ಧರ್ಮಸ್ಥಳ: ಚಿನ್ನಯ್ಯ ಪ್ರಕರಣಕ್ಕೆ ಶೀಘ್ರ ಮುಕ್ತಾಯ; ಬಂಗ್ಲೆಗುಡ್ಡ, ಅಕ್ರಮ ಶವ ಹೂತಿರುವಿಕೆ, ನಾಪತ್ತೆ ಪ್ರಕರಣಗಳತ್ತ ಎಸ್‌ ಐಟಿ ಚಿತ್ತ

Most read

ಬೆಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಕುರಿತಾದ ಅಂತಿಮ ವರದಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ)  ಸಿದ್ಧಪಡಿಸಿದೆ. ಜತೆ ಜತೆಗೆ ಇದೀಗ ತಲೆ ಬುರುಡೆಗಳು ಪತ್ತೆಯಾದ ಬಂಗ್ಲೆಗುಡ್ಡ, ಕಾನೂನು ಬಾಹಿರವಾಗಿ ನಾಪತ್ತೆಯಾಗಿರುವ ಮತ್ತು ಶವಗಳನ್ನು ಹೂತು ಹಾಕಿರುವ ಪ್ರಕರಣದ ವಿಚಾರಣೆಗೆ ನಿರ್ಧರಿಸಿದೆ. ಚಿನ್ನಯ್ಯ ಸಲ್ಲಿಸಿರುವ ದೂರಿನ ಜತೆಗೆ ಈ ಆಯಾಮಗಳಿಂದಲೂ ತನಿಖೆ ಆರಂಭಿಸಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ. ಈ ಎಲ್ಲ ಅಂಶಗಳನ್ನು ಕುರಿತು ಎಸ್‌ ಐಟಿಯು ಹೈಕೋರ್ಟ್‌ ಗೆ ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ಹಿಂದೆ ಬಿಎಲ್‌ ಆರ್‌ ಪೋಸ್ಟ್‌ ಮಾಡಿರುವ ವರದಿಗಳನ್ನು ಪುಷ್ಟೀಕರಿಸುತ್ತದೆ.

ಗೃಹ ಇಲಾಖೆಯ ಮೂಲಗಳ ಪ್ರಕಾರ ಮೊದಲು ಎಸ್‌ ಐಟಿ ಮ್ಯಾಜಿಸ್ಟ್ರೇಟ್‌ ಅವರಿಗೆ ದೂರು ವರದಿಯನ್ನು ಸಲ್ಲಿಸಿ ನಂತರ ತನಿಖೆಯನ್ನು ಅರಂಭಿಸಲಿದೆ. ಇತರ ಆಯಾಮಗಳಿಂದಲೂ ತನಿಖೆ ನಡೆಸುವುದಾಗಿ ಎಸ್‌ ಐಟಿಯು ಹೈಕೋರ್ಟ್‌ ಗೆ ಮಾಹಿತಿ ನೀಡಿದೆ.

ನಿನ್ನೆಯಷ್ಟೇ ಇದೇ ಪ್ರಕರಣಕ್ಕೆ ಸಬಂಧಿಸಿದಂತೆ  ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಹಾಗೆಯೇ ಸೌಜನ್ಯ ಪರ ಹೋರಾಟಗಾರರನ್ನು ಶೋಷಿಸದಂತೆಯೂ ನಿರ್ದೇಶನ ನೀಡಿದೆ. ಅಕ್ಟೋಬರ್‌ 30 ರಂದು ಗಿರೀಶ ಮಟ್ಟಣ್ಣವರ್‌ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ ಐಆರ್‌ ರದ್ದುಗೊಳಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆಗ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಲಾಗಿತ್ತು.

ತಡೆಯಾಜ್ಞೆಯನ್ನು ತೆರೆವುಗಳಿಸುವಂತೆ ರಾಜ್ಯ ಸರ್ಕಾರ ಸುಮಾರು 30 ಪುಟಗಳ ಆಕ್ಷೇಪಣೆಯನ್ನು ಸಲ್ಲಿಸಿತ್ತು.  ಎಸ್‌ ಐಟಿ ರಚನೆಗೆ ಆದೇಶಿಸಿದ್ದ ಸರ್ಕಾರ, ತನಿಖೆಯನ್ನು ಕೇವಲ ಚಿನ್ನಯ್ಯ ನೀಡಿರುವ ದೂರಿಗೆ ಮಾತ್ರ ಸೀಮಿತಗೊಳಿಸಿರಲಿಲ್ಲ. ತನಿಖೆಯ ವ್ಯಾಪ್ತಿಯು ದಶಕಗಳ ಕಾಲ ಅಕ್ರಮ ಶವಗಳನ್ನು ಹೂತಿರುವುದನ್ನೂ ತನಿಖೆ ನಡೆಸಲು ಆದೇಶಿಸಿತ್ತು  ಎಂಬುದನ್ನು ಕೋರ್ಟ್‌ ಗಮನಕ್ಕೆ ತಂದಿತ್ತು. ಪ್ರಸ್ತುತ ನಡೆಯುತ್ತಿರುವ ತನಿಖೆಯ ಹಲವಾರು ಅಂಶಗಳು ಅಕ್ರಮ ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಪಟ್ಟಿರುವುದಿಲ್ಲ. ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲಿ ಇತ್ತೀಚೆಗೆ ತನೀಖೆಯ ಸಂದರ್ಭದಲ್ಲಿ ಎಸ್‌ ಐಟಿ ಪತ್ತೆಹಚ್ಚಿದ ತಲೆ ಬುರುಡೆಗಳು ಮತ್ತು ಇತರ ಮಾನವ ಅವಶೇಷಗಳು ಈ ಬೆಳವಣಿಗೆಗಳಿಗೆ ಉದಾಹರಣೆಗಳಾಗಿವೆ.

ಈ ಪ್ರಕರಣದಲ್ಲಿ ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದ ಆರೋಪಗಳು, ಎಫ್‌ ಐಆರ್‌ ರದ್ದುಗೊಳಿಸುವಂತೆ ಸಲ್ಲಿಸಲಾದ ಅರ್ಜಿ ಮೊದಲಾದ ಬೆಳವಣಿಗೆಗಳು ಕುತೂಹಲಕಾರಿಯಾಗಿವೆ.

ಎಸ್‌ ಐಟಿಯು ಚಿನ್ನಯ್ಯ ಪ್ರಕರಣಕ್ಕೆ ಮುಕ್ತಾಯ ಹಾಡಲಿದ್ದು, ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ರಹಸ್ಯಗಳು, ಮಹಿಳಾ ಆಯೋಗ ಸೂಚಿಸಿದ್ದ ನಾಪತ್ತೆ ಪ್ರಕರಣಗಳು ಮತ್ತು ಅಕ್ರಮವಾಗಿ ಶವಗಳನ್ನು ಹೂತು ಹಾಕಿರುವ ಪ್ರಕರಣಗಳನ್ನು ಭೇದಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಲಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ತನಿಖೆ ಸಂದರ್ಭದಲ್ಲಿ ಧರ್ಮಸ್ಥಳ ಪಂಚಾಯಿತಿ ದಾಖಲೆಗಳು ಮತ್ತು ಯುಡಿಆರ್‌ ಗಳನ್ನು ಪರಿಶೀಲಿಸಿದಾಗ ಪಂಚಾಯಿತಿ ವ್ಯಾಪ್ತಿಯಲ್ಲಿ 38  ಶವಗಳನ್ನು ಹೂತುಹಾಕಿರುವುದು ಪತ್ತೆಯಾಗಿದೆ. ಇವುಗಳನ್ನು ಅಕ್ರಮವಾಗಿ ಶವಗಳನ್ನು ಹೂತುಹಾಕಿರುವ ಪ್ರಕರಣಗಳು ಎಂದು ಪರಿಗಣಿಸಲಾಗಿದೆ. ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ ಏಳು ತಲೆ ಬುರುಡೆಗಳು ಮತ್ತು ಹಲವಾರು ಮಾನವ ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎಸ್‌ ಐಟಿಯು ವರದಿಗಾಗಿ ಕಾಯುತ್ತಿದೆ.

More articles

Latest article