ಬೆಂಗಳೂರು : ಐಪಿಎಲ್ ವಿಜೇತ RCB ಸಂಭ್ರಮಾಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಮಂದಿ ಮೃತಪಟ್ಟ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ADGP ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿದೆ. ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಟಗಾರರ ವಿಜಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಅನುಮತಿ ಕೊಡಿಸಿದ್ದ ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೆ.ಗೋವಿಂದರಾಜ್ ಅವರಿಗೆ ಕೊಕ್ ನೀಡಲಾಗಿದೆ.
ಸರ್ಕಾರದ ಅಮಾನತು ನಿರ್ಧಾರ ಸಮರ್ಥಿಸಿಕೊಂಡ ರಾಮಲಿಂಗಾರೆಡ್ಡಿ:
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಮತ್ತು ಇತರೆ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ತಂಡದ ಸಂಭ್ರಮಾಚರಣೆ ನಡೆಸಲಾಗಿತ್ತು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ಅನುಮತಿ ನೀಡಿರಲಿಲ್ಲ. ಆದರೂ ಪೊಲೀಸರು ಆಚರಣೆಗೆ ಅವಕಾಶ ನೀಡಿದರು. ಎಷ್ಟು ಜನರು ಸೇರಬಹುದೆಂದು ಅಂದಾಜಿಸದಿರುವುದು ಪೊಲೀಸರು ಮತ್ತು ಗುಪ್ತಚರ ವಿಭಾಗದ ವೈಫಲ್ಯ ತೋರಿಸುತ್ತದೆ ಎಂದರು.
ಅನುಮತಿ ಇಲ್ಲದೆ ಸಂಭ್ರಮಾಚರಣೆ ಆಯೋಜಿಸಿದ್ದ ಆರ್ ಸಿಬಿ ತಂಡದ ಮ್ಯಾನೇಜ್ಮೆಂಟ್, ಕೆಎಸ್ ಸಿಎ ಮತ್ತು ಡಿಎನ್ ಎ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿಲ್ಲ. ಆದರೆ, ಅನುಮತಿ ಇಲ್ಲದೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.