ಗ್ಯಾರೆಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆ: ಕುಮಾರಸ್ವಾಮಿಗೆ ನೋಟಿಸ್

Most read

ಬೆಂಗಳೂರು: ತುಮಕೂರಿನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಗ್ರಾಮೀಣ ಮಹಿಳೆಯರ ಕುರಿತು ನಾಲಿಗೆ ಹರಿಬಿಟ್ಟು ಮಾತನಾಡಿದ ಮಾಜಿ‌ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಗ್ಯಾರೆಂಟಿ ಯೋಜನೆಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಕೀಳುಮಟ್ಟದ ಹೇಳಿಕೆ ನೀಡಿದ್ದರು. ಈ‌ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗ ಮಾಜಿ ಮುಖ್ಯಮಂತ್ರಿಗೆ ನೋಟಿಸ್ ಜಾರಿ ಮಾಡಿದೆ.

ಬೆಳಗಾವಿಯಲ್ಲಿ ಸಚಿವ ಲಕ್ಷ್ಮಿ‌ಹೆಬ್ಬಾಳ್ಕರ್ ಕುರಿತು ತುಚ್ಛವಾಗಿ ಮಾತನಾಡಿರುವ ಮಾಜಿ‌ ಶಾಸಕ ಸಂಜಯ್ ಪಾಟೀಲ್ ವಿರುದ್ಧವೂ ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ರಾಜಕೀಯ ಧುರೀಣರು ಮಹಿಳೆಯರ ಕುರಿತು ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ವ್ಯಕ್ತಿತ್ವ, ವೈಯಕ್ತಿಕ ಆಯ್ಕೆಗಳು ಮತ್ತು ನೈತಿಕತೆಯ ಕುರಿತು ಕೀಳಾಗಿ ಮಾತಾಡಿದರೆ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿರುವ ಅವರು, ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆ ಇಡೀ‌ ಮಹಿಳಾ ಸಂಕುಲವನ್ನು ಅಪಮಾನಿಸುವಂತಿದೆ ಎಂದು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

More articles

Latest article