ಈಗಿನ ಮಳೆಗಾಲ, ಚಳಿಗಾಲಗಳನ್ನು ನೋಡುವಾಗಲೆಲ್ಲ ನಮ್ಮ ಅನೇಕ ಹಿರಿಯರು, ʼನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ.. ಕಾಲ ಕಾಲಕ್ಕೆ ಮಳೆಗಾಲ, ಬೇಸಗೆ ಕಾಲ ಮತ್ತು ಚಳಿಗಾಲ ಇರುತ್ತಿತ್ತು. ಮಳೆಗಾಲ ಎಂದರೆ ಎಂತ ಹೇಳೂದು, ಹೊರಗಡೆ ಕಾಲಿಡಲಾಗದಂತೆ ನಿರಂತರ ಜಡಿಮಳೆ… ಚಳಿಗಾಲದಲ್ಲಿ ಭಯಂಕರ ಚಳಿ, ಈಗಂತೂ ಚಳಿಗಾಲದ ಅನುಭವವೇ ಆಗುತ್ತಿಲ್ಲ..ʼ ಎಂದೆಲ್ಲ ಹೇಳುವುದಿದೆ. ಆ ಕಾಲ ನಿಜವಾಗಿಯೂ ಹೀಗಿರಲಿಲ್ಲವೋ ಅಥವಾ ಬಾಲ್ಯದ ನಮ್ಮ ಕಣ್ಣುಗಳಿಗೆ ಹಾಗೆ ದಕ್ಕಿದ್ದೋ ಹೇಳುವುದು ಕಷ್ಟ.
ನಮ್ಮ ಬಾಲ್ಯ ಕಾಲದ ಶಂಕ್ರಾಣದ ಮಳೆಗಾಲ ಸಮಯಕ್ಕೆ ಸರಿಯಾಗಿ ಹಾಜರಿ ಹಾಕಿಬಿಡುತ್ತಿತ್ತು. ಆ ಕಾಲದಲ್ಲಿ ಶಾಲೆಗಳು ಆರಂಭವಾಗುತ್ತಿದ್ದುದು ಮೇ 23 ಕ್ಕೆ. ಅಷ್ಟು ಹೊತ್ತಿಗಾಗುವಾಗ ಒಂದೆರಡು ಮಳೆ ಬಿದ್ದು ಗದ್ದೆಗಳಲ್ಲಿ, ಪದವುಗಳಲ್ಲಿ (ಚದುರಿದಂತೆ ಪೊದೆಗಳಿರುವ ಹುಲ್ಲುಗಾವಲು) ಹುಲ್ಲು ಚಿಗುರಿಕೊಂಡು ಇಡೀ ಪ್ರದೇಶ ಹಸಿರಾಗಲಾರಂಭಿಸುತ್ತಿದ್ದವು. ಮಳೆಗಾಲದ ಆರಂಭದ ಸಂಕೇತವೆಂಬಂತೆ ಕೆಂಪು ಮಕಮಲ್ಲಿನ ಮೈಯ ಅತ್ಯಂತ ಆಕರ್ಷಕ ಚಿಕ್ಕ ಕೀಟಗಳು ಪಡ್ಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅದು ದೇವರು ತಿಂದು ಭೂಮಿಗೆ ಉಗಿದ ತಾಂಬೂಲ ಎಂದು ಹಿರಿಯರು ಹೇಳುತ್ತಿದ್ದರು. ನಾವು ನಂಬುತ್ತಿದ್ದೆವು.
ಮೊದಲ ಮಳೆಯ ಗುಡುಗು ಸಿಡಿಲಿನ ಸಮಯದಲ್ಲಿ ಕಲ್ಲಣಬೆಗಳು (ಲಾಂಬು) ಕಾಣಿಸಿಕೊಳ್ಳುತ್ತಿದ್ದವು. ಅದರ ಪದಾರ್ಥದ ರುಚಿ ನಿಜಕ್ಕೂ ಅದ್ಭುತ. ಕೊಡೆ ಅಣಬೆಗಳೂ ಕಾಣಿಸಿಕೊಳ್ಳುತ್ತಿದ್ದವು. ಅದೂ ಕೂಡಾ ಅಷ್ಟೇ ರುಚಿಕರ. ಹೀಗೆ ಗದ್ದೆ, ಕಾಡುಮೇಡುಗಳ ಪಕ್ಕದಲ್ಲಿದ್ದವರಿಗೆ ಆ ಕಾಲದಲ್ಲಿ ಆಹಾರಕ್ಕೆ ಹೊರಗಿನ ತರಕಾರಿಗಳ ಅವಲಂಬನೆಯಿರಲಿಲ್ಲ. ಎಷ್ಟು ಬೇಕಾದರೂ ಅಕ್ಕ ಪಕ್ಕದಲ್ಲಿಯೇ ಸಿಗುತ್ತಿತ್ತು, ಅದೂ ರಾಸಾಯನಿಕಗಳಿಲ್ಲದ ಪರಿಶುದ್ಧ ತರಕಾರಿ.
ನಮ್ಮದು ಬೈ ಹುಲ್ಲಿನ ಮನೆಯಲ್ಲವೇ. ಮಳೆಗಾಲ ಹೊರಗಡೆ ಖುಷಿಕೊಟ್ಟರೆ ಒಳಗಡೆ ಯಾವತ್ತೂ ಅದುವೇ ಭಯದ ಮೂಲ. ಅಲ್ಲಲ್ಲಿ ಮಳೆ ನೀರು ಸೋರುತ್ತಿತ್ತು. ಅಂಗಳ ತುಂಬಾ ಪಾಚಿ ಕಟ್ಟಿ ಕಾಲಿಟ್ಟರೆ ಜಾರಿ ಬೀಳುವ ಸ್ಥಿತಿ. ನಡೆದು ಹೋಗುವ ದಾರಿಗೆ ತೆಂಗಿನಮಡಲು ಹಾಕಿ ಜಾರದಂತೆ ನೋಡಿಕೊಳ್ಳುತ್ತಿದ್ದೆವು. ಮನೆಯ ಮುಂದಕ್ಕೂ ನೀರು, ಎಡಕ್ಕೂ ನೀರು, ಬಲಕ್ಕೂ ನೀರು.
ಜೋರಾಗಿ ಮಿಂಚು, ಸಿಡಿಲು, ಕಾಣಿಸಿಕೊಂಡ ತಕ್ಷಣ ಅಮ್ಮ ಮನೆಯೊಳಗಿನಿಂದ ಕತ್ತಿಯೊಂದನ್ನು ಅಂಗಳಕ್ಕೆ ಎಸೆದುಬಿಡುತ್ತಿದ್ದರು. ಈಗ ʼಲೈಟನಿಂಗ್ ಎರೆಸ್ಟರ್ʼ ಎಂದು ಯಾವುದನ್ನು ನಾವು ನೋಡುತ್ತಿದ್ದೇವೆಯೋ ಅದನ್ನು ಆ ಕಾಲದಲ್ಲಿ ಹೀಗೆ ಅಂಗಳಕ್ಕೆ ಕತ್ತಿ ಎಸೆಯುವ ಮೂಲಕ ಮಾಡುತ್ತಿದ್ದರು ನಮ್ಮ ಹಳ್ಳಿಗರು. ಸಿಡಿಲನ್ನು ಆ ಕತ್ತಿ ಸೆಳೆಯುತ್ತದೆ ಇದರಿಂದ ಮನೆ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ. ಉದ್ದೇಶ ಒಂದೇ. ಆದರೆ ಅವರಿಗೆ ಅದರ ಹಿಂದಿನ ಥಿಯರಿ ಗೊತ್ತಿರಲಿಲ್ಲ.
ಆದರೆ ಈ ಪ್ರಯೋಗ ಪರಿಣಾಮ ಬೀರುತ್ತಿದ್ದುದು ಕಡಿಮೆ. ಯಾಕೆಂದರೆ ಸಿಡಿಲು ಒಂದು ವಿದ್ಯುತ್ ನ ರೂಪವಾಗಿದ್ದು ಅದು ಬಡಿಯುವುದು ಮರದ ತುದಿಯಂತಹ ಎತ್ತರದ ಜಾಗಗಳಿಗೆ. ಅಂಗಳದಂತಹ ತಗ್ಗು ಜಾಗಕ್ಕೆ ಬಡಿಯುವ ಸಂಭವ ಕಡಿಮೆ.
ಸಿಡಿಲಿಗೆ ಬಲಿಯಾದ ಶೀನ ನಾಯ್ಕ
ಹಳ್ಳಿಗರ ಬದುಕು ಈ ಮಳೆಗಾಲದ ಸಿಡಿಲಿನ ಸಮಯದಲ್ಲಿ ಯಾವತ್ತೂ ಭಯಾನಕ. ನಮ್ಮ ಮನೆಯಿಂದ ಅಂದಾಜು ಐವತ್ತು ಮೀಟರ್ ಮುಂದಕ್ಕೆ ಶೀನ ನಾಯ್ಕನ ಮನೆ ಇತ್ತು. ಆ ಭಾಗದಲ್ಲಿ ಜಮೀನು ಇದ್ದ ಮರಾಟಿ ಸಮುದಾಯದ ವ್ಯಕ್ತಿ ಆತನೊಬ್ಬನೇ. ಉಳಿದಂತೆ ಹೆಚ್ಚಿನ ಜಮೀನುದಾರರು ಎಂದರೆ ಬ್ರಾಹ್ಮಣರು ಮತ್ತು ಬಂಟರು. ಬಂಟ ಸಮುದಾಯದ ಕೆಲವರಂತೂ ಒಂದಿಡೀ ಗ್ರಾಮದಷ್ಟು ಜಮೀನು ಹೊಂದಿದ್ದುದೂ ಇತ್ತು. ಎಪ್ಪತ್ತರ ದಶಕದಲ್ಲಿ ಭೂಸುಧಾರಣಾ ಕಾಯಿದೆ ಬಂದಾಗ ಡಿಕ್ಲೆರೇಶನ್ ಮೂಲಕ ಅನೇಕ ಉಳುವವರು ಹೊಲದೊಡೆಯರಾದರು (ಜನಬಲ, ಬಾಹುಬಲ ಉಳ್ಳವರು ಮಸೂದೆ ಜಾರಿಯಾಗುವ ಸೂಚನೆ ದೊರೆಯುತ್ತಲೇ ಹೊಡೆದು ಬಡಿದು ಒಕ್ಕಲುಗಳನ್ನು ಓಡಿಸಿದ್ದೂ ಇದೆ).
ಈ ಶೀನ ನಾಯ್ಕನ ಗದ್ದೆಯಲ್ಲಿ ಭತ್ತ ಬೆಳೆಯುವ ಜತೆಗೆ ಕಬ್ಬು ಕೂಡಾ ಬೆಳೆಯುತ್ತಿದ್ದರು. ಕಬ್ಬು ಕಟಾವಿನ ದಿನಗಳಲ್ಲಿ ನಮಗೆ ಹಬ್ಬವೋ ಹಬ್ಬ. ಶೀನ ನಾಯ್ಕನ ಮನೆಗೆ ಆಲೆಮನೆ (ಕಬ್ಬಿನ ಗಾಣ) ಬರುತ್ತಿತ್ತು. ಅಲ್ಲೇ ಕಬ್ಬಿನ ರಸ ತೆಗೆದು ಅಲ್ಲೇ ಕೊಪ್ಪರಿಗೆಯಲ್ಲಿ ಅದನ್ನು ಬೇಯಿಸಿ ಜೋನಿ ಬೆಲ್ಲ ತಯಾರಿಸುತ್ತಿದ್ದರು. ಗಾಣ ತಿರುಗುವಾಗ ನಮ್ಮ ಠಿಕಾಣಿ ಅಲ್ಲೇ. ಕಬ್ಬಿನ ಹಾಲು ಬೆಂದಾಗ ಒಂದಿಷ್ಟು ಬಿಸಿ ಬಿಸಿ ಬೆಲ್ಲ ಎಲೆಯಲ್ಲಿ ಹಾಕಿ ಕೊಡುತ್ತಿದ್ದರು. ಅದನ್ನು ಅಲ್ಲೇ ನೆಕ್ಕಿ ತಿನ್ನುತ್ತಿದ್ದೆವು. ಕಬ್ಬಿನ ಹಾಲು ಅಲ್ಲೇ ಕುಡಿಯವ ಜತೆಗೆ ಮನೆಗೆ ತರುತ್ತಿದ್ದೆವು. ಅದರಿಂದ ಅಮ್ಮ ಸ್ವಾದಿಷ್ಟಕರ ಸಿಹಿ ಕಡುಬು ಮಾಡುತ್ತಿದ್ದರು.
ಈ ಶೀನ ನಾಯ್ಕ ತನ್ನ ಗದ್ದೆಯನ್ನು ಸ್ವತಃ ಉಳುತ್ತಿದ್ದ. ಹೀಗೆ ಒಂದು ಮಳೆಗಾಲದ ಆರಂಭದಲ್ಲಿ ಶೀನ ನಾಯ್ಕ ನೇಗಿಲಿನ ನೊಗಕ್ಕೆ ಎತ್ತುಗಳನ್ನು ಕಟ್ಟಿ ಬೆಟ್ಟು ಗದ್ದೆಯನ್ನು ಉಳುತ್ತಿದ್ದ. ಜೋರಾಗಿ ಗುಡುಗು, ಸಿಡಿಲು ಶುರುವಾಯಿತು. ಹೀಗೆ ಸಿಡಿಲು ಬಡಿಯುವ ಹೊತ್ತು ಮಳೆಯಲ್ಲಿ ನೆನೆದುಕೊಂಡು ತೆರೆದ ಬಯಲಿನಲ್ಲಿ ಕೆಲಸ ಮಾಡಬಾರದು ಎಂಬುದು ಆತನಿಗೆ ಗೊತ್ತಿರಲಿಲ್ಲವೇನೊ. ಸ್ವಲ್ಪ ಹೊತ್ತಿನಲ್ಲಿ ಆಘಾತಕರ ಸುದ್ದಿಯೊಂದು ಬಂತು. ಹೊಲ ಉಳುವಾಗಲೇ ಸಿಡಿಲು ಬಡಿದು ಎತ್ತುಗಳ ಸಮೇತ ಶೀನ ನಾಯ್ಕ ಸುಟ್ಟು ಹೋಗಿದ್ದ. ಆತನ ದೇಹವನ್ನು ಅಲ್ಲೇ ಗದ್ದೆಯ ಅಂಚಿನಲ್ಲಿ ಸುಡಲಾಗಿತ್ತು. ಮುಂದೆ, ಆತನನ್ನು ಸುಟ್ಟ ಜಾಗದ ಬಳಿಯಿಂದ ಹೋಗುವುದೆಂದರೆ ನಮಗೆ ಯಾವತ್ತೂ ಭಯ.
ಆಗಿನ ಮಳೆಗಾಲ ಎಂದರೆ ದಿನಗಟ್ಟಲೆ ಹನಿ ಕಡಿಯದೆ ಮಳೆ ಸುರಿಯುತ್ತಿತ್ತು. ಈಗಿನಂತೆ ಕೊಡೆಗಳು ಎಲ್ಲರ ಮನೆಯನ್ನು ತಲಪಿರದ ಕಾಲದ ಅದು. ಕೃಷಿ ಕೆಲಸದವರು ಹೆಚ್ಚಾಗಿ ಬಳಸುತ್ತಿದ್ದುದು ಕಂಬಳಿ. ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಬಳಸುತ್ತಿದ್ದದು ಪುರಾಣದ ವಾಮನನ ಛತ್ರಿ, ಓಲಿಯ ಕೊಡೆ. ಒಂದು ಮಳೆಗಾಲಕ್ಕೆ ಒಂದು ಕೊಡೆ ಸಾಲದು. ರಸ್ತೆಯಲ್ಲಿ ಹೋಗುವಾಗ ಅದನ್ನು ಚಕ್ರದಂತೆ ರಸ್ತೆಯಲ್ಲಿ ಉರುಳಿಸುತ್ತಾ ಹೋಗಿ ಅಥವಾ ಶಾಲೆಯಲ್ಲಿ ಅದನ್ನು ಇರಿಸಿದಲ್ಲಿ ಅದರ ಮೇಲೆ ಯಾರಾದರೂ ಬಿದ್ದು ಅದು ಮುರಿದುಹೋಗುತ್ತಿತ್ತು.
ಮಳೆಗಾಲ ಶುರುವಾಗುತ್ತಿದ್ದಂತೆ ಗದ್ದೆಗಳಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ನೀರಿನಲ್ಲಿ ಆಟವಾಡಲು ನಮಗೋ ಸುವರ್ಣಾವಕಾಶ. ಅಲ್ಲದೆ ಕೆರೆ, ಬಾವಿ, ತೋಡುಗಳಲ್ಲಿ ಹೊಸ ನೀರು ತುಂಬಿಕೊಂಡು ಫಳ ಫಳ ಅನಿಸುತ್ತಿತ್ತು. ಆಗಿನ್ನೂ ಯಾಂತ್ರೀಕೃತ ಪಂಪುಗಳು ಬಂದಿಲ್ಲದ ಕಾರಣ ಬೇಸಗೆಯಲ್ಲೂ ಕೆರೆ ಬಾವಿಗಳೆಲ್ಲ ಬತ್ತಿಹೋಗುವ ಪ್ರಮೇಯವೇ ಇರಲಿಲ್ಲ. ಮಳೆಗಾಲದಲ್ಲಿ ಅವು ತುಂಬಿ ತುಳುಕಿ ಹರಿದುಹೋಗುತ್ತಿದ್ದವು.
ನಾನು ಈಜು ಕಲಿತೆ
ಇಂತಹ ಒಂದು ಮಳೆಗಾಲದಲ್ಲಿ ಕೆರೆಯ ನೀರು ಅಂಚಿನ ತನಕ ಬಂದಿದ್ದಾಗ ನಾನು ಸುಮ್ಮನೆ ಕೆರೆಗೆ ಇಳಿದೆ. ಒಂದು ಕಲ್ಲಿಗೆ ಕಾಲನ್ನು ಒತ್ತಿ ದೂಡಿ ಕೈಕಾಲು ಬಡಿದೆ. ಪಕ್ಕದ ಇನ್ನೊಂದು ಕಲ್ಲನ್ನು ತಲಪಿದೆ. ಏನೋ ಆತ್ಮವಿಶ್ವಾಸ ಬಂದಂತಾಯಿತು. ಇನ್ನೊಮ್ಮೆ ಈಜಿದೆ. ಹೀಗೆ ಕೆಲವೇ ದಿನಗಳಲ್ಲಿ ನಾನು ಕೆರೆಯ ಮಟ್ಟಿಗೆ ಒಳ್ಳೆಯ ಈಜುಗಾರನಾದೆ. ಹೀಗೆ ಬಾಲ್ಯದಲ್ಲಿ ಗುರುವೇ ಇಲ್ಲದೆ ದಕ್ಕಿದ ಈಜಿನ ಪಾಠದಿಂದ ಹೊಳೆ ಮಾತ್ರವಲ್ಲ, ಮುಂದೆ ಕಡಲಿನಲ್ಲೂ ಈಜುವ ಧೈರ್ಯ ದೊರೆಯಿತು (ಸೈಂಟ್ ಮೇರಿ ದ್ವೀಪದಲ್ಲಿ ಮಾತ್ರ ಈಜಲು ಹೋಗಿ ಸಾವಿನ ದರ್ಶನ ಮಾಡಿಬಂದೆ).
ಈ ಕೆರೆಯ ನೀರು ಬೇಸಗೆಯಲ್ಲಿ ಕಡಿಮೆಯಾಗುತ್ತಿತ್ತು. ಆಗ ಕೆಲವೊಮ್ಮೆ ಅದರ ಕೆಸರು ತೆಗೆಯುವ ಕೆಲಸ ಮಾಡುತ್ತಿದ್ದರು. ಇಂತಹ ಸಮಯದಲ್ಲಿ ನಾವು ಎರಡು ಮನೆಯವರು ಸೇರಿ ಕೆರೆಯ ನೀರಿಗೆ ಇಳಿದು ನೀರನ್ನು ಕಲಕುತ್ತಿದ್ದೆವು. ನೀರಿನ ಆಳದಲ್ಲಿದ್ದ ಮೀನುಗಳು ಉಸಿರಾಟ ಕಷ್ಟವಾಗಿ ನೀರಿನ ಮೇಲ್ಭಾಗಕ್ಕೆ ಬಂದು ನೀರಿಗಾಗಿ ಬಾಯ್ದೆರೆಯುತ್ತಿದ್ದವು. ಇಂತಹ ಹೊತ್ತಿನಲ್ಲಿ ಬಟ್ಟೆಯನ್ನೇ ಬಲೆಯಾಗಿಸಿ ಅವನ್ನು ಹಿಡಿಯುತ್ತಿದ್ದೆವು. ಬಾಳೆ, ಮುಗುಡು, ಮೊರಂಟೆ, ಕೀಜಾನ್ ಹೀಗೆ ಅನೇಕ ಮೀನುಗಳಿರುತ್ತಿದ್ದವು. ಭೂಮಿಯ ಮೇಲೆ ಬಿದ್ದರೂ ಅವು ಫಕ್ಕನೆ ಸಾಯುತ್ತಿರಲಿಲ್ಲ. ವಿಶೇಷವಾಗಿ ಮೊರಂಟೆ ಮೀನನ್ನು ನಾವು ಬೂದಿಯಲ್ಲಿ ಹಾಕಿ ಅವು ಉಸಿರುಗಟ್ಟುವಂತೆ ಮಾಡಿ ಕೊಲ್ಲುತ್ತಿದ್ದೆವು. ಆಗ ಅದು ಪಾಪದ ಮತ್ತು ಮಹಾ ಕ್ರೌರ್ಯದ ಕೆಲಸ ಅನಿಸುತ್ತಿರಲಿಲ್ಲ. ಈಗ ಆ ಬಗ್ಗೆ ಪಾಪಪ್ರಜ್ಞೆ ಕಾಡುತ್ತಿದೆ.
ಮನೆಯ ಪಕ್ಕದಲ್ಲಿ ತೋಡು ಇದ್ದುದರಿಂದ ಅಲ್ಲೂ ಮೀನು ಹಿಡಿಯುವ ಕಾರ್ಯಕ್ರಮ ನಡೆಯುತ್ತಿತ್ತು; ಗಾಳದ ಮೂಲಕ. ನಮ್ಮ ಮನೆಯ ಅಂಗಳದ ಬದಿಯಲ್ಲಿ ಬಸಳೆ ಮತ್ತು ತೊಂಡೆ ಚಪ್ಪರಗಳಿದ್ದವು. ಅಲ್ಲಿನ ಮಣ್ಣು ಯಾವಾಗಲೂ ಕೆಸರಿನಿಂದ ಕೂಡಿರುತ್ತಿತ್ತು. ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಎರೆ ಹುಳುಗಳಿರುತ್ತಿದ್ದವು. ಅಂಗಡಿಯಿಂದ ಗಾಳ ಮತ್ತು ಸಂಗೀಸು (ನೈಲಾನ್ ಹಗ್ಗ) ತಂದು ಅದನ್ನು ಒಂದು ಕೋಲಿಗೆ ಕಟ್ಟಿ ಎರೆಹುಳುಗಳಿಗೆ ಗಾಳ ತೂರಿಸಿ, ತೋಡಿಗೆ ಹೋಗಿ ಎಲ್ಲಿ ಸಾಮಾನ್ಯವಾಗಿ ಹೆಚ್ಚು ಮೊರಂಟೆ ಮೀನು ಇರುತ್ತಿತ್ತೋ ಅಂದರೆ ಮಾಟೆ ಇರುವಲ್ಲಿ (ಕಲ್ಲಿ ಸೆರೆ) ಹಿಡಿದು ಕೂರುತ್ತಿದ್ದೆವು. ಮೀನು ಕಚ್ಚಿಕೊಂಡರೆ ಗಾಳದ ಎಳೆತದಲ್ಲಿ ಅದು ತಕ್ಷಣ ಅರಿವಾಗುತ್ತದೆ. ಆಗ ಅದನ್ನು ಎಳೆದು ಮೊರಂಟೆಯನ್ನು ಬೇಟೆಯಾಡುತ್ತಿದ್ದೆವು. ಕೆಲವೊಮ್ಮೆ ಫಕ್ಕನೆ ಮೀನು ಸಿಗದಿದ್ದರೆ ಗಾಳವನ್ನು ಅಲ್ಲೇ ಕಲ್ಲಿನ ಸಂದಿಯಲ್ಲಿ ಇರಿಸಿ ಗಾಳದ ಕೋಲನ್ನು ಸುರಕ್ಷಿತವಾಗಿ ಒಂದು ಮರಕ್ಕೆ ಕಟ್ಟಿ ಬರುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೋಗಿ ನೋಡಿದರೆ ಗಾಳವನ್ನು ಯಾವುದೋ ಒಂದು ಜೀವಿ ನುಂಗಿ ಎಳೆದಾಟ ನಡೆಸಿರುತ್ತಿತ್ತು. ಸ್ವಲ್ಪ ಎಳೆದ ನೋಡಿದರೆ ಅದು ಕಪ್ಪೆ ಅಥವಾ ಒಮ್ಮೊಮ್ಮೆ ನೀರು ಹಾವು. ಇನ್ನು ಅದನ್ನು ಹೊರ ತೆಗೆಯಲು ಧೈರ್ಯ ಇದೆಯೇ? ಒಂದು ಕತ್ತರಿ ತಂದು ಗಾಳ ಸಮೇತ ಸಂಗೀಸಿನ ಒಂದು ತುಂಡನ್ನು ಅಲ್ಲೇ ಕತ್ತರಿಸಿ ಕೋಲು ಮತ್ತು ಬರೀ ಸಂಗೀಸಿನೊಂದಿಗೆ ಪೆಚ್ಚು ಮೋರೆಯೊಂದಿಗೆ ಮರಳುತ್ತಿದ್ದೆವು.
ಮುಳುಗಡೆಯಾದ ಹಾಲಾಡಿ ಸೇತುವೆ
ಮಳೆ ಆ ವರ್ಷ ಗರಿಷ್ಠ ಪ್ರಮಾಣದಲ್ಲಿ ಸುರಿದಿದೆ ಎಂಬುದಕ್ಕೆ ಮಾನದಂಡವೆಂದರೆ ಹಾಲಾಡಿ ಸೇತುವೆ ಮುಳುಗಿತಂತೆ ಎಂಬ ಸುದ್ದಿ. ಹಾಲಾಡಿಯಿಂದ ಜನ್ನಾಡಿ ಕಡೆಗೆ ಹೋಗುವಾಗ ಕಾಣುವ ಸಣ್ಣ ಸೇತುವೆ ಮುಳುಗುವುದು ಸಾಮಾನ್ಯ. ಆದರೆ ಶಂಕ್ರಾಣದಿಂದ ಹಾಲಾಡಿಗೆ ಹೋಗುವಾಗ ಸಿಗುವ ದೊಡ್ಡ ಸೇತುವೆ ಮುಳುಗುತ್ತಿದ್ದುದು ತೀರಾ ವಿರಳ. ಆ ಸುದ್ದಿ ಬಂದ ತಕ್ಷಣ ನಾವೆಲ್ಲ ಆ ಸುಂದರ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ಮನೆಯಿಂದ ಒಂದೋ ಎರಡೋ ಕಿಲೋಮೀಟರ್ ದೂರದ ಹಾಲಾಡಿ ಸೇತುವೆಗೆ ಹೋಗುತ್ತಿದ್ದೆವು. ಕೆಸರು ಮಿಶ್ರಿತ ನೀರು ಹೊರಳುತ್ತಾ ಹೊರಳುತ್ತಾ ತನ್ನೊಂದಿಗೆ ತೆಂಗಿನ ಕಾಯಿ, ತೆಂಗಿನ ಮಡಲು, ಗಿಡ ಮರಗಳನ್ನು ಒಯ್ಯುತ್ತಾ ಸೇತುವೆಯ ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ಹೋಗುವ ದೃಶ್ಯ ಎಷ್ಟು ನಯನ ಮನೋಹರವೋ, ಅಷ್ಟೇ ರುದ್ರ ಭಯಾನಕ. ಆ ನೀರು ಮುಂದೆ ಕುಂದಾಪುರದ ಬಳಿ ಕಡಲನ್ನು ಸೇರುತ್ತದೆ.
ಈ ಸೇತುವೆಯ ಗರ್ಡರ್ ಗಳ ತಳಭಾಗದಲ್ಲಿ ಹೆಜ್ಜೇನಿನ ಗೂಡುಗಳಿರುತ್ತಿದ್ದವು. ಅದನ್ನು ಮುಟ್ಟುವುದು ಅಪಾಯ. ಲೆಕ್ಕಕ್ಕಿಂತ ಹೆಚ್ಚು ಜೇನುನೊಣ ಕಡಿಯಿತೆಂದರೆ ಸಾವು ನಿಶ್ಚಿತ. ನಮ್ಮ ಸಂಬಂಧಿಯೊಬ್ಬರು ದೇಲಂಪಾಡಿಯಿಂದ ಬಂದಾಗ ಮನೆಯಲ್ಲಿದ್ದ ತೊಟ್ಟಿಲನ್ನು ಒಯ್ದು ಹಗ್ಗದಿಂದ ಅದನ್ನು ಸೇತುವೆಯಿಂದ ಕೆಳಕ್ಕೆ ಇಳಿಬಿಟ್ಟು ಹೊಗೆ ಹಾಕಿ ಜೇನುನೊಣಗಳನ್ನು ಓಡಿಸಿ ಭಾರೀ ಪ್ರಮಾಣದ ಜೇನು ತುಪ್ಪ ತಂದಿದ್ದರು. ಅರ್ಧಕ್ಕರ್ಧ ಜೇನುತುಪ್ಪ ನೀರಿನ ಪಾಲಾಗಿತ್ತು.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನು ಓದಿದ್ದೀರಾ? ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-6 ಕಪಿಲೆಯ ಸಾಹಸಗಳು