ಅಂಬೇಡ್ಕರ್ ಸತ್ಯ; ಆರೆಸ್ಸೆಸ್ ಸುಳ್ಳು

Most read

ಅಂಬೇಡ್ಕರ್ ಅವರು ಆರ್ ಎಸ್ ಎಸ್ ಕ್ಯಾಂಪಿಗೆ ಭೇಟಿ ನೀಡಿದ್ದರು ಎಂಬ ವಾದವು ಯಾವುದೇ ಸಾಕ್ಷಿ ಪುರಾವೆಗಳಿಲ್ಲದ ಆರ್.ಎಸ್.ಎಸ್ ನ ಕಪೋಲಕಲ್ಪಿತ ಕಟ್ಟುಕತೆಯಾಗಿದೆ. ಸತ್ಯಾಂಶವೇನೆಂದರೆ ಅಂಬೇಡ್ಕರ್ ರವರು ಆರ್.ಎಸ್.ಎಸ್ ವಿಚಾರಕ್ಕೆ ವಿರುದ್ಧವಾಗಿದ್ದರು – ವಿಕಾಸ್‌ ಆರ್‌ ಮೌರ್ಯ, ಹೋರಾಟಗಾರರು.

ದೇವನೂರ ಮಹಾದೇವ ಅವರ “ಆರ್.ಎಸ್.ಎಸ್ ಆಳ ಮತ್ತು ಅಗಲ” ಕೃತಿ ಮಾರುಕಟ್ಟೆಯಲ್ಲಿ ಎಡೆಬಿಡದೆ ಮಾರಾಟವಾಗಿ ಸಂಚಲನ ಮೂಡಿಸಿದ್ದೇ ಸರಿ. ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಕುರಿತು ಚುನಾವಣೆ ಸಂದರ್ಭದಲ್ಲಿ ದಲಿತ ಓಟುಗಳನ್ನು ಕೋಮುವಾದಿಗಳ ಮಡಿಲಿಗೆ ಹಾಕಿಕೊಳ್ಳಲು RSS ಹೇಳಿದ್ದ ಎಲ್ಲಾ ಹಸಿ ಸುಳ್ಳುಗಳು ಕರ್ನಾಟಕಕ್ಕೂ ಬಂದಿತು. ಈ ಕಾರಣಕ್ಕಾಗಿಯೇ ಕಣ್ಬಿಟ್ಟು ಚಿನ್ನದ ರಸ್ತೆಯ ಕನಸು ಕಂಡಿದ್ದ ಚಕ್ರವರ್ತಿ ಸೂಲಿಬೆಲೆಯವರಿಂದ ಹಿಡಿದು ವಾಟ್ಸಾಪ್ ಯೂನಿವರ್ಸಿಟಿಯನ್ನೇ ಉಸಿರಾಡಿ ನೆತ್ತಿಗೇರಿಸಿಕೊಂಡಿರುವ ಹಲವರು “ಆರ್ ಎಸ್ ಎಸ್ ಆಳ ಮತ್ತು ಅಗಲ” ದ ವಿರುದ್ಧ ವಸ್ತುನಿಷ್ಟ ವಿಮರ್ಶೆಗಿಳಿಯದೇ ಸುಳ್ಳು-ಸುಳ್ಳುಗಳನ್ನೇ ಹರಿಯಬಿಟ್ಟರು. ಇದೇನು ಹೊಸದಲ್ಲ. ಮಿಥ್ಯೆಯೇ ಆರ್ ಎಸ್ ಎಸ್ ಮತ್ತು ಅದರ ಬೆಂಬಲಿಗರ ಪ್ರಾಣ ಮತ್ತು ತಾಣ.

ಈಗ ಈ ಸುಳ್ಳಿನ ಸರದಾರರು ಮಹಾನ್ ಸುಳ್ಳೊಂದನ್ನು ಹರಿಯಬಿಟ್ಟಿದ್ದಾರೆ. ಅವರ ಪ್ರಕಾರ ದಿನಾಂಕ 12-05-1939 ರಂದು ಪುಣೆ ನಗರದ ಭಾವೆ ಶಾಲಾ ಆವರಣದಲ್ಲಿ ನಡೆದ ಆರ್.ಎಸ್.ಎಸ್ ಶಿಬಿರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಭೇಟಿ ನೀಡಿದ್ದರಂತೆ! ಜೊತೆಗೆ ಭಾಷಣವನ್ನೂ ಮಾಡಿದ್ದರಂತೆ! ಆ ಭಾಷಣದಲ್ಲಿ ಅಂಬೇಡ್ಕರ್ ಅವರು ಆರ್.ಎಸ್.ಎಸ್ ಅನ್ನು ಹೊಗಳಿದ್ದರಂತೆ! ಹೀಗೆ ಇವರ ಪುಂಖಾನುಪುಂಖ ಸುಳ್ಳುಗಳು ಮುಂದುವರೆಯುತ್ತವೆ. ಈ ಸುಳ್ಳು ಹೊಸದೇನಲ್ಲ. ಮಹಾರಾಷ್ಟ್ರದಲ್ಲಿ ಹಾಗೂ ಉತ್ತರಪ್ರದೇಶದ ಚುನಾವಣೆಗಳಲ್ಲಿ ಹಾಗೂ  2014 ರ ನಂತರದ ಚುನಾವಣೆಗಳಲ್ಲಿ ಇಂತಹ ಹಲವು ಸುಳ್ಳುಗಳನ್ನು ಹರಿಯಬಿಡಲಾಗಿತ್ತು. ಆದರೆ ದಲಿತ ಚಿಂತಕರು ಈ ಸುಳ್ಳನ್ನು ಸಾಕ್ಷಿ ಸಮೇತ ಹೊಡೆದು ಬಿಸಾಕಿದ್ದಾರೆ.

ಈಗ ಅಂಬೇಡ್ಕರರು ಪುಣೆಯ ಆರ್.ಎಸ್.ಎಸ್ ಕ್ಯಾಂಪಿಗೆ ಭೇಟಿ ನೀಡಿದ್ದರು ಎಂಬ ಸುಳ್ಳಿನ ಬಗ್ಗೆ ಬರೋಣ. ನೀವು ಈ ಸುಳ್ಳಿನ ಕುರಿತು ಗೂಗಲ್ ನಲ್ಲಿ ಒಂದು ಸರ್ಚ್ ಮಾಡಿದರೆ ಸಾಕು ಸತ್ಯ ತಿಳಿದುಬಿಡುತ್ತದೆ. ಆದರೆ ನಮ್ಮ ಜನಕ್ಕೆ ಪುರುಸೊತ್ತೆಲ್ಲಿದೆ? ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳುಗಳನ್ನೇ ಸತ್ಯವೆಂದು ನಂಬಿ ಫಾರ್ವರ್ಡ್ ಮಾಡಿಬಿಡುವುದೇ ಇವರ ಜ್ಞಾನ-ಅಜ್ಞಾನ! ಇರಲಿ, ಈ ಮೇಲಿನ ಸುಳ್ಳನ್ನು ಮೊದಲು ಹರಿಯಬಿಟ್ಟಿದ್ದು ಆಯುಷ್ ನದೀಂಪಳ್ಳಿ ಮತ್ತು ರಾಹುಲ್ ಎ ಶಾಸ್ತ್ರಿ ಎಂಬ ಆರ್ ಎಸ್ ಎಸ್ ಬ್ರಾಹ್ಮಣ ಸ್ನೇಹಿತರು ಬರೆದಿರುವ ಪುಸ್ತಕ The Founder of RSS: Dr. Hedgewar seer Patriot and Nation Builder ಎಂಬ ಪುಸ್ತಕದಲ್ಲಿ. ಈ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಆರ್.ಎಸ್.ಎಸ್ ಸಭೆಗೆ ಭೇಟಿ ನೀಡಿದ್ದರ ಬಗ್ಗೆ ಯಾವುದೇ ಮಾಹಿತಿ ಮೂಲವನ್ನು ತಿಳಿಸಿಲ್ಲ. ಪತ್ರಿಕಾ ವರದಿಯನ್ನೂ ಸಾಕ್ಷಿಯನ್ನೂ ನೀಡಿಲ್ಲ. ಒಂದು ಕಪೋಲಕಲ್ಪಿತ ಕತೆಯನ್ನು ಹೆಣೆದಿದ್ದರು.

ಮತ್ತೊಂದು “ಆರ್ ಎಸ್ ಎಸ್” ಎಂಬ ಪುಸ್ತಕದ ಕರ್ತೃ ಎಂ.ಜಿ. ಚಿತ್ಕಾರ ಬರೆದಿರುವ Dr. Ambedkar and Social Justice ನಲ್ಲಿ ಈ ಮೇಲಿನ ಸುಳ್ಳಿನ ಜೊತೆಗೆ ಅಂಬೇಡ್ಕರರು 1936 ರ ಮಕರ ಸಂಕ್ರಾಂತಿಯಂದು ಆರ್ ಎಸ್ ಎಸ್ ಶಾಖೆಗೆ ಭೇಟಿ ನೀಡಿದ್ದರೆಂದು ಬರೆಯಲಾಗಿದೆ. ಆದರೆ ಈ ಸುಳ್ಳಿನ ಸರದಾರರು ಯಥಾಪ್ರಕಾರ ಯಾವುದೇ ಮಾಹಿತಿ ಮೂಲವನ್ನು ಹಾಗೂ ಪತ್ರಿಕಾ ವರದಿಯನ್ನು ಉಲ್ಲೇಖಿಸಿಲ್ಲ.

ಇನ್ನು ಮತ್ತೊಂದು ಸುಳ್ಳಿನ ಮಾರ್ಗವನ್ನು ಈ ಕುರಿತು ಹೆಣೆಯಲಾಗಿದೆ. ಅಂಬೇಡ್ಕರರು ಸ್ಥಾಪಿಸಿದ್ದ ರಾಜಕೀಯ ಪಕ್ಷ ಶೆಡ್ಯುಲ್ಡ್ ಕ್ಯಾಸ್ಟ್ ಫೆಡರೇಶನ್ ನಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಬಾಳಾಸಾಹೇಬ್ ಸಾಳುಂಕೆಯವರ ದಿನಚರಿಯಿಂದ ಈ ಮೇಲಿನ ಮಾಹಿತಿಯನ್ನು ತೆಗೆದುಕೊಳ್ಳಲಾಗಿದೆ ಎಂಬ ಸುಳ್ಳು. ಅದರ ಕತೆಯೂ ಅಷ್ಟೆ. ಬಾಳಾಸಾಹೇಬ್ ಸಾಳುಂಕೆ ಅವರ ದಿನಚರಿಯಲ್ಲಿದ್ದದ್ದನ್ನು ಅವರ ಮಗ ಕಶ್ಯಪ್ ಸಾಳುಂಕೆ ಹಾಗೂ ಮತ್ತೋರ್ವ ಆರ್ ಎಸ್ ಎಸ್ ಸದಸ್ಯ ಭಾನುದಾಸ್ ಗಾಯಕ್ವಾಡ್ ‘ಆಮ್ಚೆ ಸಾಹೇಬ್’ (ನಮ್ಮ ಸಾಹೇಬ್) ಎಂಬ ಹೆಸರಿನಲ್ಲಿ ಪುಸ್ತಕವನ್ನು ಸಂಪಾದಿಸಿದ್ದಾರೆ. ಈ ಪುಸ್ತಕಕ್ಕೆ ಬಿಜೆಪಿ ಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಕೇಶ್ ಸಿನ್ಹಾ ಮುನ್ನುಡಿಯನ್ನು ಬರೆದಿದ್ದಾರೆ. ಈ ರಾಕೇಶ್ ಸಿನ್ಹಾ ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್ ಜೀವನಚರಿತ್ರೆಯನ್ನು ಬರೆದಿದ್ದಾರೆ ಜೊತೆಗೆ ಆರ್ ಎಸ್ ಎಸ್ ನಲ್ಲಿ ಫೇಕ್ ಥಿಂಕ್ ಟ್ಯಾಂಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೆ ನಿಮಗೆಲ್ಲ ಅರ್ಥವಾಗಿದೆ ಎಂದುಕೊಳ್ಳುತ್ತೇನೆ. ಈ ಆಮ್ಚೆ ಸಾಹೇಬ್ ಕೃತಿಯಲ್ಲಿ ಬಾಳಾಸಾಹೇಬ್ ಸಾಳುಂಕೆ ತಮ್ಮ ದಿನಚರಿಯಲ್ಲಿ ಅಂಬೇಡ್ಕರರು ಪುಣೆಯ ಆರ್ ಎಸ್ ಎಸ್ ಕ್ಯಾಂಪಿಗೆ ಭೇಟಿ ನೀಡಿದ್ದರು ಎಂಬುದಾಗಿ ಬರೆಯಲಾಗಿದೆ. ಆದರೆ ಯಾವುದೇ ಸಾಕ್ಷಿ ಪುರಾವೆಗಳನ್ನು ನೀಡಿಲ್ಲ. ಯಾಕೇಳಿ? ಅಲ್ಲಿದ್ದರೆ ತಾನೆ? ಮಹಾರಾಷ್ಟ್ರದ ಅಂಬೇಡ್ಕರೈಟ್ ಗಳು ದಿನಚರಿಯ ಫೋಟೋ ಕಾಪಿ ಕೇಳಿದ್ದರೂ ಸಹ ನೀಡಿಲ್ಲ. ಹಾಗಾಗಿ ಇದನ್ನೂ ಶುದ್ಧ ಸುಳ್ಳೆಂದು ಅವರು ಸಾರಿದ್ದಾರೆ.

ಇದಿಷ್ಟು ಅಸಲಿ ಕತೆ ನೋಡಿ. ಅಂಬೇಡ್ಕರರ ಬಗ್ಗೆ ಇದುವರೆಗೆ ಇರುವ ಅಧಿಕೃತ ಮಾಹಿತಿ ಎಂದರೆ ಅಂಬೇಡ್ಕರರ ಪರಿನಿಬ್ಬಾಣದ ನಂತರ ಅವರ ಕುಟುಂಬ 1991 ರಲ್ಲಿ ನೀಡಿದ್ದ ಬರೆಹಗಳು ಮತ್ತು ಭಾಷಣಗಳಾಗಿವೆ ಹಾಗೂ ಅಂಬೇಡ್ಕರ್ ಅವರು ಸ್ಥಾಪಿಸಿದ ಪತ್ರಿಕೆಗಳಾಗಿವೆ. ಈಗ ಅವೆಲ್ಲವೂ ಡಾ. ಬಾಬಾಸಾಹೇಬ್  ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಎಂಬ ಶೀರ್ಷಿಕೆಯಲ್ಲಿ 22 ಸಂಪುಟಗಳಲ್ಲಿ ಲಭ್ಯವಿದೆ. ಕರ್ನಾಟಕ ಸರ್ಕಾರವೂ ಸಹ ಆ ಎಲ್ಲಾ ಸಂಪುಟಗಳನ್ನು ಕನ್ನಡೀಕರಿಸಿದೆ. ಈ 22 ಸಂಪುಟಗಳಲ್ಲಿಯೂ ಸಹ ನಮಗೆ ಅಂಬೇಡ್ಕರ್ ಅವರು ಆರ್ ಎಸ್ ಎಸ್ ಶಾಖೆಗೆ ಭೇಟಿ ನೀಡಿದ್ದರ ಬಗ್ಗೆ ಕಿಂಚಿತ್ತು ಸುಳಿವೂ ಸಹ ಸಿಗುವುದಿಲ್ಲ. ಆದರೆ ಹಿಂದೂ ಮಹಾಸಭಾ, ಆರ್ ಎಸ್ ಎಸ್, ಹಿಂದೂರಾಷ್ಟ್ರವಾದಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿರುವುದು ಕಂಡುಬರುತ್ತದೆ. ಹಾಗಾಗಿ ಅಂಬೇಡ್ಕರ್ ಅವರು ಆರ್ ಎಸ್ ಎಸ್ ಕ್ಯಾಂಪಿಗೆ ಭೇಟಿ  ನೀಡಿದ್ದರು ಎಂಬ ವಾದವು ಯಾವುದೇ ಸಾಕ್ಷಿ ಪುರಾವೆಗಳಿಲ್ಲದ ಆರ್.ಎಸ್.ಎಸ್ ನ ಕಪೋಲಕಲ್ಪಿತ ಕಟ್ಟುಕತೆಯಾಗಿದೆ.

ಹೀಗೆ.. ಅಂಬೇಡ್ಕರ್ ವಾದಿಗಳು ಸರಿಯಾಗಿ ರುಬ್ಬಿದ ನಂತರ ಈಗ 1940 ರಲ್ಲಿ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬ ಸುಳ್ಳು ಹರಡುತ್ತಿದ್ದಾರೆ. ಇವರ ಸುಳ್ಳಿಗೆ ಅಂತ್ಯವಿಲ್ಲ.

ಹೆಚ್ಚು ಶೇರ್ ಮಾಡಿ. ಈ ಸುಳ್ಳರ ಬಣ್ಣ ಬಯಲು ಮಾಡಿ. ಜೈ ಭೀಮ್…

ವಿಕಾಸ್‌ ಆರ್‌ ಮೌರ್ಯ

ಬರಹಗಾರ ಮತ್ತು ಹೋರಾಟಗಾರ

More articles

Latest article