ವಾಷಿಂಗ್ಟನ್: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಆಗಸ್ಟ್ 1 ರಿಂದ ಶೇ. 25 ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಸಂಬಂಧ ತಮ್ಮದೇ ಒಡೆತನದ ‘ಟ್ರುತ್’ ಸಾಮಾಜಿಕ ಮಾಧ್ಯಮದಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಉಕ್ರೇನ್ ನಲ್ಲಿ ನಡೆಯುತ್ತಿರುವ ಮಾರಣಹೋಮವವನ್ನು ರಷ್ಯಾ ಕೂಡಲೇ ನಿಲ್ಲಿಸಬೇಕು ಎಂದು ಇಡೀ ಜಗತ್ತು ಒತ್ತಾಯಿಸುತ್ತಿರುವಾಗ ಭಾರತ ಮಾತ್ರ ರಷ್ಯಾದಿಂದ ಇಂಧನ ಖರೀದಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆದ್ದರಿಂದ ಆಗಸ್ಟ್ 1ರಿಂದ ಜಾರಿಯಾಗುವಂತೆ ಭಾರತಕ್ಕೆ ಶೇ. 25ರಷ್ಟು ಸುಂಕ ವಿಧಿಸಲಾಗಿದೆ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ತನ್ನ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದ್ದಕ್ಕಾಗಿ ಭಾರತ ದಂಡವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭಾರತ ನಮ್ಮ ಸ್ನೇಹಿತನಾಗಿದ್ದರೂ ಅವರೊಂದಿಗೆ ನಾವು ವ್ಯವಹಾರ ಮಾಡಿರುವುದು ತುಂಬಾ ಕಡಿಮೆ. ಅಮೆರಿಕದ ಸರಕುಗಳ ಮೇಲೆ ಭಾರತ ಅಧಿಕ ಸುಂಕ ವಿಧಿಸಿರುವುದೇ ಅದಕ್ಕೆ ಕಾರಣವಾಗಿದೆ. ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತ ಸರ್ಕಾರ ವಿಧಿಸುತ್ತಿರುವ ಸುಂಕ ಅಧಿಕಾವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.