ಕೊನೆಯದಾಗಿ, ದಲಿತರ ಉದ್ಯೋಗಗಳು ಅರ್ಹ ಅಭ್ಯರ್ಥಿ ಇಲ್ಲವೆಂದು ಬ್ಯಾಕ್ ಲಾಗ್ ಆಗಿ ಮಾಯವಾಗುವ ಬದಲು, ʼಆದ್ಯತಾ ನೀತಿʼ ಯನ್ನು ಅನುಸರಿಸಬಹುದು. ಆದರೆ ಯಾವುದೇ ಕಾರಣಕ್ಕೂ ಕೆನೆಪದರ ನೀತಿ ಹೇರಿ, ಅರ್ಹ ಅಭ್ಯರ್ಥಿಗಳಿಲ್ಲವೆಂದು, ಸಂಪೂರ್ಣ ಪ್ರಾತಿನಿಧ್ಯ ನೀಡುವುದರಿಂದ ದಲಿತರನ್ನು ವಂಚಿಸುವುದು ಬೇಡವೇ ಬೇಡ. ಕೆನೆಪದರ ನೀತಿ ದಲಿತರಿಗೆ ಮಾರಕ!
ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ
ಇದನ್ನೂ ಓದಿ- http://ಒಳಮೀಸಲು : ಸಮಬಾಳು -ಸಮಪಾಲಿಗೆ ತೆರೆದ ಬಾಗಿಲು! https://kannadaplanet.com/internal-reservation/