ನ್ಯೂಯಾರ್ಕ್: ಮುಂದಿನ 24 ಗಂಟೆಯೊಳಗೆ ಭಾರತದ ಸರಕುಗಳ ಮೇಲಿನ ಸುಂಕವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಬೆದರಿಕೆ ಒಡ್ಡಿದ್ದಾರೆ. ಭಾರತವು ಅಮೆರಿಕದ ಉತ್ತಮ ವ್ಯಾಪಾರ ಪಾಲುದಾರ ದೇಶವಲ್ಲ. ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಆದ್ದರಿಂದ ಈ ಕ್ರಮ ಕೈಗೊಳ್ಳುತ್ತಿರುವದಾಗಿ ಅವರು ಪುನರುಚ್ಚರಿಸಿದ್ದಾರೆ.
ಜಗತ್ತಿನ ಬೇರೆ ದೇಶಗಳಿಗಿಂತ ಭಾರತ ಅತಿ ಹೆಚ್ಚು ಸುಂಕ ವಿಧಿಸುತ್ತದೆ, ಹೀಗಾಗಿ ಜನರು ಭಾರತದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಾವು ಅವರೊಂದಿಗೆ ಅತಿ ಚಿಕ್ಕ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಅದಕ್ಕೆ ಭಾರತ ವಿಧಿಸುತ್ತಿರುವ ಅತಿಯಾದ ಸುಂಕವೇ ಕಾರಣ ಎಂದು ಟ್ರಂಪ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಭಾರತ ನಮ್ಮೊಂದಿಗೆ ಅನೇಕ ವ್ಯಾಪಾರವನ್ನು ನಡೆಸುತ್ತಿದೆ. ಆದರೆ ಉತ್ತಮ ವ್ಯಾಪಾರ ಪಾಲುದಾರ ದೇಶವಲ್ಲ. ನಾವು ಅವರೊಂದಿಗೆ ವ್ಯಾಪಾರ ಬಯಸುವುದಿಲ್ಲ. ಹೀಗಾಗಿ ನಾವು ಶೇ 25 ರಷ್ಟು ಸುಂಕ ಹೇರಿದ್ದೇವೆ. ಬಹುಶಃ ಮುಂದಿನ 24 ಗಂಟೆಯಲ್ಲಿ ಗಣನೀಯವಾಗಿ ಇನ್ನಷ್ಟು ಹೆಚ್ಚಿಸಲಿದ್ದೇವೆ. ಏಕೆಂದರೆ ಭಾರತ ರಷ್ಯಾದಿಂದ ತೈಲವನ್ನು ಖರೀದಿಸಿ ಯುದ್ಧ ವಿಮಾನಗಳಿಗೆ ಇಂಧನವನ್ನು ತುಂಬಿಸುತ್ತಿದ್ದಾರೆ. ಅವರು ಅದನ್ನು ಮುಂದುವರಿಸಿದರೆ ನಾನು ಹೇಗೆ ಸಹಿಸಲಿ ಎಂದು ಹೇಳಿದ್ದಾರೆ.
ಸೋಮವಾರವೂ ಟ್ರಂಪ್ ಮಾತನಾಡುತ್ತಾ ಭಾರತದ ಸರಕುಗಳಿಗೆ ಸುಂಕವನ್ನು ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಹೇಳಿದ್ದರು.
ಟ್ರಂಪ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಭಾರತ, ಸುಂಕ ಹೇರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ದೇಶದ ಹಿತಾಸಕ್ತಿ ಕಾಯಲು ಎಲ್ಲ ರೀತಿಯ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರತಿಪಾದಿಸಿತ್ತು.