ಪರ್ಯಾಯ ಮಾಧ್ಯಮವೆನ್ನುವ ಜನಪಥ…

Most read

ಕನ್ನಡದ ಪರ್ಯಾಯ ಮಾಧ್ಯಮ ಕನ್ನಡ ಪ್ಲಾನೆಟ್.ಕಾಮ್ ಜನಜೀವನದ ಜೊತೆಗೆ ಹೆಜ್ಜೆ ಹಾಕುವ ತನ್ನ ಪ್ರಯತ್ನದಲ್ಲಿ ಒಂದು ವರ್ಷ ಪೂರ್ಣಗೊಳಿಸಿದೆ. ನಾಡು ಕಟ್ಟುವ ಹೆಸರಲ್ಲಿ ಅಧಿಕಾರ ಹಿಡಿದ ನಂತರ ಮೈ ಮರೆತವರನ್ನು ತಟ್ಟಿ ಎಬ್ಬಿಸುವ ಕಾಯಕದಲ್ಲಿ ಕನ್ನಡ ಪ್ಲಾನೆಟ್ ಚಿಕ್ಕ ಜಾಲವಾದರೂ ದೊಡ್ಡ ಬಲವಾಗಿ ಮುಂದಡಿ ಇಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಪ್ಲಾನೆಟ್‍ನಲ್ಲಿ ಚರ್ಚಿತವಾದ ವಿಷಯಗಳನ್ನು ಗಮನಿಸಿದರೆ, ಇದು ಯಾರ ಧ್ವನಿಯಾಗಿದೆ,ಯಾಕೆ ಘನವಾಗಿದೆ ಎನ್ನುವುದಕ್ಕೆ ಉತ್ತರ ಸಿಗುತ್ತದೆ-ಡಾ.ಉದಯ ಕುಮಾರ ಇರ್ವತ್ತೂರು.

ಮಾಹಿತಿ ತಂತ್ರಜ್ಞಾನದ ಕ್ರಾಂತಿ ಬಹು ಆಯಾಮಗಳಲ್ಲಿ ಸಾಮಾಜಿಕ ಪರಿವರ್ತನೆಯನ್ನು ತರುವ ಮೂಲಕ 21ನೇ ಶತಮಾನದಲ್ಲಿ ವಿಶೇಷ ಮಹತ್ವ ಪಡೆದಿದೆ. ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಸಂವಹನ ಕಲೆ ಮತ್ತು ಮಾಹಿತಿ ವಿನಿಮಯ ದೇಶ, ಭಾಷೆಗಳ ಗಡಿಗಳನ್ನು ಮುರಿದು ವಿಶ್ವದಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿದೆ. ಆರ್ಥಿಕ ವಿನ್ಯಾಸದಲ್ಲಿ ಸ್ಥಳೀಯವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ದೊಡ್ಡ ಬದಲಾವಣೆಯನ್ನೇ ಉಂಟುಮಾಡಿದೆ. ಪ್ರಸ್ತುತ ಪ್ರವರ್ಧಮಾನಕ್ಕೆ ಬಂದಿರುವ ಮತ್ತು ‘ಸಂಸ್ಕೃತಿ, ಪರಂಪರೆ’ ಎಂದು ಬಿಂಬಿತವಾಗುತ್ತಿರುವ ಧರ್ಮ, ಅರ್ಥ, ಕಾಮಗಳ ಹಿಂದಿರುವ ಚಾಲಕ ಶಕ್ತಿಯ ಹಿಂದೆಯೂ ಇದೇ ಶಕ್ತಿ ಕೆಲಸ ಮಾಡುತ್ತಿದೆ. ಇದುವರೆಗೂ ಸೀಮಿತ ಪ್ರಭಾವ ಹೊಂದಿದ್ದ ಮಾಧ್ಯಮ ಮುದ್ರಣದೊಂದಿಗೆ ದೃಶ್ಯ ರೂಪವನ್ನೂ ಪಡೆಯುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಗಾಢವಾದ ಪ್ರಭಾವನ್ನೇ ಬೀರುವಂತಾಗಿದೆ.

ವ್ಯಕ್ತಿ, ಸಮುದಾಯ, ಸಂಸ್ಕೃತಿ ಮತ್ತು ಅಧಿಕಾರದ ಕೇಂದ್ರಗಳ ನಡುವಿನ ಮಾತುಕತೆಗಳನ್ನು ನಿರ್ವಹಿಸುವ ಪ್ರಮುಖ ಶಕ್ತಿಯಾಗಿ ಸಮೂಹ ಮಾಧ್ಯಮ ಹಿಂದೆಂದಿಗಿಂತಲೂ ಇಂದು ಮಹತ್ವ ಪಡೆಯುತ್ತಿದೆ. ಮಾಹಿತಿ ತಂತ್ರಜ್ಞಾನದ ಈ ಪ್ರಭಾವಕ್ಕೆ ಒಳಗಾದ ಮುಖ್ಯವಾಹಿನಿಯ ಮಾಧ್ಯಮಗಳು ಪ್ರಜೆಗಳ ಹಿತಾಸಕ್ತಿ ಕಾಯುವುದಕ್ಕಿಂತ ಪ್ರಭುಗಳ ಹಿತ ಕಾಯುವುದೇ ಲಾಭದಾಯಕವೆನ್ನುವ ನಿಲುವಿಗೆ ತಳ್ಳಲ್ಪಟ್ಟವು. ಮುಖ್ಯವಾಹಿನಿಯ ಇಂತಹ ನಿಲುವುಗಳ ಕಾರಣದಿಂದ ಉಂಟಾದ ಶೂನ್ಯವನ್ನು ಪರ್ಯಾಯ ಮಾಧ್ಯಮಗಳು ಅಥವಾ ನಾವು ಇವತ್ತು ಸಾಮಾನ್ಯವಾಗಿ ಗುರುತಿಸುವ ಸಾಮಾಜಿಕ ಮಾಧ್ಯಮಗಳು ತುಂಬಿಕೊಡುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯೇ ಸರಿ. ಇದೊಂದು ರೀತಿ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದಂತೆ ಲೋಕದಲ್ಲಿ ಧರ್ಮಗ್ಲಾನಿಯಾದಾಗ ಭಗವಂತನಾದ ನಾನು ಅವತಾರವೆತ್ತಿ ಒಳಿತನ್ನು ಕಾಯುವ ಮತ್ತು ಕೆಡುಕನ್ನು ನಿರ್ನಾಮ ಮಾಡುವ ಕೆಲಸ ನಿರ್ವಹಿಸುತ್ತೇನೆ ಎನ್ನುವ ರೀತಿಯಲ್ಲಿದೆ. ಇತಿಹಾಸದ ಪುಟಗಳಲ್ಲಿ ಇಂತಹ ಹಲವು ಸಂದರ್ಭಗಳನ್ನು ಗ್ರಹಿಸಬಹುದಾದರೂ, ಪ್ರತಿಯೊಂದು ಸಂಕ್ರಮಣದ ಸಮಯದ ಕಾಲದಲ್ಲಿ ಸಂದೇಶ ಒಂದೇ ಆದರೂ ಸಂದರ್ಭಗಳು ವಿಭಿನ್ನ.

21ನೇ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನ ತಂದಂತಹ ಪರಿವರ್ತನೆಯ ವೇಗ ಮತ್ತು ಅದರ ವ್ಯಾಪ್ತಿ ಹಿಂದೆ ಆಗಿದ್ದ ಎಲ್ಲ ಬದಲಾವಣೆಗಳಿಗಿಂತ ಅಧಿಕವಾಗಿದ್ದ ಕಾರಣ ಅದರ ಪರಿಣಾಮಗಳೂ ತೀವ್ರವಾಗಿಯೇ ಜನರ ಜೀವನದ ಮೇಲೆ ಆಗಿದೆ ಮತ್ತು ಆಗುತ್ತಿದೆ. ಹಿಂದಿನ ಬಹುತೇಕ ಬದಲಾವಣೆಗಳ ಕಾರಣ ಮತ್ತು ಅದರ ಕಾರ್ಯವನ್ನು ಸುಲಭವಾಗಿಯೇ ಗುರುತಿಸಬಹುದಾಗಿತ್ತು. ಆದ ಕಾರಣ ಬದಲಾವಣೆಯ ಹಿಂದೆ ಯಾರಿದ್ದಾರೆ ಮತ್ತು ಇಂತಹ ಬದಲಾವಣೆಯ ಭಾರವನ್ನು ಯಾರು ಹೊರುತ್ತಿದ್ದಾರೆ ಎನ್ನುವುದೂ ನಮ್ಮ ಅರಿವಿಗೆ ನಿಲುಕುವಂತಿತ್ತು. ಈ ಕಾರಣದಿಂದ ನ್ಯಾಯ, ಸತ್ಯ ಮತ್ತು ಸಮಾಜದ ಹಿತಾಸಕ್ತಿಯ ವಿರುದ್ಧ ಒಂದು ಹೋರಾಟವನ್ನು ಸಂಘಟಿಸುವುದು ನಿಧಾನವಾದರೂ ಸುಲಭ ಸಾಧ್ಯವಾಗಿತ್ತು. ಆದರೆ ಈಗಿನ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ. ಈಗಿನ ಪರಿವರ್ತನೆಯ ಹಿಂದಿರುವ ಕಾರಣಗಳು ಮತ್ತು ಅದು ಕಾರ್ಯನಿರ್ವಸುತ್ತಿರುವ ರೀತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ಇನ್ನೊಬ್ಬರಿಗೆ ಅರ್ಥಮಾಡಿಸುವುದು ಅದಕ್ಕಿಂತ ಕಷ್ಟ. ಉದಾಹರಣೆಗೆ ಸಿಹಿಯನ್ನು ತಿನ್ನದೇ ಇರುವವನಿಗೆ ಅದನ್ನು ವಿವರಿಸಿ ಅರ್ಥಮಾಡಿಸುವುದು ಬಹಳ ತ್ರಾಸದಾಯಕವಾದ ಕೆಲಸ. ಹೀಗೆ ವಿವರಿಸುವ ಬದಲು ಲಡ್ಡು ನೀಡಿ ಇದು ಸಿಹಿ ಎಂದು ಅರ್ಥಮಾಡಿಸಬಹುದು. ಆದರೆ ಸಿಹಿಯೆಂದರೆ ಬರೀ ಲಡ್ಡು ಮಾತ್ರವಲ್ಲ. ಅಂತಹ ಅನುಭವ ನೀಡುವ ಅಥವಾ ಅಂಶವಿರುವ ಎಲ್ಲವೂ ಸಿಹಿಯೇ. ಸಕ್ಕರೆಯ ಅಂಶವೆನ್ನುವ ‘ಅಪರೋಕ್ಷ’ ವಿಷಯವಿರುವ ಎಲ್ಲವೂ ಸಿಹಿ ಎಂದು ಅರ್ಥಮಾಡಿಸುವುದು ತ್ರಾಸದಾಯಕ ಕೆಲಸವೇ ಹೌದು.

ನಾವು ಆಯ್ದುಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಘನತೆಯ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಲಾಗಿದೆ. ಅದಕ್ಕೊಂದು ಮೂಲ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ವಾತಾವರಣದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ನಮ್ಮ ದೇಶದಲ್ಲಿಯೂ ವ್ಯವಹಾರಗಳು ನಡೆಯುತ್ತಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳು ತಮಗೊಪ್ಪಿತವಾದ ಕರ್ತವ್ಯವನ್ನೂ, ಜವಾಬ್ದಾರಿಯನ್ನೂ ನಿರ್ವಹಿಸುತ್ತಿವೆ. ಈ ಎಲ್ಲ ಅಂಗಗಳ ಹಿಂದಿರುವವರು ಜನ ಸಾಮಾನ್ಯರು. ಅವರು ತಮ್ಮ ಪ್ರತಿನಿಧಿಗಳ ಮೂಲಕ ಈ ಕೆಲಸ ಮಾಡಿಸುತ್ತಾರೆ. ಇಡೀ ವ್ಯವಸ್ಥೆಯು ಸರಿಯಾಗಿ ನಡೆಯುತ್ತಿದೆಯೋ, ಇಲ್ಲವೇ, ಇಲ್ಲವಾದರೆ ಯಾಕಿಲ್ಲ, ಇದ್ದರೆ ಯಾಕುಂಟು ಎಂದು ನಿತ್ಯ ಜೀವನದಲ್ಲಿ ಈ ಮಾಹಿತಿಯನ್ನು ನಿರಂತರವಾಗಿ ನೀಡಬೇಕಾಗಿರುವುದು ಮಾಧ್ಯಮದ ಹೊಣೆಗಾರಿಕೆ, ಮಾಧ್ಯಮ ಈ ಕಾರಣದಿಂದಲೇ ಜನತಂತ್ರದ ಕಾವಲು ನಾಯಿಗಳಾಗಿರುವುದು ಮತ್ತು ಆಧಾರ ಸ್ತಂಭವಾಗಿರುವುದು.

ದೇಶದಲ್ಲಿ 1975ರಲ್ಲಿ ಅಂದಿನ ಪ್ರಧಾನಿ ತನ್ನ ವೈಯಕ್ತಿಕ ಹಿತಾಸಕ್ತಿ ಕಾಯುವ ದೃಷ್ಟಿಯಿಂದ ತುರ್ತು ಪರಿಸ್ಥಿತಿ ಫೋಷಿಸಿದಾಗ, ಅದರ ವಿರುದ್ಧ ಮಾಧ್ಯಮಗಳು ಧ್ವನಿ ಎತ್ತಿದವು. ಸರಕಾರದ ಎಲ್ಲ ದೌರ್ಜನ್ಯವನ್ನು, ಒತ್ತಡವನ್ನು ಎದುರಿಸಿಯೂ ವರದಿ ಮಾಡಿದವು. ಅದರೊಂದಿಗೆ ದೇಶದ ಪ್ರಮುಖ ವಿರೋಧ ಪಕ್ಷಗಳು ಜಯಪ್ರಕಾಶ ನಾರಾಯಣ ಅವರ ನಾಯಕತ್ವದಲ್ಲಿ ಸಂಘಟಿತ ಹೋರಾಟ ಮುಂದುವರಿಸಿದವು. ಇದರ ಪರಿಣಾಮವಾಗಿ 1977ರಲ್ಲಿ ಚುನಾವಣೆ ನಡೆದು ಅಧಿಕಾರ ದುರುಪಯೋಗ ನಡೆಸಿದ ಶ್ರೀಮತಿ ಇಂದಿರಾಗಾಂಧಿಯವರನ್ನು ಅಧಿಕಾರದಿಂದ ಜನರು ಕೆಳಗಿಳಿಸಿದರು. ಜವಾಬ್ದಾರಿಯುತವಾಗಿ ನಡೆದುಕೊಳ್ಳದ ವಿರೋಧ ಪಕ್ಷಗಳನ್ನು 1980ರಲ್ಲಿ ಮತ್ತೆ ಜನ ಅಧಿಕಾರದಿಂದ ಕಿತ್ತೆಸೆದರು. ಅಧಿಕಾರದಲ್ಲಿರುವಾಗ ಜನಪರವಾಗಿ, ನಾಡಿನ ಭವಿಷ್ಯದ ದೃಷ್ಟಿಯಿಂದ ಕೆಲಸ ನಿರ್ವಹಿಸುವುದು ಬಹಳ ಸವಾಲಿನ ಕೆಲಸ. ಅದಾಗಲೇ ಬಲವಾಗಿ ಬೇರೂರಿರುವ ಸ್ಥಾಪಿತ ಹಿತಾಸಕ್ತಿಗಳು ಜಾತಿ, ಧರ್ಮ, ಬಂಡವಾಳ, ತಂತ್ರಜ್ಞಾನದ ಬಲದಿಂದ ಸರಕಾರಗಳನ್ನು (ಎಂದರೆ ಸರಕಾರದ ಭಾಗವಾಗಿರುವ ಜನಪ್ರತಿನಿಧಿಗಳನ್ನು) ಅಲ್ಲಾಡಿಸುವ ಶಕ್ತಿ ಹೊಂದಿರುವುದೇ ಇದಕ್ಕೆ ಪ್ರಮುಖ ಕಾರಣ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆರ್ಥಿಕ ಸಮಾನತೆ ಅಥವಾ ಸಂಪತ್ತಿನ ಮರುಹಂಚಿಕೆಯಾಗದೇ ಹೋದರೆ ಪ್ರಜಾತಂತ್ರ ಅರ್ಥಹೀನ ಎಂದಿರುವುದು ಇದೇ ಕಾರಣದಿಂದ. ವರ್ತಮಾನದ ಪರಿಸ್ಥಿತಿ ಅವರ ಈ ಮಾತಿಗೆ ಜ್ವಲಂತ ಉದಾಹರಣೆಯಾಗಿದೆ.

ಮುಖ್ಯವಾಹಿನಿಯ ಮಾಧ್ಯಮಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಸ್ವರೂಪಾತ್ಮಕವಾಗಿ ಬದಲಾಗಿವೆ. ಜನರ ಧ್ವನಿಯಾಗಬೇಕಿರುವ ಪತ್ರಿಕೆಗಳು ಜಾಹೀರಾತಿನ ಹಂಗಿಗೆ ಬಲಿಯಾಗಿ ವ್ಯಾಪಾರಿ ಜಗತ್ತಿನ ಮತ್ತು ಅಧಿಕಾರದ ಕೇಂದ್ರಗಳ ಪ್ರಚಾರದಂಗಣಗಳಾಗುತ್ತಿವೆ. ಇದಕ್ಕೆ ನೀಡುತ್ತಿರುವ ಬಲವಾದ ಕಾರಣ ‘ಅರ್ಥಕೇಂದ್ರ’ವಾದದ್ದು. ಪತ್ರಿಕೆ ನಡೆಸಲು ಬೇಕಾಗುವ ಅಪಾರ ಪ್ರಮಾಣದ ಹಣಕಾಸು ಹೊಂದಿಸಿಕೊಳ್ಳಲು ಹರ ಸಾಹಸ ಪಡಬೇಕಾದ ಸ್ಥಿತಿಯನ್ನು ನಿರ್ವಹಿಸಲು ಜಾಹೀರಾತು ಇಲ್ಲದೆ ಸಾಧ್ಯವೇ ಇಲ್ಲ ಎನ್ನುವುದು. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಜನಹಿತದಿಂದ ವಿಮುಖರಾಗಿ ಧನಹಿತದ ಕಡೆಗೆ ಮುಖ ಮಾಡಿದಾಗ ಬಹುತೇಕ ಮಾಧ್ಯಮಗಳ ಸ್ಥಿತಿಯೂ ಇದೇ ಆಯಿತು. ಇಂತಹ ಹೊತ್ತಲ್ಲಿ ನಿಜವಾಗಿಯೂ ಜನರ ಜೊತೆ ನಿಂತಿರುವುದು ಪರ್ಯಾಯ ಮಾಧ್ಯಮಗಳು. ಅದರಲ್ಲಿಯೂ ಕಳೆದ ಐದು ವರ್ಷಗಳಿಂದ ಅಸಹಾಯಕರ, ದಮನಿತರ ಶೋಷಿತರ ಜೊತೆ ನಿಂತ ಮಾಧ್ಯಮ ನೊಂದವರ ಪಾಲಿನ ಆಶಾಕಿರಣವಾಗಿದೆ.

2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮೊದಲು ನಡೆದ ಕೆಲವೊಂದು ಬೆಳವಣಿಗೆಗಳು ಪರ್ಯಾಯ ಮಾಧ್ಯಮಗಳ ಮಹತ್ವವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿವೆ ಎಂದೇ ಹೇಳಬಹುದು. ಬಹುಪಾಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ಜನಸಾಮಾನ್ಯರ ನಿತ್ಯದ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ಹದಗೆಡುತ್ತಿರುವ ಕಾನೂನು ಪರಿಸ್ಥಿತಿ, ಸಮುದಾಯಗಳ ನಡುವೆ ಸಂಘರ್ಷವೇ ಮುಂತಾದುವುಗಳನ್ನು ಮರೆತೇ ಬಿಟ್ಟಿದ್ದುವು. ಬದಲಿಗೆ ಅನಗತ್ಯ ವಿಷಯಗಳ ಕುರಿತು ದಿನಗಟ್ಟಲೆ ಚರ್ಚೆ ನಡೆಯುವ ವಾತಾವರಣವಿತ್ತು. ಅಧಿಕಾರಶಾಹಿ, ತೋಳ್ಬಲದೊಂದಿಗೆ ಬುದ್ಧಿಯ ಮತ್ತು ಧನ ಬಲವನ್ನೂ ಪಡೆದರೆ ನೊಂದವರ ನಿಟ್ಟುಸಿರು ತನ್ನದೇ ಕಿವಿಯನ್ನು ಮುಟ್ಟುವುದೂ ಎಷ್ಟು ಕಷ್ಟ ಎನ್ನುವುದನ್ನು ಈ ನಾಡಿನ ಜನ ಅನುಭವಿಸಿದರು ಎಂದರೆ ಅತಿಶಯೋಕ್ತಿಯಲ್ಲ. ಅತ್ತ ರಾಜಕೀಯದಲ್ಲಿ ಎಲ್ಲರ ಮನೆಯ ಕಾವಲಿಯೂ ತೂತಾಗಿರುವಾಗ, ಮೂಗು ಹಿಡಿದು ಬಾಯಿ ಬಿಡಿಸಿ ನಾಲಗೆ ಜಡ್ಡು ಕಟ್ಟಿಸಲು ಆದಾಯ ಇಲಾಖೆ, ಜಾರಿ ನಿರ್ದೇಶನಾಲಯ, ಸಾಲದ್ದಕ್ಕೆ ಮಾಧ್ಯಮ ಕ್ಯಾಮಾರಾಗಳೂ ಇದ್ದು ಬಿಟ್ಟರೆ ಅಧಿಕಾರದ ಹಾದಿ ಸುಗಮ ಮಾತ್ರವಲ್ಲ, ತಳಿರು ತೋರಣ, ರಂಗೋಲಿಗಳಿಂದಲೂ ಕಂಗೊಳಿಸಿ ಬಿಡುತ್ತದೆ. ಇಂತಹ ಹೊತ್ತಲ್ಲಿ ಬೆಕ್ಕಿಗೆ ಗಂಟೆ ಕಟ್ಟುವ ಕೆಲಸಕ್ಕೆ ಇಳಿಯುವವರು ಯಾರು? ಸಮುದಾಯದ ಮನಸ್ಸುಗಳಲ್ಲಿ ಮಡುಗಟ್ಟಿರುವ ನೋವು, ಸಂಕಟಗಳಿಗೆ ಪರಿಹಾರ ಎಲ್ಲಿ? ಹಸಿದವರೂ ಹೊಟ್ಟೆ ತುಂಬಿದೆ ಎಂದು ತೇಗುತ್ತಿರುವುದೇ ಸುದ್ದಿಯಾದರೆ, ಭರವಸೆಯಾದರೂ ಎಲ್ಲಿ? ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳಿಗೆ ಅಧಿಕಾರದ ಹಂಚಿಕೆಯ ಮತ್ತು ಅಧಿಕಾರ ಅನುಭವಿಸುವ ಹಪಹಪಿಕೆಯ ಸುತ್ತವೇ ಸುತ್ತುವುದು ಬಿಟ್ಟರೆ ಬೇರೆ ಜನಪರವಾದ ಕಾರ್ಯಸೂಚಿಗಳೇ ಇಲ್ಲ. ಇಂತಹ ಹೊತ್ತಲ್ಲಿ ಸಮಾನ ಆಸಕ್ತರು, ಜನಪರ ಕಾಳಜಿ ಇರುವ ಸಮುದಾಯದ ಸಮಾಜ ಮುಖೀ ಮನಸ್ಸುಗಳ “ಎದ್ದೇಳು ಕರ್ನಾಟಕ” ಎನ್ನುವ ಜನಪರ ಧ್ವನಿ ನಾಡಿನುದ್ದಕ್ಕೂ ಮಾರ್ದನಿಸಿದ ರೀತಿ ಅನನ್ಯ. ‘ಆ ದಿನದ’ ಎಚ್ಚೆತ್ತ ಕರ್ನಾಟಕ ಅಧಿಕಾರದ ಅಬ್ಬರದ ಆಲಾಪದ ನಡುವೆಯೂ ಜನಶಕ್ತಿಯ ಹನಿಯನ್ನು ಒಂದಾಗಿಸಿ ಹಳ್ಳವಾಗಿ, ಕೊಳ್ಳವಾಗಿ ಪರಿವರ್ತಿಸಿ ಜನಮನದ ಅರುಣರಾಗ ಹೊರಡಿಸಿಯೇ ಬಿಟ್ಟಿತು.

ಪರ್ಯಾಯ ಮಾಧ್ಯಮಗಳು ಹುಟ್ಟುಹಾಕಿರುವ ಬರಹಗಾರರು, ಸಮುದಾಯದ ಒಳದನಿಗಳನ್ನು ಹೊರ ಜಗತ್ತಿಗೆ ತಲುಪಿಸುವ ಲೇಖಕರು ಬಹಳ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು ಕಡಿಮೆ ಸಾಧನೆ ಏನಲ್ಲ. ಸಾಮಾಜಿಕ ಸಂಬಂಧ, ಜಾತಿ ವ್ಯವಹಾರ ದೃಷ್ಟಿಯ ಬೇಲಿಯನ್ನು ದಾಟಿ ಮಾಧ್ಯಮ ಜಗತ್ತಿನಲ್ಲಿ ಹೆಜ್ಜೆಯಿಡುವುದು ಸುಲಭದ ತುತ್ತಲ್ಲ. ಇಂತಹ ಹೊತ್ತಲ್ಲಿ ಕನ್ನಡದಲ್ಲಿ “ಈ ದಿನ” ದಂತಹ ಪರ್ಯಾಯ ಮಾಧ್ಯಮ ಉಂಟು ಮಾಡಿರುವ ‘ಸಂಚಲನ’ ಮುಖ್ಯವಾಹಿನಿಯ ಮಾಧ್ಯಮಗಳ ಕಣ್ಣು ತೆರೆಸಿರಬಹುದೇ? ಇದೇ ಕಾರಣಕ್ಕೆ ಅವು ಇಂದು ಅಧಿಕಾರದ ಚಾವಡಿಯನ್ನು ದಾಟಿ ನಾಡಿನಂಗಳದತ್ತ ನೋಟ ನೆಟ್ಟಿದೆ ಎನ್ನಬಹುದು. ಈ ದಿನ ಪ್ರಕಟಿಸಿದ “ನಮ್ಮ ಕರ್ನಾಟಕ ನಡೆದ 50 ಹೆಜ್ಜೆ ಮುಂದಿನ ದಿಕ್ಕು” ಎನ್ನುವ ವಿಶೇಷ ಸಂಚಿಕೆ, ನಾಡಿನ ಪ್ರಮುಖ ಸಮಾಜದ ಹಿತ ಚಿಂತಕರ” ಲೇಖನಗಳಿರುವ ಸಂಗ್ರಹ. ಅವರೇ ಸಂಪಾದಕೀಯದಲ್ಲಿ ಹೇಳಿಕೊಂಡಿರುವಂತೆ “ಹಿಂದಣ ಹೆಜ್ಜೆಯನ್ನು ಮುಂದಣ ಸಾಧ್ಯತೆಯನ್ನು ಅರಿಯುವ ಪ್ರಯತ್ನದಲ್ಲಿದೆ’ ಎನ್ನುವ ಮಾತು ನೊಂದವರ ಭವಿಷ್ಯದ ಭರವಸೆಯ ಮಾತಾಗಿದೆ ಎಂದೇ ನನ್ನ ಭಾವನೆ.

ಇಂತಹ ಕಾಳಜಿಯೊದಿಗೆ ಕಾರ್ಯ ನಿರ್ವಹಿಸುವ ಇನ್ನೂ ಕೆಲವು ಪರ್ಯಾಯ ಮಾಧ್ಯಮಗಳಿವೆ ಎಂಬುದನ್ನು ಮರೆಯಲಾಗದು. ಇದರ ನಡುವೆಯೂ ಕೆಲವು ಪರ್ಯಾಯ ಮಾಧ್ಯಮಗಳು ಮುಖ್ಯ ಮಾಧ್ಯಮಗಳು ಕಬಳಿಸದೇ ಬಿಟ್ಟ ಗೋಮಾಳದಲ್ಲಿ ಮೇಯುವ ಅವಕಾಶವನ್ನೂ ಬಳಸಿಕೊಳ್ಳುತ್ತಿವೆ. ಆದರೆ ಇವತ್ತು ಜನರಿಗೆ ಆಯ್ಕೆಗಳು ಇರುವುದರಿಂದ ಕಾಳು ಮತ್ತು ಜೊಳ್ಳಿನ ನಡುವಿನ ವ್ಯತ್ಯಾಸ ಕೊಂಚ ಸಮಯ ಹಿಡಿದರೂ, ತಿಳಿಯುವುದಂತೂ ತಿಳಿಯುತ್ತದೆ. ಮಾಹಿತಿ ತಂತ್ರಜ್ಞಾನ ಉಂಟುಮಾಡಿರುವ ಒಂದು ಒಳ್ಳೆಯ ಪರಿಣಾಮ “ಪರ್ಯಾಯ ಮಾಧ್ಯಮಗಳ ಸಾಧ್ಯತೆ” ಎಂದರೂ ತಪ್ಪಲ್ಲ.

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು 

ಇದನ್ನೂ ಓದಿ- ನಾಡಿಯವರ ಈ ಗುಣಗಳು ಅವರನ್ನು ಎತ್ತರಕ್ಕೆ ನಿಲ್ಲಿಸಿದ್ದವು!

More articles

Latest article