ರಾಯ್‌ಬರೇಲಿ: ಅಮೆರಿಕ ಭೇಟಿಯ ವೇಳೆ ಅದಾನಿ ಪ್ರಕರಣ ಖಾಸಗಿ ವಿಷಯ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಅವರೇ, ಅದಾನಿ ವಿಷಯ ಖಾಸಗಿಯಲ್ಲ, ಬದಲಾಗಿ ದೇಶದ ವಿಷಯವಾಗಿದೆ ಎಂದು ತಿರುಗೇಟು ನೀಡಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಗೆ ಎರಡು ದಿನಗಳ ಭೇಟಿ ನೀಡಿರುವ ರಾಹುಲ್ ಗಾಂಧಿ, ಲಾಲ್ಗಂಜ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಇದೊಂದು ಖಾಸಗಿ ವಿಷಯ ಎಂದು ನಮ್ಮ ಪ್ರಧಾನಿ ಹೇಳುತ್ತಾರೆ. ಅದಾನಿ ಪ್ರಕರಣ ಕುರಿತು ಚರ್ಚಿಸಲು ಅವರು ಸಿದ್ದರಿಲ್ಲ. ಅವರು ದೇಶದ ನೈಜ ಪ್ರಧಾನಿಯಾಗಿದ್ದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಪ್ರಕರಣದ ಕುರಿತು ವಿಚಾರಿಸುತ್ತಿದ್ದರು. ಅಗತ್ಯವಿದ್ದರೆ ವಿಚಾರಣೆಗೆ ಒಳಪಡಿಸಲು ಹೇಳುತ್ತಿದ್ದರು. ಆದರೆ ಮೋದಿ ಖಾಸಗಿ ವಿಷಯ ಎಂದು ಹೇಳಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಅಮೆರಿಕದ ನ್ಯಾಯಾಲಯದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮೊಕದ್ದಮೆ ದಾಖಲಾಗಿರುವುದು ಖಾಸಗಿ ವಿಷಯ. ಎರಡು ದೇಶಗಳ ನಾಯಕರು ಇಂತಹ ಖಾಸಗಿ ಸಂಗತಿ ಚರ್ಚಿಸಲು ಭೇಟಿಯಾಗುವುದಿಲ್ಲ ಎಂದು ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ನಡೆದ ಚರ್ಚೆಯಲ್ಲಿ ಇಂತಹ ವಿಷಯವೂ ಚರ್ಚೆಯಾಯಿತೇ ಎಂಬ ಸುದ್ದಿಗಾರರ ಪ್ರಶ್ನೆಗೆ ಮೋದಿ, ಉಭಯ ದೇಶಗಳ ನಾಯಕರು ಎಂದಿಗೂ ಇಂತಹ ವಿಷಯಗಳನ್ನು ಚರ್ಚಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.