ಕಾರವಾರ: ಸಂಸದ ಅನಂತಕುಮಾರ್ ಹೆಗಡೆ ಹೆಸರಿನಲ್ಲಿ ‘ಬಿಜೆಪಿಗೆ ಮತ ಚಲಾಯಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ನೀಡಿ’ ಎಂದು ಸುಳ್ಳು ಪೋಸ್ಟರ್ ಹರಿಬಿಟ್ಟಿದ್ದವರ ವಿರುದ್ಧ ಸಂಸದ ಹೆಗಡೆ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ಹೆಸರಿನಲ್ಲಿ ‘ಮತ್ತೊಮ್ಮೆ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವ ಕಾಲ ಬಂದಿದೆ. ನಾವೆಲ್ಲರೂ ಪ್ರಧಾನ ಸೇವಕ ನರೇಂದ್ರ ಮೋದಿಯವರ ಬೆನ್ನಿಗೆ ನಿಂತು ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಲೇಬೇಕಾಗಿದೆ. ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಧ್ವಜವನ್ನು ಹಾರಿಸಬೇಕಿದೆ’ ಎಂದು ಅನಂತಕುಮಾರ ಹೆಗಡೆಯವರೇ ಹೇಳಿಕೆ ನೀಡಿದ ರೀತಿಯಲ್ಲಿ ಅವರ ಫೋಟೋದೊಂದಿಗೆ ಸುಳ್ಳು ಪೋಸ್ಟರ್‌ವೊಂದನ್ನು ‘ಬಿಜೆಪಿ ಉತ್ತರ ಕನ್ನಡ ಲೋಕಸಭಾ 2024’ ಎಂಬ ವಾಟ್ಸ್ಅಪ್ ಗ್ರೂಪ್‌ನಲ್ಲಿ ಹರಿಬಿಡಲಾಗಿತ್ತು.
ಅನಂತಕುಮಾರ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ದುರುಪಯೋಗಪಡಿಸಿಕೊಂಡು ಅವರ ಗೌರವ ಘನತೆಗೆ ಚ್ಯುತಿ ಬರುವ ಹಾಗೇ ಮಾಡಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುರೇಶ್ ಶೆಟ್ಟಿಯವರು ಗ್ರೂಪ್‌ನಲ್ಲಿ ಸಂದೇಶ ಹರಿಬಿಟ್ಟ ಎ.ಜಿ.ನಾಯ್ಕ ಸಿದ್ದಾಪುರ ಎನ್ನುವವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.