ಕಣ್ಮರೆಯಾಗಿದ್ದ ಚಿತ್ರ ನಿರ್ಮಾಪಕ ಅಹಮದಾಬಾದ್‌ ವಿಮಾನ ದುರಂತದಲ್ಲಿ ಸಾವು

Most read

ಅಹಮದಾಬಾದ್‌: ಅಹಮದಾಬಾದ್‌ ನಲ್ಲಿ ಜೂನ್‌ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪ್ರಯಾಣಿಕರಷ್ಟೇ ಅಲ್ಲದೆ ವಿಮಾನ ಡಿಕ್ಕಿ ಹೊಡೆದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ನಲ್ಲಿದ್ದ ವೈದ್ಯರೂ ಮೃತಪಟ್ಟಿದ್ದರು. ಇದೀಗ ಆ ಮಾರ್ಗದಲ್ಲಿ ಸಾಗುತ್ತಿದ್ದ ದಾರಿಹೋಕರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಗುಜರಾತ್‌ ನ ಗುಜರಾತಿ ಚಲನಚಿತ್ರ ನಿರ್ಮಾಪಕ ಮಹೇಶ್‌ ಜಿರಾವಾಲಾ, ಇದೇ ದುರಂತದಲ್ಲಿ ಮೃತಪಟ್ಟಿರುವುದು ಖಚಿತವಾಗಿದೆ.

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌  ಗ ಡಿಕ್ಕಿ ಹೊಡೆದಿದೆ. ಆಗ ಇದೇ ಮಾರ್ಗದಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಗುಜರಾತಿ ಚಲನಚಿತ್ರ ನಿರ್ಮಾಪಕ ಮಹೇಶ್‌ ಜಿರಾವಾಲಾ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್‌ಎ ಪರೀಕ್ಷೆಯಲ್ಲೂ ಇವರ ಸಾವು  ದೃಢಪಟ್ಟಿದೆ.

ಜಿರಾವಾಲಾ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ. ಆರಂಭದಲ್ಲಿ ಅವರ ಕುಟುಂಬದ ಸದಸ್ಯರು ಈ ವಿಷಯವನ್ನು ನಂಬಲಿಲ್ಲ. ಅವರ ಅನುಮಾನಗಳನ್ನು ನಿವಾರಿಸಲು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸುಟ್ಟು ಕರಕಲಾದ ಅವರ ಸ್ಕೂಟರ್‌ ಅನ್ನು ತೋರಿಸಬೇಕಾಯಿತು ಎಂದು ಜಂಟಿ ಪೊಲೀಸ್ ಆಯುಕ್ತ ಜೈಪಾಲ್‌ ಸಿನ್ಹ್ ರಾಥೋಡ್  ಹೇಳಿದ್ದಾರೆ.

ಜಿರಾವಾಲಾ ಮೃತದೇಹವನ್ನು ಶುಕ್ರವಾರವೇ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸುಟ್ಟು ಹೋದ ಸ್ಕೂಟರ್‌ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನ ಅಪಘಾತ ನಡೆದ ಸಮಯದಲ್ಲಿ ಸ್ನೇಹಿತರೊಬ್ಬರನ್ನು ಬೇಟಿ ಮಾಡಲು ಅವರು ಲಾ ಗಾರ್ಡನ್ ಪ್ರದೇಶಕ್ಕೆ ಹೋಗಿದ್ದರು. ಮಧ್ಯಾಹ್ನ 1.14ರ ವೇಳೆ ಪತ್ನಿ ಹೇತಲ್‌ ಅವರಿಗೆ ಕರೆ ಮಾಡಿದ್ದ ಅವರು ಮನೆಗೆ ಮರಳುತ್ತಿರುವುದಾಗಿ ಹೇಳಿದ್ದರು. ಆದರೆ ಪತಿ ಮನೆಗೆ ಬಾರದೇ ಇದ್ದುದರಿಂದ ಹೇತಲ್‌ ಅವರು  ಕರೆ ಮಾಡಿದ್ದಾರೆ. ಆಗ ಜಿರಾವಾಲಾ ಅವರ ಮೊಬೈಲ್‌ ಸ್ವಿಚ್‌ ಆಫ್‌ ಎಂದು ಬಂದಿತ್ತು. ಕೂಡಲೇ ಅವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆ ನಡೆಸಿದಾಗ ಜಿರಾವಾಲಾ ಅವರ ಮೊಬೈಲ್‌ ಲೋಕೇಶ್‌ ಕೊನೆಯದಾಗಿ ಘಟನಾ ಸ್ಥಳದಿಂದ ಸುಮಾರು 700 ಮೀಟರ್‌ ದೂರದಲ್ಲಿ ತೋರಿಸಿದೆ. ಅಲ್ಲದೇ ಸುಟ್ಟ ಸ್ಕೂಟರ್‌ ನ ಚಾಸಿಸ್ ಮತ್ತು ಎಂಜಿನ್ ಸಂಖ್ಯೆಗಳು ಸ್ಕೂಟರ್‌ ನ ನೋಂದಣಿ ದಾಖಲೆಗಳೊಂದಿಗೆ ಹೊಂದಿಕೆಯಾಗಿವೆ. ತಕ್ಷಣ ಕುಟುಂಬ ಸದಸ್ಯರ ಡಿ ಎನ್‌ ಎ ಮಾದರಿ ತೆಗೆದುಕೊಂಡು ತನಿಖೆ ನಡೆಸಲಾಗಿತ್ತು. ಜಿರಾವಾಲಾ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿರುವು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article