Thursday, December 12, 2024

ದ್ವೇಷ ಭಾಷಣಗಳೆಲ್ಲ ಮುಗಿದಾದ ಮೇಲೆ ಆಯೋಗದ ಆದೇಶ

Most read

ಚುನಾವಣಾ ಆಯೋಗದ ಬಗ್ಗೆ ಯಾವ ಪಕ್ಷದ ನಾಯಕರಿಗೂ ಕನಿಷ್ಠ ಭಯ ಎನ್ನುವುದೇ ಇಲ್ಲ. ಆಯೋಗದ ನಿಯಮಗಳನ್ನು ಮುರಿದರೂ ಅದಕ್ಕೆ ಶಿಕ್ಷೆ ಎನ್ನುವುದಿಲ್ಲ. ಕಾನೂನಿನಲ್ಲಿ ಶಿಕ್ಷೆ ಇದ್ದರೂ ಇಲ್ಲಿವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಹೀಗಿರುವಾಗ ಆಯೋಗದ ಸಲಹೆ, ಸೂಚನೆ, ತಾಕೀತು, ಮಾರ್ಗದರ್ಶನಗಳಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಅಂತೂ ಇಂತೂ ಕೋಟೆ ಲೂಟಿಯಾದ ಮೇಲೆ ದ್ವಾರ ಹಾಕಲು ಆದೇಶಿಸಿದಂತಿದೆ ಚುನಾವಣಾ ಆಯೋಗದ ಮೇ 22 ರ ತಾಕೀತು. ಈಗಾಗಲೇ ಮುಕ್ಕಾಲು ಭಾಗ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ. ಐದು ಹಂತಗಳು ಮುಗಿದು ಇನ್ನೆರಡೇ ಬಾಕಿ ಇವೆ. ಇಷ್ಟೂ ಹಂತಗಳ ಚುನಾವಣಾ ಪ್ರಚಾರಗಳಲ್ಲಿ ಮೋದಿಯಾದಿಯಾಗಿ ಅನೇಕ ಕೇಸರಿ ಪಡೆಯ ನಾಯಕರುಗಳು ಪುಂಖಾನುಪುಂಖವಾಗಿ ದ್ವೇಷ ಭಾಷಣಗಳನ್ನು ಮಾಡುತ್ತಲೇ ಬಂದಿದ್ದಾರೆ. ಆರೋಪ ಪ್ರತ್ಯಾರೋಪಗಳ ದೂರುಗಳನ್ನು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪರಸ್ಪರರ ವಿರುದ್ಧ ಸಲ್ಲಿಸುತ್ತಲೇ ಬಂದಿವೆ. ಮೋದಿಯವರ ಮೇಲೆಯೇ ದ್ವೇಷ ಭಾಷಣ ಮಾಡಿದ ಕುರಿತು 27 ಕ್ಕೂ ಹೆಚ್ಚು ದೂರುಗಳು ಆಯೋಗದಲ್ಲಿ ದಾಖಲಾಗಿವೆ. ಇಲ್ಲಿಯವರೆಗೂ ದ್ವೇಷ ಭಾಷಣಿಗರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗದ ಚುನಾವಣಾ ಆಯೋಗ ಈಗ ಚುನಾವಣೆಯ ಅಂತಿಮ ಹಂತದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದೆ.

ಬಿಜೆಪಿ ಅಧ್ಯಕ್ಷರಿಗೆ ಆಯೋಗದ ನೋಟೀಸ್ ಹಾಗೂ ನಡ್ಡಾರವರ ಸಮರ್ಥನೆ

“ಪ್ರಧಾನಿ ಮೋದಿಯವರು ರಾಜಸ್ಥಾನದ ಬಾನಸ್ವಾರದಲ್ಲಿ ವಿಭಜನಾತ್ಮಕ ಭಾಷಣ ಮಾಡಿದ್ದಾರೆ” ಎಂದು ವಿರೋಧ ಪಕ್ಷಗಳು ದೂರು ನೀಡಿದ್ದರು. ದ್ವೇಷ ಪ್ರಚೋದನೆ ಮಾಡಿದ ಪ್ರಧಾನಿಗಳನ್ನು ಬಿಟ್ಟು ಚುನಾವಣಾ ಆಯೋಗವು ಬಿಜೆಪಿ ಪಕ್ಷದ ಅಧ್ಯಕ್ಷ ನಡ್ಡಾರವರಿಗೆ ನೋಟೀಸ್ ನೀಡಿತ್ತು.

“ಬಿಜೆಪಿ ನಾಯಕರ ಮಾತುಗಳು ಸತ್ಯವನ್ನು ಆಧರಿಸಿವೆ ಹಾಗೂ ಅವು ಕಾಂಗ್ರೆಸ್ಸಿನ ಕೆಟ್ಟ ಉದ್ದೇಶವನ್ನು ದೇಶದ ಮುಂದೆ ಬಹಿರಂಗ ಪಡಿಸುತ್ತವೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟವು ಮತಬ್ಯಾಂಕ್ ರಾಜಕಾರಣದ ಕಾರಣಕ್ಕೆ ಭಾರತವನ್ನು, ಭಾರತದ ಅಸ್ಮಿತೆಯನ್ನು, ಇಲ್ಲಿನ ಮೂಲ ಹಿಂದೂ ಧರ್ಮವನ್ನೂ ವಿರೋಧಿಸಲು ಆರಂಭಿಸಿದೆ” ಎಂದು ನಡ್ಡಾರವರು ಆಯೋಗದ ನೋಟೀಸ್ ಗೆ ಉತ್ತರಿಸಿದ್ದರು. ‘ನಡ್ಡಾರವರ ಸಮರ್ಥನೆಗಳನ್ನು ಒಪ್ಪಲಾಗದು’ ಎಂದು ತಳ್ಳಿ ಹಾಕಿದ ಚುನಾವಣಾ ಆಯೋಗವು “ಬಿಜೆಪಿಯು ತನ್ನ ಪ್ರಚಾರವನ್ನು ಭಾರತದ ಸೂಕ್ಷ್ಮ ಹಾಗೂ ಬಹುತ್ವದ ಮೂಲರಚನೆಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಆಯೋಗವು ನಿರೀಕ್ಷಿಸುತ್ತದೆ” ಎಂದು ಹೇಳಿ ನಾಮಕಾವಸ್ತೆ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಿತು. ಅಷ್ಟರಲ್ಲಾಗಲೇ ಚುನಾವಣೆ ಕೊನೆಯ ಹಂತ ತಲುಪಿಯಾಗಿತ್ತು.

ಅಂದರೆ ಆಯೋಗದ ಪ್ರಕಾರ ಬಿಜೆಪಿ ಅಧ್ಯಕ್ಷರಾದ ಜೆ.ಪಿ.ನಡ್ಡಾರವರು ಕೊಟ್ಟ ಉತ್ತರಗಳೇ ಸಮರ್ಥನೀಯವಲ್ಲವೆಂಬುದು ಸಾಬೀತಾದಂತಾಯ್ತು. ‘ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತದೆ’ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದಾಯ್ತು. ‘ಕಾಂಗ್ರೆಸ್ ಮುಸ್ಲಿಂ ಮತಬ್ಯಾಂಕ್ ರಾಜಕಾರಣ ಮಾಡುತ್ತದೆ’ ಎನ್ನುವುದಾದರೆ ಈ ಮೋದಿಯವರು ಮಂದಿರ ಮಸೀದಿ ಮೀಸಲಾತಿ ಮಂಗಳಸೂತ್ರ ಎಂದೆಲ್ಲಾ ಹೇಳುವ ಮೂಲಕ ಹಿಂದೂ ಮತಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲವೇ? ಅದಕ್ಕೆ ಆಯೋಗವು ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿಗೆ ‘ಭಾರತದ ಬಹುತ್ವದ ಮೂಲರಚನೆಗೆ ಅನುಗುಣವಾಗಿ ಇರಬೇಕು’ ಎಂದು ಹೇಳಿದ್ದು ಸ್ವಾಗತಾರ್ಹ ಮತ್ತು ಬಿಜೆಪಿಗರು ಆತ್ಮಾವಲೋಕನ ಮಾಡಿಕೊಳ್ಳಲು ಉತ್ತಮ ಸಲಹೆಯಾಗಿದೆ.

“ಕಾಂಗ್ರೆಸ್ ಪಕ್ಷ ಭಾರತದ ಮೂಲ ಹಿಂದೂ ಧರ್ಮವನ್ನು ವಿರೋಧಿಸಲು ಆರಂಭಿಸಿದೆ” ಎಂಬುದು ನಡ್ಡಾ ಆರೋಪವಾಗಿದೆ. ಸುಪ್ರೀಂಕೋರ್ಟ್ ಹೇಳಿದಂತೆ ಹಿಂದೂ ಎನ್ನುವುದು ಧರ್ಮ ಅಲ್ಲದೇ ಇರುವಾಗ ಅದನ್ನು ವಿರೋಧಿಸಲಾಗುತ್ತದೆ ಎನ್ನುವುದೇ ಸತ್ಯವಲ್ಲ. ಹೋಗಲಿ ಬಹುಸಂಖ್ಯಾತ ಹಿಂದೂ ಧರ್ಮೀಯರನ್ನು ವಿರೋಧಿಸಿ ಬಹುಮತ ಪಡೆಯಲು ಕಾಂಗ್ರೆಸ್ಸಿಗೆ ಸಾಧ್ಯವಿದೆಯಾ? ಕಾಂಗ್ರೆಸ್ ನವರು ಅಪೂರ್ಣ ರಾಮಮಂದಿರದ ಉದ್ಘಾಟನೆಗೆ ಹೋಗಲಿಲ್ಲ ಎನ್ನುವುದು ಹಿಂದೂ ಧರ್ಮ ವಿರೋಧಿತನ ಎಂದು ಹೇಳಲಾದೀತೆ? ಇದು ಇಂಡಿಯಾ ಮೈತ್ರಿಕೂಟವನ್ನು ಹಿಂದೂವಿರೋಧಿ ಎಂದು ಹಿಂದೂಗಳನ್ನು ನಂಬಿಸಿ ಮತಗಳನ್ನು ಪಡೆಯಲು ಬಿಜೆಪಿ ಸೃಷ್ಟಿಸಿದ ಸುಳ್ಳು ಪ್ರಚಾರದ ತಂತ್ರಗಾರಿಕೆ ಹಾಗೂ ಮತಬ್ಯಾಂಕ್ ಹೆಚ್ಚಿಸುವ ಹುನ್ನಾರ ಅಲ್ಲವೇ? ‘ಮೋದಿಯನ್ನು ವಿರೋಧಿಸಿದರೆ ಹಿಂದೂಗಳನ್ನು ವಿರೋಧಿಸಿದಂತೆ’ ಎನ್ನುವ ನರೇಟಿವ್ ಹುಟ್ಟಿಸಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗರಿಂದಲೇ ದೇಶಕ್ಕೆ ಅಪಾಯವಿದೆ.

ಇಷ್ಟಕ್ಕೂ ಕಾಂಗ್ರೆಸ್ ಪಕ್ಷ ಮುಸ್ಲಿಂ ಓಲೈಕೆ ಮಾಡಿ ಮತಬ್ಯಾಂಕ್ ರಾಜಕಾರಣ ಮಾಡುತ್ತದೆ ಎಂದುಕೊಂಡರೂ ಇದಕ್ಕೂ ಭಾರತದ ಅಸ್ಮಿತೆಗೂ ಏನು ಸಂಬಂಧ?. ಭಾರತದ ಅಸ್ಮಿತೆ ಇರುವುದು ಹಿಂದುತ್ವದಲ್ಲಿ ಅಲ್ಲ, ಅದು ಬಹುತ್ವದಲ್ಲಿ. ಅದನ್ನು ಆಯೋಗ ಸರಿಯಾಗಿ ಗುರುತಿಸಿದೆ. ಬಹುತ್ವದ ಮೂಲರಚನೆಗೆ ಅನುಗುಣವಾಗಿ ಇರುವಂತೆ ಬಿಜೆಪಿಗೆ ಸೂಚಿಸಿದೆ. ಆದರೆ ನರಸತ್ತ ಹಲ್ಲುಕಿತ್ತ ಹಾವಿನಂತಿರುವ ಆಯೋಗದ ಮಾತುಗಳನ್ನು ಸರ್ವಾಧಿಕಾರಿ ಕೇಳಲು ಸಾಧ್ಯವೇ? ಮೋದಿಯಿಂದಲೇ ನೇಮಕಾತಿ ಪಡೆದ ಆಯೋಗದ ಆಯುಕ್ತರು ದ್ವೇಷ ಭಾಷಣದ ಮುಂಚೂಣಿಯಲ್ಲಿರುವ ಪ್ರಧಾನಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಹೋಗಲಿ ಕನಿಷ್ಠ ನೋಟೀಸನ್ನೂ ಕೊಡಲು ಸಾಧ್ಯವಿದೆಯಾ?

ಕಾಂಗ್ರೆಸ್ ಅಧ್ಯಕ್ಷರಿಗೆ ಆಯೋಗದ ತಾಕೀತು

ಬಿಜೆಪಿಗೆ ಎಚ್ಚರಿಕೆ ಕೊಟ್ಟಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೂ ಆಯೋಗ ಕೆಲವು ನಿರ್ದೇಶನಗಳನ್ನು ಕೊಟ್ಟಿದೆ. ಅದರಲ್ಲಿ ಮುಖ್ಯವಾಗಿರುವುದು ‘ಬಿಜೆಪಿ ಸಂವಿಧಾನವನ್ನು ರದ್ದುಪಡಿಸಬಹುದು ಎಂಬಂತಹ ತಪ್ಪು ಭಾವನೆ ಮೂಡಿಸುವ ಹೇಳಿಕೆಗಳನ್ನು ನೀಡಬಾರದು, ಇದರಿಂದ ದೇಶದ ಭವಿಷ್ಯ ಅನಿಶ್ಚಿತ ಎಂದು ಮತದಾರರಲ್ಲಿ ಭೀತಿ ಸೃಷ್ಟಿಯಾಗಬಹುದು, ದೇಶದಲ್ಲಿ ಅರಾಜಕತೆ ಯತ್ನವೂ ಆಗಬಹುದು’ ಎಂಬುದು ಪ್ರಮುಖ ಆಯೋಗದ ನಿರ್ದೇಶನವಾಗಿದೆ. ಅದೆಲ್ಲಾ ಸರಿ “ಸಂವಿಧಾನವನ್ನು ಬದಲಾಯಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು, ಸಂವಿಧಾನ ಬದಲಾಯಿಸಲು 400 ಸೀಟು ಗೆಲ್ಲಬೇಕು” ಎಂದು ಹೇಳಿದ್ದು ಕಾಂಗ್ರೆಸ್ ನಾಯಕರೋ ಇಲ್ಲಾ ಬಿಜೆಪಿ ಸಂಸದರೋ?. ಹೀಗೆ ಹೇಳಿದ ಅನಂತಕುಮಾರ ಹೆಗಡೆ ಎನ್ನುವ ಕೋಮುವಾದಿಯನ್ನು ಬಿಜೆಪಿ ಹೈಕಮಾಂಡ್ ಎಂದೂ ಖಂಡಿಸಿಲ್ಲ, ಕನಿಷ್ಟ ವಿಚಾರಣೆಯನ್ನೂ ಮಾಡಿಲ್ಲ, ಸಂವಿಧಾನ ವಿರೋಧಿ ಹೇಳಿಕೆಗೆ ಪಕ್ಷದಿಂದ ಅಮಾನತ್ತು ಕೂಡಾ ಮಾಡಿಲ್ಲ. ಅಂದರೆ ಹೆಗಡೆಯವರ ಹೇಳಿಕೆಗೆ ಬಿಜೆಪಿ ಬದ್ಧವಾಗಿದೆ ಎಂದಾಯಿತು. ಇತ್ತೀಚೆಗೆ ವಡೋದರದಲ್ಲಿ ನಡೆದ ಆರೆಸ್ಸೆಸ್ ಸಂಘದ ಕಾರ್ಯಕ್ರಮದಲ್ಲಿ ಸರಸಂಚಾಲಕರಾದ ಮೋಹನ್ ಭಾಗವತರ ರವರು “ಲೋಕಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡಿದರೆ ಅದು ಬಿಜೆಪಿಗೆ ನಷ್ಟವನ್ನುಂಟು ಮಾಡುತ್ತದೆ. ಹೀಗಾಗಿ ಅದನ್ನು ಮೌನವಾಗಿಯೇ ಸಾಧಿಸಬೇಕಿದೆ. ನಮ್ಮಲ್ಲಿ ತಾಳ್ಮೆ ಇರಲಿ. ಬಹುಮತವನ್ನು ಸಾಧಿಸಿದ ಬಳಿಕ ನಿಧಾನವಾಗಿ ಸಂವಿಧಾನವನ್ನು ಧರ್ಮದ ಶಿಸ್ತಿಗೆ ಅನುಗುಣವಾಗಿ ಬದಲಾಯಿಸುವ ಕೆಲಸ ಮಾಡೋಣ” ಎಂದು ಹೇಳಿದ್ದರ ಹಿಂದೆ ಸಂವಿಧಾನ ಬದಲಾವಣೆಯ ಕುರಿತು ಸ್ಪಷ್ಟ ಸೂಚನೆಗಳನ್ನು ಕೊಟ್ಟಿದ್ದಾರೆ.

ಅಂದರೆ ಸಂವಿಧಾನ ಬದಲಾವಣೆ ಕುರಿತು ಮಾತಾಡಿದವರು ಬಿಜೆಪಿಗರು ಹಾಗೂ ಆರೆಸ್ಸೆಸ್ಸಿಗರು. ಅವರನ್ನು ಬಿಟ್ಟು ‘ಸಂವಿಧಾನ ಬದಲಾವಣೆ ಮಾಡುತ್ತಾರೆ’ ಎಂದು ಆತಂಕವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರಿಗೆ ಚುನಾವಣಾ ಆಯೋಗ ಎಚ್ಚರಿಕೆ ಕೊಟ್ಟಿರುವುದು ಆಯೋಗದ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಬಿಜೆಪಿ ಹಾಗೂ ಸಂಘದ ನಾಯಕರು ಸಂವಿಧಾನ ಬದಲಾವಣೆಯ ಬಗ್ಗೆ ಬಹಿರಂಗವಾಗಿ ಹೇಳಿದಾಗ ಅನಿಶ್ಚಿತತೆ, ಭೀತಿ, ಅರಾಜಕತೆಗಳ ಸಂಭವನೀಯತೆಗಳು ಆಗುವುದಿಲ್ಲ, ಸಂವಿಧಾನ ಉಳಿಸೋಣವೆಂದು ಹೇಳಿದ ಕಾಂಗ್ರೆಸ್ ನವರಿಂದ ಇವೆಲ್ಲವೂ ಆಗಬಹುದು ಎನ್ನುವುದು ಮೋದಿ ಊಳಿಗದಲ್ಲಿ ಜೀತಕ್ಕಿದ್ದಾರೆಂಬ ಆರೋಪ ಹೊತ್ತ ಆಯೋಗದ ಅಧ್ಯಕ್ಷರ ಅಭಿಪ್ರಾಯವಾ?

ಚುನಾವಣಾ ಆಯೋಗ

ರಕ್ಷಣಾ ಪಡೆಗಳ ಸಾಮಾಜಿಕ ಆರ್ಥಿಕ ಸಮೀಕರಣದ ಬಗ್ಗೆ ಕಾಂಗ್ರೆಸ್ ನಾಯಕರು ವಿಭಜನಕಾರಿ ಮಾತುಗಳನ್ನು ಆಡುವಂತಿಲ್ಲ ಎಂದೂ ಆಯೋಗ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿದೆ. ಅಂದರೆ ಅಗ್ನಿಪಥ ಯೋಜನೆಯ ಕುರಿತು ಪ್ರಶ್ನಿಸಬಾರದು ಎಂಬುದು ಆಯೋಗದ ಸೂಚನೆಯ ಹಿಂದಿರುವ ಉದ್ದೇಶ. ನಾಲ್ಕು ವರ್ಷಗಳ ಕಾಲ ತಾತ್ಕಾಲಿಕವಾಗಿ ಬಳಸಿಕೊಂಡು ಮನೆಗೆ ಕಳುಹಿಸುವ ಅಗ್ನಿಪಥ ಯೋಜನೆಯಿಂದ ಅನೇಕ ರಕ್ಷಣಾ ಪಡೆ ಸೇರುವ ಹಾಗೂ ಸೇರಲು ಬಯಸುವ ಯುವಕರಿಗೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸುವುದು ಆಯೋಗದ ಕಣ್ಣಲ್ಲಿ ಅಪರಾಧವಾಗಿದೆ. ಈ ಆಯೋಗದ ಅಧ್ಯಕ್ಷರಿಗೆ ವಿವೇಚನೆ ಎನ್ನುವುದು ಇದೆಯಾ ಅಥವಾ ಮೋದಿ ಸರಕಾರದ ಆದೇಶದಂತೆ ಇಂತಹ ಜನವಿರೋಧಿ ನಿರ್ದೇಶನಗಳನ್ನು ಕೊಡುತ್ತಿದೆಯಾ?

ಚುನಾವಣಾ ಆಯೋಗದ ಹಿತವಚನಗಳು

“ಜಾತಿ ಧರ್ಮಗಳನ್ನು ಪ್ರಚಾರದಿಂದ ದೂರವಿರಿಸಬೇಕು. ಜಾತಿ ಮತ ಭಾಷೆ ಹಾಗೂ ಧರ್ಮದ ಆಧಾರದಲ್ಲಿ ಚುನಾವಣೆ ನಡೆಸಬಾರದು. ಸಮಾಜವನ್ನು ಒಡೆಯುವಂತಹ ಯಾವುದೇ ಭಾಷಣವನ್ನು ಮಾಡಬಾರದು. ಪಕ್ಷದ ತಾರಾ ಪ್ರಚಾರಕರು ಧರ್ಮ ಮತ್ತು ಕೋಮು ವಿಚಾರಗಳನ್ನು ಪ್ರಚಾರದಿಂದ ದೂರವಿರಿಸಬೇಕು. ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಚುನಾವಣೆಗಳಿಗೆ ಬಲಿಯಾಗುವಂತೆ ಮಾಡಬಾರದು. 2019 ರ ಮಾರ್ಚ್ ನಲ್ಲಿ ಚುನಾವಣಾ ಆಯೋಗವು ನೀಡಿದ್ದ ಸಲಹೆಗಳನ್ನು ಪೂರ್ತಿಯಾಗಿ ಪಾಲಿಸಬೇಕು” ಎಂದು ಚುನಾವಣಾ ಆಯೋಗವು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳಿಗೆ ಹಿತವಚನಗಳನ್ನು ಹೇಳಿದೆ.

ಈ ಸಲಹೆ ಸೂಚನೆಗಳು ಕೇಳಲು ಸೊಗಸಾಗಿವೆ. ಆದರೆ ಆಚರಣೆಗೆ ತರುವವರು ಯಾರು? ಚುನಾವಣಾ ಆಯೋಗದ ಬಗ್ಗೆ ಯಾವ ಪಕ್ಷದ ನಾಯಕರಿಗೂ ಕನಿಷ್ಠ ಭಯ ಎನ್ನುವುದೇ ಇಲ್ಲ. ಆಯೋಗದ ನಿಯಮಗಳನ್ನು ಮುರಿದರೂ ಅದಕ್ಕೆ ಶಿಕ್ಷೆ ಎನ್ನುವುದಿಲ್ಲ. ಕಾನೂನಿನಲ್ಲಿ ಶಿಕ್ಷೆ ಇದ್ದರೂ ಇಲ್ಲಿವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಹೀಗಿರುವಾಗ ಆಯೋಗದ ಸಲಹೆ, ಸೂಚನೆ, ತಾಕೀತು, ಮಾರ್ಗದರ್ಶನಗಳಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ. ದ್ವೇಷ ಭಾಷಣ ಹಾಗೂ ಧರ್ಮಾಧಾರಿತ ಪ್ರಚೋದನೆಯನ್ನು ಬಿಟ್ಟರೆ ಮೋದಿಯವರಿಗೆ ಮತ ಪಡೆಯಲು ಬೇರೆ ವಿಷಯಗಳಿಲ್ಲ. ಆಯೋಗದ ನೋಟಿಸು, ಎಚ್ಚರಿಕೆಗಳೆಲ್ಲಾ ಚುನಾವಣೆಯ ನಂತರ ಲೆಕ್ಕಕ್ಕೇ ಇರುವುದಿಲ್ಲ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article