ವರ್ತಮಾನದ ಭಾರತಕ್ಕೆ ಅಂಬೇಡ್ಕರ್‌ ಅನಿವಾರ್ಯವಲ್ಲವೇ?

Most read

ನಿಜ. ಅಮಿತ್‌ ಶಾ ಅವರು ಹೇಳಿರುವಂತೆ ಅಂಬೇಡ್ಕರ್‌ ಧ್ಯಾನಿಸಿದರೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಮೋಕ್ಷವೂ ದೊರೆಯುವುದಿಲ್ಲ. ಈ ಕಟುಸತ್ಯವನ್ನೂ ಭಾರತದ ಶೋಷಿತ ಜನತೆ ಅರಿತಿದ್ದಾರೆ. ಬುದ್ಧಮಾರ್ಗದಲ್ಲಿ ನಡೆಯುವ ಅಂಬೇಡ್ಕರ್‌ ಚಿಂತನೆಗಳಲ್ಲಿ ಸ್ವರ್ಗ, ಮೋಕ್ಷ ಇತ್ಯಾದಿಗಳಿಗೆ ಜಾಗವೇ ಇರುವುದಿಲ್ಲ. ಈ ಜನತೆಗೆ ಲೌಕಿಕ ಮೋಕ್ಷ ಕಾಣುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿ, ಅವರ ವಿಚಾರಧಾರೆಗಳಲ್ಲಿ ಮತ್ತು ಅವರು ಹಾಕಿಕೊಟ್ಟ ಜಾತಿವಿನಾಶದ-ಸಮ ಸಮಾಜದ ಕ್ರಾಂತಿಕಾರಕ ಹಾದಿಯಲ್ಲಿ – ನಾ ದಿವಾಕರ

ಅಂಬೇಡ್ಕರ್‌ ಅವರನ್ನು ಧ್ಯಾನಿಸುವುದು ಒಂದು ಫ್ಯಾಷನ್‌ ಆಗಿದೆ, ಅವರನ್ನು ಧ್ಯಾನಿಸುವಷ್ಟು ಮಟ್ಟಿಗೆ ಅಥವಾ ಧ್ಯಾನಿಸುವ ಬದಲು ದೇವರನ್ನು ಧ್ಯಾನಿಸಿದ್ದರೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂಬ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಹೇಳಿಕೆ ದೇಶಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಹಜವಾಗಿಯೇ ದೇಶದ ದಲಿತ-ಶೋಷಿತ ಜನತೆ (ಬಿಜೆಪಿ ಸದಸ್ಯರನ್ನು ಹೊರತುಪಡಿಸಿ) ಮತ್ತು ಪ್ರಗತಿಪರ ಮನಸ್ಸುಗಳು ಅಮಿತ್‌ ಶಾ ಅವರ ಹೇಳಿಕೆಯಿಂದ ಆಘಾತಕ್ಕೊಳಗಾಗಿವೆ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಸಾಂವಿಧಾನಿಕ ನಿಯಮಗಳ ಅನುಸಾರ ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಗೃಹಸಚಿವರು ಸಂವಿಧಾನ ಕರ್ತೃವನ್ನೇ ಅಪಮಾನಿಸಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಮಿತ್‌ ಶಾ ಅವರ ಹೇಳಿಕೆಯನ್ನು ಮೂರು ಆಯಾಮಗಳಲ್ಲಿ ನಿಷ್ಕರ್ಷೆಗೊಳಪಡಿಸಬಹುದು.

ಮೊದಲನೆಯದಾಗಿ ಅಂಬೇಡ್ಕರ್‌ ಹಾಕಿಕೊಟ್ಟ ಸಾಂವಿಧಾನಿಕ ಹಾದಿಯನ್ನು ಕ್ರಮಿಸುವ ಮೂಲಕವೇ ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು ಎಂಬ ವಿಶ್ವಾಸದೊಂದಿಗೆ ಬದುಕುತ್ತಿರುವ ದೇಶದ ತಳಸಮುದಾಯಗಳಿಗೆ ಹಾಗೂ ಶೋಷಿತ ಜನತೆಗೆ ಅಂಬೇಡ್ಕರ್‌ ಅವರನ್ನು ಧ್ಯಾನಿಸುವುದರಿಂದ ನಿಮಗೇನೂ ಪ್ರಯೋಜನವಾಗುವುದಿಲ್ಲ ಎಂಬ ಸಂದೇಶ.

ಎರಡನೆಯದಾಗಿ, ಬುದ್ಧನನ್ನು ದೈವೀಕರಿಸಿದಂತೆಯೇ ಬುದ್ಧಧಮ್ಮದ ಪ್ರತಿಪಾದಕ ಹಾಗೂ ಮೂರ್ತಿಭಂಜಕ ಅಂಬೇಡ್ಕರ್‌ ಅವರನ್ನು ಮೂರ್ತೀಕರಿಸಿ (Iconise) ಶೋಷಿತ ಜನತೆಯನ್ನು ಪ್ರಾಚೀನ ಸಾಂಪ್ರದಾಯಿಕತೆಯತ್ತ ದೂಡುವುದು.

ಮೂರನೆಯದಾಗಿ 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭಾರತದ ಬಹುಸಂಖ್ಯಾತ ಜನರು ತಮ್ಮ ಉತ್ತಮ-ಉಜ್ವಲ ಭವಿಷ್ಯಕ್ಕಾಗಿ, ಮತ್ತೆ ಮತ್ತೆ ಅಂಬೇಡ್ಕರ್‌ ಅವರತ್ತಲೇ ನೋಡುತ್ತಿರುವುದನ್ನು ಲೇವಡಿ ಮಾಡುವುದು.

ಅಮಿತ್‌ ಶಾ

ಆದರೆ ಈ ಮೂರನೆಯ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಾದ್ದು ನಮ್ಮ ಪ್ರಜಾಪ್ರಭುತ್ವವನ್ನು ನಿರ್ವಹಿಸುತ್ತಿರುವ ಜನಪ್ರತಿನಿಧಿಗಳ-ನಾಗರಿಕರ ಕರ್ತವ್ಯ. ಕೇವಲ ಮೂರು ದಶಕಗಳ ಹಿಂದೆ ಅಂಬೇಡ್ಕರ್‌ ಭಾರತದ ಸಾರ್ವಜನಿಕ ಸಂಕಥನಗಳ ಕೇಂದ್ರ ಬಿಂದು ಆಗಿರಲಿಲ್ಲ. ಕೇವಲ ಅಕಾಡೆಮಿಕ್‌ ವಲಯಗಳ ಚಿಂತನ-ಮಂಥನಗಳಿಗೆ ಸೀಮಿತವಾಗಿದ್ದರು. 1991ರ ನಂತರದ ಮಾರುಕಟ್ಟೆ ಆರ್ಥಿಕತೆ ಮತ್ತು 2014ರ ನಂತರದ ಬಹುಸಂಖ್ಯಾವಾದಿ ಅಧಿಕಾರ ರಾಜಕಾರಣ ಜನರ ಈ ಕೊರತೆಯನ್ನು ನೀಗಿಸಿದೆ. ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವ ಅರಿವಿನ ಹಿಂದೆ ಅಂಬೇಡ್ಕರ್‌ ಇದ್ದಾರೆ.

ಅಂಬೇಡ್ಕರ್‌ ಈಗ ಬೇಕಲ್ಲವೇ?

ಹೌದು, ಶೋಷಿತ ಜನತೆ ಏಕೆ ನಿತ್ಯ ಅಂಬೇಡ್ಕರ್‌ ಎಂದು ಜಪಿಸುತ್ತಾರೆ ? ಇದು ಪ್ರತಿಯೊಬ್ಬ ಮೇಲ್ಜಾತಿ ವ್ಯಕ್ತಿಗೆ, ಸಿರಿವಂತನಿಗೆ, ರಾಜಕೀಯ ನಾಯಕರಿಗೆ, ಕಾರ್ಪೋರೇಟ್‌ ಮಾರುಕಟ್ಟೆಯ ಪ್ರತಿನಿಧಿಗಳಿಗೆ ಹಾಗೂ ಪುರುಷಾಹಮಿಕೆಯ ಮನಸ್ಸುಗಳಿಗೆ ಕಾಡಬೇಕಾದ ಪ್ರಶ್ನೆ. ಏಕೆಂದರೆ ಕಳೆದ ಏಳು ದಶಕಗಳ ಆಳ್ವಿಕೆ ಈ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಇಂದಿಗೂ ಸಂಪರ್ಕಿಸಲು ಸಾಧ್ಯವಾಗಿಲ್ಲ. ಸಂವಿಧಾನದ ಅಪೇಕ್ಷೆಯಂತೆ ಅಸ್ಪೃಶ್ಯತೆ ಕೊನೆಯಾಗಿಲ್ಲ, ಜಾತಿ ದೌರ್ಜನ್ಯಗಳು ನಿಂತಿಲ್ಲ, ಮಹಿಳಾ ದೌರ್ಜನ್ಯಗಳು ಕಡಿಮೆಯಾಗಿಲ್ಲ, ಬಡತನ-ಹಸಿವು-ನಿರ್ವಸತಿ ಸಮಸ್ಯೆಗಳು ನಿವಾರಣೆಯಾಗಿಲ್ಲ, ಕನಿಷ್ಠ ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಎಲ್ಲರನ್ನೂ ತಲುಪಿಲ್ಲ, ಅಸಮಾನತೆಯ ನೆಲೆಗಳು ಮರೆಯಾಗಿಲ್ಲ, ಬಡವ-ಶ್ರೀಮಂತರ ನಡುವಿನ ಅಂತರ ಕುಗ್ಗಿಲ್ಲ,  ಅಲ್ಪಸಂಖ್ಯಾತರ ಆದಿವಾಸಿಗಳ ಹಾಗೂ ಅವಕಾಶವಂಚಿತರ ಜೀವನಾವಶ್ಯಕತೆಗಳು ಪರಿಪೂರ್ಣವಾಗಿಲ್ಲ. ಸಮಾಜವಾದ, ಗಾಂಧಿವಾದ, ಲೋಹಿಯಾವಾದ ಮೊದಲಾದ ಉನ್ನತ ಚಿಂತನಾಧಾರೆಗಳನ್ನು ಆಳ್ವಿಕೆಯಲ್ಲಿ ಅಳವಡಿಸಿದ್ದರೂ ಈ ಸಮಸ್ಯೆಗಳಿನ್ನೂ ಜೀವಂತವಾಗಿದೆಯಲ್ಲವೇ? ಈ ಜಟಿಲ ಸಿಕ್ಕುಗಳಲ್ಲಿ ಸಿಲುಕಿರುವ ಶೋಷಿತ ಸಮುದಾಯಗಳು ಯಾರತ್ತ ನೋಡಬೇಕು?

ಮಾನ್ಯ ಅಮಿತ್‌ ಶಾ ಅವರು ಹೇಳಿರುವಂತೆ ಅಂಬೇಡ್ಕರ್‌ ಅವರನ್ನು ಧ್ಯಾನಿಸುವುದು ತಳಸಮುದಾಯಗಳಲ್ಲಿ ಫ್ಯಾಷನ್‌ ಅಲ್ಲ. ಒಂದು ನೆಲೆಯಲ್ಲಿ ಅದು Passion (ಭಾವಾತಿರೇಕ) ಆಗಿರುವುದು ವಾಸ್ತವ. ಏಕೆಂದರೆ ನಿರಂತರ ಶೋಷಣೆ, ದೌರ್ಜನ್ಯ ಮತ್ತು ತಾರತಮ್ಯಗಳಿಗೆ ಒಳಗಾಗುವ ಒಂದು ಸಮಾಜ ಈ ಅಪಾಯಗಳಿಗೆ ಕಾರಣವಾದ ಮೇಲ್ಪದರದ ಸಮಾಜ, ಆಳುವ ಸರ್ಕಾರ ಮತ್ತು ಸಾಂಪ್ರದಾಯಿಕ ಸಮಾಜ ಮತ್ತು ಇವೆಲ್ಲವನ್ನೂ ನಿಯಂತ್ರಿಸುವ ಸಾಂಸ್ಥಿಕ-ಸಾಂಘಿಕ ಶಕ್ತಿಗಳ ವಿರುದ್ಧ ದನಿ ಎತ್ತಲು ಬಯಸುತ್ತದೆ. ಮತ್ತೊಂದೆಡೆ ಸಾಂಸ್ಥಿಕ ನೆಲೆಯಲ್ಲಿ ಭಾರತದ ಪ್ರಜಾಪ್ರಭುತ್ವ ಅಂಬೇಡ್ಕರ್‌ ಪ್ರತಿಪಾದಿಸಿದ ಸಾಂವಿಧಾನಿಕ ಆಶಯಗಳಿಗೆ ವಿಮುಖವಾಗುತ್ತಲೇ ಇದೆ. ಅವರು ಬಲವಾಗಿ ಪ್ರತಿಪಾದಿಸಿದ ಸಾಂವಿಧಾನಿಕ ನೈತಿಕತೆ (Constitutional Morality) ಇಂದು ವಸ್ತುಪ್ರದರ್ಶನದ ಸುಂದರ ಪ್ರತಿಮೆಯಾಗಿ ಮಾತ್ರ ಉಳಿದಿದೆ. 75 ವರ್ಷಗಳ ಸ್ವತಂತ್ರ ಸಂಸದೀಯ ಪ್ರಜಾತಂತ್ರದಲ್ಲಿ ಭವಿತವ್ಯಕ್ಕೆ ಮಾದರಿಯಾಗಬಹುದಾದ ಒಂದೇ ಒಂದು ವ್ಯಕ್ತಿತ್ವವನ್ನು ರೂಪಿಸಲು ನಮಗೆ ಸಾಧ್ಯವಾಗಿಲ್ಲ. ಹಾಗಾಗಿ ಜನರು ಅಂಬೇಡ್ಕರ್‌, ಅಂಬೇಡ್ಕರ್‌ ಎಂದು ಧ್ಯಾನಿಸುತ್ತಾರೆ.

ಶಾ ಹೇಳಿಕೆ ವಿರೋಧಿಸಿ ಕಾಂಗ್ರೆಸ್‌ ನಿಂದ ಪ್ರತಿಭಟನೆ

ನಿಜ ಅಮಿತ್‌ ಶಾ ಅವರು ಹೇಳಿರುವಂತೆ ಅಂಬೇಡ್ಕರ್‌ ಧ್ಯಾನಿಸಿದರೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಮೋಕ್ಷವೂ ದೊರೆಯುವುದಿಲ್ಲ. ಈ ಕಟುಸತ್ಯವನ್ನೂ ಭಾರತದ ಶೋಷಿತ ಜನತೆ ಅರಿತಿದ್ದಾರೆ. ಬುದ್ಧಮಾರ್ಗದಲ್ಲಿ ನಡೆಯುವ ಅಂಬೇಡ್ಕರ್‌ ಚಿಂತನೆಗಳಲ್ಲಿ ಸ್ವರ್ಗ, ಮೋಕ್ಷ ಇತ್ಯಾದಿಗಳಿಗೆ ಜಾಗವೇ ಇರುವುದಿಲ್ಲ. ಈ ಜನತೆಗೆ ಲೌಕಿಕ ಮೋಕ್ಷ ಕಾಣುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿ, ಅವರ ವಿಚಾರಧಾರೆಗಳಲ್ಲಿ ಮತ್ತು ಅವರು ಹಾಕಿಕೊಟ್ಟ ಜಾತಿವಿನಾಶದ-ಸಮ ಸಮಾಜದ ಕ್ರಾಂತಿಕಾರಕ ಹಾದಿಯಲ್ಲಿ. ಆಳುವ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್‌ ಅವರ ಪ್ರತಿಮೆ ಒಂದು ರಾಜಕೀಯ ಮುನ್ನಡೆಯ ಚಿಮ್ಮುಹಲಗೆಯಾಗಿ (Launching pad)  ಕಾಣುತ್ತದೆ. ಆದರೆ ಶೋಷಿತರಿಗೆ ಅದು ಸಾಂತ್ವನದ ನೆಲೆಯಾಗಿ ಗೋಚರಿಸುತ್ತದೆ.

ಅಂಬೇಡ್ಕರ್‌ ಬಯಸಿದ ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆ ಭಾರತದ ಸಂಸದೀಯ ಹಾದಿಯಿಂದ ಕಾಣೆಯಾಗಿದೆ. ಆಡಳಿತಾತ್ಮಕವಾಗಿ ಹಾಗೂ ಸಾಂಸ್ಥಿಕವಾಗಿ ಭಾರತ ದಿನದಿಂದ ದಿನಕ್ಕೆ ಪ್ರಾಚೀನ ಅಂಧ ವಿಶ್ವಾಸಗಳತ್ತ ವಾಲುತ್ತಿದೆ. 75 ವರ್ಷಗಳ ಆಧುನಿಕ ಭಾರತ, ನಮ್ಮ ನಡುವೆ ಅಸ್ಪೃಶ್ಯತೆಯಂತಹ ಹೀನಾಚರಣೆಯನ್ನು ಸಮ್ಮತಿಸುವ, ಸಾಮಾಜಿಕ ಬಹಿಷ್ಕಾರವನ್ನು ವೈಭವೀಕರಿಸುವ, ʼಅನ್ಯʼ ರ ಸಾವನ್ನು ಸಂಭ್ರಮಿಸುವ, ಮಹಿಳಾ ದೌರ್ಜನ್ಯಗಳಿಗೆ ಕುರುಡಾಗುವ, ಹಸಿವು-ಬಡತನಕ್ಕೆ ಬೆನ್ನು ತಿರುಗಿಸುವ, ಮೂಢನಂಬಿಕೆ-ಮೌಢ್ಯಾಚರಣೆಗಳನ್ನು ಪ್ರೋತ್ಸಾಹಿಸುವ ಒಂದು ಸಮಾಜವನ್ನು ಸೃಷ್ಟಿಸಿದೆ. ಈ ಹಾದಿಯಲ್ಲಿ ಸಾಗಿದರೆ ದೇಶದ ಭವಿಷ್ಯ ಏನಾಗಬಹುದು ? ಇಲ್ಲಿ ಅಂಬೇಡ್ಕರ್‌ ಅವರ ವೈಚಾರಿಕ ಬುದ್ಧಪ್ರಜ್ಞೆ ಸಾಮಾನ್ಯರ ಆಶಾದೀವಿಗೆಯಾಗಿ ಕಾಣುತ್ತದೆ.

ವರ್ತಮಾನದ ಸಮಾಜದಲ್ಲಿ

ಇದಕ್ಕೆ ಪರ್ಯಾಯವಾಗಿ ಹಿಂದೂ ರಾಷ್ಟ್ರೀಯವಾದ ಅಥವಾ ರಾಜಕೀಯ ಬಹುಸಂಖ್ಯಾವಾದ ಏನನ್ನು ಸೂಚಿಸುತ್ತದೆ?. ಅದೇ ಪ್ರಾಚೀನ ವರ್ಣವ್ಯವಸ್ಥೆಯ ವೈಭವೀಕರಣ, ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಮರ್ಥನೆ, ಮಂದಿರ-ಮಸೀದಿ-ಚರ್ಚುಗಳ ಸುತ್ತಲಿನ ಸಂಘರ್ಷಗಳು, ಧರ್ಮದ ಹೆಸರಿನಲ್ಲಿ ಸಾಮಾನ್ಯರ ಶೋಷಣೆ, ಪಿತೃಪ್ರಧಾನ ಊಳಿಗಮಾನ್ಯ ಮೌಲ್ಯಗಳ ಆಧಿಪಥ್ಯ ಇತ್ಯಾದಿ ಇತ್ಯಾದಿ. ಇವೆಲ್ಲವೂ ಭಾರತೀಯ ಸಮಾಜವನ್ನು ಇನ್ನಷ್ಟು  ಮತ್ತಷ್ಟು ವಿಘಟಿಸುತ್ತಲೇ ಹೋಗುತ್ತವೆ. ಈ ವಿಭಜನೆ-ವಿಘಟನೆಯ ಹಾದಿಯಲ್ಲಿ ತಳಸಮಾಜದಲ್ಲಿ ಹುದುಗಿರುವ ನೋವು ಸಂಕಟ ಆತಂಕಗಳ ಉತ್ಖನನವಾಗುವುದಿಲ್ಲ, ಬದಲಾಗಿ ಯಾವುದೋ ಮಸೀದಿಯಲ್ಲಿ ಹುದುಗಿದ ಹಳೆಯ ದೇವಸ್ಥಾನದ ಪಳೆಯುಳಿಕೆಗಳ ಉತ್ಖನನವಾಗುತ್ತದೆ. ಅಂಬೇಡ್ಕರ್‌ ಎಲ್ಲರನ್ನೂ ಒಂದುಗೂಡಿಸಬಹುದಾದ ಮೊದಲನೇ ಉತ್ಖನನದ ಪ್ರತಿಪಾದಕರಾಗಿದ್ದಾರೆ. ನಾವು ಸಮಾಜವನ್ನು ವಿಘಟನೆಯತ್ತ ಒಯ್ಯುವ ಎರಡನೆಯ ಮಾದರಿಗೆ ಜೋತು ಬಿದ್ದಿದ್ದೇವೆ.

ಭಾರತದ ಜನತೆಯನ್ನು ವೈಚಾರಿಕತೆಯ ದಾರಿಯಲ್ಲಿ, ವೈಜ್ಞಾನಿಕ ಪಥದಲ್ಲಿ ಕರೆದೊಯ್ಯುವ ಜವಾಬ್ದಾರಿ ನಾಗರಿಕ ಜಗತ್ತಿನ ಮೇಲಿದೆ. ಈ ಹಾದಿಯಲ್ಲಿ ನಮಗೆ ಅಂಬೇಡ್ಕರ್‌ ಬೆಂಗಾವಲಾಗಿ ನಿಲ್ಲುತ್ತಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅಂಬೇಡ್ಕರ್‌ ಬೇಕು ಎನಿಸುವುದು ಈ ತಳಸಮಾಜದ ಜನರಿಗಾಗಿ ಮತ್ತು ಅವರು ಕಾಣಬಯಸುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಮ ಸಮಾಜಕ್ಕಾಗಿ. ಇದು ಶೋಷಿತ ಸಮುದಾಯಗಳು ಬಯಸುವ ಲೌಕಿಕ ಸ್ವರ್ಗ. ಈ ಸಮುದಾಯಗಳನ್ನು ಅಲೌಕಿಕ ಅತೀತ ಸ್ವರ್ಗದೆಡೆಗೆ ಕರೆದೊಯ್ಯಲು ಬಯಸುವ ಜಾತಿ, ಧರ್ಮ ಮತ್ತು ಅಂಧಶ್ರದ್ಧೆಯ ಹಾದಿಗಳನ್ನು ನಿವಾರಿಸಿಕೊಂಡು, ಭಾರತದ ಸಂವಿಧಾನದ ಆಶಯಗಳನ್ನು, ಮೌಲ್ಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಜನಕೋಟಿಯ ಮೇಲಿದೆ. ಈ ಹಾದಿಯಲ್ಲಿ ಅಂಬೇಡ್ಕರ್‌ ಅವರಿಗೆ ಹೆಗಲಾಗಿ ಫುಲೆ, ಗಾಂಧಿ, ಪೆರಿಯಾರ್‌, ಮಾರ್ಕ್ಸ್‌, ನೆಹರೂ, ಠಾಗೋರ್‌ ಮೊದಲಾದವರು ದಾರ್ಶನಿಕರಾಗಿ ನಮ್ಮೆದುರು ನಿಲ್ಲುತ್ತಾರೆ.

ಅಂಬೇಡ್ಕರ್‌ ರೂಪಿಸಿದ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಈ ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಭಾರತದ ಶೋಷಿತ ಜನತೆಗೆ ಮತ್ತಾವ ಸ್ವರ್ಗಪ್ರಾಪ್ತಿಯ ಮಹತ್ವಾಕಾಂಕ್ಷೆಯೂ ಇರಲಾರದು.

ನಾ ದಿವಾಕರ

ಚಿಂತಕರು

ಇದನ್ನೂ ಓದಿ- ಅಂಬೇಡ್ಕರ್ ಹೆಸರು ಶೋಕಿನಾ? ದೇವರ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿನಾ?

ಅಂಬೇಡ್ಕರ್ ಮತ್ತು ಅಮಿತ್ ಶಾ ಎಂಬ ಯಡವಟ್ಟು!

More articles

Latest article