ನೆನಪು | ಮತ್ತೊಂದು ಜಯಂತಿ ಮತ್ತದೇ ವಿಸ್ಮೃತಿ

Most read

ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ತಿದ್ದುಪಡಿ ಇಲ್ಲದೆಯೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಆಹಾರದ ಹಕ್ಕು ಕಸಿದುಕೊಳ್ಳುವ ಗೋಹತ್ಯೆ ನಿಷೇಧ, ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತಾಂತರ ನಿಷೇಧ, ಶಿಕ್ಷಣ-ಆರೋಗ್ಯದ ಹಕ್ಕು ಕಿತ್ತುಕೊಳ್ಳುವ ವಾಣಿಜ್ಯೀಕರಣ-ಕಾರ್ಪೋರೇಟೀಕರಣ ಇವೆಲ್ಲವೂ ಸಂವಿಧಾನದ  ಅಡಿಪಾಯವನ್ನು ಶಿಥಿಲಗೊಳಿಸುತ್ತಿವೆ. ಈ ಸಂದಿಗ್ಧತೆಗಳ ನಡುವೆಯೇ ಅಂಬೇಡ್ಕರರ 134ನೆಯ ಜನ್ಮದಿನವನ್ನು ದೇಶವು ಆಚರಿಸುತ್ತಿದೆ – ನಾ ದಿವಾಕರ , ಚಿಂತಕರು.

ಭಾರತದ ಗಣತಂತ್ರ ತನ್ನ 75ನೆಯ ವಸಂತದಲ್ಲಿದೆ. ಇದೇ ಸಮಯದಲ್ಲೇ ದೇಶವು ಮತ್ತೊಂದು ಮಹಾಚುನಾವಣೆಯನ್ನು ಎದುರಿಸುತ್ತಿದೆ. ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುವ ಶತಮಾನದ ಕನಸನ್ನು ಸಾಕಾರಗೊಳಿಸುವ ಸಂಘಪರಿವಾರದ ಉತ್ಸುಕತೆಯೊಂದಿಗೇ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಆಶಿಸುತ್ತಿದೆ. ಈ ಸಂದಿಗ್ಧತೆಗಳ ನಡುವೆಯೇ ದೇಶವು ಮತ್ತೊಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದೆ. ಡಾ. ಬಿ. ಆರ್.‌ ಅಂಬೇಡ್ಕರರ 134ನೆಯ ಜನ್ಮದಿನದ ಸಂದರ್ಭದಲ್ಲಿ ಭಾರತದ ಶೋಷಿತ ಜನಸಮುದಾಯಗಳ ಮುಂದೆ ಹಲವು ಸವಾಲುಗಳು ಎದುರಾಗಿವೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಬಯಸಿದ ಹಾಗೂ ಸಂವಿಧಾನದ ಮೂಲಕ ಸ್ಥಾಪಿಸಲು ಶ್ರಮಿಸಿದ ಸಮನ್ವಯದ ಪ್ರಜಾತಂತ್ರ ಭಾರತ ತನ್ನ ಬಹುತ್ವ ಸಂಸ್ಕೃತಿಯನ್ನು, ಸೌಹಾರ್ದತೆಯನ್ನು, ಜಾತ್ಯತೀತತೆಯನ್ನು ಹಾಗೂ ಸಮ ಸಮಾಜದ ಕನಸನ್ನು ಕಾಪಾಡಿಕೊಳ್ಳುವುದೇ ಎಂಬ ಆತಂಕದಲ್ಲಿ ಸಾರ್ವಭೌಮ ಪ್ರಜೆಗಳು ಮತದಾನ ಮಾಡಲಿದ್ದಾರೆ.

ಬಿಜೆಪಿಗೆ 400 ಸ್ಥಾನಗಳು ಲಭಿಸಿದರೆ ಸಂವಿಧಾನ ಬದಲಿಸುತ್ತೇವೆ ಎಂಬ ಕೆಲವು ಸಂಸದರ ಹೇಳಿಕೆಗಳು ಒಂದೆಡೆಯಾದರೆ, ಸ್ವತಃ ಅಂಬೇಡ್ಕರ್‌ ಬಂದರೂ ಇದು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಈ ಎರಡೂ ಪ್ರತಿಪಾದನೆಗಳನ್ನು ಬದಿಗಿಟ್ಟು ನೋಡಿದಾಗ ನಮ್ಮ ನಡುವೆ ನಿಲ್ಲುವುದು ಸ್ವತಃ ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಅವರ ಕನಸಿನ ಸಮ ಸಮಾಜ. ಶೋಷಿತ ಸಮುದಾಯಗಳ ದೃಷ್ಟಿಯಲ್ಲಿ ಭಾರತದ ಭಾಗ್ಯವಿಧಾತನಂತೆ ಕಾಣುವ ಅಂಬೇಡ್ಕರ್‌, ಹಲವು ಆಯಾಮಗಳಲ್ಲಿ ವಿಮೋಚಕರಾಗಿ ಕಾಣುತ್ತಾರೆ. ಹಾಗಾಗಿಯೇ ತಳಸಮುದಾಯಗಳಿಗೆ ಅಂಬೇಡ್ಕರ್‌ ಆರಾಧನೆಯ ಕೇಂದ್ರವಾಗಿ ಬಿಡುತ್ತಾರೆ. ತಾತ್ವಿಕ ನೆಲೆಯಲ್ಲಿ ವ್ಯಕ್ತಿ ಆರಾಧನೆ ಅಥವಾ ಪ್ರತಿಮಾ ರಾಜಕಾರಣವನ್ನು ವಿರೋಧಿಸಿದ್ದ ಅಂಬೇಡ್ಕರ್‌ ಈಗ ಪೂಜಿಸಲ್ಪಡುವ, ಆರಾಧಿಸಲ್ಪಡುವ ದೈವಿಕ ಸ್ಥಿತಿ ತಲುಪಿರುವುದು ವಿಡಂಬನೆಯಂತೆ ಕಂಡರೂ, ನವ ಭಾರತ ಸಾಗುತ್ತಿರುವ ಹಾದಿಯಲ್ಲಿ ಶೋಷಿತ ಜನತೆಯ ಅಸ್ಮಿತೆಗಾಗಿ ಇವೆಲ್ಲವೂ ಸಹನೀಯ ಎನಿಸಿಬಿಡುತ್ತದೆ.

ಸಂವಿಧಾನ ಬದಲಾವಣೆ ಎಂಬ ಕೂಗು ಇಡೀ ಶೋಷಿತ ಸಮಾಜವನ್ನೇ ಜಾಗೃತ ಗೊಳಿಸಿಬಿಟ್ಟಿದೆ. ಏಕೆಂದರೆ ಭಾರತದ ಪ್ರಜಾಪ್ರಭುತ್ವ ಮತ್ತು ಈ ದೇಶದ ಸಾಮಾಜಿಕ ಅಡಿಪಾಯ ನಿಂತಿರುವುದೇ ಅಂಬೇಡ್ಕರರ ಸಾಂವಿಧಾನಿಕ ಆಶಯಗಳ ಮೇಲೆ. 75 ವರ್ಷಗಳ ಸ್ವತಂತ್ರ ಆಳ್ವಿಕೆಯ ಅನಂತರವೂ ತಳಮಟ್ಟದ ಸಮಾಜದಲ್ಲಿ ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯಗಳು ಕಣ್ಣಿಗೆ ರಾಚುವಂತೆ ಕಾಣುತ್ತಿರುವಾಗ ಸಹಜವಾಗಿಯೇ, ದುಡಿಮೆಯ ಜೀವಗಳಿಗೆ ಭಾರತದ ಸಂವಿಧಾನ ಆಸರೆಯಾಗಿ ಕಾಣುತ್ತದೆ. ಮತ್ತೊಂದೆಡೆ ಸಂವಿಧಾನದ ತಿದ್ದುಪಡಿ ಆಗದೆ ಇದ್ದರೂ ಕಳೆದ ಹತ್ತು ವರ್ಷಗಳ ಆಡಳಿತವನ್ನು ಗಮನಿಸಿದಾಗ, ಡಾ. ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯದ ಪೂರ್ವಸೂರಿಗಳು ಆಶಿಸಿದ ಸಾಂವಿಧಾನಿಕ ಆಶಯಗಳು ಹಂತಹಂತವಾಗಿ ಶಿಥಿಲವಾಗುತ್ತಿರುವುದು ಜನಸಮುದಾಯಗಳ ಆತಂಕಕ್ಕೆ ಕಾರಣವಾಗಿದೆ.

ಸಂವಿಧಾನದ ಮೂಲ ಆಶಯಗಳಲ್ಲೊಂದಾದ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಾಧಿಸಲು ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳು ಬಹುದೊಡ್ಡ ಅಡಚಣೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕೆಲವು ಸಮೀಕ್ಷೆಗಳಲ್ಲಿ ಕಾಣುವಂತೆ ತಳಮಟ್ಟದ ಸಮಾಜದಲ್ಲಿ ಅಸಮಾನತೆ ಹೆಚ್ಚಾಗುತ್ತಿದ್ದು, ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಅಭಿವೃದ್ಧಿಯ ಫಲಾನುಭವಿಗಳಾಗಿ ನಗರವಾಸಿ-ಹಿತವಲಯದ ಬೃಹತ್‌ ಜನಸಂಖ್ಯೆಯು ಶಿಕ್ಷಣ, ಆರೋಗ್ಯ, ಹಣಕಾಸು, ಸಾರ್ವಜನಿಕ ಸೌಕರ್ಯ ಹೀಗೆ ಎಲ್ಲ ವಲಯಗಳನ್ನೂ ಆಕ್ರಮಿಸುತ್ತಿರುವ ಕಾರ್ಪೋರೇಟ್‌ ಮಾರುಕಟ್ಟೆ ಒತ್ತಾಸೆಯಾಗಿ ನಿಂತಿದೆ. ತತ್ಪರಿಣಾಮವಾಗಿ ಅವಕಾಶ ವಂಚಿತ ಜನಸಮುದಾಯಗಳು ಇನ್ನೂ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಇದನ್ನೇ ಸೂಚಿಸುತ್ತದೆ.

ಈ ಅಸಮಾನತೆಗಳ ನಡುವೆಯೇ ಸಂವಿಧಾನ ಅಪೇಕ್ಷಿಸುವ ಬಹುತ್ವ ಮತ್ತು ಸಮನ್ವಯದ ನೆಲೆಗಳು ಹಂತಹಂತವಾಗಿ ಶಿಥಿಲಗೊಳ್ಳುತ್ತಿರುವುದನ್ನು ತಳಮಟ್ಟದವರೆಗೂ ಗಮನಿಸಬಹುದು. ಅಂಬೇಡ್ಕರ್‌ ಆಶಯದ ಸಾಂವಿಧಾನಿಕ ತತ್ವಗಳಾದ ಧಾರ್ಮಿಕ ಸ್ವಾತಂತ್ರ್ಯ, ಆಹಾರದ ಹಕ್ಕು-ಸ್ವಾತಂತ್ರ್ಯ, ಸಾಂಸ್ಕೃತಿಕ ಸೌಹಾರ್ದತೆ ಮತ್ತು ಸಮನ್ವಯತೆ ಇವೆಲ್ಲವೂ ಸಹ ಬಿಜೆಪಿ ಅನುಸರಿಸುತ್ತಿರುವ ಹಿಂದುತ್ವ ರಾಜಕಾರಣದಲ್ಲಿ ಶಿಥಿಲವಾಗುತ್ತಿವೆ. ಭಾರತದ ವೈವಿಧ್ಯಮಯ ಬಹುಸಾಂಸ್ಕೃತಿಕ ನೆಲೆಗಳೆಲ್ಲವೂ ಕಾರ್ಪೋರೇಟೀಕರಣಕ್ಕೊಳಗಾಗುತ್ತಿದ್ದು, ತಳಮಟ್ಟದ ಸಮಾಜದಲ್ಲೂ ಸಹ ʼ ಅನ್ಯ ʼರನ್ನು ಸೃಷ್ಟಿಸಿ, ಗುರುತಿಸಿ, ಪ್ರತ್ಯೇಕಿಸುವ ಧೋರಣೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆಗಳ ನಡುವೆಯೇ ಭಾರತೀಯ ಸಮಾಜದ ಸೆಕ್ಯುಲರ್‌ ನೆಲೆಗಳೆಲ್ಲವೂ ಭ್ರಷ್ಟವಾಗುತ್ತಿವೆ. ಡಾ. ಅಂಬೇಡ್ಕರ್‌ ಆಶಯದ ಸಮ ಸಮಾಜಕ್ಕೆ ಇವೆಲ್ಲವೂ ಧಕ್ಕೆ ಉಂಟುಮಾಡುತ್ತವೆ.

ಈ ಆತಂಕಗಳ ನಡುವೆಯೇ ʼ ಸಂವಿಧಾನ ಬದಲಾವಣೆ ʼಯ ಕೂಗು ಶೋಷಿತ ಸಮುದಾಯಗಳನ್ನು ಆತಂಕಕ್ಕೀಡುಮಾಡಿದೆ. ವಾಸ್ತವ ಸಂಗತಿ ಎಂದರೆ, ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ತಿದ್ದುಪಡಿ ಇಲ್ಲದೆಯೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನು ಶಿಥಿಲಗೊಳಿಸಲಾಗಿದೆ. ಭಾರತೀಯ ಸಂವಿಧಾನದ ನಮ್ಯತೆ ‍(Flexibility) ಆಳ್ವಿಕೆಯ ನಿರೂಪಣೆಗಳಿಗೆ, ಆಡಳಿತ ನೀತಿಗಳಿಗೆ ಈ ಅವಕಾಶವನ್ನೂ ನೀಡುತ್ತದೆ. ಆಹಾರದ ಹಕ್ಕು ಕಸಿದುಕೊಳ್ಳುವ ಗೋಹತ್ಯೆ ನಿಷೇಧ, ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತಾಂತರ ನಿಷೇಧ, ಶಿಕ್ಷಣ-ಆರೋಗ್ಯದ ಹಕ್ಕು ಕಿತ್ತುಕೊಳ್ಳುವ ವಾಣಿಜ್ಯೀಕರಣ-ಕಾರ್ಪೋರೇಟೀಕರಣ ಇವೆಲ್ಲವೂ ಸಂವಿಧಾನದ  ಅಡಿಪಾಯವನ್ನು ಶಿಥಿಲಗೊಳಿಸುತ್ತಿದೆ. ಅಂಬೇಡ್ಕರ್‌ ಬಲವಾಗಿ ಪ್ರತಿಪಾದಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು ಇಂದು ನಿರಂತರವಾಗಿ ಹಲ್ಲೆಗೊಳಗಾಗುತ್ತಿವೆ.

ಸ್ಪಷ್ಟ ಬಹುಮತ ಗಳಿಸಿದರೂ ಸಾಕು ಭಾರತದ ಸಂವಿಧಾನವನ್ನು, ತನ್ಮೂಲಕ ಪ್ರಜಾಪ್ರಭುತ್ವವನ್ನು ಮೌಲಿಕವಾಗಿ ಶಿಥಿಲಗೊಳಿಸಲು ಸಾಧ್ಯ ಎನ್ನುವುದನ್ನು ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆ ಸಾಬೀತುಪಡಿಸಿದೆ. ಎದೆಯ  ಮೇಲೆ ಸಂವಿಧಾನ ನಿಷ್ಠೆ/ಬದ್ಧತೆಯ ಬೋರ್ಡುಗಳನ್ನು ನೇತುಹಾಕಿಕೊಂಡಿರುವ, ಹಣೆಯ ಮೇಲೆ ಪ್ರಜಾತಂತ್ರದ ಲೇಬಲ್ಲುಗಳನ್ನು ಅಂಟಿಸಿಕೊಂಡಿರುವ “ಜಾತ್ಯತೀತ” ಪಕ್ಷಗಳ ಬೆಂಬಲ ಇರುವವರೆಗೂ ಬಲಪಂಥೀಯ ಬಿಜೆಪಿ ಸರ್ಕಾರಕ್ಕೆ ತನ್ನ ಬಹುಸಂಖ್ಯಾವಾದಿ ಹಿಂದುತ್ವ ರಾಜಕಾರಣವನ್ನು ಜಾರಿಗೊಳಿಸಲು ಯಾವ ಅಡ್ಡಿ ಆತಂಕಗಳೂ ಆಗುವುದಿಲ್ಲ. ಈ ಅವಕಾಶವಾದಿ ಪಕ್ಷ/ಗುಂಪು/ಸಂಘಟನೆ/ವ್ಯಕ್ತಿಗಳೇ ಅಂಬೇಡ್ಕರ್‌ ಪ್ರತಿಮೆಯನ್ನು ಹಾರ ತುರಾಯಿಗಳಿಂದ ಮರೆಮಾಚಿ, ಪರಾಕುಗಳಲ್ಲಿ ತೊಡಗುವುದನ್ನು ಏಪ್ರಿಲ್‌ 14ರಂದು ಕಾಣಬಹುದು.

ಡಾ. ಬಿ. ಆರ್.‌ ಅಂಬೇಡ್ಕರ್‌ ಪದೇಪದೇ ಹೇಳುತ್ತಿದ್ದ ಒಂದು ಅಂಶವನ್ನು ಭಾರತದ ರಾಜಕಾರಣ ಈವರೆಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಅದು ಸಾಂವಿಧಾನಿಕ ನೈತಿಕತೆ. ದೇಶದ ರಾಜಕಾರಣವು ಭ್ರಷ್ಟ ಮುಕ್ತವಾಗದಿದ್ದರೂ, ಅಪರಾಧ ಮುಕ್ತವಾಗದಿದ್ದರೂ, ನೈತಿಕತೆಯಿಂದ ಸಂಪೂರ್ಣವಾಗಿ ಮುಕ್ತವಾಗಿರುವುದು ಅಂಬೇಡ್ಕರ್‌ ಅವರಿಗೆ ಅಪಚಾರ ಮಾಡಿದಂತಲ್ಲವೇ ? ಕಾರ್ಪೋರೇಟ್‌ ಮಾರುಕಟ್ಟೆ ಹಾಗೂ ಅಂತಾರಾಷ್ಟ್ರೀಯ ಬಂಡವಾಳ ದೇಶದ ರಾಜಕೀಯ ವಲಯವನ್ನು ಸಂಪೂರ್ಣವಾಗಿ ಆಕ್ರಮಿಸಿರುವ ಹೊತ್ತಿನಲ್ಲಿ, ಅಂಬೇಡ್ಕರ್‌ ಮತ್ತೊಮ್ಮೆ ನಮ್ಮ ನಡುವೆ ಸತ್ಯಸಂಧತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕ ಆಡಳಿತದ ಬಗ್ಗೆ ಎಚ್ಚರ ನೀಡುತ್ತಿದ್ದಾರೆ. ಸಂವಿಧಾನ ಪೀಠಿಕೆಯನ್ನು Ritualistic ಆಗಿ  ಓದುವ ಮುನ್ನ ಈ ಎಚ್ಚರದ ಮಾತುಗಳಿಗೆ ಕಿವಿಗೊಡುವುದು, ನಾಗರಿಕ ಪ್ರಜ್ಞೆ ಇರುವ ಕೆಲವರಿಗಾದರೂ ಆದ್ಯತೆಯಾಗಬೇಕಿದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲೇ ಭಾರತ ಮತ್ತೊಂದು ಅಂಬೇಡ್ಕರ್‌ ಜಯಂತಿಯನ್ನು ಆಚರಿಸುತ್ತಿದೆ. ಆರಾಧನಾ ಸಂಸ್ಕೃತಿಯ ಹಾರ, ತುರಾಯಿ, ಮೆರವಣಿಗೆಗಳ ನಡುವೆ ಕಳೆದು ಹೋಗುವ ಅಂಬೇಡ್ಕರ್‌ ತಾತ್ವಿಕವಾಗಿಯಾದರೂ ನಮ್ಮ ನಡುವೆ ನೆಲೆಸುವುದೇ ಆದಲ್ಲಿ ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅಂಬೇಡ್ಕರ್‌ ಕನಸಿನ ಬಹುತ್ವ-ಸಮನ್ವಯ-ಸೌಹಾರ್ದತೆಯ ಭಾರತವನ್ನು ರಕ್ಷಿಸಲು ಭಾರತದ ಜನತೆ ತಮ್ಮ ಮತದಾನದ ಹಕ್ಕನ್ನು ವಿವೇಕಯುತವಾಗಿ ಬಳಸಬೇಕಿದೆ. 2024ರ ಚುನಾವಣೆಗಳಲ್ಲಿ ಬಳಕೆಯಾಗುವ ವಿವೇಕ-ವಿವೇಚನೆ ಮತ್ತು ಸಾರ್ವಜನಿಕ ಪ್ರಜ್ಞೆ, ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಆಶಯಗಳನ್ನು ಸಾಕಾರಗೊಳಿಸುವ ಹಾದಿಯನ್ನು ಸುಗಮಗೊಳಿಸುತ್ತದೆ. ಈ ನಾಗರಿಕ ಪ್ರಜ್ಞೆಯನ್ನು ಜಾಗೃತಾವಸ್ಥೆಯಲ್ಲಿರಿಸಿಕೊಂಡೇ ಏಪ್ರಿಲ್‌ 14 2024ರಂದು ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ 134ನೆಯ ಜನ್ಮದಿನವನ್ನು ಆಚರಿಸೋಣ.

ಜೈ ಭೀಮ್‌ ಲಾಲ್‌ ಸಲಾಂ

ನಾ. ದಿವಾಕರ

ಚಿಂತಕರು

More articles

Latest article