ಸಂಡೂರು : ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅನ್ನಪೂರ್ಣ ತುಕಾರಾಂ ಅವರು ತಮ್ಮ ಪತಿ ಮತ್ತು ಸಂಸದರಾದ ಈ ತುಕಾರಾಂ ಅವರೊಂದಿಗೆ ಪಟ್ಟಣದ ಇಂಜಿನಿಯರಿಂಗ್ ಉಪ ವಿಭಾಗ ಕಚೇರಿಯಲ್ಲಿನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಸಂಡೂರು ಶಾಸಕರಾಗಿದ್ದ ತುಕಾರಾಂ ಸಾರ್ವತ್ರಿಕ ಚುನಾವಣೆಗಳಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಅಯ್ಕೆಯಾಗಿದ್ದರಿಂದ ಸಂಡೂರು ತೆರವಾಗಿದ್ದ ಕಾರಣ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ. ಅನ್ನಪೂರ್ಣ ಅವರ ಎದುರು ಕಣದಲ್ಲಿ ಬಿಜೆಪಿಯ ಬಂಗಾರು ಹಣಮಂತು ಇದ್ದಾರೆ. ಒಟ್ಟಾರೆ 7 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಸಂಡೂರಿನಲ್ಲಿ ಒಟ್ಟು 2,36,100 ಮತದಾರರಿದ್ದು, ಈ ಪೈಕಿ 1,18,282 ಮಹಿಳಾ ಮತದಾರರು, 1,17,789 ಪುರುಷ ಮತದಾರರಿದ್ದಾರೆ. ಒಟ್ಟು 253 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 55 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 1,215 ಸಿಬ್ಬಂದಿ, ಮೂವರು ಡಿವೈಎಸ್ಪಿ, 6 ಸಿಪಿಐ, 14 ಪಿಎಸ್ಐ, 22 ಎಎಸ್ಐ, 193 ಹೆಡ್ಕಾನ್ಸ್ಟೇಬಲ್, 14 ಕೆಎಸ್ಆರ್ಪಿ ತುಕಡಿ ಸೇರಿ 1500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.