ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಮಾವು ತುಂಬಿದ್ದ ಲಾರಿ ಪಲ್ಟಿ; ಐವರು ಮಹಿಳೆಯರು ಸೇರಿ 9 ಸಾವು

Most read

ಅಮರಾವತಿ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರೆಡ್ಡಿಚೆರುವು ಎಂಬಲ್ಲಿ ಮಾವು ತುಂಬಿದ್ದ ಲಾರಿಯೊಂದು ಮಿನಿ ಟ್ರಕ್‌ ಮೇಲೆ ಉರುಳಿಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿದ್ದು, ಹನ್ನೊಂದು ಮಂದಿ ಗಾಯಗೊಂಡಿದ್ದಾರೆ. ಈ ದುರಂತ ಘಟನೆ ಭಾನುವಾರ ತಡರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರೆಲ್ಲರೂ ಕಾರ್ಮಿಕರು ಎಂದು ತಿಳಿದು ಬಂದಿದೆ.

ಎದುರು ಬರುತ್ತಿದ್ದ ಕಾರು ಡಿಕ್ಕಿ ಹೊಡೆಯುವುದನ್ನು ತಡೆಯಲು ಲಾರಿ ಚಾಲಕ ಪ್ರಯತ್ನಿಸಿದಾಗ ಲಾರಿ ಮಿನಿ ಟ್ರಕ್‌ ಮೇಲೆ ಉರುಳಿಬಿದ್ದಿದೆ. ಸುಮಾರು 30-40ಟನ್‌ ಮಾವಿನ ಕಾಯಿ ಕೆಳಗೆ ಹೂತುಹೋಗಿದ್ದ ಮೃತದೇಹಗಳನ್ನು ಜೆಸಿಬಿ ಸಹಾಯದಿಂದ ಹೊತೆಗೆಯಲಾಗಿದೆ.

ಟ್ರಕ್ನಲ್ಲಿ 20 ಮಂದಿ ಪ್ರಯಾಣಿಸುತ್ತಿದ್ದರು. ಮಾವಿನ ಕಾಯಿ ಲೋಡ್‌ ಮೇಲೆ ಇವೆಲ್ಲರೂ ಕುಳಿತಿದ್ದರು. ಅಪಘಾತ ಸಂಭವಿಸಿದಾಗ ಉರುಳಿ ಬಿದ್ದು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಐವರು ಮಹಿಳೆಯರೂ ಸೇರಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯ ಹಿಂದಿನ ಚಕ್ರ ಮರಳಿನಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಲಾರಿ ಮಿನಿ ಟ್ರಕ್ಮೇಲೆ ಬಿದ್ದು ಅಪಘಾತ ಸಂಭವಿಸಿದೆ  ಎಂದು ಪೊಲೀಸರು ತಿಳಿಸಿದ್ದಾರೆ. ಕಡಪಾ ಪಟ್ಟಣದಿಂದ 60 ಕಿಮೀ ದೂರದಲ್ಲಿರುವ ರೆಡ್ಡಿಚೆರುವುಕಟ್ಟಾ ಎಂಬಲ್ಲಿ ಭಾನುವಾರ ತಡರಾತ್ರಿ ಅಪಘಾತ ನಡೆದಿದೆ.  ಈ ಕಾರ್ಮಿಕರನ್ನು ಮಾವು ಕೀಳಲು ಕರೆದೊಯ್ಯಲಾಗುತ್ತಿತ್ತು.

More articles

Latest article