Sunday, September 8, 2024

ನೆನಪು | ಅಪರ್ಣಾರ ಅಕಾಲಿಕ ಅಗಲಿಕೆ: ಕಲಾಲೋಕದ ಶೋಕಗೀತೆ..

Most read

“ನಮ್ಮಂತವರನ್ನು ನೋಡಿ ಅವರೇನು ಬಿಡು ಆರಾಮಾಗಿದ್ದಾರೆ ಅಂತಾ ಅನ್ಕೋತಾರೆ. ಆದರೆ ಎಲ್ಲರ ಬೆನ್ನ ಹಿಂದೆ ಒಂದು ಕಥೆ ಇರುತ್ತೆ, ಒಂದು ಕಷ್ಟ ಇರುತ್ತೆ. ಅ ಎಲ್ಲಾ ಕಷ್ಟಗಳನ್ನ ಎದುರಿಸಿ ನಿಂತು ಅದಿಲ್ಲದ ಹಾಗೆ ನಕ್ಕು ಬದುಕನ್ನು ಸವಾಲಾಗಿ ತೆಗೆದುಕೊಳ್ಳುವುದೇ ಬದುಕು. ನಾನು ನನ್ನ ಬದುಕಿನಲ್ಲಿ ಕಂಡುಕೊಂಡ ಸತ್ಯಗಳಲ್ಲೊಂದು ಜೀವನವೊಂದು ನಿತ್ಯೋತ್ಸವ. ಹಾಡೋದು ಒಂದು ಸಂಭ್ರಮ, ಹೂ ಅರಳೋದೂ ಒಂದು ಸಂಭ್ರಮ. ಅದನ್ನು ನೋಡುವ ದೃಷ್ಟಿ ನಮಗಿರಬೇಕು”

ಇದು ಸಂದರ್ಶನವೊಂದರಲ್ಲಿ ಕಲಾವಿದೆ ಅಪರ್ಣಾ ಹೇಳಿದ ತಮ್ಮ ಜೀವನಾನುಭವದ ತಾತ್ಪರ್ಯ. ಅನೇಕ ಸಂಕಷ್ಟಗಳ ನಡುವೆಯೂ ನಗುತ್ತಾ ಜೀವನವನ್ನು ನಿತ್ಯೋತ್ಸವ ಮಾಡಿಕೊಂಡು ಬದುಕಿದ ಕಲಾವಿದೆ ನಿನ್ನೆ ಜುಲೈ 11 ರಂದು ಅಕಾಲಿಕವಾಗಿ ಅಗಲಿದ್ದಾರೆ. ಇಂದಿಲ್ಲಾ ನಾಳೆ ಕತ್ತಲೆ ಕರಗಿ ಬೆಳಕು ಬರುತ್ತದೆ ಎಂಬ ಭರವಸೆಯಲ್ಲಿ ಕಷ್ಟಗಳನ್ನು ಎದುರಿಸಿ ಬಾಳಬಹುದು, ಆದರೆ ಬದುಕುವುದೇ ಖಾತ್ರಿ ಇಲ್ಲವಾದಾಗ, ಸಾವಿನ ನೆರಳಲ್ಲೂ ವಾಸ್ತವ ಅರಿತು ನಗುನಗುತ ಬದುಕುವುದು ಅಂದುಕೊಂಡಷ್ಟು ಸುಲಭ ಸಾಧ್ಯವಲ್ಲ. ಆದರೆ ಆ ರೀತಿ ಬದುಕಿ ಬಾಳಿ ಹಾಡುವ ಹಾಗೂ ಹೂವರಳುವ ಸಂಭ್ರಮವನ್ನು ಆನಂದಿಸುತ್ತಲೇ ತಮ್ಮ 58ನೇ ವಯಸ್ಸಿಗೆ ಕೊನೆಯುಸಿರೆಳೆದ ಅಪರ್ಣಾ ಜೀವನೋತ್ಸವಕ್ಕೆ ಮಾದರಿಯಾದರು.

ಅಪರ್ಣಾ

ಕ್ಯಾನ್ಸರ್ ಎನ್ನುವ ಖಾಯಿಲೆ ಅಂತಿಮ ಹಂತ ತಲುಪಿದರೆ ಬದುಕಿನ ಅಂತ್ಯ ಎಂಬುದು ಖಾತ್ರಿ. ಅಪರ್ಣಾರವರಿಗಿದ್ದ ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆಯನ್ನು ಗುರುತಿಸಿದ್ದ ಡಾಕ್ಟರ್ ಹೇಳಿದ್ದು ಇನ್ನು ಅವರು ಬದುಕುವುದು ಕೇವಲ ಆರು ತಿಂಗಳು ಮಾತ್ರವೆಂದು. ಆದರೆ ಕಣ್ಮುಂದಿರುವ ಸಾವನ್ನು ಮುಂದೂಡಿ ಎರಡು ವರ್ಷಗಳ ಕಾಲ ಅವರನ್ನು ಜೀವಂತವಾಗಿರಿಸಿದ್ದೇ ಅವರಲ್ಲಿದ್ದ ಅದಮ್ಯ ಆತ್ಮವಿಶ್ವಾಸ. ಕೂದಲುದುರುವಿಕೆ, ದೇಹ ಕೃಶವಾಗುವಿಕೆ, ಆ ನರಕಯಾತನೆಯ ಕೀಮೋಥೆರಪಿ, ಹೃದಯ ಹಿಂಡುವ ನೋವು, ಸರಿಹೋಗಲಾರದೇನೋ ಎನ್ನುವ ಸಂಕಟ.. ಇಂತವುಗಳನ್ನೆಲ್ಲಾ ಅನುಭವಿಸುತ್ತಲೇ ಕೊನೆಯವರೆಗೂ ನಗುತ್ತಲೇ ಬದುಕಿನ ಯಾತ್ರೆ ಮುಗಿಸಿದ ಅಪರ್ಣಾ ಎನ್ನುವ ಪ್ರತಿಭೆಗೆ ಯಾವ ರೀತಿ ಅಂತಿಮ ನಮನಗಳನ್ನು ಹೇಳುವುದು?

ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರಾದ ಅಪರ್ಣಾರವರ ತಂದೆ ಕೆ.ಎಸ್.ನಾರಾಯಣಸ್ವಾಮಿಯವರು ಸಿನೆಮಾ ಪತ್ರಕರ್ತರಾಗಿದ್ದರು. ತಂದೆಯ ನಿಧನದ ನಂತರ ಬೆಂಗಳೂರಿಗೆ ಬಂದು ನೆಲೆಯಾದರು. ಹದಿನೇಳನೇ ವಯಸ್ಸಿಗೆ ರಂಗಭೂಮಿಯತ್ತ ಆಕರ್ಷಿತರಾಗಿ ನಾಟಕದಲ್ಲಿ ಅಭಿನಯಿಸಿದ ಅಪರ್ಣಾ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಕಣ್ಣಿಗೆ ಬಿದ್ದು ಅವರ ‘ಮಸಣದ ಹೂ’ ಸಿನೆಮಾದಲ್ಲಿ (1985) ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಆಗವರಿಗೆ 18 ವರ್ಷ ವಯಸ್ಸು. ಆ ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ.

ಕನ್ನಡ ಭಾಷೆಯ ಮೇಲಿದ್ದ ಪ್ರೌಢಿಮೆ, ಅಸ್ಕಲಿತ ಭಾಷಾ ಪ್ರಯೋಗ, ಸಾಹಿತ್ಯದ ಅರಿವು ಜೊತೆಗೆ ಅಂದ ಚೆಂದ ಹಾಗೂ ಅಭಿನಯ ಪ್ರತಿಭೆ ಇವೆಲ್ಲವೂ ಸೇರಿದ್ದರಿಂದಾಗಿ ಅಪರ್ಣಾರಿಗೆ ಸಾಂಸ್ಕೃತಿಕ ಲೋಕ ಅವಕಾಶಗಳನ್ನು ತೆರೆದಿಟ್ಟಿತು. 1992 ರಲ್ಲಿ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕೆಲಸವೂ ದೊರಕಿ 1993 ರಿಂದ 2010 ರವರೆಗೂ ಆಕಾಶವಾಣಿಯೇ ಅವರ ಕರ್ಮಭೂಮಿಯಾಯ್ತು. ತದನಂತರ ರೇಡಿಯೋ ನಾಟಕಗಳು, ಚಲನಚಿತ್ರಗಳು, ಕಿರುತೆರೆಯ ಧಾರಾವಾಹಿಗಳೆಲ್ಲದರಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಾ ಬಂದರು. ಟಿ.ಎನ್.ಸೀತಾರಾಂರವರ ಮಾಯಾಮೃಗ, ಮುಕ್ತ ಸೀರಿಯಲ್ ನಲ್ಲಿ ಅಭಿನಯಿಸಿದರಾದರೂ ಅವಕಾಶಗಳು ನಿರಂತರವಾಗಿರಲಿಲ್ಲ. 1987 ರಲ್ಲಿ ರವಿಚಂದ್ರನ್ ರವರ ಜೊತೆ ಸಂಗ್ರಾಮ, 1988 ರಲ್ಲಿ ವಿಷ್ಣುವರ್ಧನ್ ರವರ ಜೊತೆಗೆ ನಮ್ಮೂರ ರಾಜ ಹಾಗೂ 1989 ರಲ್ಲಿ ಒಂದಾಗಿ ಬಾಳು ಮತ್ತು ಡಾಕ್ಟರ್ ಕೃಷ್ಣ, ಅಂಬರೀಷ್ ರವರ ಜೊತೆಗೆ ಒಂಟಿ ಸಲಗ, ವಿನೋದ ಆಳ್ವಾರವರ ಜೊತೆ ಸಾಹಸವೀರ, ಟೈಗರ್‌ ಪ್ರಭಾಕರ್ ರವರ ಜೊತೆಗೆ ಮಾತೃ ವಾತ್ಸಲ್ಯ, 1989 ರಲ್ಲಿ ಶಿವರಾಜಕುಮಾರರ ಜೊತೆಗೆ ಇನ್ಸ್‌ಪೆಕ್ಟರ್ ವಿಕ್ರಂ ಸಿನೆಮಾಗಳಲ್ಲಿ ನಟಿಸಿದ್ದರು.  ಹಲವು ವರ್ಷಗಳ ಅಂತರದ ನಡುವೆ ಇತ್ತೀಚೆಗೆ ತೆರೆಕಂಡ ವಿಜಯ್ ರಾಘವೇಂದ್ರರವರೊಂದಿಗೆ ಅಭಿನಯಿಸಿದ ಗ್ರೇ ಗೇಮ್ಸ್ ಸಿನೆಮಾವೇ ಅಪರ್ಣಾರವರು ಅಭಿನಯಿಸಿದ ಕೊನೆಯ ಸಿನೆಮಾ ಆಗಿತ್ತು. ಇಷ್ಟೆಲ್ಲಾ ಸಿನೆಮಾಗಳಲ್ಲಿ ಅಭಿನಯಿಸಿದರೂ ಹೇಳಿಕೊಳ್ಳುವಂತಹ ಯಶಸ್ಸು ದಕ್ಕಲಿಲ್ಲ. ಆದರೆ ಅಪರ್ಣಾರವರನ್ನು ಕೈಹಿಡಿದು ಮುನ್ನಡೆಸಿ ಅಪಾರವಾದ  ಹೆಸರನ್ನು ಗಳಿಸಿಕೊಟ್ಟಿದ್ದು ನಿರೂಪಣಾ ಕ್ಷೇತ್ರ. ಸರಿಸುಮಾರು ಏಳು ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರೂಪಿಸಿದ್ದು ಕನ್ನಡದಲ್ಲಿ ಒಂದು ದಾಖಲೆಯೇ ಆಗಿದೆ.

ಯಾವುದೇ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ, ಸರಕಾರಿ ಇಲಾಖೆಗಳ ಕಾರ್ಯಕ್ರಮಗಳಿರಲಿ ಕಾರ್ಯಕ್ರಮದ ನಿರೂಪಣೆಗೆ ಯಾರನ್ನು ಕರೆಸಬೇಕು ಎಂದರೆ ಹೊಳೆಯುತ್ತಿದ್ದ ಮೊದಲ ಹೆಸರು ಅಪರ್ಣಾರವರದ್ದು. ಅನಗತ್ಯವಾಗಿ ಇಂಗ್ಲೀಷ್ ಶಬ್ದಗಳನ್ನು ಬಳಸದೇ ಅಚ್ಚ ಕನ್ನಡದಲ್ಲೇ ಸ್ಪುಟವಾಗಿ ಹಾಗೂ ಸ್ಪಷ್ಟವಾಗಿ ನುಡಿಗಳನ್ನು ಪೋಣಿಸಿ ಮಾತಿನ ಮುತ್ತಿನ ಹಾರ ಕಟ್ಟಿ ಕೇಳುಗರಿಗೆ ಕರ್ಣಾನಂದವನ್ನುಂಟು ಮಾಡುತ್ತಿದ್ದ ಅಪರ್ಣಾ ಕಾರ್ಯಕ್ರಮಗಳ ಆಯೋಜಕರ ಮೊದಲ ಆಯ್ಕೆಯಾಗಿದ್ದರು.

ನಿರೂಪಣೆ ಎನ್ನುವುದೂ ಸಹ ಒಂದು ಕಲೆ. ಕೇವಲ ಮಾತುಗಾರಿಕೆಯಿಂದ ಮಾತ್ರ ಅದು ಸಿದ್ದಿಸುತ್ತದೆ ಎನ್ನುವುದು ಅರ್ಧಸತ್ಯ. ಕಲೆ ಸಾಹಿತ್ಯ ಕಾವ್ಯಗಳ ಬಗ್ಗೆ ಅಪಾರವಾದ ಅರಿವನ್ನು ಹೊಂದಿ ಸಮಯ ಸಂದರ್ಭಕ್ಕೆ ತಕ್ಕಂತೆ ಸೂಕ್ತವಾದ ಕವಿತೆಯ ಸಾಲುಗಳು, ಸಾಹಿತ್ಯಕ ನುಡಿಗಳನ್ನು ಆಕರ್ಷಣೀಯವಾಗಿ ಹೇಳುವುದರ ಮೂಲಕ ಉತ್ತಮ ನಿರೂಪಕರಾಗಲು ಸಾಧ್ಯ. ಈ ರೀತಿಯ ನಿರೂಪಣಾ ಕಲೆಯನ್ನು ಅಪರ್ಣಾ ರೂಢಿಸಿ ಕೊಂಡಿದ್ದರು. ಯಾವುದೇ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಲು ಒಪ್ಪಿಕೊಂಡರೆ ಅದಕ್ಕೆ ಅಗತ್ಯ ಪೂರ್ವತಯಾರಿಯನ್ನು ಮಾಡಿಕೊಂಡೇ ಹೋಗುತ್ತಿದ್ದರು. ಕಾವ್ಯ ಸಾಹಿತ್ಯದ ಸಾಲುಗಳನ್ನು ನಾಲಿಗೆಯ ಮೇಲೆ ಸದಾ ಸಿದ್ಧವಾಗಿರಿಸಿ ಕೊಳ್ಳುತ್ತಿದ್ದರು. ಕೂಗಾಡಿ ಕಿರುಚಾಡಿ ಚಿತ್ರವಿಚಿತ್ರ ದೇಹಭಾಷೆ ಹಾಗೂ ವೇಷಭೂಷಣಗಳಿಂದ ಆಂಕರಿಂಗ್ ಮಾಡುವ ಈಗಿನ ವಿಧಾನಗಳಿಂದ ಬೇರೆಯಾಗಿದ್ದ ಅಪರ್ಣಾ ತಮ್ಮ ನಡೆ ನುಡಿ ಹಾಗೂ ಭಾಷಾ ಪ್ರಯೋಗದಿಂದಲೇ ಜನಪ್ರಿಯತೆಯನ್ನು ಗಳಿಸಿದ್ದರು. ಈವೆಂಟ್ ಮ್ಯಾನೇಜರ್ ಗಳ ಕಣ್ಮಣಿಯಾಗಿದ್ದರು.

ಪತಿ ನಾಗರಾಜ ವಸ್ತಾರೆಯವರೊಂದಿಗೆ ಅಪರ್ಣಾ

ಅಪರ್ಣಾರವರಿಗೆ ಮಕ್ಕಳಿಲ್ಲ ಎನ್ನುವ ಕೊರತೆ ಕಾಡುತ್ತಲೇ ಇತ್ತು. ಆ ಬೇಸರವನ್ನು ಕಡಿಮೆಗೊಳಿಸಿಕೊಳ್ಳಲು ತಮಗೆ ಸಿದ್ಧಿಸಿದ ನಿರೂಪಣಾ ಕಲೆಯನ್ನು ಆಸಕ್ತರಿಗೆ ಕಲಿಸಿಕೊಡುವ ಯೋಜನೆಯನ್ನು ಹಾಕಿಕೊಂಡಿದ್ದರು. ನಿರೂಪಣಾ ಶಾಲೆಯೊಂದನ್ನು ಆರಂಭಿಸುವ ಕನಸು ಕಂಡಿದ್ದರು. ಆದರೆ ಈ ಅಕಾಲಿಕ ಸಾವು ಎನ್ನುವುದು ಕಲಾವಿದೆಯ ಕನಸನ್ನು ಹೊಸಕಿ ಹಾಕಿತು. ಅಪರ್ಣಾ ಇನ್ನೂ ಬದುಕಿದ್ದರೆ ಅದೆಷ್ಟೋ ಜನರಿಗೆ ನಿರೂಪಣಾ ಕಲೆಯ ಕುರಿತ ತರಬೇತಿ ದೊರೆಯ ಬಹುದಾಗಿತ್ತು. ಕೆಲವರಾದರೂ ಅಪರ್ಣಾರವರಂತಹ ನಿರೂಪಕರು ತಯಾರಾಗುತ್ತಿದ್ದರು. ಆದರೆ ಏನು ಮಾಡುವುದು? ಕಾಲನಿಗೆ ಕರುಣೆಯಿಲ್ಲ. ಅಪರ್ಣಾ ಕಂಡ ಕನಸು ನನಸಾಗಲಿಲ್ಲ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾಟಾಕೀಸ್ ಎನ್ನುವ ಮನರಂಜನಾತ್ಮಕ ರಿಯಾಲಿಟಿ ಶೋದಿಂದಾಗಿ ಅಪರ್ಣಾ ಜಗತ್ಪ್ರಸಿದ್ಧರಾದರು. ಒನ್ ಆಂಡ್ ಓನ್ಲಿ ವರಲಕ್ಷ್ಮಿ ಎನ್ನುವ ಕಾಮಿಡಿ ಪಾತ್ರವು ಜನಮನವನ್ನು ಸೆಳೆಯಿತು. ತನ್ನನ್ನು ತಾನೇ ವೈಭವೀಕರಿಸಿಕೊಂಡು ಸದಾ ಭ್ರಮೆಯಲ್ಲಿರುವ ಈ ಪಾತ್ರದ ಬಿಲ್ಡಪ್ ಅಭಿನಯ ಹಾಗೂ ಸಂಭಾಷಣೆಗಳು ನೋಡುಗರಿಗೆ ವಿಭಿನ್ನವಾದ ಮನರಂಜನೆಯನ್ನು ಒದಗಿಸಿತು. ನಗುನಗುತಾ ಬದುಕನ್ನು ಮುನ್ನಡೆಸಬೇಕು ಎನ್ನುವ ಅಪರ್ಣಾರವರು ಆ ಮಾತಿಗೆ ಬದ್ಧರಾಗಿದ್ದರು. ರಿಯಾಲಿಟಿ ಶೋ ಮೂಲಕ ನಾಡಿನ ಜನರಲ್ಲಿ ನಗುವನ್ನು ಹಂಚಿದರು. ವ್ಯಕ್ತಿಗತ ಬದುಕಿನ ದುರಂತಗಳನ್ನು ಮರೆಯಲೆಂದೇ ನಕ್ಕರು, ನಗಿಸಿದರು, ನಗುನಗುತ್ತಲೇ ಬಾಳ ಪಯಣವನ್ನೂ ಅಂತ್ಯಗೊಳಿಸಿದರು. ಬಹುಕಾಲದವರೆಗೆ ಜನಮಾನಸದಲ್ಲಿ  ನೆನಪಾಗಿ ಉಳಿಯುವರು.

ಪತ್ನಿಯ ಅಗಲಿಕೆಯ ಕುರಿತು ಅಪರ್ಣಾರವರ ಪತಿ ವಾಸ್ತುಶಿಲ್ಪಿಯಾಗಿರುವ ನಾಗರಾಜ್ ವಸ್ತಾರೆಯವರು ಬರೆದ ಕವನದ ಈ ಸಾಲುಗಳನ್ನು ಓದುವುದರ ಮೂಲಕ ಅಗಲಿದ ಕಲಾವಿದೆಗೆ ಅಂತಿಮ ನಮಗಳನ್ನು ಸಲ್ಲಿಸೋಣ.

ಬೆಳಗಿಕೊಂಡಿರೆಂದು ಕಿಡಿ ತಾಕಿಸಿ ಹೊರಟಿತು ಹೆಣ್ಣು

ಚಿತ್ತು ತೆಗೆದು ಬತ್ತಿಯ ನೆತ್ತಿ ಚೆನ್ನಾಗಿಸಿ

ತಿರುಪಿ ತಿದ್ದಿ ಇರು ತುಸುವಿರೆಂದು ಕರೆದರೂ

ನಿಲ್ಲದೆಯೇ ಬೇರಾವುದೋ ಕರೆಗೆ

ತಣ್ಣಗೆ ಓಗೊಟ್ಟ ಮೇರೆಯಲ್ಲಿ  ಒಂದೇ ಒಂದು ನಿಮಿಷ

ಬಂದೆನೆಂದು ಕಡೆಗಳಿಗೆಯ ಸೆರಗಿನ ಬೆನ್ನಿನಲ್ಲಿ ಅಂದು..

ಕಾದಿದ್ದೇನೆ ಈಗ ಬಂದಾಳೆಂದು, ಆಗ ಬಂದಾಳೆಂದು

ಮರಳಿ ಜೀವ ತಂದಾಳೆಂದು

ಇದು ಮೂರನೇ ದಿವಸ ಇಷ್ಟಾಗಿ ಬೆಳಗಲಿಟ್ಟ ಕಿರಿಸೊಡರ ಬೆಳಕು ನಾನು.

ಉರಿಯುವುದಷ್ಟೇ ಕೆಲಸ ಇರುವ ತನಕ.

More articles

Latest article