ಅಪ್ಪನ ಜಾಲ- ಭಾಗ 3

Most read

(ಮುಂದುವರೆದುದು…)

ಸಂಜೆಗೆ ಸಾಗರದಿಂದ ಅಪ್ಪ ಬರುವಾಗ ಯಜಮಾನಜ್ಜಂಗೆ ಹೇಳಿ ಕೇಪು, ಗುಂಡು, ಮಸಿ ಬೇಕು, ಗದ್ದೆಗೆಲ್ಲ ಹಂದಿ ಬರಾಕೆ ಹಿಡ್ದಾವೆ ಎಂದು ತಗೋಂಡು ಬಂದನು. ಮನೆಗೆ ಬರೋ ಅಷ್ಟೊತ್ತಿಗೆ, ಏಳ್ ಎಕರೆ ಪ್ಲಾಂಟೇಷನ್ನಿನ ಬೀಟೆ ಮರದ ಹತ್ರ ಹಂದಿ ಇರಬೇಕು, ಕುನ್ನಿ ಹಿಂಡು ಮಧ್ಯಾಹ್ನದಿಂದ ಕೂಗ್ತ ಇದಾವೆ. ಏನ್ ಇವತ್ತು ರಾತ್ರಿ ಹಂದಿ ಹಿಂಡು ಗದ್ದೆ ಉಳಿಸೋದಿಲ್ಲೇನೋ. ಹೊಡೆಯೋ ಗಂಡಸರು ಮನೆಯಲ್ಲಿ ಯಾರಿದಾರೆ. ಎಲ್ಲಾ ನರಸತ್ತವರೇ ಇದಾರೆ ಎಂದು ಜಟ್ಟಜ್ಜ ವಟವಟ ಅಂದ. ಕೋವಿ ಲೈಸೆನ್ಸ್ ಅವನ ಹೆಸರಿಗಿದ್ರು, ಒಂದು ದಿನವೂ ಒಂದು ಈಡು ಹೊಡೆದವನಲ್ಲ. ಆದರೆ ಯಾರಾದ್ರು ಈಡು ಹೊಡ್ದು, ಬೀಳ್ದೆ ಹೋದ್ರೆ ಅವರನ್ನು ಹಂಗಿಸೋದು, ಇಲ್ಲದ ಉಪದೇಶ ಕೊಡೋದು, ಬಾಯಿಯಲ್ಲಿ ತನ್ನ ಸಾಹಸಗಳನ್ನು ಹೇಳೋದು ಮಾತ್ರ ಉತ್ತರಕುಮಾರನಂಗೆ. ಕೋವಿ ಮಾತ್ರ ಅಪ್ಪ ಹೇಳಿದ ಹಾಗೆ ಕೇಳ್ತಿತ್ತು. ಇಟ್ಟ ಗುರಿ ತಪ್ಪಿದ್ದು ನನಗಂತು ಗೊತ್ತಿಲ್ಲ. ಹಂದಿ ಬೀಟೆ ಮರದ ಹತ್ರ ಇರೋ ಸುದ್ದಿ ಬಂದಿದ್ದೇ ತಡ, ಅಪ್ಪ ಒಳಗಿನ ಕೋಣೆಯ ಬೆಸಲು ಮೇಲೆ ಕಟ್ಟಿದ್ದ ಕೋವಿ ತಂದು, ಅದನ್ನು ವರೆಸಿ, ಸಣ್ಣ ರಿಪೇರಿ ಮಾಡಿದ. ಕೋವಿಯೊಳಗೆ ಯಾವಾಗ್ಲೋ ತುಂಬಿಟ್ಟ ಮಸಿ ತೆಗೆಯಲು ಬಾರದೇ ಇದ್ದುದ್ದರಿಂದ, ಅದನ್ನು ಸೂಜಿಯಲ್ಲಿ ಚುಚ್ಚಿ ಚುಚ್ಚಿ ಕ್ಲೀನ್ ಮಾಡಿದ. ಮತ್ತೆ ಮಸಿ ಹಾಕಿ, ಸಣ್ಣ ಈಡು ಮಾಡಿದ. ಪರೀಕ್ಷಾರ್ಥವಾಗಿ ಮನೆಮುಂದಿರೋ ಅಮ್ಟೆ ಮರಕ್ಕೆ ಮರಿ ಈಡು ಹೊಡೆದು ಕೋವಿ ಸರಿಮಾಡಿದ.  ಆದರೂ ಸರಿಯಾಗಿ ಕೂರದೆ ಇರೋ ಕುದರೆ ಸರಿ ಮಾಡಿ, ಕೇಪು, ಕತ್ತ, ಚರೆ, ಗುಂಡು, ಬ್ಯಾಟೆ ಕತ್ತಿ ಎಲ್ಲವನು ತೊಸಿಕಾನಿಗೆ ಹಾಕಿ ರಾತ್ರಿಯಾಗುವುದನ್ನೇ ಕಾದನು.  

ಸಣ್ಣವಳ್ಳೆ ಬತ್ತ ಗದ್ದೆಯಲ್ಲಿ ಹಾಸಿ ಬಿದ್ದಿತ್ತು. ಬದುವೇ ಕಾಣದ ರೀತಿ ಗದ್ದೆಯ ಇಡೀ ಕೋವು ಒಂದೇ ಸಮವಾಗಿತ್ತು. ದಪ್ಪವಾದ, ಉದ್ದನೆಯ ಕಾಳಿನ ಈ ಸಣ್ಣವಳ್ಳೆ ಭತ್ತ ನಮ್ಮ ಮನೆಯ ಅನ್ನದೇವತೆ. ಬ್ಯಾಣದಲ್ಲಿ ಶೇಂಗ ಬೆಳೆದು ನಿಂತಿತ್ತು, ತಿಂಗಳು ಪುಸ್ತಕ ಓದಿಗೆ ಅನುಕೂಲವಿತ್ತು. ಅಂಗಳದಲ್ಲಿ ಶಾಲೆಗೆ ಹೋಗೋ ಮಕ್ಕಳು ಸ್ಲೇಟು ಹಿಡ್ಕಂಡು ಕೂತಿದ್ದವು. ಕೆರೆಬದಿಯಲ್ಲಿರುವ ದೊಡ್ಡಗದ್ದೆ ತುದಿಯಲ್ಲಿ ಜೆಟ್ಟಜ್ಜ ಹಕ್ಕೆ ಮನೆ ಇತ್ತು. ರಾತ್ರಿಯೆಲ್ಲ ಗದ್ದೆ ಕಾಯೋದು ಈತನಿಗೆ ಎಲ್ಲಿಲ್ಲದೆ ಭಯ. ಹಂಗಾಗಿ ತನ್ನ ಹಕ್ಕೆಮನೆಯನ್ನು ಉಪ್ಪರಿಗೆ ಮನೆಯಾಗಿಸಿಕೊಂಡಿದ್ದ. ಅದಕ್ಕೆ ಹತ್ತಲು ಬಿದಿರಿನ ಒಂಟಿಕಾಲಿನ ಏಣಿ. ಮಹಡಿಯಲ್ಲೂ ಉರಿ ಹಾಕಲು ಅನುಕೂಲ. ಕಾಡುಪ್ರಾಣಿಗಳನ್ನು ಬೆದರಿಸಲು ಬಿದರಿನ ಪೆಟ್ಲ ಜೊತೆಯಲ್ಲಿರುತ್ತಿತ್ತು. ಬೀರಯ್ಯನದು ಮನೆಯಿಂದ ಸ್ವಲ್ಪ ದೂರದಲ್ಲಿತ್ತು. ಎಲ್ಲರೂ ಹಕ್ಕೆ ಮನೆಗೆ ಹೊಂಟಾಗ ಇವನು ಹೊರಡುತ್ತಿದ್ದ. ಆದರೆ ಎಲ್ಲರ ಸದ್ದಡಗಿದ ಮೇಲೆ, ನಿಧಾನವಾಗಿ ಮನೆಗೆ ಬಂದು ಮಲಗುತ್ತಿದ್ದ ಎಂದು ಯಜಮಾನಜ್ಜ ಆವಾಗೀವಾಗ ಬೈಯುತ್ತಿದ್ದನ್ನು ಕೇಳಿದ್ದೆ. ಆದ್ರೆ ಅಪ್ಪ ಗದ್ದೆ ತುದಿಗೆ, ಕಾಡಂಚಿನಲ್ಲಿ ಹಕ್ಕೆ ಮನೆ ಕಟ್ಟಿದ್ದ. ಇವನದು ಉಪ್ಪರಿಗೆಯ ಹಕ್ಕೆಮನೆಯಲ್ಲ, ಅದು ನೆಲಹಾಸುಗೆ. ಮೊದಲು ಮಕ್ಕಿಗದ್ದೆಯಲ್ಲಿ ಹೊನ್ನೆಮರದ ಹತ್ರ ಇತ್ತು. ಶೇಂಗ ಬಂದಮೇಲೆ ಕಾಡಂಚಿನ ಹಕ್ಲಿಗೆ ದಾಟಿತ್ತು. ಅಲ್ಲಿಯೇ ಇವನ ರಾತ್ರಿ ಬಿಡಾರ ಖಾಯಂ ಆಗಿತ್ತು. ಅವತ್ತು ಅಪ್ಪನಿಗೆ ಎಲ್ಲಿಲ್ಲದ ಧೈರ‍್ಯವಿತ್ತು. ಯಾಕೆಂದರೆ ತೊಸಿಕಾನಿಯಲ್ಲಿ ಗುಂಡು, ಮಸಿ, ಕೇಪು ಎಲ್ಲಾ ಇರ‍್ತ ಇತ್ತು. ಇವತ್ತು ಹಂದಿ ಬಂದೆ ಬರ‍್ತವೆ ಅನ್ನೋದು ಅವನ ಮನಸಿನ ಮೂಲೆಯಲ್ಲಿ ನಿಂತಿತ್ತು.

ಅಪ್ಪನ ಜಾಲ ಭಾಗ-1 ಓದಿದ್ದೀರಾ?- ಅಪ್ಪನ ಜಾಲ | ಭಾಗ 1

ಅಂತೆಯೇ ನಡುರಾತ್ರಿ ಸುಮಾರಿಗೆ ಹಂದಿ ಹಿಂಡು ದಾಂಗುಡಿ ಇಟ್ಟವು. ಮರಿಹಂದಿಯಿಂದ ಹಿಡ್ದು, ತಾಯಿಹಂದಿವರೆಗೆ ಒಂದೊಂದೆ ಒಂದೊಂದೆ ಕಳ್ಳಿ ಬೇಲಿಯ ಸಂದಿಯಲ್ಲಿ ದಾರಿ ಮಾಡಿಕೊಂಡು ನುಗ್ಗಿದವು. ಅಪ್ಪನಿಗೆ ಯಾವುದನ್ನು ಹೊಡೆಯಬೇಕು, ಯಾವುದನ್ನು ಬಿಡಬೇಕು ಅನ್ನೋ ಜಿಜ್ಞಾಸೆ ಸುರುವಾತು. ಪಾಪ ಮರಿಗಳಿದಾವೆ, ಅದರ ತಾಯಿ ಯಾವುದೋ, ಏನೋ, ಅನ್ನೋ ಯೋಚನೆಯಲ್ಲಿ ಮುಳುಗಿದ. ಅಪ್ಪನಿಗೆ ಹಂದಿಗಳ ಸಂಸಾರದ ಸ್ಥಿತಿಯನ್ನು ತಲೆಗೆ ಹಾಕಿಕೊಂಡು, ಅಪ್ಪನಿಲ್ಲದ ಅನಾಥನಾದ ತನ್ನನ್ನು ಹೋಲಿಸಿಕೊಂಡು ಯೋಚಿಸಿದ. ಅಪ್ಪ ಅಮ್ಮನನ್ನು ಕಳೆದುಕೊಂಡ ಈ ಮರಿಗಳು ಹೇಗೆ ಬದುಕಿಯಾವು? ಆಕಾಶದ ಚಂದಿರ ತನ್ನನ್ನೇ ದಿಟ್ಟಿಸಿ, ಒಮ್ಮೆ ಮನಸ್ಸು ಪರಿವರ್ತಿಸಿಕೊಳ್ಳುವಂತೆ ಹೇಳಿದ ಹಾಗೆ ಅನ್ನಿಸಿತ್ತು. ಅಷ್ಟೊತ್ತಿಗೆ ಶೇಂಗ ಹಕ್ಲಿಗೆ ನುಗ್ಗಿದ ಅವುಗಳು ಇದನ್ನು ಮುಗಿಸಿ, ಇನ್ನೇನು ಗದ್ದೆಗೆ ಹೊರಡಲು ಮುಖಮಾಡಿದವು. ಹೀಗಿರುವಾಗ ಇನ್ನೊಂದು ಒಂಟಿ ಸಲಗ, ಹೊಟೀಲೆಂದು ಬೇಲಿ ನುಗ್ಗಿ ಬಂತು. ತಾಯ್ತನದ ಹುತ್ತ ಕಟ್ಟಿಕೊಂಡಿದ್ದ ಅಪ್ಪನಿಗೆ ಮರಿಹಂದಿಯ ಬೇಟೆಯಿಂದ ದೂರ ಉಳಿಯಲು ಇದೊಂದು ಸುವರ್ಣ ಅವಕಾಶದಂತಾಯಿತು. ಹಕ್ಕೆ ಮನೆಯಿಂದ ನಿಧಾನವಾಗಿ ತೆವಳಿ ತೆವಳಿ ಮುಂದೆ ಸಾಗಿದ, ಯುದ್ಧದಲ್ಲಿ ಉನ್ಮತ್ತರಾದ ಸೈನಿಕರಂತೆ. ಹಂದಿಗಳು ಬೇಟೆಗಾರನ ವಂಚನೆಯ ಸುಳಿವಿನ ಪರಿವೆಯೇ ಇಲ್ಲದೇ ಬಕಾಸುರನಂತೆ ಅರ್ಭಟಿಸುತ್ತಿದ್ದವು. ಇಷ್ಟು ಹಂದಿ ನುಗ್ಗಿದರೂ, ಶೇಂಗ ಖಾಲಿಮಾಡಿದರೂ ಹಂದಿ ಹೊಡೆಯದಿದ್ದರೆ, ನಾಳೆ ಈ ಯಜಮಾನ ಮುದುಕ ನನ್ನನ್ನು ಸುಮ್ಮನೇ ಉಳಿಸೋಲ್ಲ. ಅನ್ನ ನೀರು ಕೊಡದೆ ಹೊರಗೆ ಹಾಕ್ತಾನೆ. ಅಷ್ಟಕ್ಕೂ ಅವಂಗೆ ಹಂದಿ ತುಂಡು ಅಂದ್ರೆ ಪ್ರಾಣ ಸಮಾನ. ನನಗೂ ಬಾಯಿ ಕೆಟ್ಟು ಹೋಗೈತೆ. ನಿನ್ನೆ ಹೊಡೆತ ತಿಂದು, ನನ್ನಿಂದ ದೂರವಿದ್ದ, ನಮ್ಮನೇ ಹೆಂಗಸಿಗೂ ನನ್ನ ಸಾಹಸದಿಂದ ಖುಷಿ ಆಗಬಹುದು. ಈ ತಿಂಗಳ ಬೆಳಕು, ನಾನು ಇಷ್ಟೊಂದು ಬೆಳಕು ನೀಡಿದ್ರೂ, ನಿನ್ನಂತವನಿಗೆ ಒಂದು ಬ್ಯಾಟೆ ಮಾಡ್ಲಿಕ್ಕೆ ಸಾಧ್ಯವಾಗಿಲ್ಲ ಅಂದಮೇಲೆ ನೀನೆಂತ ಬೇಟೆಗಾರ ಅಂತ ಹಿಯಾಳಿಸಲೂಬಹುದು…. ಹೀಗೆ ಏನೇನೋ ಯೋಚನೆ ಸುಳಿಸುಳಿದಾಡಿತು. ಅವೆಲ್ಲಾ ಅಪ್ಪನ ಮನದೊಳಗೆ ಹೊಕ್ಕು ಹಾದು ಹೆದ್ದಾರಿ ನಿರ್ಮಿಸಿದವು. ಎರಡೆರೆಡು ಹೆಜ್ಜೆಯಷ್ಟು ತೆವಳಿ ಸಾಗಿದ ಅಪ್ಪ, ಅತ್ತ ನುಗ್ಗಿ ನುಗ್ಗಿ ಶೇಂಗ ಹೊಲವನ್ನು ಆಪೋಶನ ಮಾಡುವ ಮರಿ ಹಂದಿಹಿಂಡು. 

ಒಂಟಿ ಹಂದಿ ಯಾವಾಗಲೂ ಗಂಡೇ ಆಗಿರುತ್ತದೆಂಬುದು ಅವನು ಕಂಡುಕೊಂಡ ಸಹಜ ಸತ್ಯ. ತನ್ನ ಇಡೀ ದೇಹವನ್ನು ನೆಲಕ್ಕಪ್ಪಳಿಸಿ ಮಲಗಿದ ಅಪ್ಪ, ಎದೆಗೆ ಕೋವಿಯನ್ನು ಆನಿಸಿ, ಅದೆಷ್ಟೋ ಬೇಟೆಯಾಡಿದ ಅನುಭವದಲ್ಲಿ ಗುರಿಯಿಟ್ಟು ಕುದುರೆ ಒತ್ತಿದ.  ಚರ‍್ರೋ ವರ್ರೋ ಎಂದು ನಾಲ್ಕು ಪಲ್ಟಿ ಹೊಡೆದು, ಬಂದ ದಾರಿ ತಪ್ಪಿ, ಇನ್ನೊಂದು ದಾರಿಯಲ್ಲಿ ಬೇಲಿಯನ್ನು ನುಗ್ಗಿ ದಾಟಿ ಹೋಯಿತು. ಈಗಾಗಲೇ ಬಂದ ಹಂದಿ ಮರಿಗಳೆಲ್ಲ ಸತ್ನೋ ಬಿದ್ನೋ ಅಂತ ಗದ್ದೆಯನೆಲ್ಲ ಒಂದು ಮಾಡಿ, ದಿಕ್ಕು ದೆಸೆಯಿಲ್ಲದೇ ಓಡಿಹೋದವು. ಅಷ್ಟೊತ್ತಿಗೆ ಗುಂಡಿನ ದನಿಗೆ ತಿಪ್ಪಯ್ಯ, ಜೆಟ್ಟಜ್ಜ ಓಡಿಬಂದು, ಏನಾಯ್ತೋ. ಬಿತ್ತನೋ, ಎಲ್ಲೋ, ಓಡಿಹೋತನೋ, ಯಂತಾ ಹೊಡ್ತಾ ಹೊಡೆದೋ ಹಿಂಗೆ ಅನೇಕ ಪ್ರಶ್ನೆಗಳು ತೂರಿ ಬಿಟ್ಟರು. ಬೆಂಕಿ ಮುಂಡನ್ನು ಹಿಡಿದು, ಜೆಟ್ಟಜ್ಜ ನಿಧಾನವಾಗಿ, ಹೊಡೆದ ಜಾಗ ಪೊಲೀಸ್ ಸಿಬ್ಬಂದಿಯಂತೆ ಹುಡುಕಿದ. ರಕ್ತದ ಕೋಡಿ ಬಿದ್ದಿತ್ತು. ಆ ನಡುರಾತ್ರಿಯಲ್ಲಿ ಮನೆಯಲ್ಲಿದ್ದ ಯಜಮಾನ ಅಜ್ಜನೂ ಬಂದು, ಯಂಥಾ ಮರಾಯ ಏನಾದ್ರೂ ಹಾಳು ಹೊಟ್ಟಗೇನಾದರೂ ಹೊಡ್ದೆನಾ? ಹೋತು ತಗಾ. ನಾಳೆಗೀಳೆ ಎಲ್ಲಿ ಸಾಯ್ತದೆ ಏನೋ..ಬಿಡು. ಜಂಬೆ ಪುಟದ ಕಡೆಯಿಂದ ಹೆಡತ್ರಿ ಗುಡ್ಡ, ದಂಬರಗದ್ದೆ ಕಡೆಗೆ ಹೋದ್ರೆ ನಿನಗೆಂತ ಸಾಟ ಸಿಗ್ತೈತೆ? ಹಿಂಗೆ ಅವರವರು ತಮ್ಮಗನ್ನಿಸಿದ್ದನ್ನು ಕಕ್ಕಿದರು. ಅಪ್ಪನಿಗೆ ಇವರ‍್ಯಾರ ಮಾತಿನ ಮೇಲೆ ವಿಶ್ವಾಸ ಬರಲಿಲ್ಲ. ಬೆಳಿಗ್ಗೆ ಸೊಗೇದರಿಗೆ, ಗೇರಸರಿಯರಿಗೆ, ಉಂಡುಗೋಡರಿಗೆ ಕರೆದು, ಇಸ್ಕೂಲ ಮನೆ ಪಟ್ಟೆ ನೋಡಿದರೆ ಸಾಕು. ಎಲ್ಲೂ ಹೋಗಿಲ್ಲ ಬಿಡ್ರಾ ಎಂದ. 

ಅಪ್ಪನ ಜಾಲ ಭಾಗ 2 ಓದಿದ್ದೀರಾ? ಅಪ್ಪನ ಜಾಲ- ಭಾಗ 2

 ಅಪ್ಪ ಅದೇ ದಿನದ ಬೆಳಗಿನ ಜಾವದ ತಿಂಗಳ ಬೆಳಕಿನಲ್ಲಿ ಉಂಡುಗೋಡಿಗೆ ಹಂದಿ ಹೊಡೆದ ವಿಷಯ ಹೇಳಲು ಹೋದನು. ಇತ್ತ ತಿಪ್ಪಯ್ಯ, ಬೀರಯ್ಯ ಸೊಗೇದು ಮತ್ತು ಗೇರಸರಿಯರಿಗೆ ವಿಷಯ ತಲುಪಿಸಿ, ಬೆಳಿಗ್ಗೆ ಮುಂಚೆ ಶಿಕಾರಿ ಹೊಗ್ಗಲು ಅನುವಾದರು. ಅಪ್ಪ ಉಂಡುಗೋಡಿಗೆ ಬಂದಾಗ, ಅಪ್ಪನ ರಾತ್ರಿ ಮಾಡಿದ ಬ್ಯಾಟೆಯ ಸುದ್ದಿ, ಅವನ ಸಾಹಸ, ಹಂದಿ ಹಿಂಡಿನ ದಾಂದಲೆ, ಇವತ್ತು ನಮ್ಮ ಮನೆಗೆ ತುಕಡಿ ಗ್ಯಾರಂಟಿ ಎಂದೆಲ್ಲ ವರ್ಣಿಸಿದ. ಅಪ್ಪನ ಸಾಹಸದ ಮಾತುಗಳಿಗೆ ಸಾವಂತ್ರಮ್ಮ ಹಿರಿ ಹಿರಿ ಹಿಗ್ಗಿದಳು. ಆಕೆಗೆ ಅಪ್ಪನ ಮೇಲೆ ಸದಾ ಒಂದು ಕಣ್ಣು. ಅವತ್ತು ಬೆಳಿಗಿನ ಜಾವದಲ್ಲಿಯೇ ತನ್ನ ಮನೆಗೆ ಬಂದ ಅಪ್ಪನನ್ನು ನೋಡಿದ ಆಕೆ, ತನ್ನ ಗಂಡನನ್ನು ಎಬ್ಬಿಸದೆ, ಮಾತಿನಲ್ಲಿ ಮುಳುಗಿದ್ದಳು. ಅಪ್ಪನನ್ನು ಕಂಡಾಗ ಆಕೆಯ ಹಿರಿ ಹಿರಿ ನಗುವಿನ ರೀತಿ, ತನ್ನ ಗಂಡನೊಂದಿಗೆ ಒಂದು ದಿನವೂ ಹಾಗಿರಲಿಲ್ಲ ಅನ್ನಬಹುದೇನೋ. ಅಪ್ಪನಿಗೂ ಎಲ್ಲೋ ಒಂದು ಒಳಮನಸ್ಸು ಅವಳ ಮೇಲಿತ್ತು. ಆದರೆ ಅಪ್ಪನಿಗೆ ಒಂದು ಭಯ. ಅದು ತನ್ನ ಸುತ್ತ ಇದ್ದ ಅವಿಭಕ್ತ ಕುಟುಂಬದ ಜಾಲ. ಅಕ್ಕಪಕ್ಕದಲ್ಲೇ ಸಹೋದರಿಯ ಸಂಬಂಧಗಳು. ಆದರೂ ಕೋವಿ ಹೊತ್ತು, ಸೀದಾ ಉಂಡುಗೋಡಿಗೆ ಹೋಗಿ ಅನೇಕ ರಾತ್ರಿಗಳನ್ನು ಕಳೆದದ್ದಿದೆ. 

 ಅಂದು ಬೆಳಗಿನ ಜಾವದಲ್ಲಿ ಅಪ್ಪ ಮತ್ತು ಎಲ್ಲರ ಬಾಯಲ್ಲಿ ಹೊಟ್ಯಪ್ಪನಾಗಿದ್ದ, ಸೊಗೇದ ನಾರಣಭಾವ ಕೋವಿ ಹಿಡ್ದು ಹೋಗಿ ಕಟ್ಟಿಗೆ ನಿಂತರು. ಸೊಗೇದವರು, ಉಂಡುಗೋಡವರು ಶಾಲೆ ಮನೆ ಕಡೆಯಿಂದ ನುಗ್ಗಿದರು. ನಾವೆಲ್ಲ ಹಿಂದಿನ ದಿನ ಅಪ್ಪ ತೆವಳಿ ಹೋಗಿದ್ದ ಜಾಗವನ್ನು, ರಕ್ತದ ಕಲೆಯನ್ನು, ಹಂದಿ ಹಿಂಡಿನ ಹೆಜ್ಜೆ ಜಾಡನ್ನು ಮತ್ತೊಮ್ಮೆ ಮಹಜರು ಮಾಡಿದೆವು. ಅಪ್ಪನ ಗುರಿ ಯಾವಾಗ್ಲೂ ತಪ್ಪುವುದಿಲ್ಲ, ಹೆಂಗಿದ್ರೂ ಇವತ್ತು ಬಾಡಿನ ಊಟ ಗ್ಯಾರಂಟಿ ಎಂದು ಲೆಕ್ಕಚಾರ ಹಾಕಿದೆವು. ಭಯದಲ್ಲಿದ್ದ ನಾವುಗಳೆಲ್ಲ ಅಪ್ಪನ ಹಕ್ಕೆಮನೆ ಮೇಲೆ ಏಣಿ ಹಾಕಿ ಹತ್ತಿ ಕೂತಿದ್ದೆವು. ಸೋವು ನುಗ್ಗಿದ, ತಿಪ್ಪಯ್ಯ ಹೋಯ್….ಹೋ… ಕೂ…. ಕೂ….ಹಿಡ್ಡಿ… ಎಂದು ಕೂಗಿ ಹೋಗುವಾಗಲೇ ಬರ‍್ರೋ ಬರ‍್ರೋ ಎಂದನು. ನಮಗೆ ಅದನ್ನು ಕೇಳಿ, ಹಂದಿ ಇವನ ಮೇಲೆ ನುಗ್ಗಿತೆಂದು ಭಾವಿಸಿ, “ಕೆರೆದಂಡೆ ಬೂತಪ್ಪ, ಕಾಪಾಡಪ್ಪ” ಎಂದೆವು. ಕೋವಿ ಹಿಡಿದ ಅಪ್ಪ ಓಡಿ ಹೋಗಿ, ಏನಾಯ್ತೊ ಎಂದು ನೋಡಿದರೆ, ಹಂದಿ ಚಿರನಿದ್ರೆಯಲ್ಲಿತ್ತು. ನಿನ್ನೆ ಬೈದಾಡ್ತ ಇದ್ದ ಯಜಮಾನಪ್ಪನ ಮಾತು ನಿಂತಿತ್ತು. ನಾಲ್ಕಾಳಿನ ಹಂದಿ ಹೊರಲು ದಪ್ಪನೆಯ ಗಳವನ್ನು ತಿಪ್ಪಯ್ಯ ತಂದಿಟ್ಟನು. ಎಲ್ಲರಿಗೂ ಮನದ ಮೂಸೆಯಲ್ಲಿ ಆನಂದ ತುಂಬಿತುಳುಕಿತ್ತು. ಕಾಡಿನ ಪೊದೆಗಳಲ್ಲಿ ಬೀಡುಬಿಟ್ಟ ಹಂದಿಗಳೆಲ್ಲ ತಮ್ಮೂರು ಬಿಟ್ಟಿದ್ದವು. ಈ ಮಣ್ಣು, ಈ ಕಾಡು, ಈ ಮರಗಿಡಗಳೆಲ್ಲ ತಮ್ಮವೆಂದುಕೊಂಡು ಬದುಕಿದ್ದ ಹಂದಿಗಳೆಲ್ಲ ಬೆಳಗಾಗೊ ಹೊತ್ತಿಗೆ ಅನಾಥವಾಗಿದ್ದವು. ನಾವು ನಮ್ಮದೆಂಬ ಭಾವ ಅವುಗಳಲ್ಲಿ ಮರೀಚಿಕೆಯಾಯಿತು. 

ಅಪ್ಪ ಮತ್ತು ಮಗ

ಅಪ್ಪನಿಗೆ ಕೊನೆಯ ದಿನಗಳಲ್ಲಿ ಪಾರ್ಸಿಯಾಗಿತ್ತು. ಆತನ ತೊದಲು ಮಾತು, ಬಂದವರನ್ನು ಚೆನ್ನಾಗಿದ್ದೀರ ಎಂದು ಮತ್ತೆ ಮತ್ತೆ ಕೇಳುವುದು, ಕಟಬಾಯಿಯಲ್ಲಿ ಇಳಿಯುವ ಜೊಲ್ಲು ಮಾಮೂಲಿಯಾಗಿತ್ತು. ಮಗುವಿನಂತಾದ ಅಪ್ಪ ಕೂತಲ್ಲಿ ಕೂರುತ್ತಿರಲಿಲ್ಲ. ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಅವ್ವನ ಮೇಲೆ ರೇಗುವುದು, ಊಟವಾದರೂ ನಂದು ಊಟ ಆಗಿಲ್ಲ, ಊಟ ಹಾಕು ಅಂತ ಅರೆಕ್ಷಣಕ್ಕೆ ಕೇಳುವುದು ಸಹಜವಾಗಿ ಬಿಟ್ಟಿತು. ಬಚ್ಚಲು ಮನೆಯಲ್ಲಿ ಅಪ್ಪನಿಗೆ ಶೇವಿಂಗ್ ಮಾಡುತ್ತಿದ್ದ ನಾನು ಅಪ್ಪನ ಹಿಂದಿನ ಸಾಮರ್ಥ್ಯಗಳನ್ನೆಲ್ಲ ನೆನೆದು ಕಣ್ಣೀರಾಗಿದ್ದೆ. ನನ್ನ ಕಾಲೇಜು ದಿನದವರೆಗೆ ನನಗೆ ಕ್ಷೌರ ಮಾಡಿದವನು ಅಪ್ಪನೇ. ಯಾವ ಕ್ಷೌರಿಕನಿಗೂ ಕಡಿಮೆಯಿಲ್ಲದ ಅಪ್ಪನ ಕೌಶಲ್ಯ ಮಾಗಲು ಕಾರಣವಾಗಿದ್ದು ನನ್ನ ತಲೆಕೂದಲೇ ಅನ್ನುವುದು ನನಗೆ ಹೆಮ್ಮೆಯ ಸಂಗತಿ. ಬಚ್ಚಲು ಮನೆಯಲ್ಲಿ ನನ್ನ ಅರೆಬರೆ ಕ್ಷೌರದ ಕೆಲಸ ನಡೆಯುತ್ತಿದ್ದಾಗಲೇ ಅಪ್ಪ “ನಾನು ಊರಿಗೆ ಹೋಗ್ಬೇಕು, ನಾನು ಊರಿಗೆ ಹೋಗ್ಬೇಕು.. ಕಳಿಸು” ಎಂದು ಎರಡೆರಡು ಬಾರಿ ಹೇಳಿದ. ಅಪ್ಪ ನೀನು ಯಾವ ಊರಿಗೆ ಹೋಗ್ಬೇಕು? ಸಾಗರಕ್ಕೆ ಹೋಕ್ತೀಯ ಎಂದೆ.? ಇಲ್ಲ, ಇಲ್ಲ ಎಂದ. ನಿನ್ನ ಹಳೆ ಊರು ಜಾಲಕ್ಕೆ ಹೋಗ್ತೀಯ ಎಂದು ಮರು ಪ್ರಶ್ನೆ ಕೇಳಿದೆ. ಹೌದು…ಹೌದು ಎಂದವನೇ ಪುನಃ ಅಲ್ಲಿಗೂ ಅಲ್ಲ ಎಂದು ತನ್ನ ತೊದಲು ಮಾತನಲ್ಲಿ ಮನದಟ್ಟು ಮಾಡಿದ. ಅಪ್ಪನು ತಾನು ತನ್ನ ಮನೆಗೆ ಹೋಗೋ ವಿಚಾರ ಹೇಳಿದನಾದರು, ನನ್ನ ಅರಿವಿಗೆ ಬಾರಲಿಲ್ಲ. ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಅನ್ನೋ ಹಾಗೆ, ಅಪ್ಪ ತನ್ನ ನಿಜಮನೆಯನ್ನು ಹೇಳಿದರೂ ಆ ಕ್ಷಣಕ್ಕೆ ಅರ್ಥವಾಗದ ದಡ್ಡನಾಗಿದ್ದೆ.

ಅಪ್ಪ ಈಗಿಲ್ಲ….ಇದ್ದಾನೆ ಊರು, ಕೇರಿ, ಕಾಡು, ಕೆರೆ, ಶಿಕಾರಿ, ಗದ್ದೆ, ತೋಟ, ಗೌಲು, ಕೋವಿ, ಹರಿದ ಅಂಗಿ, ಚಪ್ಪಲಿ, ಬಾರಾಪೂರ ಪಂಚೆ, ಕೆಂಪನೆ ಲಂಗೋಟಿ, ಪಟಪಟಿ ಚಡ್ಡಿ, ಅವನು ತುಂಬಾ ಪ್ರೀತಿಸುತ್ತಿದ್ದ ಹೆಚ್ ಎಂ.ಟಿ ವಾಚ್……..ಅಪ್ಪನನ್ನು ಇನ್ನೂ ಹುಡುಕುತ್ತಲೇ ಇದ್ದೇನೆ…..

(ಮುಗಿಯಿತು)

ಡಾ. ಅಣ್ಣಪ್ಪ ಮಳೀಮಠ್

ಸಹಾಯಕ ಪ್ರಾಧ್ಯಾಪಕರು

More articles

Latest article