ನವದೆಹಲಿ: ಗೌತಮ್ ಅದಾನಿ ಲಂಚ ಪ್ರಕರಣ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮುಖಂಡರು ಇಂದು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಎಎಪಿ, ಆರ್ಜೆಡಿ, ಶಿವಸೇನೆ (ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಸಂಸತ್ತಿನ ದ್ವಾರದಲ್ಲಿ ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಮೋದಿ-ಅದಾನಿ ಒಂದೇ’ ಎಂಬ ಬ್ಯಾನರ್ ಹಿಡಿದು ಪ್ರತಿಭಟಿಸಿದರು. ಆದರೆ ಟಿಎಂಸಿ ಈ ಪ್ರತಿಭಟನೆಯಿಂದ ದೂರ ಉಳಿದಿತ್ತು.
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆಯೇ ಕಾಂಗ್ರೆಸ್ ನಿಯೋಗದೊಂದಿಗೆ ಹಿಂಸಾಚಾರ ನಡೆದಿರುವ ಉತ್ತರ ಪ್ರದೇಶದ ಸಂಭಾಲ್ಗೆ ತೆರಳಿದ್ದ ಹಿನ್ನೆಲೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸಂಸತ್ತಿನ ಪ್ರವೇಶ ದ್ವಾರಗಳ ಎದುರು ಪ್ರತಿಭಟನೆ ನಡೆಸದಂತೆ ಸಂಸದರಿಗೆ ಲೋಕಸಭೆ ಸಚಿವಾಲಯ ಮಂಗಳವಾರ ಸಲಹೆ ನೀಡಿ ಸಂಚಾರಕ್ಕೆ ಅಡ್ಡಿ ಮತ್ತು ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿತ್ತು.
ಲಂಚ, ವಂಚನೆ ಆರೋಪದ ಮೇಲೆ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಕಂಪನಿಯ ಇತರ ಅಧಿಕಾರಿಗಳ ವಿರುದ್ದ ಯುಎಸ್ ಪ್ರಾಸಿಕ್ಯೂಟರ್ಗಳು ದೋಷಾರೋಪಣೆ ಮಾಡಿರುವ ಹಿನ್ನೆಲೆ, ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ಈ ಪ್ರಕರಣದ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿವೆ. ಅಮೆರಿಕದ ನ್ಯಾಯಾಲಯದಲ್ಲಿ ಅದಾನಿ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಅದಾನಿಯವರನ್ನು ತಕ್ಷಣ ಬಂಧಿಸುವಂತೆ ರಾಹುಲ್ ಗಾಂಧಿ ಈಗಾಗಲೇ ಒತ್ತಾಯಿಸಿದ್ದಾರೆ.