ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-6 ಕಪಿಲೆಯ ಸಾಹಸಗಳು

Most read

ಅಪ್ಪ ಅಮ್ಮ ಕೃಷಿಕ ಹಿನ್ನೆಲೆಯವರು ಎಂದ ಮೇಲೆ ದನ ಸಾಕಣೆಯ ಆಸಕ್ತಿಯೂ ಇರಲೇಬೇಕಲ್ಲ? ಬೈಹುಲ್ಲಿನ ಬಾಡಿಗೆ ಗುಡಿಸಲಿನಲ್ಲಿದ್ದರೂ ನಾವೂ ದನ ಸಾಕಿದ್ದೆವು. ಮನೆಗೆ ತಾಗಿಕೊಂಡಂತಿದ್ದ ಕೊಟ್ಟಗೆಯ ಒಂದು ಭಾಗದಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೆವು. ಸುತ್ತ ಗದ್ದೆಗಳು, ಅದರಾಚೆಗೆ ಹುಲ್ಲುಗಾವಲು, ಕಾಡು ಎಲ್ಲ ಇದ್ದುದರಿಂದ ಮೇವಿನ ವಿಚಾರದಲ್ಲಿ ದನ ಸಾಕುವುದು ಕಷ್ಟದ ಕೆಲಸವಾಗಿರಲಿಲ್ಲ. ರಜೆಯ ಸಮಯದಲ್ಲಿ ನಮಗೆ ಅವುಗಳನ್ನು ಮೇಯಿಸುವುದೂ ಒಂದು ಖುಷಿಯ ಕೆಲಸ. ಧಾರಾಳ ಹಟ್ಟಿಗೊಬ್ಬರ, ಗಂಜಳ ಸಿಗುತ್ತಿದ್ದುದರಿಂದ ತರಕಾರಿ ಬೆಳೆಯಲು ಅಪಾರ ಅನುಕೂಲವಾಗುತ್ತಿತ್ತು. ಈ ಹಟ್ಟಿಗೊಬ್ಬರದ ಕಾರಣವಾಗಿಯೇ ಯಾವಾಗಲೂ ಮನೆಯ ಸುತ್ತ ಹೀರೆ ಕಾಯಿ, ಬೋಳು ಹೀರೆಕಾಯಿ, ಕುಂಬಳಕಾಯಿ, ಸಿಹಿ ಕುಂಬಳ ಇತ್ಯಾದಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿತ್ತು. ಒಮ್ಮೊಮ್ಮೆ ನಮ್ಮ ಹಟ್ಟಿಯ ಗೊಬ್ಬರವನ್ನು ಶಾಸ್ತ್ರಿಗಳು ತಮ್ಮ ಭತ್ತ ಕೃಷಿಗೆ ಬಳಸುವುದೂ ಇತ್ತು.

ಈ ದನ ಸಾಕಣೆಯ ಕೆಲಸದಲ್ಲಿ ಮುಖ್ಯ ಪಾತ್ರ ಅಮ್ಮನದೇ ಆಗಿತ್ತು. ಕಾಡಿನಿಂದ ಸೊಪ್ಪು ತರುವುದು, ಅವುಗಳಿಗೆ ಅಕ್ಕಚ್ಚು ಬೇಯಿಸಿ ಹಾಕುವುದು, ಕರು ಹಾಕಿದಾಗಿನ ಆರೈಕೆ, ಹಾಲು ಕರೆಯುವುದು ಇತ್ಯಾದಿ. ಹಾಲು ಕರೆದಾಗಲೆಲ್ಲ ಮೊದಲು ಒಂದು ಚಿಕ್ಕ ಲೋಟದಲ್ಲಿ ಅದನ್ನು ಇರಿಸುವುದು ದೇವರ ಫೋಟೋದ (ಕೃಷ್ಣ) ಮುಂದೆ. ದೇವರಿಗೆ ಅದನ್ನು ಕುಡಿಯಲು ಸಮಯ ಕೊಡುವಷ್ಟು ತಾಳ್ಮೆ ನಮ್ಮಲ್ಲಿರುತ್ತಿರಲಿಲ್ಲ. ಹಾಗಾಗಿ ಅದು ಕೆಲವೇ ಸೆಕೆಂಡುಗಳಲ್ಲಿ ನಮ್ಮ ಹೊಟ್ಟೆ ಸೇರಿರುತ್ತಿತ್ತು. ಮಕ್ಕಳು ಹಾಲು ಕುಡಿದರೆ ದೇವರಿಗೆ ಸಂತೃಪ್ತಿ ಆಗದಿರುತ್ತದೆಯೇ? ಮನೆ ಬಳಕೆಗೆ ಒಂದಷ್ಟು ಹಾಲು ಇರಿಸಿಕೊಂಡು ಉಳಿದ ಹಾಲನ್ನು ನಾವು ಮಾರುತ್ತಿದ್ದೆವು. ಸಂಜೆ ಹೊತ್ತು ಹೆಚ್ಚಾಗಿ ಹಾಲಿನ ಬಾಟಲಿಯನ್ನು ರೇಂಜ್‌ ಫಾರೆಸ್ಟ್‌ ಅಫೀಸರ್‌ ಮನೆಗೆ ತಲಪಿಸುವುದು ನನ್ನ ಕೆಲಸ.

ಕಪಿಲೆ- ಸಾಂದರ್ಭಿಕ ಚಿತ್ರ

ಹನ್ನೊಂದು ವರ್ಷಗಳ ಅವಧಿಯಲ್ಲಿ ನಾವು ಒಂದೆರಡು ದನ ಸಾಕಿರಬಹುದು. ಆದರೆ ಅವುಗಳಲ್ಲಿ ಒಂದು ದನವನ್ನು ಈಗಲೂ ಮರೆಯಲಾಗುತ್ತಿಲ್ಲ. ಆಕೆಯ ಹೆಸರು ಕಪಿಲೆ. ಕಪಿಲೆ ಕುದುರೆಯಾಗಿ ಹುಟ್ಟಬೇಕಿತ್ತೋ ಏನೋ, ದನವಾಗಿ ಹುಟ್ಟಿಬಿಟ್ಟಿದ್ದಳು. ಆಕೆಗೆ ಎಷ್ಟೇ ಎತ್ತರದ ಬೇಲಿಯೂ, ಎಷ್ಟೇ ಅಗಲದ ಅಗಳೂ ಲೆಕ್ಕಕ್ಕಿರಲಿಲ್ಲ. ಅವನ್ನು ಸಲೀಸಾಗಿ ಜಿಗಿದು ಬೇರೆಯವರ ಹೊಲಕ್ಕೆ ನುಗ್ಗಿ ಕದ್ದು ತಿಂದು ಬರುತ್ತಿದ್ದಳು. ಆಕೆಯ ಬಗ್ಗೆ ಸುತ್ತಮುತ್ತಲಿನಿಂದ ಎಲ್ಲರದ್ದೂ ದೂರು.

ಆಕೆಯನ್ನು ಮೇಯಿಸುವ ಕೆಲಸ ಹೆಚ್ಚಾಗಿ ನನ್ನದು. ನಮ್ಮ ಮನೆಯಿಂದ ಮುಖ್ಯ ರಸ್ತೆಗೆ ಕೇವಲ ನೂರು ಅಡಿ ದೂರ ಇರಬಹುದು. ಆದರೆ ಅಲ್ಲಿ ಗದ್ದೆ ಇದ್ದುದರಿಂದ ಆಕೆಯನ್ನು ಅಲ್ಲಿ ಒಯ್ಯುವಂತಿರಲಿಲ್ಲ. ಆದ್ದರಿಂದ ಮೊದಲು ಎಡದ ಕಾಡಿಗೆ ಹೋಗಿ, ಅಲ್ಲಿಂದ ಮುಂದೆ ದುರ್ಗಾಪರಮೇಶ್ವರಿ ದೇವಸ್ಥಾನ ಬಳಸಿಕೊಂಡು ರಸ್ತೆ ತಲಪಿ ಆಕೆಯನ್ನು ಮೇಯಲು ಕಳಿಸಿಕೊಟ್ಟು ನಾನು ಶಾಲೆಗೆ ಹೋಗುತ್ತಿದ್ದೆ. ದನ ಕಳವು ಎಂಬ ಪದ ಕೇಳಿಯೂ ಗೊತ್ತಿರದ ಕಾಲದಲ್ಲಿ ದನವನ್ನು ಹೀಗೆ ಕಳಿಸುವಾಗ ಚಿಂತೆಯಾಗುತ್ತಿರಲಿಲ್ಲ. ಕಪಿಲೆ ಬೇಕಾದಷ್ಟು ಹೊತ್ತು ಬೇಕಾದಲ್ಲಿ ಮೆಯ್ದು ಸಂಜೆಯಾಗುವಾಗ ಹೋದ ದಾರಿಯಲ್ಲಿಯೇ ಮನೆಗೆ ಮರಳುತ್ತಿದ್ದಳು. ನಾನು ಮತ್ತು ಅಪ್ಪ ಒಮ್ಮೊಮ್ಮೆ ಆಕೆಗಾಗಿ ಹಸಿರು ಎಲೆ ತರಲು ದೂರದ ಕೆರೆಕಾಡಿಗೆ ಹೋಗುತ್ತಿದ್ದೆವು. ಅಲ್ಲಿ ಶರಾವತಿ ವಿದ್ಯುತ್‌ ಆಕಾಶದೆತ್ತರದ ಕಂಬಗಳ ಹೈ ಟೆನ್ಶನ್‌ ವಯರ್‌ ಮೂಲಕ ಹಾದುಹೋಗುತ್ತಿತ್ತು. ಅಲ್ಲಿ ದನಕ್ಕೆ ಬೇಕಾದ ಬಳ್ಳಿಗಳು ಧಾರಾಳ ಇರುತ್ತಿದ್ದವು.

ಕಪಿಲೆಯ ಬಗ್ಗೆ ಎಲ್ಲೆಲ್ಲಿಂದಲೂ ದೂರು ಎಂದೆನಲ್ಲ. ನಮ್ಮ ಮನೆಯಿಂದ ದಕ್ಷಿಣಕ್ಕೆ ದೊಡ್ಡ ಜಮೀನ್ದಾರರೊಬ್ಬರ ಮನೆಯಿತ್ತು. ಅವರು ಬ್ರಾಹ್ಮಣ ಸಮುದಾಯದವರು. ಅವರ ಗದ್ದೆಗೆ ನಮ್ಮ ಕಪಿಲೆ ಆಗಾಗ ನುಗ್ಗುತ್ತಿತ್ತು. ಒಮ್ಮೆ ಹೀಗೆ ನುಗ್ಗಿದ ಕಪಿಲೆಯನ್ನು ಅವರು ತಮ್ಮ ಕೊಟ್ಟಗೆಯಲ್ಲಿ ಬಂಧಿಸಿಟ್ಟರು. ಕಪಿಲೆ ಬರಲಿಲ್ಲವಲ್ಲ ಎಂದು ಹುಡುಕಿ ಹುಡುಕಿ ಸಾಕಾಗಿ ಹೋಯಿತು. ಆಗ ಅದು ಹೇಗೋ, ಭಟ್ಟರು ಆಕೆಯನ್ನು ಹಿಡಿದು ಕಟ್ಟಿದ ಸುದ್ದಿ ಸಿಕ್ಕಿತು. ಹೀಗೆ ಹಿಡಿದ ದನವನ್ನು ಸರಕಾರಿ ದೊಡ್ಡಿಗೆ ಕಳಿಸಬೇಕೇ ಹೊರತು ಹೀಗೆ ತಮ್ಮ ವಶದಲ್ಲಿ ಇರಿಸಿಕೊಳ್ಳುವಂತಿಲ್ಲ.

ಕಪಿಲೆಯನ್ನು ತರಲು ನನ್ನ ಹಿರಿಯಣ್ಣ ಮತ್ತು ಕಿರಿಯಣ್ಣ ಹೋದರು. ಭಟ್ಟರು ಬಯ್ಯುವಷ್ಟು ಬಯ್ದರು ಮಾತ್ರವಲ್ಲ, ದನ ಬಿಟ್ಟಕೊಡಲು ಒಪ್ಪಲಿಲ್ಲ. ಆಗ ನನ್ನ ಒಬ್ಬ ಅಣ್ಣ ಹೊರಗಡೆ ಕತ್ತಿ ಹಿಡಿದು ನಿಂತರೆ ಇನ್ನೊಬ್ಬ ಅಣ್ಣ ಕಪಿಲೆಯನ್ನು ಭಟ್ಟರ ಕೊಟ್ಟಗೆಯಿಂದ ಬಲವಂತವಾಗಿ ಬಿಡಿಸಿಕೊಂಡು ಬಂದ.

ಹೀಗೆ ಕಪಿಲೆ ನಮಗೆ ಹತ್ತಾರು ಲಾಭಗಳ ಜತೆಗೆ ನೂರಾರು ಸಮಸ್ಯೆಗಳನ್ನು ತಂದುಕೊಟ್ಟರೂ ಅವಳು ನಮ್ಮ ಮನೆಗೆ ಶೋಭೆಯಾಗಿಯೇ ಇದ್ದಳು. ದೀಪಾವಳಿಯ ಸಂದರ್ಭದಲ್ಲಿ ಆಕೆಗೆ ವೈಭವದ ಗೋಪೂಜೆ ಸಲ್ಲುತ್ತಿತ್ತು. ನನ್ನ ಕಿರಿಯ ಅಣ್ಣ ಉಮೇಶ ದನವನ್ನು ಸ್ನಾನಮಾಡಿಸಿ, ತಾನೂ ಸ್ನಾನ ಮಾಡಿ, ಮಡಿಯಲ್ಲಿ ಬಂದು ಅದರ ಮೈಯಿಗೆ ಬಿಳಿಯ ವೃತ್ತಾಕಾರದ ಅಲಂಕಾರಗಳನ್ನು ಮಾಡಿದ ಬಳಿಕ ಅಮ್ಮ ಬಾಳೆ ಎಲೆಯಲ್ಲಿ ಅದಕ್ಕೆ ಅವಲಕ್ಕಿ, ಅರಳು, ಬಾಳೆ ಹಣ್ಣು ಇತ್ಯಾದಿ ಇರಿಸುತ್ತಿದ್ದರು. ಗೋಪೂಜೆ ಎಂದು ಆಕೆಗೆ ಏನು ಗೊತ್ತು? ಆಕೆಗೆ ತಿನ್ನುವುದಷ್ಟೇ ಗೊತ್ತು, ಗಬ ಗಬನೆ ಮುಕ್ಕಿಬಿಡುತ್ತಿದ್ದಳು ಕಪಿಲೆ.

ದನ ಸಾಕುವ ಕಷ್ಟ ಅದನ್ನು ಸಾಕಿದವರಿಗಷ್ಟೇ ಗೊತ್ತು. ಹಾಗಿರುವಾಗ ಸ್ವಂತ ಜಮೀನೂ ಇಲ್ಲದ ನಮ್ಮ ಕಷ್ಟ ಹೇಗಿರಬಹುದು? ಅಲ್ಲದೆ ಅವುಗಳನ್ನು ಆಗಾಗ ಕಾಡುವ ಕಾಯಿಲೆ ಕಸಾಲೆ. ಅದಕ್ಕೆ ಗೋವು ಆಸ್ಪತ್ರೆಯಿಂದ ಔಷಧ ತರಬೇಕು, ಆರೋಗ್ಯ ಸಮಸ್ಯೆ ತೀವ್ರ ಇದ್ದರೆ ಗೋವು ಡಾಕ್ಟರ್‌ ರನ್ನು ಮನೆಗೇ ಕರೆ ತರಬೇಕು. ಅದೊಂದು ಪ್ರಾಣಿಯೇ ಆಗಿರಬಹುದು, ಆದರೆ ಅದು ನಮ್ಮ ಕುಟುಂಬದ ಒಂದು ಭಾಗವಾಗಿಯೇ ಇರುತ್ತದೆ. ಹಾಗಾಗಿ ಅದರ ನೋವು ಎಂದರೆ ನಮ್ಮ ನೋವು. ಈ ಭಾವನಾತ್ಮಕ ನಂಟಿನ ಆಳ ಗೊತ್ತಾಗುವುದು ಆ ದನವನ್ನು ಯಾರಿಗಾದರೂ ಕೊಡುವಾಗ. ತಂದೆಗೆ ಆಗಾಗ ವರ್ಗಾವಣೆ ಆಗುತ್ತಿರುತ್ತದೆಯಲ್ಲವೇ? ದನವನ್ನು ಜತೆಯಲ್ಲಿ ಒಯ್ಯುವುದು ಸಾಧ್ಯವೇ? ಆಗ ಅದನ್ನು ಯಾರಿಗಾದರೂ ಕೊಡಬೇಕಾಗುತ್ತದೆ. ನಮ್ಮ ಕುಟುಂಬದ ಒಬ್ಬ ಸದಸ್ಯನನ್ನು ಯಾರಿಗಾದರೂ ಕೊಟ್ಟು ಬರುವಾಗ ಅಗುವ ಮಾನಸಿಕ ಯಾತನೆಯನ್ನು ಪದಗಳಲ್ಲಿ ಬಣ್ಣಿಸುವುದು ಅಸಾಧ್ಯ.

ಅಪ್ಪನ ಕೋಳಿ ಅಂಕದ ಕತೆ

ನಾವು ದನ ಸಾಕಿದ್ದು ಮಾತ್ರವಲ್ಲ. ಕೋಳಿಗಳನ್ನೂ ಸಾಕಿದ್ದೆವು. ಅದಕ್ಕೆಂದೇ ಒಂದು ಕೋಳಿ ಗೂಡೂ ಇತ್ತು. ಈ ಕೋಳಿಗಳಿಗೆ ಗೊತ್ತೇ ಆ ಕಡೆ ಇರುವುದು ಶಾಸ್ತ್ರಿಗಳ ಗದ್ದೆ, ಅಲ್ಲಿಗೆ ಹೋಗಬಾರದು ಎಂದು?

ಕೋಳಿ ಅಂಕ- ಸಾಂದರ್ಭಿಕ ಚಿತ್ರ

ಶಾಸ್ತ್ರಿಗಳು ಅಂಗಿ ತೊಟ್ಟದ್ದನ್ನು ನಾನು ನೋಡಿಲ್ಲ. ಯಾವಾಗಲೂ ಒಂದು ತುಂಡು ಕಚ್ಚೆ, ಬರಿ ಮೈ, ಮೈಮೇಲೊಂದು ಎದ್ದು ಕಾಣಿಸುವ ಜನಿವಾರ. ಶಾಸ್ತ್ರಿಗಳ ಮನೆ ನಮ್ಮ ಮನೆಯಿಂದ ಒಂದು ಫರ್ಲಾಂಗು ದೂರದಲ್ಲಿ. ಶಾಸ್ತ್ರಿಗಳು ಬರುವುದು ದೂರದಲ್ಲಿಯೇ ಕಾಣಿಸುತ್ತಲೇ ನಮ್ಮ ಎದೆ ಬಡಿತ ಹೆಚ್ಚುತ್ತಿತ್ತು. ನಮ್ಮ ಕೋಳಿಗಳು ಇರುವುದು ಅವರ ಗದ್ದೆಯಲ್ಲಿ. ಅವರು ನಮಗೆ ಬಾಯಿ ತುಂಬಾ ಬೈದು ಹೋಗುತ್ತಿದ್ದರು. ನಾವು ಮರು ಉತ್ತರ ಕೊಡುವಂತಿಲ್ಲ. ಯಾಕೆಂದರೆ ಅಪರಾಧ ಎಸಗಿದ್ದು ನಮ್ಮ ಕೋಳಿಗಳು.

ಕೋಳಿ ಸಾಕಣೆಯ ಕಷ್ಟ ವಿವರಿಸಿ ಹೇಳಬೇಕಿಲ್ಲ. ಕೋಳಿ ಮೊಟ್ಟೆ ಹಾಕಿದರೆ ಅದನ್ನು ಅರಸಿಕೊಂಡು ನಾಗರ ಹಾವು ಬಂದು ಮೊಟ್ಟೆಗಳನ್ನು ನುಂಗಿಬಿಡುತ್ತಿತ್ತು. ಇನ್ನು ಮೊಟ್ಟೆ ಒಡೆದು ಮರಿಯಾದರೆ ಅವುಗಳಿಗೆ ಕಾಗೆಗಳ ಉಪದ್ರ. ಒಮ್ಮೊಮ್ಮೆ ಹೀಗೆ ಕಾಗೆಯ ದಾಳಿಗೆ ಒಳಗಾಗಿ ಅರೆಜೀವವಾದ ಮರಿಯನ್ನು ಎಚ್ಚರಗೊಳಿಸಲು ಖಾಲಿ ಮಡಕೆಯೊಳಗೆ ಅದನ್ನು ಇರಿಸಿ, ಮಡಕೆ ಕವುಚಿ ಹಾಕಿ ಗೆರಟೆಯಿಂದ ಮಡಕೆಯನ್ನು ಸವರುತ್ತಾ ಸದ್ದು ಮಾಡುತ್ತಿದ್ದರು. ಒಳಗಿನ ಭೀಕರ ಸದ್ದಿಗೆ ಕೋಳಿ ಮರಿ ಒಮ್ಮೊಮ್ಮೆ ಎಚ್ಚೆತ್ತು ಬಿಡುತ್ತಿತ್ತು. ಇದೂ ಹಳ್ಳಿಗರ ಒಂದು ವಿಜ್ಞಾನ. ಇದರ ಥಿಯರಿ ಅವರಿಗೆ ಗೊತ್ತಿರುತ್ತಿರಲಿಲ್ಲ. ಆದರೆ ಪ್ರಾಕ್ಟಿಕಲ್‌ ಪ್ರಯೋಜನ ಅವರಿಗೆ ಗೊತ್ತಿರುತ್ತಿತ್ತು.

ಕೋಳಿ ಇದ್ದ ಮೇಲೆ ಅದು ಕೋಳಿ ಅಂಕಕ್ಕೂ ಹೋಗಬೇಕಲ್ಲ? ಸುತ್ತ ಅನೇಕ ಕಡೆಗಳಲ್ಲಿ ಕೋಳಿ ಅಂಕ ಅಥವಾ ಕೋಳಿ ಪಡೆ ನಡೆಯುತ್ತಿತ್ತು. ಅಪ್ಪನಿಗೂ ಕೋಳಿ ಅಂಕದ ಹವ್ಯಾಸ ಇರುತ್ತಿತ್ತು. ರಜೆ ಇದ್ದಾಗ ಮರಾಟಿ ನಾಯ್ಕ ಸಮುದಾಯದ ಅವರ ಸಹಚರರೊಂದಿಗೆ ಕೋಳಿ ಹಿಡಿದುಕೊಂಡು ಹೊರಟು ಬಿಡುತ್ತಿದ್ದರು. ಕೋಳಿಯ ಬಣ್ಣ ಮತ್ತು ಮೈವಳಿಕೆಗೆ ಅನುಗುಣವಾಗಿ ಅವುಗಳಿಗೆ ಬೇರೆ ಬೇರೆ ಹೆಸರುಗಳಿರುತ್ತವೆ. ಆ ಹೆಸರುಗಳೆಲ್ಲ ಅಪ್ಪನಿಗೆ ಬಾಯಿಪಾಠ. ಮನೆಯಲ್ಲಿ ಕುಕ್ಕಟ ಪಂಚಾಂಗ ಕೂಡಾ ಇತ್ತು. ಸಾಮಾನ್ಯ ಪಂಚಾಂಗ, ಫಲಜ್ಯೋತಿಷ, ಹಸ್ತ ಸಾಮುದ್ರಿಕ ಎಲ್ಲ ಪುಸ್ತಕಗಳೂ ನಮ್ಮ ಮನೆಯಲ್ಲಿರುತ್ತಿತ್ತು ಮತ್ತು ಅಪ್ಪ ಅವನ್ನು ಓದುವ ಹಾಗೂ ವ್ಯಾಖ್ಯಾನಿಸುವ ಅರಿವು ಹೊಂದಿದ್ದ. ಕುಕ್ಕಟ ಪಂಚಾಂಗವನ್ನು ಬಳಸಿಕೊಂಡು ಅಪ್ಪ ಯಾವ ಬಣ್ಣದ ಕೋಳಿ, ಯಾವ ದಿನ, ಅಂದರೆ ಹುಣ್ಣಿಮೆ, ಅಮವಾಸ್ಯೆ ಹೀಗೆ ಯಾವ ದಿನ ಗೆಲ್ಲುತ್ತದೆ ಎಂಬುದನ್ನು ತಮ್ಮ ಸಹಚರರಿಗೆ ವಿವರಿಸಿ ಹೇಳುತ್ತಿದ್ದ. ಬಹುತೇಕ ಅನಕ್ಷರಸ್ಥರಾಗಿದ್ದ ಆ ಮಂದಿ ಬಾಯಿ ಬಾಯಿ ಬಿಟ್ಟುಕೊಂಡು ಅಪ್ಪ ಹೇಳಿದ್ದನ್ನೆಲ್ಲ ವೇದವಾಕ್ಯವೋ ಎಂಬಂತೆ ಒಪ್ಪಿಕೊಳ್ಳುತ್ತಿದ್ದರು. ಕೋಳಿಯ ಸೋಲು ಗೆಲುವಿಗೂ ಕುಕ್ಕಟ ಪಂಚಾಂಗಕ್ಕೂ ಏನು ಸಂಬಂಧ? ಆದರೂ ನಮ್ಮ ಅನೇಕರು ಫಲಜ್ಯೋತಿಷ ನಂಬಿದಷ್ಟೇ ಮೂಢವಾಗಿ ಇವರೂ ನಂಬುತ್ತಿದ್ದರು.

ಎಡಕ್ಕೆ ಬಲಕ್ಕೆ ತನ್ನ ಸಹಚರರನ್ನು ಸೇರಿಸಿಕೊಂಡು ವೀರಾವೇಶದ ಮಾತುಗಳನ್ನು ಆಡುತ್ತಾ ಅಪ್ಪ ಕೋಳಿ ಅಂಕದ ಕದನ ಕಣಕ್ಕೆ ಹೋಗುತ್ತಿದ್ದ. ಆಮೇಲೆ ಅಲ್ಲಿ ಏನಾಯಿತು ಎಂಬುದು ನಮಗೆ ತಿಳಿಯುತ್ತಿರಲಿಲ್ಲ. ನಮ್ಮ ಕೋಳಿ ಗೆದ್ದರೆ ಮನೆಗೆ ಮರಳುವ ಹಾದಿಯಲ್ಲಿ ಅವರು ಫರ್ಲಾಂಗು ದೂರದಲ್ಲಿರುವಾಗಲೇ ನಮಗೆ ತಿಳಿಯುತ್ತಿತ್ತು. ನಮ್ಮ ಕೋಳಿ ಹೇಗೆ ಎದುರಾಳಿಯನ್ನು ಬಡಿದು ಸಾಯಿಸಿತು ಎಂಬುದನ್ನು ಮಹಾಭಾರತ ಯುದ್ಧದ ಅಭಿಮನ್ಯುವಿನ ಪರಾಕ್ರಮವನ್ನು ವರ್ಣಿಸುವಂತೆ ವರ್ಣಿಸುತ್ತಾ ಬರುತ್ತಿದ್ದರು. ಮೌನವಾಗಿ ಮನೆ ಸೇರಿ, ʼಆಸೆಯಾದರೆ ಒಂದು ಕೋಳಿ ಕೊಂದು ತಿನ್ನಿಯಾʼ ಎಂದನೆಂದರೆ, ನಮ್ಮ ಕೋಳಿ ಆಚೆಗೇ ಹೋಯಿತು ಎಂದು ನಮಗೆ ಸ್ಪಷ್ಟವಾಗುತ್ತಿತ್ತು.

ಅಪ್ಪನ ಕೋಳಿ ಗೆದ್ದುದು ಬಹಳ ಕಡಿಮೆ. ಒಂದು ಸಲ ಗೆದ್ದುದು ನೆನಪಿದೆ. ಹಾಗೆ ಗೆದ್ದ ಕೋಳಿಗೆ ವಿಶೇಷ ಆರೈಕೆ. ಅದರ ಹೊಲಿದ ಗಾಯಗಳಿಗೆ ಎಣ್ಣೆ ತಿಕ್ಕುವುದೇನು, ಎದುರಾಳಿಯ ಮಾಂಸದಿಂದ ಮಾಡಿದ ಕೋಳಿ ಸಾರಿನ ತುಂಡನ್ನು ಅದಕ್ಕೂ ಕೊಡುವುದೇನು.!

ಶಂಕ್ರಾಣದ ವೀರ ಕಲ್ಲುಕುಟಿಗ ದೈವಸ್ಥಾನದ ವಾರ್ಷಿಕ ಕೋಲದ ಕೊನೆಯಲ್ಲಿ ಊರವರೆಲ್ಲ ಕೋಳಿ ಬಲಿ ಕೊಡುವ ಕ್ರಮವಿದೆ. ಹಾಗೆ ನಮ್ಮ ಒಂದು ಕೋಳಿಯನ್ನೂ ಒಯ್ಯುತ್ತಿದ್ದೆವು. ಕೋಳಿಯ ಕಾಲಿಗೆ ನಮ್ಮ ಹೆಸರು ಬರೆದ ಚೀಟಿ ಕಟ್ಟಿ ಅದನ್ನು ಅಲ್ಲಿ ಬಲಿಕೊಡುವವರಿಗೆ ಕೊಡಬೇಕು. ಅವರು ಕತ್ತಿಯಲ್ಲಿ ಅದರ ಕತ್ತು ಕತ್ತರಿಸಿ ಗದ್ದೆಗೆ ಎಸೆದುಬಿಡುತ್ತಿದ್ದರು. ಅವು ಒಂದಷ್ಟು ಹೊತ್ತು ಚಡಪಡಿಸಿ ನಿಶ್ಚಲವಾಗುತ್ತವೆ. ಆಗ ನಮ್ಮ ಕೋಳಿಯನ್ನು ಹುಡುಕಿಕೊಂಡು ತೆಗೆದುಕೊಂಡು ಬರಬೇಕು. ಕೋಳಿಯ ತಲೆ ಅದನ್ನು ಕತ್ತರಿಸಿದವನಿಗೆ ಸೇರುತ್ತದೆ. ಹಾಗಾಗಿ ಅವರು ಕತ್ತಿನ ಬುಡದಿಂದಲೇ ಕೋಳಿಯನ್ನು ಕತ್ತರಿಸಿಬಿಡುತ್ತಿದ್ದರು.

ದನ ಸಾಕಣೆಯ ಹಾಗೆಯೇ ನೂರಾರು ಸಮಸ್ಯೆ ಕೋಳಿ ಸಾಕಣೆಯದ್ದು. ಆದರೆ ಕೃಷಿ ಹಿನ್ನೆಲೆಯ ಹಳ್ಳಿಗರಿಗೆ ಈ ಸಮಸ್ಯೆಗಳೂ ಬದುಕಿನ ಸಹಜ ಖುಷಿಗಳ ಭಾಗ. ಒಮ್ಮೆ ಕೋಳಿಗಳಿಗೆ ಅದೇನೋ ಕಾಯಿಲೆ ಕಾಣಿಸಿಕೊಂಡಿತು. ಏನನ್ನೂ ತಿನ್ನದೆ ನಿದ್ದೆ ತೂಗಿದಂತೆ ಅವು ಒಂದೆಡೆ ಕುಳಿತು ತೂಕಡಿಸುತ್ತಿದ್ದವು. ಈಗ ಕಲ್ಲಿಂಗ್‌ ಅಂತೇನೋ ಹೇಳುತ್ತಾರಲ್ಲ. ಹಾಗೆ ಕಾಯಿಲೆ ಪೀಡಿತ ಈ ಕೋಳಿಗಳನ್ನೆಲ್ಲ ಹಿರಿಯಣ್ಣ ಒಂದು ಮರದ ತೊಲೆ ಮೇಲೆ ಇರಿಸಿ ಅವುಗಳ ಕತ್ತು ಕತ್ತರಿಸಿ ಕೊಂದು ಹಾಕಿದ್ದ. ಕೋಳಿಗಳ ಸಾಮೂಹಿಕ ಕಗ್ಗೊಲೆ!

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- http://ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-5 | ಗದ್ದೆ ತೋಟದ ನಡುವೆ ಒಂದು ಮುಳಿಹುಲ್ಲ ಗುಡಿಸಲು

More articles

Latest article