ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಅಪಮಾನಕರ ಹೇಳಿಕೆಗೆ ದೇಶದ ಉದ್ದಗಲಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಸಾಮಾಜಿಕ ಕಾರ್ಯಕರ್ತರಾದಿಯಾಗಿ ಎಲ್ಲರೂ ಶಾ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೂ ಸಹ ಈ ಹೇಳಿಕೆಯನ್ನು ಖಂಡಿಸಿದ್ದು, ಅಮಿತ್ ಶಾ ಅವರಿಗೆ ಹುಚ್ಚು ಹಿಡಿದಿದೆ, ಅವರು ರಾಜಕೀಯವನ್ನು ತ್ಯಜಿಸಿ ರಾಜೀನಾಮೆ ನೀಡಬೇಕು ಎಂದು ಆಗ್ರಹಪಡಿಸಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಸಂವಿಧಾನದ ಚರ್ಚೆಗೆ ಉತ್ತರಿಸುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಅವರ ಹೆಸರನ್ನು ಹೇಳುವುದು ಕೆಲವರಿಗೆ ಫ್ಯಾಶನ್ ಆಗಿದೆ, ಇಷ್ಟು ಭಾರಿ ದೇವರನ್ನು ಸ್ಮರಿಸಿದ್ದರೆ ಏಳು ಜನ್ಮಕ್ಕೆ ಆಗುವಷ್ಟು ಸ್ವರ್ಗ ಸಿಗುತ್ತಿತ್ತು ಎಂದು ಹೇಳುವ ಮೂಲಕ ಅಮಿತ್ ಶಾ ಅಂಬೇಡ್ಕರ್‌ಗೆ ಅಪಮಾನಿಸಿದ್ದಾರೆ. ಅಮಿತ್ ಶಾ ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ದ್ವೇಷವಿರಬೇಕು. ಅವರ ಈ ಹುಚ್ಚುತನವನ್ನು ನಾವು ಖಂಡಿಸುತ್ತೇವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಶ್ರೇಷ್ಠರು. ಅಮಿತ್ ಶಾ ರಾಜಕೀಯವನ್ನು ತ್ಯಜಿಸಿ ಹೊರಹೋಗಬೇಕು ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಇದಕ್ಕೂ ಮೊದಲು, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೂ ಶಾ ಮತ್ತು ಬಿಜೆಪಿ ಸಂವಿಧಾನ ವಿರೋಧಿ, ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಫ್ಯಾಶನ್ ಮತ್ತು ಉತ್ಸಾಹ. ಅವರು ನಮ್ಮ ಪ್ರೇರಣೆ ಮತ್ತು ಸ್ಫೂರ್ತಿ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಲು ನಾವು ಯಾರಿಗೂ ಬಿಡುವುದಿಲ್ಲ. ಈ ಜನರು ದ್ವೇಷವನ್ನು ಹರಡುವ ಸಂವಿಧಾನ ವಿರೋಧಿಗಳು ಮತ್ತು ಸಂಸತ್ತಿನಲ್ಲಿ ಬಳಸಿದ ಭಾಷೆ ಖಂಡನೀಯ ಎಂದು ತೇಜಸ್ವಿ ಯಾದವ್ ಹೇಳಿದ್ದರು.