ಅಂಬೇಡ್ಕರ್ ಹೋರಾಟದ ನೇರ ಫಲಾನುಭವಿಗಳಾಗಿ, ಅಕ್ಷರಶಃ ಸ್ವರ್ಗವನ್ನೇ ಅನುಭವಿಸುತ್ತಿರುವ ಭಾರತೀಯ ಜನತಾ ಪಕ್ಷದ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮಂತ್ರಿಗಳು ಹಾಗೂ ರಾಜಕಾರಣಿಗಳು ಮಾನ ಮರ್ಯಾದೆ ಬಿಟ್ಟು ಅಮಿತ್ ಶಾ ಹೇಳಿಕೆಯ ಸಮರ್ಥನೆಗೆ ಇಳಿದಿದ್ದಾರೆ. ಇನ್ನು ಕೆಲವರು ಮಾತನಾಡದೆ ಮೌನವಾಗಿದ್ದಾರೆ. ಇವರ ಮೌನ ಇವರದೇ ಮುಂದಿನ ತಲೆಮಾರಿಗೆ ಗೋರಿ ಕಟ್ಟುವ ಸಂಕೇತವಾಗಿ ಪರಿಣಮಿಸಲಿದೆ – ವಿಕ್ರಮ್ ತೇಜಸ್, ಪತ್ರಕರ್ತರು.
“ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಎನ್ನುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟೊಂದು ಸಲ ದೇವರು ಹೆಸರು ಹೇಳಿದ್ದರೆ ಏಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು.”
ಇದು ಒಬ್ಬ ಮನುಷ್ಯ ಆಡಿದ ಮಾತಲ್ಲ. ಮನುಷ್ಯ ರೂಪದಲ್ಲಿರುವ ಕ್ರೂರ ಮನಸ್ಥಿತಿಯ ಮೃಗ ಸಂಸತ್ತಿನಲ್ಲಿ ಹೇಳಿದ ಮಾತು. ಈ ಮಾತು ಅನ್ನ ತಿನ್ನುವ ಬಾಯಿಂದ ಬಂದಿದ್ದಲ್ಲ, ಹೇಸಿಗೆ ತಿನ್ನುವ ನಾಲಿಗೆ ಉಗುಳಿದ್ದು. ಇದು ಬಾಯಿತಪ್ಪಿ ಹೇಳಿದ ಮಾತಲ್ಲ, ಮನುಸ್ಮೃತಿಯ ಸಂತಾನ ಅಧಿಕಾರದ ಅಹಂಕಾರದಲ್ಲಿ ಬೇಕಂತಲೇ ಹೇಳಿದ್ದು.
ಎ.ಬಿ.ವಿ.ಪಿ ಹಾಗೂ ಆರ್.ಎಸ್.ಎಸ್ ಶಾಲೆಯಲ್ಲಿ ದ್ವೇಷಿಸುವುದನ್ನೇ ಕಲಿತು, ಕೊಲ್ಲುವುದನ್ನೇ ರೂಢಿಸಿಕೊಂಡ ರೌಡಿ ರಾಜಕಾರಣಿ ಅಮಿತ್ ಶಾ ಅವರು ಮೇಲಿನ ಮಾತನ್ನು ಸಂಸತ್ತಿನಲ್ಲಿ ಸಂವಿಧಾನ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ, ಆ ಪಕ್ಷದ ಯಾವೊಬ್ಬ ನಾಯಕನಾಗಲಿ, ಸಾಮಾನ್ಯ ಕಾರ್ಯಕರ್ತನಾಗಲಿ ಇಲ್ಲಿಯವರೆಗೂ ಅದನ್ನು ವಿರೋಧಿಸಿಲ್ಲ. ಇದು ಅವರ ಅಸಲಿಯತ್ತು ಹಾಗೂ ಐಡಿಯಾಲಜಿ ಏನೆಂದು ತೋರಿಸುತ್ತದೆ.
ನಿಮಗೆ ತಿಳಿದಿರಲಿ, ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಇದು ಕೇವಲ ಹೆಸರಲ್ಲ ಧಮನಿತರ ಉಸಿರು… ಸ್ವಾಭಿಮಾನದ ಸಂಕೇತ, ಸ್ವಾವಲಂಬನೆಯ ಪ್ರತೀಕ. ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್…. ಅಂಬೇಡ್ಕರ್… ಎನ್ನುವ ಹೆಸರಿನಿಂದಲೇ ನಾವು ಮಾತು ಕಲಿತದ್ದು ನಿಮ್ಮನ್ನು ಮೌನವಾಗಿಸಿದ್ದು. ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಎನ್ನುವ ಹೆಸರಿನಿಂದಲೇ ನಾವು ಮರುಭೂಮಿಯಲ್ಲಿ ಮರವಾಗಿ ಬೆಳೆದಿದ್ದು, ಬಂಡೆಗಲ್ಲಿನ ಮೇಲೆ ಚಿಗುರೊಡೆದಿದ್ದು.
ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಎನ್ನುವ ಹೆಸರಿನಿಂದಲೇ ಕೈಯಲ್ಲಿ ಪಂಜು ಹಿಡಿದು ಮೆರವಣಿಗೆ ಹೊರಟಿದ್ದು. ತಮಟೆ ನುಡಿಸುತ್ತಾ ಕಾಲಿಗೆ ಗೆಜ್ಜೆ ಕಟ್ಟಿ ಅರಿವಿನ ಗೀತೆ ಹಾಡುತ್ತ ಜನರನ್ನು ಬಡಿದೆಬ್ಬಿಸಿದ್ದು. ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಎನ್ನುವ ಹೆಸರಿನಿಂದಲೇ ಶಾಲೆಯ ಮುಖ ನೋಡಿದ್ದು, ಶೋಷಿತರಿಗೆ, ಸಾಹುಕಾರರಿಗೆ, ನಿಮ್ಮಂತಹ ಸಂಪ್ರದಾಯವಾದಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದು. ಕಾಡುತ್ತಿರುವುದು.
ನಿಮ್ಮಂತಹ ಅವಿವೇಕಿ ರಾಜಕಾರಣಿಗೆ ಗೊತ್ತಿರಬೇಕು. ಈ ದೇಶದಲ್ಲಿ ಹಿಂದೂ ಧರ್ಮ ಅಥವಾ ಸನಾತನ ಸಂಸ್ಕೃತಿಯ ಪ್ರಕಾರ ಹೆಣ್ಣು ಮಕ್ಕಳು ಕೇವಲ ಗಂಡಿಗೆ ಸುಖ ಕೊಡುವ, ಮನೆಗೆಲಸ ಮಾಡುವ ಹಾಗೂ ಮಕ್ಕಳನ್ನು ಹೆರುವ ಯಂತ್ರಗಳಾಗಿದ್ದರು. ಆದರೆ, ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್.. ಅವರು ಬರೆದ ಸಂವಿಧಾನದಿಂದಲೇ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಇಂದು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ ಎನ್ನುವುದು ನಿಮ್ಮಂತಹ ಅವಿವೇಕಿಗೆ ತಿಳಿದಿರಬೇಕು. ಇಂದಿರಾ ಗಾಂಧಿ ಪ್ರಧಾನಮಂತ್ರಿ ಆಗಿದ್ದರು. ಮಾಯಾವತಿ, ಮೆಹಬೂಬಾ ಮುಫ್ತಿ, ಜಯಲಲಿತ, ಮಮತಾ ಬ್ಯಾನರ್ಜಿ, ಶೀಲಾ ದೀಕ್ಷಿತ್, ಅದಿತಿ ರಾಯ್ ಹೀಗೆ ಹಲವರು ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬುದೂ ನಿಮ್ಮಂತಹ ಅವಿವೇಕಿ ರಾಜಕಾರಣಿಗೆ ನೆನಪಿರಬೇಕು. ಅದೆಷ್ಟೋ ಜನ ಹೆಣ್ಣು ಮಕ್ಕಳು ಐಎಎಸ್, ಐಪಿಎಸ್, ಡಾಕ್ಟರ್, ಇಂಜಿನಿಯರ್, ವಿಜ್ಞಾನಿಗಳು, ಯುದ್ಧ ವಿಮಾನದ ಪೈಲಟ್‌ಗಳು ಹಾಗೂ ಕ್ರೀಡಾಪಟುಗಳಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇದಕ್ಕೆ ಕಾರಣ ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್…
ಮೈಮುಚ್ಚಿಕೊಳ್ಳಲು ಶವದ ಮೇಲಿನ ಬಟ್ಟೆಗಾಗಿ ಸ್ಮಶಾನ ಕಾಯುವವರು, ಹೊಟ್ಟೆ ತುಂಬಿಸಿಕೊಳ್ಳಲು ಹಳಸಿದ ಅನ್ನಕ್ಕಾಗಿ ನಿಂದನೆ ಸಹಿಸಿಕೊಳ್ಳುವವರು, ಸಂಸ್ಕೃತ ಮಂತ್ರ ಕೇಳಿದರೆ ಕಾಯ್ದ ಸೀಸ ಕಿವಿಯಲ್ಲಿ ಸುರಿಸಿಕೊಂಡು ಸತ್ತವರ ಮೂಳೆಗಳು ಮಾತನಾಡುತ್ತಿರುವುದು ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಅವರು ಬರೆದ ಸಂವಿಧಾನದಿಂದ ಎಂದು ನೆನಪಿರಲಿ. ಅವರ ಮುಂದುವರಿದ ತಲೆಮಾರು ಇಂದು ಬಟ್ಟೆ ತಯಾರಿಸುವ ಕಾರ್ಖಾನೆಯ ಮಾಲೀಕರಾಗಿದ್ದಾರೆ, ನೂರಾರು ಜನಕ್ಕೆ ಉಚಿತ ಆಹಾರ ನೀಡುವ ದಾಸೋಹಿಗಳಾಗಿದ್ದಾರೆ. ಶಿಕ್ಷಣ ಕಲಿತು ಜ್ಞಾನದ ಅತ್ಯುನ್ನತ ಮಟ್ಟಕ್ಕೇರಿ ಬೆಳೆದಿದ್ದಾರೆ. ಸತ್ತ ಸಂಸ್ಕೃತ ಭಾಷೆಯ ಮಂತ್ರಗಳನ್ನು ಧಿಕ್ಕರಿಸಿ ಬಸವಾದಿ ಶರಣರ ವಚನ ಹಾಡುತ್ತಿದ್ದಾರೆ. ಕಬೀರನ ದೋಹೆಗಳು, ಕನಕನ ಕೀರ್ತನೆಗಳನ್ನು ಆಲಿಸುತ್ತಿದ್ದಾರೆ. ತತ್ವ ಪದಗಳು, ಸೂಫಿಗಳ ಕವ್ವಾಲಿಗಳು, ಬುದ್ಧನ ಗಾಥಾಗಳನ್ನು ಹೇಳುತ್ತಿದ್ದಾರೆ. ಅವರ ಸಂಖ್ಯೆ ಈಗ ಕಡಿಮೆ ಇರಬಹುದು. ಆದರೆ, ಏರುತ್ತಲೇ ಇದೆ .
ಬಿಜೆಪಿಗರನ್ನು ಅರ್ಥ ಮಾಡಿಕೊಳ್ಳಲು ಇದು ಸಕಾಲ
ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಹೆಸರು ಹೇಳುತ್ತಾ, ಸಂವಿಧಾನ ಸಮ್ಮಾನ್ ಅಂತೇನೋ ಮಾಡುತ್ತ ಜೈ ಭೀಮ್ ಘೋಷಣೆಗಳನ್ನು ಕೂಗುತ್ತಾ ದಲಿತರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುವ ಮೂಲಕ ಅವರ ಮತಗಳನ್ನು ಕದಿಯುವ ಕುತಂತ್ರವೇನೋ ನಡೆದಿದೆ. ಆದರೆ, ಇದು ಅಷ್ಟು ಸುಲಭದಲ್ಲಿ ಫಲಿಸುವುದಿಲ್ಲ. ಇವರು ಅಸ್ಪೃಶ್ಯರು ಎನ್ನುವ ಕೊಳಕು ಮನಸ್ಥಿತಿ ನಿಮ್ಮದಾಗಿದ್ದರೆ, ದಲಿತ ಸಮುದಾಯದಲ್ಲಿ ಸ್ವಾಭಿಮಾನ ಬಹಳ ಗಟ್ಟಿಯಾಗಿದೆ. ಹಾಗಾಗಿ ಭಾರತದ ಇತಿಹಾಸದಲ್ಲಿಯೇ ಪರಿಶಿಷ್ಟ ಜಾತಿಯ ಎರಡು ಸಮುದಾಯಗಳು (ಕೆಲವು ನಾಯಕರನ್ನು ಹೊರತುಪಡಿಸಿ) ಭಾರತೀಯ ಜನತಾ ಪಕ್ಷದ ಯಾವ ಕುತಂತ್ರಕ್ಕೂ ಬಲಿಯಾಗಲಿಲ್ಲ.
ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಾಬಾ ಸಾಹೇಬರ ಕುರಿತು ಒಂಚೂರಾದರೂ ಗೌರವ ಇದ್ದರೆ, ಒಂಚೂರಾದರೂ ಸಂವಿಧಾನದ ಬಗ್ಗೆ ನಂಬಿಕೆ ಇದ್ದರೆ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡುತ್ತಿದ್ದರು. ಸಂಪುಟದಿಂದ ತೆಗೆಯುವುದೊತ್ತಟ್ಟಿಗಿರಲಿ ಮಾನ-ಮರ್ಯಾದೆಯ ಎಲ್ಲಾ ಹಂತಗಳನ್ನು ಬಿಟ್ಟು ಸಮರ್ಥನೆ ಮಾಡಿಕೊಂಡಿರುವುದು ನಾಚಿಕೆಗೇಡು ಸಂಗತಿ. ಈ ದೇಶದ ಪ್ರಧಾನ ಮಂತ್ರಿಯಾಗಿ ಕನಿಷ್ಟ ಪಕ್ಷ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಇಷ್ಟು ಸಾಕು ಅವರಲ್ಲಿ, ಜಾತೀಯತೆಯ ಮದ, ಅಧಿಕಾರದ ಸೊಕ್ಕು ಯಾವ ಮಟ್ಟಕ್ಕಿದೆ ಎಂದು ಅರ್ಥ ಮಾಡಿಕೊಳ್ಳಲು.
ದುರಂತದ ಸಂಗತಿ ಏನೆಂದರೆ, ಇಡೀ ದೇಶವೇ ಪ್ರತಿಭಟನೆಯಲ್ಲಿ ಹೊತ್ತಿ ಉರಿಯುತ್ತಿರಬೇಕಾದರೆ ಡಾ.ಅಂಬೇಡ್ಕರ್ ಫಲಾನುಭವಿಗಳಾದ ಬಿಜೆಪಿ ಸರ್ಕಾರದ ಒಬ್ಬನೇ ಒಬ್ಬ ಮಂತ್ರಿಯಾಗಲಿ, ಆ ಪಕ್ಷದ ನಾಯಕರಾಗಲಿ ಅಥವಾ ಯಾವುದೇ ಹಂತದ ಜನಪ್ರತಿನಿಧಿಗಳು ಒಂದೇ ಒಂದು ಹೇಳಿಕೆ ಕೊಡುತ್ತಿಲ್ಲ. ಅದಕ್ಕಿಂತ ದೊಡ್ಡ ದುರದೃಷ್ಟಕರ ಸಂಗತಿ ಎಂದರೆ ಅಂಬೇಡ್ಕರ್ ಹೋರಾಟದ ನೇರ ಫಲಾನುಭವಿಗಳಾಗಿ, ಅಕ್ಷರಶಃ ಸ್ವರ್ಗವನ್ನೇ ಅನುಭವಿಸುತ್ತಿರುವ ಭಾರತೀಯ ಜನತಾ ಪಕ್ಷದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮಂತ್ರಿಗಳು ಹಾಗೂ ರಾಜಕಾರಣಿಗಳು ಮಾನ ಮರ್ಯಾದೆ ಬಿಟ್ಟು ಸಮರ್ಥನೆಗೆ ಇಳಿದಿದ್ದಾರೆ. ಇನ್ನೂ ಕೆಲವರು ಮಾತನಾಡದೆ ಮೌನವಾಗಿದ್ದಾರೆ. ಇವರ ಮೌನ ಇವರದೇ ಮುಂದಿನ ತಲೆಮಾರಿಗೆ ಗೋರಿ ಕಟ್ಟುವ ಸಂಕೇತವಾಗಿ ಪರಿಣಮಿಸಲಿದೆ.
ದಲಿತರ ಮತಗಳನ್ನು ಪಡೆಯಲು ಹಾಗೂ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಲು ಮಾತ್ರ ಬಾಬಾಸಾಹೇಬರ ಹೆಸರನ್ನು ಬಳಸಿಕೊಳ್ಳುತ್ತಿರುವ ದರಿದ್ರ ಬಿಜೆಪಿ ಮತ್ತು ಅದರ ನಾಯಕರು, ಅಮಿತ್ ಶಾ ಎನ್ನುವ ಅಯೋಗ್ಯ ಮಂತ್ರಿಯ ಮಾತಿಗೆ ಪ್ರತಿಕ್ರಿಯೆ ಕೊಡಲಾಗದೆ ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮುದಾಯದ ಬಗ್ಗೆ ಒಂದೇ ಒಂದು ಮಾತನಾಡದ, ಜೀವನ ಪೂರ್ತಿ ಸಂಘದ ಗುಲಾಮಗಿರಿ ಮಾಡುತ್ತ ಬಿದ್ದಿರುವ ಅರವಿಂದ ಕಾರಜೋಳ ಮತ್ತು ಅಂದು ಆರ್.ಎಸ್.ಎಸ್ ಚೆಡ್ಡಿ ಹೊತ್ತು ತಿರುಗಿದ ಛಲವಾದಿ ನಾರಾಯಣಸ್ವಾಮಿ ಎನ್ನುವ ಅಯೋಗ್ಯ ಗುಲಾಮನನ್ನು ಬಾಡಿಗೆಗೆ ಇಟ್ಟುಕೊಂಡು ಶಾ ಹೇಳಿಕೆಯನ್ನು ಸಮರ್ಥನೆ ಮಾಡಲು ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಠೀಕಿಸಲು ಹಲವು ಸಂದರ್ಭಗಳಿವೆ. ಆದರೆ, ಈ ದರಿದ್ರ ದಲಿತ ರಾಜಕಾರಣಿಗಳಿಗೆ ಹೇಗೆ ಹೇಳಬೇಕು ಅಂತನೇ ಅರ್ಥವಾಗುತ್ತಿಲ್ಲ. “ಇಂದು ಈ ಗೂಂಡಾ ಮಂತ್ರಿ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾನೆ ಅಂತ ಹೇಳಿದರೆ, ಹಿಂದೆ ಆ ಕಾಂಗ್ರೆಸ್ ಕೂಡ ಅವಮಾನ ಮಾಡಿದೆ ಅಂತಾರೆ!” ಎಂ.ಪಿ, ಎಂಎಲ್ಸಿ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದಕ್ಕೆ ಋಣ ತೀರಿಸಲು ಈ ನಾಲಾಯಕರು ಅಮಿತ್ ಶಾ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ಅಂಬೇಡ್ಕರ್ ಅವರನ್ನು ಹಾಗೂ ದಲಿತ ಸಮುದಾಯವನ್ನು ಅವಮಾನ ಮಾಡುತ್ತಿದ್ದಾರೆ.
ಇದರಿಂದ ದಲಿತರು ಕಲಿಯಬೇಕಾದ ಪಾಠ ಏನೆಂದರೆ ಭಾರತೀಯ ಜನತಾ ಪಕ್ಷ, ಸಂಘ ಪರಿವಾರ ಅಥವಾ ಉಗ್ರ ಬಲಪಂಥೀಯ ಹಿಂದೂಗಳು ದಲಿತರನ್ನು, ದಲಿತಪರ ನಾಯಕರನ್ನು, ದಲಿತರ ಸಂಸ್ಕೃತಿ ಯನ್ನು ಯಾವತ್ತೂ ಗೌರವಿಸುವುದಿಲ್ಲ. ಇವರದೇನಿದ್ದರೂ ತಾವು ಅಧಿಕಾರದಲ್ಲಿರುವುದು, ಎಲ್ಲರನ್ನೂ ಗುಲಾಮರಾಗಿ ನಡೆಸಿಕೊಳ್ಳುವುದು, ಸಾಧ್ಯವಾದಷ್ಟು ಬಹು ಸಂಸ್ಕೃತಿಯನ್ನು ನಾಶಮಾಡುವುದು. ಅದಾಗದಿದ್ದರೆ ಮರೆಮಾಚುವುದು. ಇದ್ಯಾವುದೂ ಸಾಧ್ಯವಾಗದಿದ್ದರೆ ಅವುಗಳನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನಗಳೇ ಇವರ ಹಳೆಯ ಮತ್ತು ಗುಪ್ತ ಕಾರ್ಯಸೂಚಿಗಳಾಗಿರುತ್ತದೆ.
ಸಂವಿಧಾನಕ್ಕೆ ನಮಸ್ಕರಿಸಿ ಸಂಸತ್ ಪ್ರವೇಶಿಸಿದ ನಾಟಕಕಾರ ಮೋದಿ ಸಂವಿಧಾನದ ಒಂದೊಂದು ವಿಧಿಗಳನ್ನು ತೆಗೆದುಹಾಕುವ ಮೂಲಕ ಈ ದೇಶದ ಸಂವಿಧಾನವನ್ನೇ ನಿಷ್ಕ್ರಿಯಗೊಳಿಸುತ್ತಿದ್ದಾರೆ. ಜಾತಿ ಆಧಾರದ ಮೇಲೆ ಕೊಲೆಗಳು, ಗುಂಪು ಹತ್ಯೆಗಳು, ದಲಿತರ ಮೇಲಿನ ಅತ್ಯಾಚಾರಗಳು ಇವರ ಅವಧಿಯಲ್ಲಿ ಮಿತಿಮೀರಿ ಹೋಗಿವೆ. ಸಂವಿಧಾನ ಬದಲಿಸುವ ಹೇಳಿಕೆಗಳು, ಸಂವಿಧಾನ ಪ್ರತಿ ಸುಡುವ ಘಟನೆಗಳು ಅಂಬೇಡ್ಕರ್ ಪುತ್ಥಳಿಗೆ ಮಾಡುವ ಅವಮಾನಗಳು ಎಲ್ಲೆ ನೀರಿವೆ. ಆದರೆ ತಮ್ಮ ದುಷ್ಟತನವನ್ನು ಮರೆಮಾಚಲು ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದೆ ಎಂದು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಆಗ ಅಲ್ಲಿದ್ದುದು ಇದೇ ಆರ್.ಎಸ್.ಎಸ್ ಸಂತತಿ. ಈಗ ಇಲ್ಲಿ ಬಂದು ಅದೇ ಕೆಲಸವನ್ನು ಅದು ಮಾಡುತ್ತಿದೆ ಎನ್ನುವುದನ್ನು ದಲಿತರು ಮರೆಯುವುದಿಲ್ಲ.
ಈ ವಲಸೆ ಆರ್ಯರ ತಳಿಗಳೇ ಈ ನೆಲಮೂಲದ ದ್ರಾವಿಡ ಸಂಸ್ಕೃತಿಯನ್ನು ಹಾಳು ಮಾಡಿದ್ದು. ಹರಪ್ಪ ಮತ್ತು ಮೊಹೆಂಜೋದಾರೋ ನಾಗರಿಕತೆಯನ್ನು ನಾಶ ಮಾಡಿದ್ದು ಹಾಗೂ ಬ್ರಿಟಿಷರ ಜೊತೆಗೆ ಮೊಘಲರ ಜೊತೆಗೆ ಸಂಧಾನ ಮಾಡಿಕೊಂಡು ಈ ದೇಶವನ್ನು ಗುಲಾಮಗಿರಿಗೆ ತಳ್ಳಿದ್ದು. ಇವರ ಬಗ್ಗೆ ನಾವು ಇನ್ನಾದರೂ ಗಂಭೀರವಾಗಿ ಆಲೋಚನೆ ಮಾಡದಿದ್ದರೆ ಮತ್ತೊಮ್ಮೆ ಈ ನೆಲ ರಕ್ತಸಿಕ್ತವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
ಇದನ್ನೂ ಓದಿ- ಅಂಬೇಡ್ಕರ್ ಹೆಸರು ಶೋಕಿನಾ? ದೇವರ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿನಾ?
ಸಕಲ ಜೀವಿಗಳ ಮೇಲೆ ದ್ವೇಷವನ್ನೇ ಕಾರುವ ಜೀವ ವಿರೋಧಿ ಸನಾತನಿ ಸಂತಾನಿಗಳಾದ ಇವರು ಈ ನಾಡಿನಲ್ಲಿ ಬಹು ಸಂಖ್ಯಾತರಾದ ಲಿಂಗಾಯತ ಸಮುದಾಯವನ್ನು ಬಸವಣ್ಣನಿಂದ ಬೇರ್ಪಡಿಸಿ ಸಂಘ ಮತ್ತು ಸನಾತನ ಧರ್ಮದ ಸೆಕ್ಯೂರಿಟಿ ಗಾರ್ಡುಗಳಾಗಿ ಮಾರ್ಪಾಡು ಮಾಡುವುದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಗಟ್ಟಿಯಿದ್ದ ಬಸವ ಕಲಿಗಳು ಅವರೊಂದಿಗೆ ಸೆಣೆಸುತ್ತಲೇ ಇದ್ದಾರೆ. ಈಗಲಾದರೂ ಜನಿವಾರ ಕಿತ್ತೆಸೆದು ಲಿಂಗ ಕಟ್ಟಿಕೊಳ್ಳಬೇಕು. ಹೋಮಗಳಲ್ಲಿ ಕುಳಿತು ಕೋಮಾಗೆ ಹೋದವರು ಎಚ್ಚರಗೊಳ್ಳದಿದ್ದರೆ ಇತ್ತೀಚೆಗಷ್ಟೇ ಹಿಂದೂ ಸಂಪ್ರದಾಯಗಳಿಂದ ಕಳಚಿಕೊಂಡ ಬಸವಣ್ಣನನ್ನು ಮತ್ತೆ ಗುಡಿ ಒಳಗೆ ಕಟ್ಟಿಹಾಕಿ ಹೋಮ ಹವನ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.
ಬುದ್ಧ, ಬಸವ, ಅಂಬೇಡ್ಕರ್, ಕನಕ, ಕಬೀರ, ನಾನಕ, ಫುಲೆ, ಶಾಹು ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಅಕ್ಕಮಹಾದೇವಿ ಸೇರಿದಂತೆ ಬಸವಾದಿ ಶರಣರು, ಸೂಫಿ ಸಂತರು ಹಾಗೂ ತತ್ವಪದಕಾರರ ವೈವಿಧ್ಯತೆಯ ಭಾರತ ಉಳಿಯಬೇಕಾದರೆ ಎಲ್ಲರೂ ಮಾತನಾಡಬೇಕು. ಈ ಮನು ಸಂತಾನವನ್ನು ಅಧಿಕಾರದಿಂದ ಹೊರ ನೂಕಬೇಕು ಆಗ ಮಾತ್ರ ಸೌಹಾರ್ದ ಭಾರತ ಉಳಿಯಲು ಬೆಳೆಯಲು ಸಾಧ್ಯ.
ವಿಕ್ರಮ್ ತೇಜಸ್
ಪತ್ರಕರ್ತರು
ಇದನ್ನೂ ಓದಿ- ಅಂಬೇಡ್ಕರ್ ಮತ್ತು ಅಮಿತ್ ಶಾ ಎಂಬ ಯಡವಟ್ಟು!