ದೇಶದಲ್ಲಿ ಈವರೆಗೆ ಇದ್ದ ಹಳೇ ವಸಾಹತುಶಾಹಿ ಯುಗದ ಶಾಸನಗಳನ್ನು ಬದಲಿಸುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು (Criminal laws) ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಸರ್ಕಾರ ಶನಿವಾರ ಘೋಷಿಸಿದೆ.
ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023(Bharatiya Nyaya Sanhita), ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023, ಮತ್ತು ಭಾರತೀಯ ಸಾಕ್ಷ್ಯ (ಎರಡನೇ) ಮಸೂದೆ, 2023ಯು 1860 ರ ಭಾರತೀಯ ದಂಡ ಸಂಹಿತೆ, 1973 ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಮತ್ತು 1872 ರ ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸಲಿದೆ. ಈ ಕಾನೂನುಗಳು ಸಂಸತ್ತಿನಿಂದ ಅನುಮೋದನೆಯನ್ನು ಪಡೆದಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಕಳೆದ ಡಿಸೆಂಬರ್‌ನಲ್ಲಿ ಇದಕ್ಕೆ ಒಪ್ಪಿಗೆ ನೀಡಿದ್ದರು.
ಈ ಕಾನೂನುಗಳ ಅನುಷ್ಠಾನದೊಂದಿಗೆ, ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಐದು ವರ್ಷಗಳಲ್ಲಿ ವಿಶ್ವದ ಅತ್ಯಾಧುನಿಕವಾಗಿ ವಿಕಸನಗೊಳ್ಳಲಿದೆ ಎಂದು ಅಮಿತ್ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕ್ರಿಮಿನಲ್ ಕಾಯ್ದೆಗಳ ಬದಲಿಸುವ ನೂತನ ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರಿಕ ಸುರಕ್ಷಾಸಂಹಿತ ಹಾಗೂ ಭಾರತೀಯ ಸಾಕ್ಷ್ಯ ಸಂಹಿತಕ್ಕೆ 2023ರ ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದರು. ಸಂಸತ್ ಮುಂಗಾರು ಅಧಿವೇಶನದಲ್ಲಿ ಪ್ರಥಮ ಬಾರಿಗೆ ಮಂಡನೆಯಾದ ಈ ಕಾಯ್ದೆಗಳಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ದೊರೆಯಿತು. ಬಳಿಕ ಇವುಗಳನ್ನು ಕಾನೂನು ಸ್ವರೂಪಗೊಳಿಸಲು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿತ್ತು.