ಅಮಿತ್ ಶಾ ಸಂಸತ್ ನಲ್ಲಿ ನಿಂತು ಮಾತನಾಡಲು ಅವಕಾಶ ಕೊಟ್ಟಿದ್ದು ಅದೇ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಆ ಸಂವಿಧಾನ ಎಂಬುದನ್ನು ಈ ಮಹಾನುಭಾವ ಮರೆತುಬಿಟ್ಟಿದ್ದಾರೆ. ಇವರು ಪೂಜಿಸುವ ಆ “ಶ್ರೀರಾಮ”ನನ್ನು ಸೃಷ್ಟಿಸಿದ್ದು; ಮಹಾತ್ಮಾ ಗಾಂಧೀಜಿಗೆ ಸ್ಫೂರ್ತಿ ನೀಡಿ ರಾಮ ರಾಜ್ಯದ ಪರಿಕಲ್ಪನೆ ನೀಡಿದ್ದು, ಅದೇ ಆದಿಕವಿ ಮಹರ್ಷಿ ವಾಲ್ಮೀಕಿ ಎಂಬುದನ್ನು ಮರೆತುಬಿಟ್ಟಿದ್ದಾರೆ. ಇದ್ಯಾವುದೂ ಸಾವರ್ಕರ್, ಗೋಳ್ವಾಲ್ಕರ್ ಮುಂತಾದವರ ಕರಿನೆರಳಲ್ಲಿ ಬೆಳೆದು ಬಂದವರಿಗೆ ಅರ್ಥವಾಗೋದಿಲ್ಲ – ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ಅದ್ಯಾಕೋ ಬಿಜೆಪಿಗರಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಮೇಲೆ ಪದೇ ಪದೆ ಕೆಂಗಣ್ಣು! ಹಿಂದೊಮ್ಮೆ ಕರ್ನಾಟಕದ ಸಂಸದ ಅನಂತ್ ಕುಮಾರ್ ಹೆಗಡೆ “ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋದಕ್ಕೆ” ಎಂದು ಹೇಳಿ ಭಾರೀ ಗದ್ದಲ ಎಬ್ಬಿಸಿದ್ದರು. ಅದಾದ ಬಳಿಕ ಆರ್.ಎಸ್.ಎಸ್.ನ ರಾಷ್ಟ್ರೀಯ ಸರಸಂಘಚಾಲಕ ಮೋಹನ್ ಭಾಗವತ್ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು! ಇದರ ಮಧ್ಯೆ ಇದ್ದಕ್ಕಿದ್ದ ಹಾಗೇ “ಸಂವಿಧಾನ ರಚನೆ ಮಾಡಿದ್ದು ಅಂಬೇಡ್ಕರ್ ಅಲ್ಲ ಕರ್ನಾಟಕ ಮೂಲದ ಅದ್ಯಾವುದೋ ಕಡಲತಡಿಯ ಭಟ್ಟ” ಎಂದು ಪುಕಾರು ಹಬ್ಬಿಸಿದರು. ನಂತರ ಮೀಸಲಾತಿ ಸರಿಯಿಲ್ಲ. ಆರ್ಥಿಕ ಮೀಸಲಾತಿ ಜಾರಿಗೆ ತರಬೇಕು ಎಂದು ಬಡಬಡಿಸಿದರು. ಒಂದೆರಡು ದಿನದ ಹಿಂದೆ ಇದೇ ಮೀಸಲಾತಿ ವಿಚಾರದಲ್ಲಿ ಮಾಜಿ ಪ್ರಧಾನಿ ಸದ್ಯಕ್ಕೆ ಈಗ ಸಂಘಿಗಳ ದೋಸ್ತ್ ಎಚ್.ಡಿ.ದೇವೇಗೌಡರು ಕೂಡ ಆರ್ಥಿಕ ಮೀಸಲಾತಿ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು. ಅದಾದ ಮರು ದಿನವೇ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗೆಗಿನ ಅಸಹನೆ, ಅಸಡ್ಡೆ, ತಾತ್ಸಾರ, ಬೇಸರ ಎಲ್ಲವೂ ಕೇಂದ್ರ ಗೃಹಸಚಿವ ಅಮಿತ್ ಶಾ ಬಾಯಿಯಿಂದಲೇ ಸಂಸತ್ ನಲ್ಲಿ ಹೊರಬಿದ್ದಿದೆ!
ಹೌದು, ಗುಜರಾತ್ ನ ಅನೇಕ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜೈಲು ಸೇರಿ ಹೊರ ಬಂದದ್ದು ಇದೇ ಅಮಿತ್ ಶಾ. ಮಾರ್ವಾಡಿಗಳ ಮಾಫಿಯಾ ಬಳಸಿಕೊಂಡು ಬಿಜೆಪಿಯ ರಾಷ್ಟ್ರೀಯ ನಾಯಕರನ್ನೇ ಸದ್ದಿಲ್ಲದೆ ಖರೀದಿಸಿ, ಬಿಜೆಪಿಯನ್ನು ಕಟ್ಟಿ ಬೆಳಸಿದ ಮುತ್ಸದ್ದಿ ರಾಜಕಾರಣಿಗಳಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಸುಷ್ಮಾ ಸ್ವರಾಜ್ ರಂತಹ ನಾಯಕರನ್ನು ಮೂಲೆಗೆ ತಳ್ಳಿ ಅರ್ಧರಾತ್ರಿ ಕೊಡೆ ಹಿಡಿದು ಹತ್ತು ವರ್ಷ ಅಧಿಕಾರ ನಡೆಸುತ್ತಿದ್ದಂತೆ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಗೆ ತಲೆ ತಿರುಗತೊಡಗಿದೆ. ಅದೆಷ್ಟೋ ಘಟಾನುಘಟಿಗಳು ಈ ದೇಶ ಆಳಿ ಮಣ್ಣಲ್ಲಿ ಮಣ್ಣಾಗಿ ಹೋಗಿರುವುದನ್ನು ಅವರು ಮರೆತಂತಿದೆ.
ಅಂಬೇಡ್ಕರ್ ಅವರೇ ಹೇಳಿದ ಹಾಗೆ “ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ”. ಹಸಿ ಸುಳ್ಳುಗಳನ್ನೇ ಬಿತ್ತಿ ಸುಳ್ಳುಗಳನ್ನೇ ಬೆಳೆಯಲು ಹೊರಟಿರುವ ಶಾ ಹಾಗೂ ಮೋದಿ ಜೋಡೆತ್ತಿನ ಗಾಡಿ ಮುರಿದು ಬೀಳುವ ಕಾಲ ಸನ್ನಿಹಿತವಾಗಿದೆ. ಅಂಬೇಡ್ಕರ್ ಒಬ್ಬ ಕೇವಲ ಜ್ಞಾನಿ ಅಲ್ಲ; ಅದ್ಭುತ ಜ್ಞಾನ ಭಂಡಾರ. ಕೋಟಿ ಕೋಟಿ ಬಡ ಕುಟುಂಬಗಳ ಮನೆಯ ಬೆಳಕು, ದಿವ್ಯ ಜ್ಯೋತಿ. ಸಮ ಸಮಾಜದ ಪರಿಕಲ್ಪನೆಯನ್ನು ನೀಡಿದ ಮೇಧಾವಿ. ವಿವಿಧ ದೇಶಗಳಿಗೆ ಸ್ಫೂರ್ತಿಯಾದ ಭಾರತದ ಸಂವಿಧಾನ ರಚಿಸಿದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್. ಆದರೆ ಅದರ ಗಂಧ ಗಾಳಿಯೇ ಗೊತ್ತಿಲ್ಲದೆ ಜಾತಿ ವಿಷ ಬೀಜ ಬಿತ್ತುತ್ತ, ಧರ್ಮಾಂಧಕಾರದ ಅಮಲನ್ನು ಮೈಗೇರಿಸಿಕೊಂಡು ಹೋದಲ್ಲಿ ಬಂದಲ್ಲಿ ಅದೇ ಕಕ್ಕುತ್ತಿರುವ ಕಕ್ಕುಲತೆಯೇ ಇಲ್ಲದ ಈ ಸನಾತನಿಗಳಿಗೆ, ಮನುವಾದಿಗಳಿಗೆ ಇದು ಹೇಗೆ ಅರ್ಥವಾಗಲು ಸಾಧ್ಯ?
ಅಮಿತ್ ಶಾ ಸಂಸತ್ ನಲ್ಲಿ ನಿಂತು ಮಾತನಾಡಲು ಅವಕಾಶ ಕೊಟ್ಟಿದ್ದು ಅದೇ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಆ ಸಂವಿಧಾನ ಎಂಬುದನ್ನು ಈ ಮಹಾನುಭಾವ ಮರೆತುಬಿಟ್ಟಿದ್ದಾರೆ. ಇವರು ಪೂಜಿಸುವ ಆ “ಶ್ರೀರಾಮ”ನನ್ನು ಸೃಷ್ಟಿಸಿದ್ದು; ಮಹಾತ್ಮಾ ಗಾಂಧೀಜಿಗೆ ಸ್ಫೂರ್ತಿ ನೀಡಿ ರಾಮ ರಾಜ್ಯದ ಪರಿಕಲ್ಪನೆ ನೀಡಿದ್ದು, ಅದೇ ಆದಿಕವಿ ಮಹರ್ಷಿ ವಾಲ್ಮೀಕಿ ಎಂಬುದನ್ನು ಮರೆತುಬಿಟ್ಟಿದ್ದಾರೆ. ಇದ್ಯಾವುದೂ ಸಾವರ್ಕರ್, ಗೋಳ್ವಾಲ್ಕರ್ ಮುಂತಾದವರ ಕರಿನೆರಳಲ್ಲಿ ಬೆಳೆದು ಬಂದವರಿಗೆ ಅರ್ಥವಾಗೋದಿಲ್ಲ ಬಿಡಿ.
ಗುಜರಾತ್ ನಿಂದ ಗಡಿಪಾರಾಗಿದ್ದು ಅಮಿತ್ ಷಾ ಮರೆತಿದ್ದಾರೆ. ಸುಪ್ರೀಂ ಕೋರ್ಟ್ ಅದೇ ಸಂವಿಧಾನವನ್ನು ಇಟ್ಟುಕೊಂಡೆ ಅವರನ್ನು ಗಡಿಪಾರು ಮಾಡಿದ್ದು ಎಂಬ ಕಾರಣ ಇಟ್ಟುಕೊಂಡು ಬಹುಶಃ ಈ ರೀತಿ ಕುಚೋದ್ಯ ಮಾಡುತ್ತಿರಬೇಕು. ಅಂಬೇಡ್ಕರ್ ಈ ದೇಶದ ಉಸಿರು. ಅಂಬೇಡ್ಕರ್ ಅವರ ವಿಚಾರಧಾರೆ ಸೂರ್ಯನಷ್ಟೇ ಪ್ರಖರವಾಗಿದೆ. ಅಂಬೇಡ್ಕರ್ ಬದುಕಿದ್ದಾಗ ಕಾಂಗ್ರೆಸ್ ಅವರನ್ನು ಸೋಲಿಸಿತು ನಿಜ. ಆ ತಪ್ಪನ್ನು ಈಗಲೂ ಕಾಂಗ್ರೆಸ್ ಜಪಿಸುತ್ತಲೇ ಪರಿತಪಿಸುತ್ತಿದೆ. ಆದರೆ ಅದೇ ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸಿದ್ದು ಇದೇ ಜನಸಂಘಿಗಳು ಎಂಬುದನ್ನು ಈ ದೇಶ ಮರೆಯಲು ಸಾಧ್ಯವೇ ಇಲ್ಲ. ಜನಸಂಘಿಗಳು ಇಷ್ಟು ದಿನ ಅಂಬೇಡ್ಕರ್ ಹೆಸರು ಹೇಳಲು ಕೂಡ ಹಿಂಜರಿಯುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆದ ಬೆಳವಣಿಗೆ, ನಾಯಕತ್ವದ ಕೊರತೆಯ ಕಾರಣ ಹಾಗೂ ಹಸಿ ಸುಳ್ಳುಗಳನ್ನೇ ಸಾರಿ ಸಾರಿ ಹೇಳುವ ಮೋದಿ ಪೇಯ್ಡ್ ಟೀಮ್ ನ ಚಾಣಾಕ್ಷ ನೀತಿಗಳು ಅವರನ್ನು ಇಲ್ಲಿವರೆಗೆ ತಂದು ನಿಲ್ಲಿಸಿವೆ.
ಈ ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಮೋದಿಗೆ ಜೈ ಅಂದು ವ್ಯಕ್ತಿಪೂಜೆ ಮಾಡಿದ ಜನರೇ ಈಗ ಕ್ಯಾಕರಿಸಿ ಉಗಿಯುವ ಹಂತ ತಲುಪಿ ಆಗಿದೆ. ಆದರೂ ಕುತಂತ್ರ ರಾಜಕೀಯ, ಜಾತಿ, ಧರ್ಮದ ಅಂಧಾದರ್ಬಾರ್ ನಿಲ್ಲಿಸುತ್ತಿಲ್ಲ. ಈ ರೀತಿ ಕಣ್ಮುಚ್ಚಿ ಮೆರೆದ ಅದೆಷ್ಟೋ ಅಡ್ಡ ಗಿರಾಕಿಗಳು ಅಗಲಿ ಹೋಗಿದ್ದಾರೆ. ಈಗ ಇವರ ಸರದಿ…ಆದರೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು, ತಳ ಸಮುದಾಯಗಳು, ಈ ದೇಶದ ಸಾಮಾನ್ಯ ಜನರು ಇಂತಹ ದುರುಳ ವರ್ತನೆಗಳು ಕಂಡು ಬಂದಾಗ ಸಿಡಿದೇಳಬೇಕು. ಧ್ವನಿ ಎತ್ತಬೇಕು. ಬಿಜೆಪಿಯೊಳಗೇ ಇರುವ ತಳ ಸಮುದಾಯದ ಜನ ರಾಜಕಾರಣದ ಕಾರಣಕ್ಕೆ ತಮ್ಮನ್ನು ತಾವು ಮಾರಿಕೊಂಡವರಂತೆ ವರ್ತಿಸುತ್ತಿದ್ದಾರೆ. ಹಿಟ್ಲರ್ ಮನೋಸ್ಥಿತಿಯನ್ನೂ ಪ್ರಶ್ನಿಸದ ನರಸತ್ತವರಂತಾಗಿದ್ದಾರೆ. ಆಂತರಿಕ ಶಿಸ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಅಲ್ಲಿನ ನಾಯಕರು ಉಸಿರಿಲ್ಲದವರಂತಾಗಿದ್ದು, ಅಮಿತ್ ಶಾ ಹಾಗೂ ಮೋದಿ ಕಕ್ಕಿದ್ದನ್ನೇ ಪ್ರಸಾದ ಎನ್ನುವಂತೆ ಸ್ವೀಕರಿಸುತ್ತಿದ್ದಾರೆ. ಹೀಗಿರುವಾಗ ಪ್ರಜಾಪ್ರಭುತ್ವದ ನಿಜವಾದ ಪ್ರಭುಗಳು ಜನ ಈ ದೇಶದಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲ ವರ್ಗಗಳಿಗೆ ಸಂವಿಧಾನದಲ್ಲಿ ಬದುಕುವ ಅವಕಾಶ ನೀಡಿದ ಈ ಜಗದ ಸೂರ್ಯ, ನಿಜವಾದ ಮನುಕುಲದ ದೇವರು ಅಂಬೇಡ್ಕರ್ ಅವರಿಗೆ ಅವಮಾನವಾದಾಗಲೂ ಸೈಲೆಂಟಾಗಿ ಸುಮ್ಮನಿದ್ದರೆ ಮುಂದೊಂದು ದಿನ ಆ ದನಿಯೂ ಇಲ್ಲದ ಹಾಗೆ ಮಾಡುವುದರಲ್ಲಿ ಆಶ್ಚರ್ಯವಿಲ್ಲ…ಎಚ್ಚರವಿರಲಿ…
ರಮೇಶ್ ಹಿರೇಜಂಬೂರು
ಹಿರಿಯ ಪತ್ರಕರ್ತರು, ಹೋರಾಟಗಾರರು, ಸಾಹಿತಿಗಳು.
ಇದನ್ನೂ ಓದಿ- ಅಂಬೇಡ್ಕರ್ ಸ್ಮರಣೆಯ ಅಮಿತ್ ಶಾ ವ್ಯಂಗ್ಯಕ್ಕೆ ವ್ಯಾಪಕ ವಿರೋಧ; ಯಾರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ