ನವದೆಹಲಿ: ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ಅಂಬೇಡ್ಕರ್ ಕುರಿತಾದ ಅಮಿತ್ ಶಾ ಹೇಳಿಕೆ ಕುರಿತು ಚರ್ಚೆಗೆ ಒತ್ತಾಯಿಸಿ ಎಎಪಿ ಸಂಸದ ಸಂಜಯ್ ಸಿಂಗ್, ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೆವಾಲಾ ಮತ್ತು ಸಿಪಿಐ(ಎಂ) ಸಂಸದ ಜಾನ್ ಬ್ರಿಟಾಸ್ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ನೋಟಿಸ್ ನೀಡಿದ್ದರು. ಆದರೆ ಸ್ಪೀಕರ್ ಚರ್ಚೆಗೆ ಅನುಮತಿ ನಿರಾಕರಿಸಿದರು. ಇದರಿಂದ ಕೆರಳಿದ ಇಂಡಿಯಾ ಬಣದ ನಾಯಕರು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷಗಳ ಸದಸ್ಯರು ಸರ್ಕಾರ ಮತ್ತು ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿಂದೆಂದೂ ಅಂಬೇಡ್ಕರ್ ಅವರಿಗೆ ಇಷ್ಟು ಅಪಮಾನ ಆಗಿರಲಿಲ್ಲ ಎಂದು ವಿಪಕ್ಷಗಳ ಸದಸ್ಯರೊಬ್ಬರು ಜೋರಾಗಿ ಹೇಳಿದರು.
ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಆಡಿದ ಮಾತುಗಳು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಎಡೆಮಾಡಿ ಕೊಟ್ಟಿವೆ. ಮೋದಿ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಇಂಡಿಯಾ ಬಣ ಸಂಸತ್ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿತು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರ ಜೊತೆ ಇಂಡಿಯಾ ಬಣದ ಹಲವು ಸಂಸದರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತಂತೆ ತಾವು ನೀಡಿದ ಹೇಳಿಕೆಗೆ ಅಮಿತ್ ಶಾ ಕ್ಷಮೆಯಾಚಿಸಬೇಕು ಮತ್ತು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದರು ಆಗ್ರಹಪಡಿಸಿದ್ದಾರೆ.