ಸಿಖ್ ವಿರೋಧಿ ಗಲಭೆ; ಕಾಂಗ್ರೆಸ್‌ನ ಸಜ್ಜನ್ ಕುಮಾರ್ ದೋಷಿ, ನ್ಯಾಯಾಲಯ ತೀರ್ಪು

Most read

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ನಡೆದ ಸಿಖ್ ದಂಗೆ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ಮಾಜಿ ಸಂಸದ ಸಜ್ಜನ್ ಕುಮಾರ್‌ ಅವರನ್ನು ದೋಷಿ ಎಂದು ದೆಹಲಿಯ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಬುಧವಾರ ತೀರ್ಪು ಪ್ರಕಟಿಸಿದ್ದು, ಫೆಬ್ರವರಿ 18ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವ ಸಾಧ್ಯತೆ ಇದೆ.

79 ವರ್ಷದ ಸಜ್ಜನ್‌ ಕುಮಾರ್ ಅವರು ಸದ್ಯ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮತ್ತೊಂದು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಅವರು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಸಿಖ್ ವಿರೋಧಿ ದಂಗೆಯಲ್ಲಿ ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು 1984ರ ನವಂಬರ್. 1ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್ ಪ್ರಮುಖ ಆರೋಪಿಯಾಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ಒಂದು ಗುಂಪು ಸಿಖ್ಖರನ್ನೇ ಗುರಿಯಾಗಿಸಿಕೊಂಡು ಆ ಸಮುದಾಯಕ್ಕೆ ಸೇರಿದವರ ಆಸ್ತಿಪಾಸ್ತಿಯನ್ನು ನಾಶಪಡಿಸಿತ್ತು. ಈ ಗುಂಪನ್ನು ಸಜ್ಜನ್‌ ಕುಮಾರ್‌ ಅವರೇ ಮುನ್ನೆಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆಗ ಜಸ್ವಂತ್‌ ಸಿಂಗ್ ಅವರ ಮನೆಗೆ ನುಗ್ಗಿದ ಗುಂಪು, ಅವರನ್ನು ಹಾಗೂ ಮಗನನ್ನು ಹತ್ಯೆಗೈದು, ಮನೆಯನ್ನು ಲೂಟಿ ಮಾಡಿತ್ತು ಎಂದು ದೂರು ನೀಡಿದ್ದ ಜಸ್ವಂತ್ ಅವರ ಪತ್ನಿ ಸಾಕ್ಷಿ ನುಡಿದಿರುವುದಾಗಿ ಪ್ರಾಸಿಕ್ಯೂಷನ್ ಅವರು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ. ಪಂಜಾಬಿ ಬಾಗ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 2021ರ ಡಿ. 16ರಂದು ಸಜ್ಜನ್ ಕುಮಾರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.

ಸಜ್ಜನ್ ಕುಮಾರ್ ಕಾಂಗ್ರೆಸ್ ಪಕ್ಷದ ಮಾಜಿ ಸಂಸದರು. ಇವರು 1977ರಲ್ಲಿ ದೆಹಲಿ ಮಹಾನಗರ ಪಾಲಿಕೆಗೆ ಮೊದಲು ಆಯ್ಕೆಯಾಗಿದ್ದರು. ದೆಹಲಿಯ ಸಕ್ರಿಯ ರಾಜಕಾರಣಿಯಾಗಿದ್ದ ಅವರು 2004ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಿಂದ ಗೆದ್ದರು. 1984ರ ನವೆಂಬರ್ 1ರಂದು ಆಗಿನ ಪ್ರಧಾನಿ ಕಾಂಗ್ರೆಸ್‌ನ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಿಖ್ ಸಮುದಾಯದ ಮೇಲೆ ದಾಳಿ ಮಾಡಲು ಸಜ್ಜನ್ ಕುಮಾರ್ ಜನರ ಗುಂಪನ್ನು ಪ್ರಚೋದಿಸಿದ್ದರು. ಅದಕ್ಕೂ ಒಂದು ದಿನ ಮೊದಲು ಇಂದಿರಾ ಗಾಂಧಿಯವರ ಮೇಲೆ ಸಿಖ್ ಅಂಗರಕ್ಷಕರು ಗುಂಡು ಹಾರಿಸಿ ಕೊಂದಿದ್ದರು.

More articles

Latest article