ಬೆಂಗಳೂರು: ಮೇಕೆದಾಟು ಯೋಜನೆಗಾಗಿ ನಾವು ಪಾದಯಾತ್ರೆ ಮಾಡಿದಾಗ, ಕಬಾಬ್ ತಿಂದುಕೊಂಡು ಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ನಮ್ಮನ್ನು ಲೇವಡಿ ಮಾಡಿದ್ದರು. ಈಗ ಸ್ಪರ್ಧೆ ಮಾಡಲು ಮಂಡ್ಯಗೆ ಹೋದ ಮೇಲೆ ಅವರಿಗೆ ಬಿಸಿ ಮುಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ಸಹೋದರ ಡಿ.ಕೆ.ಸುರೇಶ್ ಪರವಾಗಿ ಇಂದು ರಾಜರಾಜೇಶ್ವರಿ ನಗರ ಭಾಗದಲ್ಲಿ ಪ್ರಚಾರ ನಡೆಸಿದ ಡಿ.ಕೆ.ಶಿವಕುಮಾರ್, ಈಗ ಕುಮಾರಸ್ವಾಮಿಯವರು ಮೇಕೆದಾಟು ಜಪ ಮಾಡ್ತಿದ್ದಾರೆ. ಅವರ ಕೈಲೇ ಅಧಿಕಾರ ಇದ್ದಾಗ ಅವರು ಯಾಕೆ ಏನೂ ಮಾಡಲಿಲ್ಲ ಎಂದು ಟೀಕಿಸಿದರು.
ನಾವು ಯಾತ್ರೆ ನಡೆಸುವಾಗ ಕಬಾಬ್, ಬಿರಿಯಾನಿ ಕಟ್ಟಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದರು. ಆಗ ಅವರು ನೀಡುತ್ತಿದ್ದ ಹೇಳಿಕೆಗಳನ್ನು ತೆಗೆದುನೋಡಿ. ನಮ್ಮ ಹೋರಾಟವನ್ನು ಅವರ ಕೈಲಿ ಸಹಿಸೋದಕ್ಕೆ ಆಗಿರಲಿಲ್ಲ. ನಾವು ನಮ್ಮ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೋರಾಟ ಮಾಡಿದ್ದೆವು. ಅಂದು ನಮಗೆ ಬೆಂಬಲ ನೀಡುವ ಬದಲು ಅವರು ಗೇಲಿ ಮಾಡಿಕೊಂಡು ತಿರುಗಿದ್ದರು ಎಂದು ಅವರು ಆರೋಪಿಸಿದರು.
ಬರ ಪರಿಹಾರ ಬಿಡುಗಡೆ ಆಗದೇ ಇರುವುದಕ್ಕೆ ಚುನಾವಣಾ ಆಯೋಗ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಷ್ಟಕ್ಕೂ ಚುನಾವಣಾ ಆಯೋಗಕ್ಕೆ ಬರಪರಿಹಾರ ಬಿಡುಗಡೆಗೂ ಏನು ಸಂಬಂಧ? ನಾವು ಮನವಿ ಕೊಟ್ಟು ಆರು ತಿಂಗಳಾದವು. ಈಗ ಬಿಡುಗಡೆ ಮಾಡಿಲ್ಲ ಎಂದು ನಿರ್ಮಲಾ ಅವರೇ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನತೆಯ ದೃಷ್ಟಿಯಲ್ಲಿ ಇದು ಅಕ್ಷಮ್ಯ ಅಪರಾಧ, ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಅವರು ಹೇಳಿದರು.