ಹೈದರಾಬಾದ್: ಯಂಗ್ ಇಂಡಿಯಾ ಕೌಶಲಾಭಿವೃಧಿ ವಿಶ್ವವಿದ್ಯಾಲಯಕ್ಕೆ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಘೋಷಿಸಿದ್ದ 100 ಕೋಟಿ ರೂ. ದೇಣಿಗೆಯನ್ನು ತೆಲಂಗಾಣ ಸರ್ಕಾರ ತಿರಸ್ಕರಿಸಿದೆ ಎಂದು ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ದೇಣಿಗೆ ಸ್ವೀಕರಿಸಿದರೆ ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ ಎಂಬ ಅನಗತ್ಯ ಚರ್ಚೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ದೇಣಿಗೆ ಸ್ವೀಕರಿಸದಿರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅದಾನಿಯನ್ನೂ ಒಳಗೊಂಡು ಯಾವುದೇ ಸಂಘ ಸಂಸ್ಥೆಗಳಿಂದ ತೆಲಂಗಾಣ ಸರ್ಕಾರವು ಯಾವುದೇ ದೇಣಿಗೆಯನ್ನು ಸ್ವೀಕರಿಸುವುದಿಲ್ಲ. ನಾನಾಗಲೀ ಅಥವಾ ನನ್ನ ಸಂಪುಟ ಸಹೋದ್ಯೋಗಿಗಳಾಗಲೀ ಸರ್ಕಾರದ ಹಾಗೂ ವೈಯಕ್ತಿಕ ಪ್ರತಿಷ್ಠೆಗೆ ಕಳಂಕ ತರಬಹುದಾದ ಯಾವುದೇ ಪ್ರಕರಣದಲ್ಲೂ ಭಾಗಿಯಾಗುವುದಿಲ್ಲ. ಸದ್ಯ ದೇಣಿಗೆ ತಿರಸ್ಕರಿಸುವ ನಿರ್ಧಾರವನ್ನು ಅಧಿಕಾರಿಗಳು ಅದಾನಿಗೆ ಪತ್ರ ಬರೆದು ತಿಳಿಸಿದ್ದಾರೆ ಎಂದು ಹೇಳಿದರು.
ಅದಾನಿ ಕಂಪನಿ ವಿರುದ್ಧ ಸದ್ಯ ಕೇಳಿ ಬಂದಿರುವ ಆರೋಪ ಹಾಗೂ ವಿವಾದಗಳ ಹಿನ್ನಲೆಯಲ್ಲಿ ತೆಲಂಗಾಣ ಸರ್ಕಾರವು ಅದಾನಿ ಕಂಪನಿ ನೀಡುವುದಾಗಿ ಘೋಷಿಸಿರುವ ರೂ.100 ಕೋಟಿ ಸ್ವೀಕರಿಸಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಕ್ಕೆ ದೇಣಿಗೆ ನೀಡುವ ಸಂಸ್ಥೆಗಳಿಗೆ ಆದಾಯ ತೆರಿಗೆ ವಿನಾಯಿತಿ ಲಭ್ಯವಾಗುವಂತೆ ಮಾಡುವ ರಾಜ್ಯ ಸರ್ಕಾರದ ಪ್ರಯತ್ನ ಇತ್ತೀಚೆಗೆ ಕೈಗೂಡಿದೆ. ಹೀಗಾಗಿ ಅದಾನಿ ಕಂಪನಿಯು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ವಿಶ್ವವಿದ್ಯಾಲಯಕ್ಕೆ ನೆರವಾಗಲು ಯತ್ನಿಸಿತ್ತು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.