ನವದೆಹಲಿ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 15 ದಿನಗಳು ಕಳೆದರೂ ಇದುವರೆಗೆ ಕೇಂದ್ರ ಸರ್ಕಾರ ಮುಖ್ಯ ತನಿಖಾಧಿಕಾರಿಯನ್ನು ನೇಮಕ ಮಾಡದೇ ಇರುವುದು ಅಕ್ಷಮ್ಯ ಅಪರಾಧ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಆರೋಪ ಕುರಿತು ವಿಮಾನ ಅಪಘಾತ ತನಿಖಾ ಸಂಸ್ಥೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಹಮದಾಬಾದ್ ನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿ ಎರಡು ವಾರಗಳು ಉರುಳಿದರೂ ವಿಮಾನ ಅಪಘಾತ ತನಿಖಾ ಸಂಸ್ಥೆಯು (ಎಎಐಬಿ) ಇದುವರೆಗೂ ಮುಖ್ಯ ತನಿಖಾಧಿಕಾರಿಯನ್ನು ನೇಮಕ ಮಾಡಿಲ್ಲ ಎಂದು ತಿಳಿದು ಬಂದಿದೆ. ಇದು ಅಕ್ಷಮ್ಯ ಅಪರಾಧ ಎಂದು ಅವರು ತಿಳಿಸಿದ್ದಾರೆ.
ಜೂನ್ 12ರಂದು ಅಹಮದಾಬಾದ್ ನಿಂದ ಲಂಡನ್‌ಗೆ ಹೊರಟಿದ್ದ ‘ಏರ್ ಇಂಡಿಯಾ’ ವಿಮಾನ ಟೀಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಮೀಪದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ 241 ಮಂದಿ ಸೇರಿದಂತೆ 270 ಮಂದಿ ಮೃತಪಟ್ಟಿದ್ದರು. ಜತೆಗೆ ಹಾಸ್ಟೆಲ್ ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ದಾರಿಹೋಕರೂ ಅಸು ನೀಗಿದ್ದರು.

                                    