ಬೆಂಗಳೂರು: ಲೈಂಗಿಕ ದೌರ್ಜನ್ಯ ಕುರಿತ ಪ್ರಕರಣದಲ್ಲಿ ಕಿರುತೆರೆ ನಟ ಚರಿತ್ ಬಾಳಪ್ಪ ಅವರನ್ನು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕುರಿತ ಪ್ರಕರಣ ದಾಖಲಾಗಿದೆ. ‘ಮುದ್ದುಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಚರಿತ್ ನಟಿಸಿದ್ದಾರೆ. ತೆಲುಗು ಭಾಷೆಯ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಪರಿಚಿತಳಾಗಿದ್ದ ಗೆಳತಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿರುವ ಆರೋಪದಡಿಯಲ್ಲಿ ಚರಿತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ವಿವಾಹವಾಗುತ್ತೇನೆ ಎಂದು ನಂಬಿಸಿ, ಪ್ರೀತಿಸಿ ಬಲವಂತವಾಗಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ. ತಾನು ವಾಸ ಮಾಡುತ್ತಿದ್ದ ಮನೆಗೆ ತನ್ನ ಸಹಚರರ ಜೊತೆ ಅಕ್ರಮವಾಗಿ ಪ್ರವೇಶಿಸಿ ಚರಿತ್ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಹಣಕ್ಕೂ ಬೇಡಿಕೆ ಇಟ್ಟಿರುವ ಆರೋಪವನ್ನೂ ಹೊರಿಸಿದ್ದು, ಒಂದು ವೇಳೆ ಹಣ ಕೊಡದೇ ಇದ್ದಲ್ಲಿ ತನ್ನ ಜತೆ ಇರುವ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ.
ಚರಿತ್ ಬಾಳಪ್ಪಗೆ 2017ರಲ್ಲಿ ನಟಿ ಮಂಜು ಜತೆ ವಿವಾಹವಾಗಿತ್ತು. 2022 ರಲ್ಲಿ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ನಂತರ ಇಬ್ಬರೂ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪರಿಹಾರ ಹಣಕ್ಕೆ ಮಂಜು ಅವರು ನೋಟಿಸ್ ಕಳುಹಿಸಿದ್ದಕ್ಕೆ ಚರಿತ್ ಮಾಜಿ ಪತ್ನಿಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಮಂಜು ಅವರು ಚರಿತ್ ವಿರುದ್ಧ ಜೂನ್ ನಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಚರಿತ್ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಧೃವಂತ್ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದರು. ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘w/o ಕೃಷ್ಣಮೂರ್ತಿ’ ಧಾರಾವಾಹಿ ಮತ್ತು ‘ಮುದ್ದು ಮಣಿಗಳು’ ಧಾರಾವಾಹಿಯಲ್ಲಿ ವೈದ್ಯರ ಪಾತ್ರ ನಿರ್ವಹಿಸಿದ್ದರು.