ಬೆಂಗಳೂರು: ಇಷ್ಟು ವರ್ಷಗಳಿಂದ ಹಾಡುತ್ತಾ ಬಂದಿರುವ ರಾಷ್ಟ್ರಗೀತೆ ಜನಗಣಮನ ಈಗ ಬೇಡವಾಯಿತೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಈ ಸಂಬಂಧ ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರಿದ ಅವರು, ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಸಿದ್ದಾಂತದ ಹಂಗಿಲ್ಲದೆ ಮಾತನಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿದಿನ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು, ಅಸಂಬದ್ಧ ಹೇಳಿಕೆ ನೀಡುವುದು ಅವರ ಚಾಳಿಯಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಮತಗಳ್ಳತ ನಡೆಯುತ್ತಿದ್ದು, ಚುನಾವಣೆ ವ್ಯವಸ್ಥೆಯನ್ನೇ ಹಾಳುಗೆಡವಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಚು ಏನು ಎನ್ನುವುದು ದೇಶದ ಜನರಿಗೆ ಅರಿವಿಗೆ ಬಂದಿದೆ. ಇನ್ನು ಮುಂದಾದರೂ ತಾನೊಬ್ಬ ವಿಶ್ವಗುರು ಎಂಬ ನಾಟಕವಾಡುವುದನ್ನು ನಿಲ್ಲಿಸಲಿ ಎಂದು ಲಾಡ್ ವ್ಯಂಗ್ಯವಾಡಿದರು.
ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದಾಗ ಬಿಜೆಪಿ ಮುಖಂಡರು ಅವರಿಗೆ ದೇಶದ್ರೋಹಿ ಪಟ್ಟಕಟ್ಟಿದ್ದರು. ಆಗ ನೂರಾರು ಮಂದಿ ರೈತರು ಮೃತಪಟ್ಟಿದ್ದರು. ಆಗ ರೈತರ ಪರ ನಿಲ್ಲದ ಬಿಜೆಪಿಗೆ ಈಗ ರಾಜ್ಯದ ರೈತರ ಮೇಲೆ ಪ್ರೀತಿ ಉಕ್ಕಿ ಬಂದಿದೆ. ಸರ್ಕಾರವನ್ನು ಟೀಕಿಸಲೆಂದೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ರೈತರ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಕಾಂಗ್ರೆಸ್ ಆಡಳಿತವಿದ್ದ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದರೆ, ರಾಷ್ಟ್ರೀಯ ಸಮಸ್ಯೆ ಎಂಬಂತೆ ತೋರಿಸಲಾಗುತ್ತಿದೆ. ಬಿಜೆಪಿ ಸರ್ಕಾರವಿರುವ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದರೆ ರೈತರಿಗೆ ದೇಶದ್ರೋಹಿ ಪಟ್ಟಕಟ್ಟಿ, ಅವರ ಹಕ್ಕುಗಳನ್ನೇ ಮೊಟುಕು ಮಾಡಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

